ಬೇಲಿಗೆ ಹೆದರುತ್ತಿರುವ ಹೊಲ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗುತ್ತಿರುವ ಬಗ್ಗೆ’ ಕಳವಳ ವ್ಯಕ್ತಪಡಿಸಿದ್ದಾರೆ. ‘‘ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯೇ 2025ರ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಬೇಲಿಯೇ ಎದ್ದು ಹೊಲ ಮೇಯ ತೊಡಗಿದರೆ, ನಾಡನ್ನು ರಕ್ಷಿಸುವವರು ಯಾರು?’’ ಎಂದು ಕೇಳಿದ್ದಾರೆ. ಅವರು ಸಮಾರಂಭದಲ್ಲಿ ಎತ್ತಿದ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಇಂದು ಕಾನೂನು ಸುವ್ಯವಸ್ಥೆ ಕೆಡುವುದಕ್ಕೆ ಪರೋಕ್ಷವಾಗಿ ಪೊಲೀಸ್ ಇಲಾಖೆಯೇ ಕಾರಣವಾಗುತ್ತಿರುವುದರ ಬಗ್ಗೆ ಗಂಭೀರ ಚರ್ಚೆ ನಡೆಯದೇ, ಅಪರಾಧಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಯುವುದು ಕಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿರುವ 88 ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ನೇರವಾಗಿ ಶಾಮೀಲಾಗಿದ್ದಾರೆ. ಮುಖ್ಯವಾಗಿ ಇವು ಕಳವು, ಕೊಲೆ, ದೌರ್ಜನ್ಯ ಹಿಂಸಾಚಾರದಂತಹ ಅಪರಾಧ ಪ್ರಕರಣಗಳಾಗಿವೆ. ಇಂತಹ ಪ್ರಕರಣಗಳು ಬೆಳಕಿಗೆ ಬರುವುದು ತೀರಾ ಅಪರೂಪ. ಯಾಕೆಂದರೆ, ಇಂತಹ ಕೃತ್ಯಗಳಲ್ಲಿ ಪೊಲೀಸರು ಶಾಮೀಲಾಗಿದ್ದರೆ ಅದನ್ನು ತನಿಖೆ ನಡೆಸಿ ಬೆಳಕಿಗೆ ತರಬೇಕಾದವರು ಕೂಡ ಪೊಲೀಸರೇ ಆಗಿರುತ್ತಾರೆ. ತಮ್ಮ ಇಲಾಖೆಯ ಸಿಬ್ಬಂದಿ ಎಸಗಿರುವ ಕೃತ್ಯಗಳನ್ನು ‘ತಮ್ಮವರು’ ಎನ್ನುವ ಬಾಂಧವ್ಯವನ್ನು ಮುಂದಿಟ್ಟುಕೊಂಡು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುವುದೇ ಹೆಚ್ಚು. ಉಳಿದಂತೆ ಪೊಲೀಸ್ ಇಲಾಖೆಯನ್ನು ವ್ಯಾಪಿಸಿರುವ ಲಂಚ, ಭ್ರಷ್ಟಾಚಾರ ಪ್ರತಿ ವರ್ಷ ನೂರಾರು ಅಪರಾಧ ಪ್ರಕರಣಗಳನ್ನು ಮುಚ್ಚಿ ಹಾಕಿಸುತ್ತವೆೆ. ಲಂಚ ಪಡೆಯುವ ಸಂದರ್ಭದಲ್ಲಿ ಎಲ್ಲೋ ಒಂದಿಬ್ಬರು ಅಧಿಕಾರಿಗಳು ಅಥವಾ ತಳಸ್ತರದ ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ ಅಷ್ಟೇ. ಈ ನಾಡಿನಲ್ಲಿ ಅಪರಾಧ ಪ್ರಕರಣಗಳನ್ನು ಜೀವಂತವಾಗಿಟ್ಟಿರುವುದು ಪೊಲೀಸ್ ಇಲಾಖೆಯೊಳಗೆ ಹರಡಿಕೊಂಡಿರುವ ಭ್ರಷ್ಟಾಚಾರ. ಇದನ್ನು ಅಧಿಕೃತವಾಗಿ ‘ಅಪರಾಧ’ವಾಗಿ ಗುರುತಿಸಿ ಪ್ರಕರಣ ದಾಖಲಿಸುವ ವ್ಯವಸ್ಥೆಯೊಂದಿದ್ದರೆ ಜೈಲು ತುಂಬಾ ಪೊಲೀಸ್ ಸಿಬ್ಬಂದಿಯೇ ಇರುತ್ತಿದ್ದರು.
ಪೊಲೀಸ್ ಇಲಾಖೆಯ ಪರೋಕ್ಷ ಸಹಕಾರವಿಲ್ಲದೇ ಇದ್ದರೆ ಡ್ರಗ್ಸ್, ಗಾಂಜಾ ಜಾಲಗಳು ವಿಸ್ತರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ವತಃ ಪೊಲೀಸ್ ಇಲಾಖೆಯೇ ಒಪ್ಪಿಕೊಳ್ಳುತ್ತದೆ. ವಶಪಡಿಸಿಕೊಂಡ ದೊಡ್ಡ ಪ್ರಮಾಣದ ಗಾಂಜಾ, ಡ್ರಗ್ಸ್‌ಗಳನ್ನು ಕೆಲವು ಪೊಲೀಸ್ ಸಿಬ್ಬಂದಿಯ ಮೂಲಕವೇ ಮತ್ತೆ ಸಮಾಜಕ್ಕೆ ಪೂರೈಸಲಾಗುತ್ತದೆ ಎನ್ನುವ ಆರೋಪಗಳಿವೆ. ಪೊಲೀಸ್ ಇಲಾಖೆಯ ಗೋದಾಮುಗಳಲ್ಲಿರುವ ಭಾರೀ ಪ್ರಮಾಣದ ಮಾದಕವಸ್ತುಗಳು ನಾಪತ್ತೆಯಾಗುವುದು ಮತ್ತು ಅವುಗಳನ್ನು ‘ಇಲಿಗಳು ತಿಂದಿವೆ’ ಎಂದು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಗಳಲ್ಲಿ ಹೇಳಿಕೆಗಳನ್ನು ನೀಡುವುದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ಹೀಗೆ ಕಾಣೆಯಾಗಿರುವ ಮಾದಕ ದ್ರವ್ಯಗಳ ಬಗ್ಗೆ ಗಂಭೀರ ತನಿಖೆ ನಡೆಸಿದರೆ, ಜವಾಬ್ದಾರಿ ಸ್ಥಾನದಲ್ಲಿರುವವರೇ ಹೇಗೆ ಮಾದಕ ವಸ್ತುಗಳ ಜಾಲಗಳ ಜೊತೆಗೆ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎನ್ನುವ ಕಟು ಸತ್ಯ ಬೆಳಕಿಗೆ ಬರಬಹುದಾಗಿದೆ. ಯಾವುದೇ ಅಪರಾಧದಲ್ಲಿ ಪೊಲೀಸರು ನೇರವಾಗಿ ಭಾಗಿಯಾಗುವುದಕ್ಕಿಂತಲೂ ಅಪಾಯಕಾರಿಯಾಗಿದೆ ಇದು. ಹಲವು ಅಮಾಯಕರು ಖಾಕಿಗಳ ಒತ್ತಡಗಳಿಗೆ ಬಲಿಯಾಗಿ ಇಂತಹ ವ್ಯಾಪಾರಗಳಿಗೆ ಜೊತೆಯಾಗಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವ ಆರೋಪಗಳು ಇಂದು ನಿನ್ನೆಯದೇನೂ ಅಲ್ಲ. ಅಮಾಯಕನೊಬ್ಬ ಮಾಡದ ತಪ್ಪಿಗೆ ಜೈಲು ಪಾಲಾದರೆ ಆದ ಮರಳಿ ಬರುವಾಗ ‘ಅಪರಾಧಗಳ ಸಕಲ ಕಲೆ’ಗಳನ್ನು ಕಲಿತು ಬಂದಿರುತ್ತಾನೆ. ಜೈಲುಗಳು ಅಪರಾಧಿಗಳನ್ನು ತಿದ್ದಿ ಸಜ್ಜನನಾಗಿಸುವುದಕ್ಕಿಂತ, ಅಮಾಯಕರನ್ನು ಅಪರಾಧಿಗಳನ್ನಾಗಿಸುವುದರಲ್ಲೇ ಕುಖ್ಯಾತವಾಗಿವೆ. ಜೈಲುಗಳು ಕುಖ್ಯಾತ ಅಪರಾಧಿಗಳ ಜೊತೆಗೆ ಸಂಪರ್ಕವನ್ನು ಬೆಸೆಯುವ ಕೇಂದ್ರವಾಗಿದೆ.
ಪೊಲೀಸ್ ಸಿಬ್ಬಂದಿ ಕೆಲವು ಅಪಾಯಕಾರಿ, ಸಂವಿಧಾನವಿರೋಧಿ ಸಿದ್ಧಾಂತಗಳ ಜೊತೆಗೆ ಕೈ ಜೋಡಿಸಿಕೊಂಡಿರುವುದು ಕಾನೂನು ಸುವ್ಯವಸ್ಥೆ ಹದಗೆಡಲು ಇನ್ನೊಂದು ಪ್ರಮುಖ ಕಾರಣವಾಗಿದೆ. ದೇಶಾದ್ಯಂತ ಹೆಚ್ಚಿರುವ ಗುಂಪು ಥಳಿತ, ಗುಂಪು ಹತ್ಯೆ, ಅನೈತಿಕ ಪೊಲೀಸ್‌ಗಿರಿ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ದಾಂಧಲೆಗಳಿಗೆ ಪೊಲೀಸ್ ಇಲಾಖೆಯ ಮೌನವೇ ಕಾರಣ ಎನ್ನುವ ಆರೋಪಗಳಿವೆ. ಪೊಲೀಸ್ ಇಲಾಖೆಯೊಳಗಿರುವ ಕೆಲವು ಸಿಬ್ಬಂದಿಯ ಕಾರಣಗಳಿಂದಾಗಿ, ಸಂಘಪರಿವಾರ ಪರ್ಯಾಯ ಪೊಲೀಸ್ ಇಲಾಖೆಯಾಗಿ ಕೆಲಸ ಮಾಡುತ್ತಿದೆ. ದನಗಳನ್ನು ಸಾಕುವ ರೈತರು ಇಂದು ಗೋರಕ್ಷಕರ ವೇಷದಲ್ಲಿರುವ ರೌಡಿಗಳಿಗೆ, ಗೂಂಡಾಗಳಿಗೆ ಹೆದರಬೇಕಾಗಿದೆ. ಸಾಕುವುದಕ್ಕಾಗಿಯೂ ದನಗಳನ್ನು ಸಾಗಾಟ ಮಾಡಲು ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ. ಪೊಲೀಸ್ ಇಲಾಖೆಯು ಈ ನಕಲಿ ಗೋರಕ್ಷಕರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವ ಆರೋಪವಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳೋಣ. ಇಲ್ಲಿನ ಸುನೀಲ್ ಎಂಬವರು ಸ್ಥಳೀಯ ರೈತನಿಂದ ಒಂದು ಹಾಲು ಕರೆಯುವ ಹಸು, ಇನ್ನೊಂದು ಗಬ್ಬದ ಹಸು ಮತ್ತು ಐದು ದಿನಗಳ ಕರುವೊಂದನ್ನು ಖರೀದಿಸಿ ಸಾಗಾಟ ನಡೆಸಿದ್ದರು. ಸ್ಥಳೀಯ ಸಂಘಪರಿವಾರದ ವ್ಯಕ್ತಿಗಳು ಈತನನ್ನು ತಡೆದು ಕಿರುಕುಳ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಸುನೀಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪುತ್ತೂರಿನ ರೈತ ಸಂಘದ ಕಾರ್ಯಕರ್ತರು ಇದರ ವಿರುದ್ಧ ಈಗಾಗಲೇ ಪ್ರತಿಭಟನೆಯನ್ನು ಮಾಡಿದ್ದಾರೆ.
ದನ ಸಾಗಾಟಕ್ಕೆ ಸಂಬಂಧಿಸಿದಂತೆ ನಕಲಿ ಗೋರಕ್ಷಕರು ವಾಹನಗಳನ್ನು ತಡೆದು ಹಲ್ಲೆ ನಡೆಸುವುದು, ದರೋಡೆ ನಡೆಸುವುದು ನಿರಂತರ ನಡೆಯುತ್ತದೆಯಾದರೂ ಇದರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಂತ್ರಸ್ತರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿ ಈ ನಕಲಿ ಗೋರಕ್ಷಕರ ಜೊತೆಗೆ ಶಾಮೀಲಾಗಿರುವುದು. ಈ ಕಾರಣದಿಂದಲೇ ದೇಶದಲ್ಲಿ ಗುಂಪುಹತ್ಯೆ, ಗುಂಪುಥಳಿತ ಪ್ರಕರಣ ಹೆಚ್ಚುತ್ತಿರುವುದು. ಮುಂದಿನ ದಿನಗಳಲ್ಲಿ ಇದು ಭಾರತದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಬಹುದು ಎನ್ನುವ ಎಚ್ಚರಿಕೆಯನ್ನು ಅಂತರ್‌ರಾಷ್ಟ್ರೀಯ ಮಟ್ಟದ ಸಂಸ್ಥೆಯೊಂದು ತನ್ನ ವರದಿಯಲ್ಲಿ ಈಗಾಗಲೇ ನೀಡಿದೆ. ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಾಗಿರಬೇಕಾದರೆ, ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಸುಧಾರಣೆಯಾಗಬೇಕಾಗಿದೆ. ಪ್ರತೀ ಇಲಾಖೆಗಳಲ್ಲೂ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸುವುದು, ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸುವುದು ಮಾತ್ರವಲ್ಲ, ಅವರಿಗೆ ವರ್ಷಕ್ಕೊಮ್ಮೆಯಾದರೂ ಸಂವಿಧಾನದ ಕುರಿತಂತೆ ವಿಶೇಷ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಪೊಲೀಸ್ ಇಲಾಖೆ ಸುಧಾರಣೆಯಾದರೆ ಸಮಾಜದ ಅರ್ಧ ಭಾಗ ಸುಧಾರಣೆಯಾದಂತೆ. ಈ ನಿಟ್ಟಿನಲ್ಲಿ ತಳಸ್ತರದ ಪೊಲೀಸ್ ಸಿಬ್ಬಂದಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ.