ಓಂ ಪ್ರಕಾಶ್ ಮಾಥುರ್‌ (Photo: The Meghalayan Express)

ಕೇರಳಂನ ಹೊಸ ರಾಜ್ಯಪಾಲರಿಗೆ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅಸಾಧ್ಯ ಹಸಿವಾಗಿದೆ. ಓಂ ಪ್ರಕಾಶ್ ಮಾಥುರ್ ಅವರು ಎಲ್ಲ ಬಿಟ್ಟು, ಲೋಕಭವನದ ಅಡುಗೆ ಮನೆಯಲ್ಲಿ ಇನ್ನು ಸಸ್ಯಾಹಾರವನ್ನಷ್ಟೇ ತಯಾರಿಸಬೇಕು ಎಂದು ಆದೇಶಿಸಿದ್ದಾರೆ. ಸಂಘ ಪರಿವಾರದ ಅಜೆಂಡಾವನ್ನು ಜಾರಿಗೊಳಿಸುವ ಅವರೊಳಗಿನ ಆರೆಸ್ಸೆಸ್ ಪ್ರಚಾರಕನ ಹಸಿವು ಹೀಗೆ ಬಹಿರಂಗಕ್ಕೆ ಬಂದಿದೆ. ಅವರ ಈ ಆದೇಶ ವಿವಾದವೆಬ್ಬಿಸುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಲೋಕಭವನ, ಮಾಥುರ್ ಅವರು ಸಸ್ಯಾಹಾರಿಯಾಗಿರುವುದರಿಂದ ತಮ್ಮ ಊಟ ತಯಾರಿಸುವ ಅಡುಗೆಮನೆಯಲ್ಲಿ ಮಾಂಸಾಹಾರ ತಯಾರಿಸಬಾರದು ಎಂದು ಸೂಚಿಸಿದ್ದಾಗಿ ಹೇಳಿದೆ. ಲೋಕಭವನದ ಸಿಬ್ಬಂದಿ ಅಥವಾ ಉದ್ಯೋಗಿಗಳು ಮನೆಯಿಂದ ಮಾಂಸಾಹಾರ ತರಲು ಅಥವಾ ಹೊರಗೆ ತಿನ್ನಲು ಯಾವುದೇ ನಿರ್ಬಂಧವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಲೋಕಭವನವೇನೂ ಊರಿಗೆಲ್ಲಾ ಊಟ ಹಾಕುವುದಿಲ್ಲ. ಲೋಕಭವನದ ಅಡುಗೆ ಮನೆಯಲ್ಲಿ ತಯಾರಿಸಲಾಗುವ ಆಹಾರ ರಾಜ್ಯಪಾಲರು ಮತ್ತವರ ಆಪ್ತರಿಗೆ ಮಾತ್ರ. ರಾಜ್ಯಪಾಲರು ಮತ್ತವರ ಕುಟುಂಬದವರಿಗೆ ಬೇಕಿರುವುದು ಸಸ್ಯಾಹಾರವಾಗಿದ್ದರೆ, ಅದನ್ನು ವೈಯಕ್ತಿಕ ಮಟ್ಟದಲ್ಲೇ ಸೂಚಿಸಿ ಮುಗಿಸಬಹುದಿತ್ತು. ಆದರೆ ಲೋಕಕ್ಕೆಲ್ಲಾ ತಿಳಿಯುವಂತೆ ಆದೇಶಿಸಿ ಗುಲ್ಲೆಬ್ಬಿಸಿರುವುದನ್ನು ನೋಡಿದರೆ, ಇಲ್ಲೊಂದು ರಾಜಕೀಯ ಇದೆಯೆಂದು ತೋರುತ್ತದೆ.

ಆಡಳಿತಾರೂಢ ಕಾಂಗ್ರೆಸ್ ಮೈತ್ರಿಕೂಟ ಹಾಗೂ ವಿರೋಧ ಪಕ್ಷ ಸಿಪಿಐ(ಎಂ) ಎರಡೂ ಇದರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿವೆ. ಇದು ಅತಿರೇಕದ ನಿರ್ಧಾರವೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಟೀಕಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಹಾರದ ಆಯ್ಕೆಯನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದ್ದು, ಆಹಾರವನ್ನೂ ಕೋಮುವಾದಿ ಅಸ್ತ್ರವಾಗಿಸಿ ಧ್ರುವೀಕರಣ ಮಾಡುವ ಹುನ್ನಾರ ಇದೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಆಕ್ಷೇಪಿಸಿದ್ದಾರೆ. ಮಾಥುರ್ ಅವರಿಗೆ ಏನು ಬೇಕಿದೆಯೋ ಅದಕ್ಕಾಗಿ ಆದೇಶವನ್ನೇ ಹೊರಡಿಸುವ ನಡೆ ಇತರರ ಮೇಲೆಯೂ ಅದನ್ನು ಹೇರುವ ಬಗೆಯಾಗಿದೆ. ಮಿಶ್ರ ಆಹಾರ ಸಂಸ್ಕೃತಿಯಿರುವ ಕೇರಳಂನಲ್ಲಿ ಸಸ್ಯಾಹಾರ ಅಥವಾ ಮಾಂಸಾಹಾರ ಸೇವನೆ ಹಕ್ಕು ಅಲ್ಲಿನ ಜನರಿಗಿದೆ. ಆದರೆ ಆಹಾರ ಸಂಸ್ಕೃತಿ ಮೇಲೆ ಪರೋಕ್ಷವಾಗಿ ನಿರ್ಬಂಧ ಹೇರುವ ಯತ್ನ ಹೊಸ ರಾಜ್ಯಪಾಲರ ಈ ಕ್ರಮದಲ್ಲಿರುವುದು ಯಾರಿಗೇ ಆದರೂ ಅರ್ಥವಾಗದೆ ಇರದು. ರಾಜಕೀಯ ನಾಯಕರು ಟೀಕಿಸಿರುವ ಹಾಗೆ, ಇಂಥದ್ದೇ ಆಹಾರ ತಿನ್ನಬೇಕೆಂದು ಒತ್ತಾಯಿಸುವ ಸರ್ವಾಧಿಕಾರಿ ಧೋರಣೆ ಖಂಡಿತ ಒಪ್ಪುವಂಥದ್ದಲ್ಲ. ವಿವಾದವೇಳುತ್ತಿದ್ದಂತೆ ಎಚ್ಚೆತ್ತುಕೊಂಡ ಲೋಕಭವನದ ಮಂದಿ, ಆಹಾರದ ಆಯ್ಕೆಯ ಮೇಲೆ ಯಾವುದೇ ನಿಷೇಧ ಹೇರಿಲ್ಲ ಮತ್ತು ಸಿಬ್ಬಂದಿಗೆ ಮಾಂಸಾಹಾರ ನಿಷೇಧಿಸಲಾಗಿದೆ ಎಂಬ ಸುದ್ದಿಗಳು ಸತ್ಯವಲ್ಲ ಎಂದೆಲ್ಲ ತೊದಲಿ, ತೇಪೆ ಹಚ್ಚಲು ನೋಡಿದ್ದಾರೆ. ತನಗೆ ಬೇಕಾದುದನ್ನು ಜಾರಿಗೆ ತರಲು ಅಧಿಕಾರ ಬಳಸುವುದು, ವಿರೋಧ ವ್ಯಕ್ತವಾದೊಡನೆ ಮತ್ತೇನೋ ಕಥೆ ಹೇಳುವುದು ಬಿಜೆಪಿಯ ಚಾಳಿಯೇ ಆಗಿದೆ. ಅದೇ ತಂತ್ರವನ್ನು ಲೋಕಭವನದಲ್ಲೂ ಅನುಸರಿಸಲಾಗುತ್ತಿರುವುದು ಕಲುಷಿತ ರಾಜಕೀಯದ ಸೂಚನೆ.

ಮಾಥುರ್ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಓಡೋಡಿ ಬಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ‘‘ಕಾಂಗ್ರೆಸ್ ಪಕ್ಷದವರು ಮುಸ್ಲಿಮ್ ಮಲಯಾಳಿಯೊಬ್ಬರ ಮನೆಗೆ ಹೋಗಿ ಹಂದಿಮಾಂಸವನ್ನು ಬಡಿಸುವಂತೆ ಕೇಳಲು ಸಾಧ್ಯವೆ?’’ ಎಂದು ಅತ್ಯಂತ ಕುತ್ಸಿತದ ಪ್ರಶ್ನೆ ಕೇಳಿ, ಬಿಜೆಪಿಯ ಮನಸ್ಥಿತಿ ಏನು ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ. ಲೋಕಭವನ ಮಾಥುರ್ ಅವರ ಮನೆಯೇ ಎಂದು ಕೇಳಬೇಕಾಗುತ್ತದೆ. ರಾಜಭವನ ಎಂದಿದ್ದುದನ್ನು ಲೋಕಭವನ ಎಂದು ಬದಲಿಸುವಾಗ, ವಸಾಹತುಶಾಹಿ ಗುರುತುಗಳನ್ನು ಅಳಿಸಿಹಾಕುವ ಉದ್ದೇಶದ ಬಗ್ಗೆ ಹೇಳಿಕೊಳ್ಳಲಾಯಿತು. ಆದರೆ ಬ್ರಿಟಿಷರಿಗಿಂತ ನೀಚ ಮಟ್ಟದ ಮನಸ್ಥಿತಿಯುಳ್ಳವರಿಗೆ, ಜನರ ಬಗ್ಗೆ ಗೌರವ ಇಲ್ಲದವರಿಗೆ ಹೆಸರು ಬದಲಿಸುವುದು ಶೋಕಿ ಮಾತ್ರವೇ ಹೊರತು ಕಾಳಜಿಯಲ್ಲ. ಸಾಂವಿಧಾನಿಕ ಹುದ್ದೆ ಮತ್ತು ಸಂಸ್ಥೆಗಳನ್ನು ತಮ್ಮದೆಂಬಂತೆ ಅಧಿಕಾರ ಚಲಾಯಿಸುವ ಮತ್ತು ಅದನ್ನೇ ರೂಢಿಯಾಗಿ ಸ್ಥಾಪಿಸಲು ನೋಡುವ ಇಂಥ ದುಷ್ಟಬುದ್ಧಿ, ಜನರ ಭಾವನೆಗಳನ್ನು ಕಾಲಡಿ ಹಾಕಿ ತುಳಿಯುವ ಧೂರ್ತತನದ್ದಾಗಿದೆ. ತನ್ನದೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೇರಳಂ ಅನ್ನು ಚುನಾವಣೆ ಮೂಲಕ ಆಕ್ರಮಿಸಿಕೊಳ್ಳಲು ಆಗದ ಬಿಜೆಪಿ ಈಗ ಬೇರೆಯದೇ ಹತಾರು ಬಳಸಿ ತನ್ನ ಒಂದೊಂದೇ ಉದ್ದೇಶಗಳನ್ನು ಹೇರಲು ಬಯಸುತ್ತಿದೆ. ಈಗಾಗಲೇ ಕೇರಳಂ ಬಗ್ಗೆ ಅಪಪ್ರಚಾರಕ್ಕೆ ಇದೇ ಬಿಜೆಪಿ ಎಷ್ಟೆಲ್ಲ ಆಟವಾಡಿದೆ ಎನ್ನುವುದು ಗೊತ್ತೇ ಇದೆ.

ಆಹಾರ ಸಂಸ್ಕೃತಿ ಮೇಲಿನ ಸಂಘಿಗಳ ದಾಳಿ ನಿರಂತರವಾಗಿ ನಡೆಯುತ್ತಿದೆ. ಗೋವಿನ ಹೆಸರಿನ ಅವರ ರಾಜಕೀಯ, ತಮಗಾಗದ ಸಮುದಾಯವನ್ನು ದಮನಿಸುವ ಹುನ್ನಾರವಾಗಿದೆ. ಮಾತೆತ್ತಿದರೆ ಮಚಲಿ, ಮಟನ್ ಎಂದು ದಲಿತರು ಮತ್ತು ಅಲ್ಪಸಂಖ್ಯಾತರಲ್ಲಿ ಕೀಳರಿಮೆ ಮೂಡಿಸಿ ಅಬ್ಬರಿಸುವ ಈ ಬಹುಸಂಖ್ಯಾತರ ಬಲದ ಆಟ ಕೇರಳಂನಲ್ಲಿ ನಡೆಯುತ್ತಿಲ್ಲ ಎಂಬುದೇ ಬಿಜೆಪಿಯ ಸಂಕಟ. ಹಾಗಾಗಿಯೇ ಲೋಕಭವನದ ಮೂಲಕ ಒಂದು ಬಾಣ ಹೂಡಲು ನೋಡಿದೆ. ತಿರುಗಿ ತನಗೇ ಬಡಿಯುತ್ತದೆಂಬ ಅಂದಾಜು ಸಿಕ್ಕಿದೊಡನೆ ಮುದುರಿಕೊಂಡಿದೆ. ಆದರೆ, ಇದನ್ನು ಅದು ತನ್ನ ಮುಗುಮ್ಮಾದ ಕಾರ್ಯಸೂಚಿಯಾಗಿ ಇಟ್ಟುಕೊಳ್ಳುತ್ತದೆ ಮತ್ತು ಸಂದರ್ಭಕ್ಕಾಗಿ ಕಾಯುತ್ತದೆ ಎಂಬುದರ ಬಗ್ಗೆ ಎಚ್ಚರವಿರಲೇಬೇಕು. ಇಡೀ ದಕ್ಷಿಣ ಭಾರತವನ್ನು ರಾಜಕೀಯವಾಗಿ ತನ್ನ ಹದಕ್ಕೆ ಒಗ್ಗಿಸಿಕೊಳ್ಳಲು ಹಲವಾರು ರಾಜಕೀಯ ತಂತ್ರಗಳಲ್ಲಿ ತೊಡಗಿರುವ ಅದು ಆಹಾರ ಸಂಸ್ಕೃತಿಯ ವಿಷಯದಲ್ಲೂ ವಿಷ ಹರಡದೇ ಬಿಡಲಾರದು. ತಮಿಳುನಾಡಿನ ಕೊಯಮತ್ತೂರಿನಲ್ಲಿ ತನ್ನ ಆಹಾರ ಪದ್ಧತಿ ಕುರಿತ ನಿಂದನೆಯಿಂದ ತೀವ್ರ ಬೇಸತ್ತು 16 ವರ್ಷದ ದಲಿತ ವಿದ್ಯಾರ್ಥಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿರುವ ಸುದ್ದಿ ಇದೇ ಹೊತ್ತಲ್ಲಿ ಬಂದಿದೆ. ಆತನ ಆಹಾರದ ವಿಷಯವಾಗಿ ಸ್ವತಃ ಸಹಪಾಠಿಗಳು ನಿಂದಿಸುತ್ತಿದ್ದರು ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಕಾಯಬೇಕಾದ ಶಿಕ್ಷಕರು ಕೂಡ ಅವನ ಪರವಾಗಿರಲಿಲ್ಲ. ಹದಿಹರೆಯದ ಮನಸ್ಸುಗಳನ್ನೂ ಛಿದ್ರಗೊಳಿಸುವ ಮಟ್ಟಕ್ಕೆ ಊಟದ ಬಟ್ಟಲಲ್ಲಿ ಭೇದವೆಣಿಸಲಾಗುತ್ತಿದೆ. ಶಾಲೆಗಳಂಥ ಪರಿಸರದಲ್ಲೂ ಈ ತಾರತಮ್ಯವಿದೆ ಮತ್ತು ಶಿಕ್ಷಕರು ಕೂಡ ಅದರ ಪೋಷಕ ವ್ಯವಸ್ಥೆಯಂತೆ ನಿಂತಿದ್ದಾರೆ ಎಂಬುದು ದುರಂತ.

ಸಂಸ್ಕೃತಿಯೊಳಗಿನ ಬಹುತ್ವದ ಸೌಂದರ್ಯವನ್ನು, ಆ ಅನನ್ಯತೆಯನ್ನು ಸಹಿಸದ ಕೆಟ್ಟ ದ್ವೇಷ ಇಡೀ ವಾತಾವರಣವನ್ನು ಕೆಡಿಸುತ್ತಿದೆ. ರಾಜಕೀಯ ಆಟದ ಭಾಗವೂ ಆಗುತ್ತಿದೆ. ಹಾಗಾಗಿಯೇ, ಲೋಕಭವನದಲ್ಲಿ ಕುಳಿತ ಮಾಥುರ್ ಥರದ ಜನ ಸಾಂವಿಧಾನಿಕ ಹುದ್ದೆಯ ಘನತೆ ಮರೆತು ‘ಮಾಟಗಾರ’ನ ಕೈಯಲ್ಲಿನ ಗೊಂಬೆಯಂತಾಗುತ್ತಾರೆ. ಪ್ರಜಾಸತ್ತೆಯ ಆಶಯ ಕಣ್ಣೆದುರಲ್ಲೇ ಕೊಚ್ಚಿಹೋಗುತ್ತಿದೆ. ಕೇರಳಂನಂಥಲ್ಲಿನ ಈ ‘ವಿಷ ಪ್ರವಾಹ’ ಅತಿ ಅಪಾಯಕಾರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor