×
Ad

ಬಲಾಢ್ಯರ ಒತ್ತುವರಿಗೆ ವಿನಾಯಿತಿ ಏಕೆ?

Update: 2026-01-20 08:05 IST

ಸಾಂದರ್ಭಿಕ ಚಿತ್ರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡವರಿಗೊಂದು, ಬಲಾಢ್ಯರಿಗೆ ಇನ್ನೊಂದು ಎಂಬ ಕಾನೂನು ಇರುವುದಿಲ್ಲ. ಸಂವಿಧಾನದ ಅನ್ವಯ ಕಾನೂನು ಎಲ್ಲರಿಗೂ ಒಂದೇ ಇರುತ್ತದೆ. ಯಾರೇ ತಪ್ಪು ಮಾಡಿರಲಿ ದಂಡನೆಗೆ ಗುರಿಯಾಗಬೇಕಾಗುತ್ತದೆ. ಆದರೆ ವಾಸ್ತವ ಸ್ಥಿತಿ ಬೇರೆಯಾಗಿದೆ. ಅಪರಾಧ ಎಸಗಿದವರು ಕಾನೂನಿನ ಬಲೆಗೆ ಸಿಗುವುದಿಲ್ಲ. ನಿರಪರಾಧಿಗಳು ಜೈಲು ಪಾಲಾಗುತ್ತಾರೆ.

ಈ ಕಾನೂನನ್ನು ಜಾರಿಗೆ ತರುವ ಸ್ಥಾನದಲ್ಲಿರುವವರು ಅನುಸರಿಸುವ ಪಕ್ಷಪಾತದ ನೀತಿ ಇದಕ್ಕೆ ಕಾರಣವಾಗಿದೆ.

ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ಕಬಳಿಸಿದವರು ಸುರಕ್ಷಿತವಾಗಿ ಇರುತ್ತಾರೆ. ಆದರೆ ಆಸರೆಗೆ ಸಣ್ಣಪುಟ್ಟ ಮನೆಗಳನ್ನು ಮಾಡಿಕೊಂಡವರು ಬುಲ್ಡೋಜರ್‌ಗೆ ಬಲಿಯಾಗುತ್ತಾರೆ. ಉತ್ತರ ಪ್ರದೇಶವಿರಲಿ, ಕರ್ನಾಟಕ ವಿರಲಿ ಇದೇ ಪರಿಸ್ಥಿತಿ. ಅಧಿಕಾರಿಗಳ ಶಾಮೀಲಿನೊಂದಿಗೆ ಪ್ರಭಾವಿಗಳು, ಶ್ರೀಮಂತರು ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ನುಂಗಿದ್ದಾರೆಂದು ಎ.ಟಿ. ರಾಮಸ್ವಾಮಿ ನೇತೃತ್ವದ ಸಮಿತಿ ವರದಿ ನೀಡಿ ಇಪ್ಪತ್ತು ವರ್ಷಗಳಾಗುತ್ತ ಬಂತು. ವರದಿಯೇನೋ ಬಹಿರಂಗವಾಯಿತು. ಆದರೆ ಪ್ರಭಾವಿಗಳು ಮಾಡಿದ ಒತ್ತುವರಿಯನ್ನು ತೆರವುಗೊಳಿಸಲು ಈ ವರೆಗೆ ರಾಜ್ಯವನ್ನಾಳಿದ ಯಾವ ಸರಕಾರಗಳೂ ಕ್ರಮ ಕೈಗೊಂಡಿಲ್ಲ. ಒತ್ತುವರಿ ಮಾಡಿಕೊಂಡ ಉಳ್ಳವರು ಯಾವುದೇ ಕ್ರಮಕ್ಕೆ ಒಳ ಗಾಗದೆ ನೆಮ್ಮದಿಯಿಂದ ಇದ್ದಾರೆ. ಆದರೆ ಬಡವರ ಮನೆಗಳು ಬುಲ್ಡೋಜರ್‌ಗೆ ಬಲಿಯಾಗುತ್ತಲೇ ಇವೆ.

ಈ ದೇಶದಲ್ಲಿ ಹಣವಂತರಿಗೆ ಹಾಗೂ ಪ್ರಭಾವಿಗಳಿಗೆ ಯಾವ ಕಾನೂನೂ ಅನ್ವಯವಾಗುತ್ತಿಲ್ಲ. ಇಂಥ ಅಕ್ರಮಗಳನ್ನು ತಡೆಯಲು ಭೂಕಬಳಿಕೆ ಪ್ರತಿಬಂಧಕ ಕಾಯ್ದೆ ಇದೆ. ಆದರೆ ಅದು ಕಾಗದದಲ್ಲಿ ಮಾತ್ರ ಇದೆ. ಸರಕಾರಿ ಭೂಮಿಯನ್ನು ಕಬಳಿಸುವ ದೊಡ್ಡ ಜಾಲವೇ ಇದೆ. ಬಡವರ ಗುಡಿಸಲುಗಳ ಮೇಲೆ ದಾಳಿ ಮಾಡುವ ಬುಲ್ಡೋಜರ್‌ಗಳು ಹಣವಂತ ಒತ್ತುವರಿದಾರರ ಮನೆಯ ಬಳಿ ಅಪ್ಪಿತಪ್ಪಿಯೂ ಚಲಿಸುವುದಿಲ್ಲ. ಹೀಗಾಗಿ ಭೂ ಕಬಳಿಕೆಯ ಮಾಫಿಯಾಗಳು ಆಡಿದ್ದೇ ಆಟವಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೋಗಿಲು ಮತ್ತು ಥಣಿಸಂದ್ರ ಪ್ರದೇಶದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒತ್ತುವರಿ ಮಾಡಲಾಗಿದ್ದ ಸರಕಾರಿ ಜಮೀನನ್ನು ತೆರವುಗೊಳಿಸಿದೆ. ಸಾರ್ವಜನಿಕ ಜಾಗವನ್ನು ಯಾರೇ ಆಕ್ರಮಿಸಿದರೂ ತೆರವುಗೊಳಿಸುವ ಕ್ರಮ ಸ್ವಾಗತಾರ್ಹ. ಆದರೆ ಇಂಥ ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಆಸರೆಗೆ ಒಂದಿಂಚೂ ಜಾಗ ಇಲ್ಲದವರ ಬಗ್ಗೆ ಸಹಾನುಭೂತಿ ಇರಲಿ. ಯಾವ ಆಸರೆಯೂ ಇಲ್ಲದವರನ್ನು ಬಲವಂತವಾಗಿ ಅವರ ಬಟ್ಟೆ, ಪಾತ್ರೆ, ಸರಂಜಾಮುಗಳ ಸಹಿತ ಬೀದಿಗೆ ನೂಕುವುದು ಮಾನವೀಯತೆ ಅಲ್ಲ. ಇಂಥ ಸಂದರ್ಭಗಳಲ್ಲಿ ನಿರಾಶ್ರಿತರಾದವರಿಗೆ ತಾತ್ಕಾಲಿಕ ವಸತಿ ಹಾಗೂ ಆಹಾರದ ವ್ಯವಸ್ಥೆಯನ್ನು ಮಾಡುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯವಾಗಿದೆ. ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಬಲಾಢ್ಯರಿಗೆ, ಪ್ರಭಾವಿಗಳಿಗೆ ರಿಯಾಯಿತಿ ನೀಡಿ, ಕೂಲಿ ಮಾಡಿ ಬದುಕುವ ಬಡವರ ಮೇಲೆ ಬಲ ಪ್ರಯೋಗ ಮಾಡುವುದು ಮನುಷ್ಯತ್ವವಲ್ಲ. ಇದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ವಲಸೆ ಬಂದು ಗುಡಿಸಲು ಹಾಕಿಕೊಂಡವರು ಬೇರೆ ರಾಜ್ಯದವರೆಂದು ಹಿಯಾಳಿಸುವುದು ಬೇಡ. ಹೀಗೆ ವಲಸೆ ಬಂದವರ ಬೆವರಿನಿಂದಲೇ ಬೆಂಗಳೂರು ನಗರ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳು ಕಾರ್ಯಗತಗೊಂಡಿವೆ ಎಂಬುದನ್ನು ಮರೆಯಬಾರದು.

ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ನಗರಗಳಲ್ಲಿ ನಿರಾಶ್ರಿತರಿಗೆ ಆಸರೆ ಕಲ್ಪಿಸಿದ ಕೊಳಚೆ ಪ್ರದೇಶಗಳು ಬಡವರಿಗೆ ನೆಲೆ ಕಲ್ಪಿಸಿದ ಆಸರೆಯ ತಾಣಗಳು ಸ್ಥಳೀಯ ರಾಜಕಾರಣಿಗಳು, ಗೂಂಡಾಗಳು, ಭೂಗತ ಲೋಕದ ಖದೀಮರು ಹಣ ವಸೂಲಿ ಮಾಡುವ ಕೇಂದ್ರಗಳಾಗಿವೆ. ಮನೆಮಾರು ಇಲ್ಲದೆ ಇಂಥಲ್ಲಿ ನೆಲೆ ಕಂಡುಕೊಂಡವರಿಂದ ಹಫ್ತಾ ವಸೂಲಿ ಮಾಡುವ ದೊಡ್ಡ ಜಾಲವೇ ಇದೆ. ಸರಕಾರಿ ಭೂಮಿ ಯಾವುದೆಂಬುದನ್ನು ಮೊದಲು ಪತ್ತೆ ಹಚ್ಚುತ್ತಾರೆ. ರಾತ್ರೋರಾತ್ರಿ ಅದನ್ನು ಆಕ್ರಮಿಸಿ ತಮ್ಮ ಕಬ್ಜಾಕ್ಕೆ ತೆಗೆದುಕೊಳ್ಳುತ್ತಾರೆ. ಇವು ರಾಜಕಾರಣಿಗಳ ಮತ ಬ್ಯಾಂಕ್‌ಗಳಾಗಿ ರೂಪಾಂತರಗೊಳ್ಳುತ್ತವೆ. ಇಂಥ ಪ್ರದೇಶಗಳಲ್ಲಿ ಅನಧಿಕೃತವಾಗಿ ಬಾಡಿಗೆ ವಸೂಲಿ ಮಾಡುತ್ತಾರೆ, ರಕ್ಷಣೆ ನೀಡುವ ಭರವಸೆಯನ್ನೂ ನೀಡುತ್ತಾರೆ.

ಇಂಥ ಅಕ್ರಮ ವ್ಯವಹಾರಗಳಲ್ಲಿ ಸರಕಾರದ ಅಧಿಕಾರಿಗಳು ಶಾಮೀಲಾಗದೆ ನಡೆಯುವುದಿಲ್ಲ. ಬಾಡಿಗೆ ವಸೂಲಿ ಮಾಡುವ ವ್ಯಕ್ತಿ ತನ್ನದಲ್ಲದ ಭೂಮಿಯನ್ನು ಹೇಗೆ ಮಾರಾಟ ಮಾಡುತ್ತಾನೆ? ಕೆಲವು ಕಡೆ ಸದರಿ ಭೂಮಿ ನೋಂದಣಿಯಾದ ಉದಾಹರಣೆಗಳೂ ಇವೆ. ಹಲವಾರು ಕಡೆ ರಾಜ ಕಾಲುವೆ, ಕೆರೆಯ ಅಂಗಳ, ಉದ್ಯಾನಕ್ಕೆ ಮೀಸಲಾಗಿರಿಸಿದ ಜಾಗ ಇತ್ಯಾದಿಗಳು ಹೇಗೆ ನೋಂದಣಿಯಾಗುತ್ತವೆ? ಇಂಥ ವ್ಯವಹಾರಕ್ಕೆ ಸಬ್‌ರಿಜಿಸ್ಟ್ರಾರ್‌ಗಳು ಹೇಗೆ ಒಪ್ಪಿಗೆ ನೀಡುತ್ತಾರೆ? ಇವೆಲ್ಲ ಪರಸ್ಪರ ಒಪ್ಪಿಗೆ ಇಲ್ಲದೆ ನಡೆಯಲು ಹೇಗೆ ಸಾಧ್ಯ? ಇಂಥ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.

ಬೆಂಗಳೂರಿನಂಥ ಬೃಹತ್ ನಗರಗಳಲ್ಲಿ ಒತ್ತುವರಿ ಸಮಸ್ಯೆ ಈ ಬಗೆಯದ್ದಾದರೆ, ಗ್ರಾಮೀಣ ಪ್ರದೇಶದಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ನಡೆಯುವ ಒತ್ತುವರಿ ಇದಕ್ಕಿಂತ ವ್ಯಾಪಕವಾಗಿದೆ. ವಿಶೇಷವಾಗಿ ಮಲೆನಾಡಿನ ಜಿಲ್ಲೆಗಳಲ್ಲಿ ಕಾಫಿ ತೋಟಗಳ ಮಾಲಕರು ತಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಇರುವ ಅರಣ್ಯ ಪ್ರದೇಶದ ಭೂಮಿಯನ್ನು ಸದ್ದಿಲ್ಲದೇ ಕಬಳಿಸುತ್ತಾರೆ. ಸರಕಾರವೂ ಅವರಿಗೆ ಮೌನ ಸಮ್ಮತಿ ನೀಡುತ್ತದೆ. ಇಲ್ಲಿ ಬುಲ್ಡೋಜರ್ ಬರುವುದಿಲ್ಲ. ಕ್ರಮೇಣ ಒತ್ತುವರಿ ಮಾಡಿಕೊಂಡ ಅರಣ್ಯ ಪ್ರದೇಶದ ಭೂಮಿಯಲ್ಲಿ ಕೃಷಿ ಆರಂಭಿಸಿ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಇಂಥವರು ಶಾಸನ ಸಭೆ ಚುನಾವಣೆಗೆ ನಿಂತು ಗೆದ್ದು ಕೂಡಾ ಬರುತ್ತಾರೆ.

ನಮ್ಮ ಸಮಾಜದಲ್ಲಿ ನೂರಾರು ಎಕರೆ ಭೂಮಿಯನ್ನು ಹೊಂದಿರುವ ಜಮೀನ್ದಾರರು ಸಾಕಷ್ಟಿದ್ದಾರೆ. ಕಾಫಿ ಪ್ಲಾಂಟರ್‌ಗಳಿಗೇನೂ ಕಡಿಮೆಯಿಲ್ಲ. ಇವರಲ್ಲಿ ಬಹುತೇಕ ಮಂದಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿರುತ್ತಾರೆ. ಒತ್ತುವರಿಯನ್ನು ನಿರ್ಬಂಧಿಸುವ ಯಾವುದೇ ಸರಕಾರದ ಕಾನೂನು ತಮ್ಮ ಬಳಿ ಬಾರದಂತೆ ತಡೆ ಹಿಡಿಯುವ ಸಾಮರ್ಥ್ಯ ಇವರ ಬಳಿ ಇರುವ ದುಡ್ಡಿಗೆ ಇದೆ. ಈ ರೀತಿ ಕಾನೂನು ಒಬ್ಬರಿಗೊಂದು, ಇನ್ನೊಬ್ಬರಿಗೆ ಇನ್ನೊಂದು ಇರಬಾರದು. ಯಾವುದೇ ಕಾರಣವಿರಲಿ ಆಸರೆಗಾಗಿ ಸಣ್ಣಪುಟ್ಟ ಗುಡಿಸಲುಗಳನ್ನು ನಿರ್ಮಿಸಿಕೊಂಡು ಆಸರೆ ಮಾಡಿಕೊಂಡವರ ಬಗ್ಗೆ ಮಾನವೀಯ ಅನುಕಂಪವಿರಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News