ಸ್ಥಾನದ ಘನತೆ ಮರೆತ ರಾಜ್ಯಪಾಲರು
ಸಿದ್ದರಾಮಯ್ಯ ಅವರ ನೇತೃತ್ವದ ನೂತನ ಸರಕಾರ ರಚನೆಯಾದ ದಿನದಿಂದ, ರಾಜ್ಯದಲ್ಲಿ ವಿರೋಧಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಆರೋಪ ದಿಲ್ಲಿಯಲ್ಲಿರುವ ಬಿಜೆಪಿ ವರಿಷ್ಠರ ಕಿವಿಗೆ ಕೊನೆಗೂ ತಲುಪಿದಂತಿದೆ. ಈ ಹಿನ್ನೆಲೆಯಲ್ಲಿ ಅವರು ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ನೇರವಾಗಿ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಅವರ ಹೆಗಲಿಗೆ ದಾಟಿಸಿದ್ದಾರೆ. ಗುರುವಾರ ಅಧಿವೇಶನದಲ್ಲಿ ಗೆಹ್ಲೋಟ್ ಅವರ ನಡವಳಿಕೆ ರಾಜ್ಯಪಾಲ ಘನತೆಗೆ ತಕ್ಕುದಾಗಿರಲಿಲ್ಲ. ಸರಕಾರದ ನಿರ್ಧಾರ, ನಿರ್ಣಯಗಳು ತನ್ನ ಅಥವಾ ಕೇಂದ್ರ ಸರಕಾರದ ಮೂಗಿನ ನೇರಕ್ಕಿರಬೇಕು ಎಂಬಂತಿತ್ತು ಅವರ ವರ್ತನೆ. ಈ ಮೂಲಕ ಒಕ್ಕೂಟ ವ್ಯವಸ್ಥೆಯ ಹಿರಿಮೆಗೆ ಧಕ್ಕೆ ತಂದರು ಮಾತ್ರವಲ್ಲ, ಸಂವಿಧಾನದ ಆಶಯಗಳಿಗೆ ಚ್ಯುತಿಯುಂಟು ಮಾಡಿದರು. ಈಗಾಗಲೇ ಜಾರಿಯಲ್ಲಿರುವ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಅವರು ತುಪ್ಪ ಸುರಿದಿದ್ದಾರೆ.
ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸುತ್ತಿದ್ದಾರೆ ಎನ್ನುವುದು ಬುಧವಾರ ಸುದ್ದಿಯಾಗಿತ್ತು. ಸರಕಾರ ಬರೆದುಕೊಟ್ಟ ಭಾಷಣಗಳಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಮತ್ತು ಸಂವಿಧಾನದ ಆಶಯಗಳಿಗೆ ಕುಂದುಂಟಾಗುವ ವಿಷಯಗಳಿದ್ದರೆ ಅವುಗಳ ಬಗ್ಗೆ ಸರಕಾರದ ಪ್ರತಿನಿಧಿಗಳ ಜೊತೆಗೆ ಚರ್ಚಿಸುವ ಅವಕಾಶ ರಾಜ್ಯಪಾಲರಿಗಿದೆ. ಬುಧವಾರ ರಾಜ್ಯಪಾಲರ ಮನವೊಲಿಸಲು ಸರಕಾರದ ಪ್ರತಿನಿಧಿಗಳು ಗರಿಷ್ಠ ಪ್ರಯತ್ನವನ್ನೂ ನಡೆಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ಬಳಿಕ, ಗುರುವಾರ ಅಧಿವೇಶನದಲ್ಲಿ ರಾಜ್ಯಪಾಲರು ಭಾಗವಹಿಸಿದರಾದರೂ, ಕಾಟಾಚಾರಕ್ಕಷ್ಟೇ ಭಾಷಣದ ಪ್ರತಿಯ ಒಂದೆರಡು ಸಾಲುಗಳನ್ನು ಓದಿದರು. ‘ಒಟ್ಟಾರೆ ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ಭೌತಿಕ ಅಭಿವೃದ್ಧಿಯ ವೇಗವನ್ನು ದ್ವಿಗುಣಗೊಳಿಸಲು ನನ್ನ ಸರಕಾರ ಕಂಕಣಬದ್ಧವಾಗಿದೆ’ ಎಂಬ ಕೊನೆಯ ಸಾಲನ್ನು ವಾಚಿಸಿ ಭಾಷಣವನ್ನು ಒಂದೇ ನಿಮಿಷದಲ್ಲಿ ಮುಗಿಸಿದ್ದಲ್ಲದೆ, ರಾಷ್ಟ್ರಗೀತೆಗೆ ಮುಂಚಿತವಾಗಿಯೇ ಅವರು ಅಲ್ಲಿಂದ ತೆರಳಿದರು. ಭಾಷಣ ಮಾಡುವ ಸಂದರ್ಭದಲ್ಲಿ ಯಾರೂ ಅವರಿಗೆ ಅಡ್ಡಿ ಪಡಿಸಿರಲಿಲ್ಲ. ಹೀಗಿರುವಾಗ ಸಂಪ್ರದಾಯವನ್ನು ಉಲ್ಲಂಘಿಸಿ ‘ಸಭಾ ತ್ಯಾಗ’ ಮಾಡುವಂತಹ ಅನಿವಾರ್ಯತೆಯನ್ನು ರಾಜ್ಯಪಾಲರಿಗೆ ಯಾರು ಸೃಷ್ಟಿಸಿದರು? ಎನ್ನುವುದನ್ನು ರಾಜ್ಯದ ಜನತೆಗೆ ಅವರು ಮನದಟ್ಟು ಮಾಡಬೇಕಾಗಿದೆ. ಇಷ್ಟಕ್ಕೂ ಸದನದಲ್ಲಿ ಓದಲೇ ಬಾರದಂತಹ ಅಂಶಗಳು ಭಾಷಣದಲ್ಲಿ ಏನಿದ್ದವು? ಅಭಿವೃದ್ಧಿಯ ಕುರಿತಂತೆ ತಪ್ಪು ಮಾಹಿತಿಗಳಿದ್ದರೆ ಅದನ್ನು ಸರಕಾರಕ್ಕೆ ಸ್ಪಷ್ಟಪಡಿಸುವ ಅವಕಾಶವೂ ರಾಜ್ಯಪಾಲರಿಗಿತ್ತು. ಭಾಷಣದಲ್ಲಿ ಸರಕಾರವು ರಾಜ್ಯದ ಜನತೆಯ ಹಿತಾಸಕ್ತಿಯನ್ನು ಎತ್ತಿ ಹಿಡಿದಿತ್ತು. ಮುಖ್ಯವಾಗಿ ಆರ್ಥಿಕವಾಗಿ ಕೇಂದ್ರ ಸರಕಾರವು ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ ಎನ್ನುವ ಅಂಶವನ್ನು ಭಾಷಣದಲ್ಲಿ ಉಲ್ಲೇಖಿಸಿತ್ತು. ಇದರ ಜೊತೆ ಜೊತೆಗೇ ಜಿ ರಾಮ್ ಜಿ ಕಾಯ್ದೆಯಿಂದ ಗ್ರಾಮೀಣ ಜನತೆಯ ಉದ್ಯೋಗ ಭದ್ರತೆಯ ಮೇಲೆ ಆಗುವ ದುಷ್ಪರಿಣಾಮಗಳೇನು ಎನ್ನುವುದನ್ನು ಸವಿವರವಾಗಿ ತಿಳಿಸಿತ್ತು. ಇದನ್ನು ಓದುವುದರಿಂದ ರಾಜ್ಯಪಾಲರಿಗೆ ಆಗುವ ಸಮಸ್ಯೆಯೇನು? ಇದರಿಂದ ಸಂವಿಧಾನದ ಆಶಯಗಳಿಗೇನಾದರೂ ಧಕ್ಕೆಯಾಗುತ್ತದೆಯೆ? ಎನ್ನುವ ಬಗ್ಗೆ ಯಾವ ಸ್ಪಷ್ಟೀಕರಣವೂ ರಾಜಭವನದಿಂದ ಈವರೆಗೆ ಬಂದಿಲ್ಲ.
ಜನರಿಂದ ಬಹುಮತದಿಂದ ಆಯ್ಕೆ ಮಾಡಿದ ಸರಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ರಾಜ್ಯಪಾಲರು ಜನರ ಅಧಿಕೃತ ಪ್ರತಿನಿಧಿ ಅಲ್ಲ. ಅವರನ್ನು ರಾಷ್ಟ್ರಪತಿ ನೇಮಕ ಮಾಡಿರುವುದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಕೊಂಡಿಯಾಗುವುದಕ್ಕೆ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡಿದಾಗ, ಸಂವಿಧಾನದ ಆಶಯಗಳಿಗೆ ಧಕ್ಕೆಯಾದಾಗ, ದೇಶದ ಸಾರ್ವಭೌಮತೆಗೆ ಕುಂದುಂಟಾದಾಗ ಆ ಬಗ್ಗೆ ರಾಷ್ಟ್ರಪತಿಗೆ ವಿವರಗಳನ್ನು ನೀಡುವುದು ರಾಜ್ಯಪಾಲರ ಕರ್ತವ್ಯವಾಗಿದೆ. ಕೇಂದ್ರದ ಅಭಿಪ್ರಾಯಗಳನ್ನು, ನೀತಿಗಳನ್ನು ರಾಜ್ಯ ಸರಕಾರದ ಮೇಲೆ ಹೇರುವ ಅಥವಾ ರಾಜ್ಯ ಸರಕಾರವನ್ನು ಯಾವುದೇ ನೆಪಗಳನ್ನು ಒಡ್ಡಿ ‘ಬ್ಲ್ಯಾಕ್‌ಮೇಲ್’ ಮಾಡುವ ಅಧಿಕಾರ ರಾಜ್ಯಪಾಲರಿಗಿಲ್ಲ. ಇಂತಹ ವರ್ತನೆಗಳಿಂದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಹಳಸುತ್ತದೆ. ಸೇತುವೆಯಾಗಬೇಕಾದ ರಾಜ್ಯಪಾಲರೇ ಗೋಡೆಯಾಗಿ ಸಮಸ್ಯೆಗಳನ್ನು ತಂದಿಟ್ಟಂತಾಗುತ್ತದೆ. ನಿಜಕ್ಕೂ ಸರಕಾರದ ಅಭಿಪ್ರಾಯಗಳ ಬಗ್ಗೆ ಅಸಮಾಧಾನವಿದ್ದರೆ ಅದರ ವಿರುದ್ಧ ಮಾತನಾಡುವುದಕ್ಕಾಗಿಯೇ ವಿರೋಧ ಪಕ್ಷಗಳಿವೆ. ಒಂದು ವೇಳೆ ಜಿ.ರಾಮ್ ಜಿ ಕಾಯ್ದೆ ಜನಪರವಾಗಿದ್ದರೆ ಅದನ್ನು ವಿರೋಧ ಪಕ್ಷದ ನಾಯಕರು ಸದನದಲ್ಲಿ ಪ್ರತಿಪಾದಿಸಬೇಕೇ ಹೊರತು, ರಾಜ್ಯಪಾಲರು ಅದರ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಾಗುವುದಿಲ್ಲ. ಕಲಾಪಗಳಲ್ಲಿ ಜಿ. ರಾಮ್ ಜಿ. ಕಾಯ್ದೆಯನ್ನು ಎತ್ತಿ ಹಿಡಿದು ಮಾತನಾಡುವ ಎಲ್ಲ ಅವಕಾಶ ವಿರೋಧ ಪಕ್ಷಗಳಿಗೆ ಇದ್ದೇ ಇರುವಾಗ ಮಧ್ಯೆ ರಾಜ್ಯಪಾಲರು ಮೂಗು ತೂರಿಸಲು ಯತ್ನಿಸುವುದು ರಾಜ್ಯದ ಜನತೆಯ ಹಿತದೃಷ್ಟಿಯಿಂದ ತಪ್ಪಾಗುತ್ತದೆ.
ಭಾಷಣದಲ್ಲಿ ‘ಕೇಂದ್ರ ಸರಕಾರವು ರಾಜ್ಯಕ್ಕೆ ಆರ್ಥಿಕವಾಗಿ ಅನ್ಯಾಯವನ್ನು ಮಾಡುತ್ತಿದೆ. ನೀಡಬೇಕಾಗಿರುವ ಜಿಎಸ್‌ಟಿ ಪರಿಹಾರ ಮತ್ತು ಅನುದಾನಗಳನ್ನು ಸರಿಯಾಗಿ ನೀಡುತ್ತಿಲ್ಲ. ಜಿ ರಾಮ್ ಜಿ ಕಾಯ್ದೆಯಿಂದ ರಾಜ್ಯದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ. ಮನರೇಗಾ ಯೋಜನೆಯಲ್ಲೂ ಸಾಕಷ್ಟು ಹಣವನ್ನು ಕೇಂದ್ರ ಬಾಕಿ ಉಳಿಸಿಕೊಂಡಿದೆ’ ಎಂಬಿತ್ಯಾದಿಯಾಗಿ ರಾಜ್ಯ ಸರಕಾರ ಆರೋಪ ಮಾಡಿದೆ. ಇವು ಯಾವುದೂ ರಾಜ್ಯಪಾಲರ ವೈಯಕ್ತಿಕ ಅಭಿಪ್ರಾಯವಲ್ಲ. ಸರಕಾರದ ಅಭಿಪ್ರಾಯ. ರಾಜ್ಯ ಸರಕಾರವು ತನ್ನ ಜನತೆಯ ಹಿತಾಸಕ್ತಿಯನ್ನು ಈ ಮೂಲಕ ಎತ್ತಿ ಹಿಡಿದಿದೆ. ಇದರಲ್ಲಿ ಸತ್ಯಾಂಶವಿಲ್ಲದೇ ಇದ್ದರೆ ಅದನ್ನು ಸ್ಪಷ್ಟಪಡಿಸುವ ಕೆಲಸವನ್ನು ವಿರೋಧ ಪಕ್ಷ ಮಾಡುತ್ತದೆ. ಜಿ ರಾಮ್ ಜಿ ಕಾಯ್ದೆಯ ಪರವಾಗಿ ಬಿಜೆಪಿಯು ರಾಜ್ಯದಲ್ಲಿ ಈಗಾಗಲೇ ಪ್ರಚಾರಗಳನ್ನು ಶುರು ಹಚ್ಚಿದೆ. ಆದರೆ ಜನರಿಂದ ಬಿಜೆಪಿಗೆ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಈ ಕಾರಣಕ್ಕಾಗಿಯೇ ಕೇಂದ್ರ ವರಿಷ್ಠರು ಜಿ ರಾಮ್‌ಜಿ ಕಾಯ್ದೆಯನ್ನು ಜಾರಿಗೊಳಿಸಿ ಮನರೇಗಾ ಕಾಯ್ದೆಯನ್ನು ಇಲ್ಲವಾಗಿಸಲೇಬೇಕು ಎನ್ನುವ ಹಟದಲ್ಲಿ ಅಡ್ಡದಾರಿ ಹಿಡಿದಿದ್ದಾರೆ. ತಮ್ಮ ಕೆಲಸಕ್ಕೆ ಅವರು ರಾಜ್ಯಪಾಲರನ್ನು ದುರುಪಯೋಗ ಪಡಿಸಿರುವುದು ಸ್ಪಷ್ಟವಾಗಿದೆ. ರಾಜ್ಯಪಾಲರ ವರ್ತನೆಯ ವಿರುದ್ಧ ತನ್ನ ಮಿತಿಯಲ್ಲಿ ರಾಜ್ಯ ಸರಕಾರ ಕಾನೂನು ಹೋರಾಟ ಮಾಡಬಹುದು. ಆದರೆ ರಾಜ್ಯಪಾಲರ ವರ್ತನೆಯ ಹಿಂದೆ ಕೇಂದ್ರ ಸರಕಾರವಿರುವುದರಿಂದ ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದು ಸುಲಭವಿಲ್ಲ. ಪಶ್ಚಿಮಬಂಗಾಳ, ತಮಿಳುನಾಡು, ಕೇರಳದಲ್ಲಿ ರಾಜ್ಯಪಾಲರೊಂದಿಗೆ ನಡೆಯುತ್ತಿರುವ ನಿರಂತರ ತಿಕ್ಕಾಟ, ರಾಜ್ಯಪಾಲರ ನಡವಳಿಕೆಯ ವಿರುದ್ಧ ನಡೆಯುತ್ತಿರುವ ಕಾನೂನು ಹೋರಾಟ ಇನ್ನೂ ಕೊನೆ ಮುಟ್ಟಿಲ್ಲ. ರಾಜ್ಯಪಾಲರ ವರ್ತನೆಯ ವಿರುದ್ಧ ರಾಜ್ಯ ಸರಕಾರ ಇತರ ರಾಜ್ಯಗಳ ಜೊತೆಗೆ ಸೇರಿ ತನ್ನ ಪ್ರತಿಭಟನೆಯನ್ನು ರಾಷ್ಟ್ರಪತಿಗೆ ತಲುಪಿಸಬೇಕಾಗಿದೆ. ದಕ್ಷಿಣ ಭಾರತದ ರಾಜ್ಯಗಳು ಸಂಘಟಿತವಾಗಿ ಕೇಂದ್ರದ ಸರ್ವಾಧಿಕಾರಿ ವರ್ತನೆಯನ್ನು ಎದುರಿಸುವ ಸಮಯ ಇದೀಗ ಬಂದಿದೆ.