ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸೆ: ಅಲ್ಪಸಂಖ್ಯಾತರ ರಕ್ಷಣೆಯಾಗಲಿ
Photo | indiatoday
ಬೂದಿ ಮುಚ್ಚಿದ ಕೆಂಡದಂತಿದ್ದ ಬಾಂಗ್ಲಾ ಮತ್ತೆ ಉರಿಯ ತೊಡಗಿದೆ. 2024ರ ಬಾಂಗ್ಲಾ ರಾಜಕೀಯ ವಿಪ್ಲವದ ಮುಂಚೂಣಿಯಲ್ಲಿದ್ದ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ಬಳಿಕ ಬಾಂಗ್ಲಾದಲ್ಲಿ ಮತ್ತೆ ಜನರು ಬೀದಿಗಿಳಿದಿದ್ದಾರೆ. ಕಳೆದ ವಾರ ಢಾಕಾದ ಬಿಜೊಯ್ ನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಹಾದಿ ಅವರಿಗೆ ಗುಂಡಿಕ್ಕಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರು ಗುರುವಾರ ಮೃತಪಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆಯೇ ಬಾಂಗ್ಲಾದಲ್ಲಿ ಮತ್ತೆ ಜನಾಕ್ರೋಶ ಭುಗಿಲೆದ್ದಿತು. ಬಾಂಗ್ಲಾದೊಳಗೆ ನಡೆಯುತ್ತಿರುವ ಈ ಹಿಂಸಾಚಾರ, ದಂಗೆಗಳನ್ನು ಆ ದೇಶದ ಆಂತರಿಕ ವಿಷಯವೆಂದು ಬಿಟ್ಟು ಬಿಡುವ ಸ್ಥಿತಿಯಲ್ಲಿ ಭಾರತವೂ ಇಲ್ಲ. ಯಾಕೆಂದರೆ ಈ ಹಿಂಸಾಚಾರದಲ್ಲಿ ಭಾರತದ ಹೆಸರು ಬೇಡವೆಂದರೂ ಜೋಡಿಸಲ್ಪಡುತ್ತಿದೆ. ಮುಖ್ಯವಾಗಿ, ಹಾದಿ ಹತ್ಯೆ ಆರೋಪಿಗಳು ಭಾರತದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಶಂಕೆಯು, ಪ್ರತಿಭಟನಾಕಾರರನ್ನು ಕೆರಳಿಸಿದೆ. ಈ ಶಂಕೆಯು ಬಾಂಗ್ಲಾದಲ್ಲಿ ಭಾರತ ವಿರೋಧಿ ಮನಸ್ಥಿತಿಯನ್ನು ಹೆಚ್ಚಿಸಿದೆ. ಇದು ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಗೂ ಕಾರಣವಾಗುವ ಸಾಧ್ಯತೆಗಳಿವೆ. ಈಗಾಗಲೇ ಹಿಂದೂ ಧರ್ಮಕ್ಕೆ ಸೇರಿದ ಒಬ್ಬ ಯುವಕನ ಹತ್ಯೆಯಾಗಿದ್ದು, ಭಾರತದ ಉಗ್ರವಾದಿ ಕೇಸರಿ ಪಡೆಗಳು ಈ ಹತ್ಯೆಯನ್ನು ತಮ್ಮ ರಾಜಕೀಯಗಳಿಗೆ ಬಳಸಿಕೊಳ್ಳಲು ಮುಂದಾಗಿವೆ. ಬಾಂಗ್ಲಾದಲ್ಲಿ ಹಾದಿ ಹತ್ಯೆಯನ್ನು ಮುಂದಿಟ್ಟುಕೊಂಡು ಯುವಕರ ಗುಂಪು ಭಾರತದ ವಿರುದ್ಧ ದ್ವೇಷವನ್ನು ಹರಡಲು ಮುಂದಾಗಿದ್ದರೆ, ಇತ್ತ ಭಾರತದಲ್ಲಿ ಸಂಘಪರಿವಾರವು ಬಾಂಗ್ಲಾ ಹಿಂಸಾಚಾರವನ್ನು ತೋರಿಸಿ ಭಾರತದೊಳಗಿರುವ ಭಾರತೀಯ ಮುಸ್ಲಿಮರ ಮೇಲೆ ದ್ವೇಷ ಸಾಧಿಸಲು ಮುಂದಾಗಿದೆ. ಈ ಎರಡೂ ಗುಂಪುಗಳಿಗೆ ದೊಡ್ಡ ವ್ಯತ್ಯಾಸವೇನೂ ಇಲ್ಲ.
ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಅಲ್ಲಿನ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯವೆಂದು ಭಾರತದ ಕೆಲವು ರಾಜಕೀಯ ಶಕ್ತಿಗಳು ಬಿಂಬಿಸಲು ಪ್ರಯತ್ನಿಸುತ್ತಿದೆಯಾದರೂ, ಹಿಂಸಾಚಾರದಲ್ಲಿ ಮುಸ್ಲಿಮ್ ಮುಖಂಡರೂ ಬಲಿಯಾಗುತ್ತಿದ್ದಾರೆ. ಶನಿವಾರ ನಸುಕಿನಲ್ಲಿ ಅಲ್ಲಿನ ಬಿಎನ್‌ಪಿ ಮುಖಂಡನ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಈ ಸಂದರ್ಭದಲ್ಲಿ ಬಿಎನ್‌ಪಿ ಮುಖಂಡ ಬಿಲಾಲ್ ಹುಸೈನ್ ಅವರ ಏಳು ವರ್ಷದ ಪುತ್ರಿ ಮೃತಪಟ್ಟಿದ್ದಾಳೆ. ಉಳಿದ ಕುಟುಂಬ ಸದಸ್ಯರು ಗಂಭೀರ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದೂ ಯುವಕನನ್ನು ಬರ್ಬರವಾಗಿ ಕೊಂದು ಹಾಕಿದ ಏಳು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ದೇಶದ ಪ್ರಧಾನ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ‘ಹಾದಿ ಹತ್ಯೆಗೆ ಪ್ರತೀಕಾರ ಸಲ್ಲದು. ಹಿಂಸೆಯನ್ನು ವಿರೋಧಿಸುವುದೇ ಹಾದಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ’ ಎಂದು ಅವರು ಕರೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತವು ಅತ್ಯಂತ ಜಾಗರೂಕವಾಗಿ ಮುಂದಡಿಯಿಡಬೇಕು. ಅಲ್ಲಿನ ಆಂತರಿಕ ವಿದ್ಯಮಾನಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ನಡೆಸದೇ, ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಅಲ್ಲಿನ ಸರಕಾರಕ್ಕೆ ಗರಿಷ್ಠ ಒತ್ತಡವನ್ನು ಹೇರಬೇಕು. ಹಾದಿ ಹತ್ಯೆಯಲ್ಲಿ ಶಾಮೀಲಾಗಿರುವ ಆರೋಪಿಗಳಿಗೆ ಭಾರತದಲ್ಲಿ ತಲೆ ಮರೆಸುವುದಕ್ಕೆ ಯಾವ ರೀತಿಯಲ್ಲೂ ಅವಕಾಶವನ್ನು ನೀಡಬಾರದು. ಈ ನಿಟ್ಟಿನಲ್ಲಿ ಸರಕಾರ ತನ್ನ ನಿಲುವನ್ನು ಬಾಂಗ್ಲಾಕ್ಕೆ ಸ್ಪಷ್ಟ ಪಡಿಸುವುದು ಅತ್ಯಗತ್ಯ.
ಈಗಾಗಲೇ ಪದಚ್ಯುತ ಬಾಂಗ್ಲಾ ಪ್ರಧಾನಮಂತ್ರಿ ಶೇಕ್‌ಹಸೀನಾರಿಗೆ ಆಶ್ರಯ ನೀಡುವ ಮೂಲಕ ಭಾರತವು ಬಾಂಗ್ಲಾದ ಸಿಟ್ಟಿಗೆ ಗುರಿಯಾಗಿದೆ. ಶೇಕ್ ಹಸೀನಾರಿಗೆ ಅಮೆರಿಕ ಸೇರಿದಂತೆ ಯುರೋಪ್ ರಾಷ್ಟ್ರಗಳು ಆಶ್ರಯ ನೀಡಲು ಹಿಂದೇಟು ಹಾಕಿದಾಗ ಭಾರತ ಆಕೆಯನ್ನು ಹಾರ್ದಿಕವಾಗಿ ಸ್ವಾಗತಿಸಿತು ಮಾತ್ರವಲ್ಲ, ‘ಮಾನವೀಯ ನೆಲೆಯಲ್ಲಿ ಆಶ್ರಯ ನೀಡಿದ್ದೇನೆ’ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿತು. ಒಂದೆಡೆ, ಭಾರತದಲ್ಲಿರುವ ನೂರಾರು ಪ್ರಜೆಗಳನ್ನೇ ‘ಬಾಂಗ್ಲಾ ನುಸುಳುಕೋರರು’ ಎಂದು ಅನುಮಾನಿಸಿ ಅವರಿಗೆ ಮಾನಸಿಕ, ದೈಹಿಕ ದೌರ್ಜನ್ಯಗಳನ್ನು ನೀಡುತ್ತಾ ಅವರನ್ನು ಬಾಂಗ್ಲಾಕ್ಕೆ ಗಡಿಪಾರು ಮಾಡಲು ಸಂಚು ರೂಪಿಸುತ್ತಿರುವ ಹೊತ್ತಿನಲ್ಲಿ ಭಾರತ ಸರಕಾರ ನರಮೇಧ ಮತ್ತು ಭ್ರಷ್ಟಾಚಾರದ ಆರೋಪ ಹೊತ್ತಿರುವ ಪದಚ್ಯುತ ಶೇಕ್ ಹಸೀನಾರಿಗೆ ನೀಡಿರುವ ಆಶ್ರಯವನ್ನು ಮಾನವೀಯ ನೆಲೆಯಲ್ಲಿ ಸಮರ್ಥಿಸಲು ನೋಡುತ್ತಿರುವುದು ಅನುಮಾನ, ಟೀಕೆಗಳಿಗೆ ಕಾರಣವಾಗಿದೆ. ಇಂದು ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಭಾರತ ಸರಕಾರ ಪ್ರಾಮಾಣಿಕವಾದ ಕಾಳಜಿಯನ್ನು ಹೊಂದಿದ್ದರೆ, ಅದು ಅಲ್ಲಿನ ಸರಕಾರದ ಮೇಲೆ ಒತ್ತಡಗಳನ್ನು ಹಾಕಬೇಕು. ಭಾರತದ ಆಗ್ರಹಗಳನ್ನು ಬಾಂಗ್ಲಾ ಸ್ವೀಕರಿಸಬೇಕಾದರೆ ಉಭಯ ದೇಶಗಳ ನಡುವೆ ಸಂಬಂಧ ಸುಧಾರಣೆಯಾಗುವುದು ಅತ್ಯಗತ್ಯವಾಗಿದೆ. ಆದರೆ, ಕೆಲವು ದಿನಗಳಿಂದ ಭಾರತ-ಬಾಂಗ್ಲಾ ನಡುವೆ ಉದ್ವಿಗ್ನ ವಾತಾವರಣ ಹೆಚ್ಚ ತೊಡಗಿದೆ.
ಇತ್ತೀಚೆಗೆ ಬಾಂಗ್ಲಾದೇಶದ ನ್ಯಾಶನಲ್ ಸಿಟಿಝನ್ ಪಾರ್ಟಿಯ ಮುಖಂಡ ಹಸ್ನತ್ ಅಬ್ದುಲ್ಲಾ ಅವರು, ‘ಭಾರತವು ಬಾಂಗ್ಲಾದ ವಿರೋಧಿ ಪಡೆಗಳಿಗೆ ಆಶ್ರಯ ನೀಡಿದೆ’ ಎಂದು ಆರೋಪಿಸಿರುವುದಲ್ಲದೆ, ಈಶಾನ್ಯ ಭಾರತದ ಭೂಭಾಗದ ಮೇಲೆ ಹಕ್ಕು ಸ್ಥಾಪಿಸುವ ಮಾತುಗಳನ್ನಾಡಿದ್ದರು. ಇದು ಉಭಯ ದೇಶಗಳ ನಡುವಿನ ಅಸಮಾಧಾನವನ್ನು ಹೆಚ್ಚಿಸಿತು. ಇದರ ಬೆನ್ನಿಗೇ ಭಾರತ ಸರಕಾರವು ಬಾಂಗ್ಲಾ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಇದೇ ಸಂದರ್ಭದಲ್ಲಿ, ಬಾಂಗ್ಲಾದಲ್ಲಿರುವ ಹಿಂದೂಗಳ ಬಗ್ಗೆ ಭಾರತವು ತನ್ನ ಆತಂಕವನ್ನು ಹೊರಗೆಡಹಿದೆ. ಭಾರತದ ಈ ಆತಂಕ ಎಷ್ಟು ಪ್ರಾಮಾಣಿಕತೆಯಿಂದ ಕೂಡಿದೆ ಎನ್ನುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಭಾರತದ ಆತಂಕವನ್ನು ಬಾಂಗ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಕಾದರೆ, ಭಾರತ ಸರಕಾರ ತನ್ನ ದೇಶದೊಳಗಿರುವ ಅಲ್ಪಸಂಖ್ಯಾತರ ಜೊತೆಗೆ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದೂ ಮುಖ್ಯವಾಗುತ್ತದೆ. ಬಾಂಗ್ಲಾ ನುಸುಳುಕೋರರು ಎಂದು ತನ್ನದೇ ದೇಶದ ಪ್ರಜೆಗಳನ್ನು ಸಂಶಯಿಸುತ್ತಾ ಅವರ ಮೇಲೆ ದೌರ್ಜನ್ಯ ನಡೆಸುವ ದೇಶ ಇನ್ನೊಂದು ದೇಶದ ಅಲ್ಪಸಂಖ್ಯಾತರ ಬಗ್ಗೆ ಕಳವಳ ವ್ಯಕ್ತಪಡಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ವ್ಯಕ್ತಪಡಿಸಿದರೂ ಅದನ್ನು ನೆರೆಯ ದೇಶ ಗಂಭೀರವಾಗಿ ತೆಗೆದುಕೊಳ್ಳಬೇಕೆಂದೇನೂ ಇಲ್ಲ. ಇತ್ತೀಚೆಗೆ, ಓರ್ವ ಗರ್ಭಿಣಿ ಮತ್ತು ಆಕೆಯ ಎಂಟು ವರ್ಷದ ಪುತ್ರನನ್ನು ಭಾರತ ಸರಕಾರ ಅಕ್ರಮವಾಗಿ ಬಾಂಗ್ಲಾಕ್ಕೆ ಗಡಿಪಾರು ಮಾಡಿತ್ತು. ಸುಪ್ರೀಂಕೋರ್ಟ್‌ನ ಮಧ್ಯ ಪ್ರವೇಶದ ಬಳಿಕ ಸರಕಾರ ಆಕೆಯನ್ನು ಮತ್ತೆ ಭಾರತಕ್ಕೆ ಕರೆಸಿಕೊಳ್ಳಲು ಒಪ್ಪಿಕೊಂಡಿತು. ಬಾಂಗ್ಲಾ ನುಸುಳುಕೋರರು ಎಂದು ಆರೋಪಿಸಿ ನೂರಾರು ಕಾರ್ಮಿಕರನ್ನು ಭಾರತ ಸರಕಾರ ಬಂಧನ ಕೇಂದ್ರದಲ್ಲಿಟ್ಟಿರುವುದನ್ನು ನಾವು ಈ ಸಂದರ್ಭದಲ್ಲಿ ಮರೆಯಬಾರದು. ಬಾಂಗ್ಲಾ ನುಸುಳುಕೋರರ ವಿರುದ್ಧ ಕೇಂದ್ರ ಸರಕಾರ ಯಾವ ದಾಕ್ಷಿಣ್ಯವೂ ಇಲ್ಲದೆ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ ರಾಜಕೀಯ ಕಾರಣಗಳಿಗಾಗಿ ಹಲವು ದಶಕಗಳಿಂದ ಭಾರತ ನಿವಾಸಿಗಳಾಗಿರುವ ಕಾರ್ಮಿಕರನ್ನು ನುಸುಳುಕೋರರು ಎಂದು ಅನುಮಾನಿಸಿ ಅವರ ಮೇಲೆ ದೌರ್ಜನ್ಯ ಎಸಗುವುದನ್ನು ನಿಲ್ಲಿಸಬೇಕು. ಭಯಾನಕ ಹಿಂಸಾಚಾರಕ್ಕೆ ಸಾಕ್ಷಿಯಾದ ಮಣಿಪುರ ಬಾಂಗ್ಲಾದಲ್ಲಿಲ್ಲ. ಬೀಫ್ ತಿಂದನೆಂದು ಅನುಮಾನಿಸಿ ವೃದ್ಧನನ್ನು ಕೊಂದು ಹಾಕಿದ ದಾದ್ರಿ ಬಾಂಗ್ಲಾದಲ್ಲಿಲ್ಲ. ಕೆಲವು ದಿನಗಳ ಹಿಂದೆ ಬಾಂಗ್ಲಾ ನುಸುಳುಕೋರ ಎಂದು ವಲಸೆ ಕಾರ್ಮಿಕನೊಬ್ಬನನ್ನು ಕೇರಳದಲ್ಲೇ ಥಳಿಸಿ ಕೊಂದು ಹಾಕಿದರು. ಇಂತಹ ಸಂದರ್ಭಗಳಲ್ಲಿ ತುಟಿ ಬಿಚ್ಚದ ಭಾರತದ ರಾಜಕೀಯ ನೇತಾರರು ನೆರೆಯ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಕಣ್ಣೀರು ಸುರಿಸಿದರೆ ಅದು ಮೊಸಳೆ ಕಣ್ಣೀರು ಅಷ್ಟೇ. ನೆರೆಯ ಹಿಂದೂಗಳ ಸ್ಥಿತಿಯನ್ನು ತನ್ನ ದೇಶದೊಳಗೆ ವಿಭಜನೆಯ ರಾಜಕೀಯಕ್ಕೆ ಬಳಸುವುದನ್ನು ನಿಲ್ಲಿಸಿ, ಅಲ್ಪಸಂಖ್ಯಾತರ ವಿಷಯದಲ್ಲಿ ಬಾಂಗ್ಲಾಕ್ಕೆ ಭಾರತವು ಮಾದರಿಯಾಗಬೇಕು. ಆಗ ಮಾತ್ರ ಬಾಂಗ್ಲಾದ ಸರಕಾರಕ್ಕೆ ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿ ಸಲಹೆ ನೀಡುವ, ಒತ್ತಡ ಹಾಕುವ ನೈತಿಕತೆಯನ್ನು ಭಾರತದ ರಾಜಕಾರಣಿಗಳು ತನ್ನದಾಗಿಸಿಕೊಳ್ಳುತ್ತಾರೆ.