ಖರ್ಗೆ ಮಾತಿನ ಬಗ್ಗೆ ಒಣ ವಿವಾದ
ಮಲ್ಲಿಕಾರ್ಜುನ ಖರ್ಗೆ | Photo: PTI
ಕಳೆದ ಹನ್ನೆರಡು ವರ್ಷಗಳಿಂದ ದೇಶದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿ ಭಾರತವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ.ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸದೆ ಕಾರ್ಪೊರೇಟ್ ಬಂಡವಾಳಶಾಹಿಯ ಲೂಟಿಗೆ ದೇಶವನ್ನು ಬಿಟ್ಟು ಕೊಟ್ಟ ಕೋಮುವಾದಿ ಪಕ್ಷ ಬಿಕ್ಕಟ್ಟಿನ ಸುಳಿಯಿಂದ ಪಾರಾಗುವ ದಾರಿ ಕಾಣದೆ ಜನರ ಗಮನವನ್ನು ಬೇರೆಡೆ ಸೆಳೆಯಲು ದಿನಕ್ಕೊಂದು ವಿವಾದವನ್ನು ಸೃಷ್ಟಿಸುತ್ತಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದರೆನ್ನ್ನಲಾದ ಭಾಷಣದ ಕುರಿತು ವಿವಾದವನ್ನು ಸೃಷ್ಟಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹತಾಶೆಯ ಮಾರ್ಗವನ್ನು ಹಿಡಿದಿದೆ.
ಬಿಹಾರ ರಾಜಧಾನಿ ಪಾಟ್ನಾದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಕ್ಟೋಬರ್ 26ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು ಜನರಿಗೆ ಬೇಡವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಆದಷ್ಟು ಬೇಗ ಪದತ್ಯಾಗ ಮಾಡಿ ಹೋಗುತ್ತಾರೆ ಎಂದು ಹೇಳಿದರು.ಆಗ ಸಭಿಕರಲ್ಲಿದ್ದ ವ್ಯಕ್ತಿಯೊಬ್ಬ ನರೇಂದ್ರ ಮೋದಿ ಅಧಿಕಾರ ಬಿಟ್ಟು ಹೋಗುವುದಿಲ್ಲ ಎಂದು ಕೂಗಿ ಹೇಳಿದ. ಇದರಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಆಗ ಮಲ್ಲಿಕಾರ್ಜುನ ಖರ್ಗೆಯವರು ‘ಮೋದಿ ಮಾತ್ರವಲ್ಲ ಅವರಪ್ಪಕೂಡಾ ಹೋಗುತ್ತಾರೆ’ ಎಂದು ಧ್ವನಿ ಎತ್ತರಿಸಿ ಹೇಳಿದರು. ಖರ್ಗೆಯವರು ಆಡಿದ ಈ ಮಾತು ಬಿಜೆಪಿ ನಾಯಕರನ್ನು ಕೆರಳಿಸಿದೆ. ಇಂಥ ವಿವಾದವನ್ನು ಉಂಟು ಮಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಯುತ್ತಿದ್ದ ಬಿಜೆಪಿ ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ಒಂದು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಂಡು ಹುಸಿ ವಿವಾದವನ್ನು ಸೃಷ್ಟಿಸಿದೆ.
ಪ್ರತಿಭಟನೆಯ ವೇದಿಕೆಯಲ್ಲಿ ರಾಜಕಾರಣಿಗಳು ಭಾವಾವೇಶದಿಂದ ಆಡಬಾರದ ಮಾತನ್ನು ಆಡಿ ವಿವಾದವನ್ನು ಉಂಟು ಮಾಡುವುದು ಹೊಸದೇನಲ್ಲ.ಬಹುತೇಕ ಎಲ್ಲ ಪಕ್ಷಗಳ ನಾಯಕರು ಆಗಾಗ ಜನರನ್ನು ರಂಜಿಸಲು ಇಂಥ ಅಸಭ್ಯ, ಅಸಹ್ಯ ಹೇಳಿಕೆಯನ್ನು ನೀಡುತ್ತಿರುತ್ತಾರೆ. ಇದರಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಮೊದಲ ಸಾಲಿನಲ್ಲಿ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ಶಾ ಸಹಿತ ಬಹುತೇಕ ಛೋಟಾ ನಾಯಕರ ವರೆಗೆ ಎಲ್ಲ ಬಿಜೆಪಿ ನಾಯಕರು ಆಗಾಗ ಇಂಥ ಮಾತನ್ನು ಆಡುತ್ತಲೇ ಇರುತ್ತಾರೆ.
ಹಾಗೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆಯವರು ಪಾಟ್ನಾದಲ್ಲಿ ಮಾಡಿದ ಭಾಷಣದಲ್ಲಿ ವಿವಾದವನ್ನು ಉಂಟು ಮಾಡುವ ಯಾವ ಪದವನ್ನೂ ಬಳಸಿಲ್ಲ.‘ಮೋದಿ ಮಾತ್ರವಲ್ಲ ಅವರ ಅಪ್ಪಕೂಡಾ ಹೋಗುತ್ತಾರೆ’ ಎಂದು ಅವರು ಆಡಿದ ಮಾತಿನಲ್ಲಿ ಆಕ್ಷೇಪಾರ್ಹವಾದುದೇನೂ ಇಲ್ಲ. ಮೋದಿ ಮಾತ್ರವಲ್ಲ ಅವರಪ್ಪಕೂಡಾ ಹೋಗುತ್ತಾರೆ ಎಂದು ಆಡಿದ ಮಾತು ಬೈಗುಳವಲ್ಲ.ಉತ್ತರ ಕರ್ನಾಟಕದ ಹನ್ನೊಂದು ಜಿಲ್ಲೆಗಳಲ್ಲಿ ಇದು ದೈನಂದಿನ ಆಡು ಭಾಷೆಯಲ್ಲಿ ಬಳಸುವ ಮಾತಾಗಿದೆ. ಶಾಲೆಗೆ ಹೋಗುವುದಿಲ್ಲ ಎಂದು ಪುಟ್ಟ ಮಗು ಹಟ ಹಿಡಿದು ಕೂತಾಗ ಆ ಮಗುವಿನ ತಾಯಿ ‘ನೀನಲ್ಲ ನಿನ್ನ ಅಪ್ಪನೂ ಶಾಲೆಗೆ ಹೋಗುತ್ತಾನೆ’ ಎಂದು ತಮಾಷೆಯಾಗಿ ಆಡುವ ಮಾತಿನಂತೆ ಇದು ಉತ್ತರ ಕರ್ನಾಟಕದ ಕಲಬುರಗಿ ಯಿಂದ ಬಂದ ಮಲ್ಲಿಕಾರ್ಜುನ ಖರ್ಗೆಯವರು ಸಭಿಕನೊಬ್ಬನ ಮಾತಿನಿಂದ ಆವೇಶಕ್ಕೊಳಗಾಗಿ ಹಿಂದಿ ಭಾಷೆಯಲ್ಲಿ ಈ ಮಾತನ್ನು ಹೇಳಿದ್ದಾರೆ.ಇದನ್ನು ಸರಿಯಾಗಿ ಕೇಳಿಸಿಕೊಳ್ಳದ ಅಥವಾ ಕೇಳಿಸಿಕೊಂಡರೂ ವಿವಾದವನ್ನು ಉಂಟು ಮಾಡಲು ಕಾಯುತ್ತಿದ್ದ ಬಿಜೆಪಿ ನಾಯಕರಿಗೆ ಇದರಿಂದ ವಿರೋಧಿಗಳನ್ನು ಟೀಕಿಸಲು ಹೊಸ ಅಸ್ತ್ರ ದೊರೆತಂತಾಗಿದೆ.
ರಾಜಕೀಯ ವಿರೋಧಿಗಳನ್ನು ,ಭಿನ್ನ ವಿಚಾರ ಧಾರೆಗೆ ಸೇರಿದವರನ್ನು ಬಿಜೆಪಿ ಸೇರಿದಂತೆ ಸಂಘ ಪರಿವಾರದ ನಾಯಕರು ಅತ್ಯಂತ ಹೊಲಸು ಭಾಷೆಯಲ್ಲಿ ಬೈಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಅವರ ಅಸಭ್ಯ,ಅಸಹ್ಯ ಬೈಗುಳಗಳನ್ನು ಇಲ್ಲಿ ಉಲ್ಲೇಖಿಸಲು ಕೂಡ ಸಂಕೋಚವಾಗುತ್ತದೆ. ಸಂಘದ,
ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ಶಾ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಇಂದಿರಾಗಾಂಧಿ ಅವರ ಬಗ್ಗೆ ಆಡಿದ,ಆಡುತ್ತಿರುವ ಮಾತುಗಳು ಅವರ ಕೆಟ್ಟ ಸಂಸ್ಕೃತಿಗೆ ಸಾಕ್ಷಿಯಾಗಿದೆ.ಮೋದಿಯವರು ಸೋನಿಯಾ ಗಾಂಧಿ ಅವರ ಬಗ್ಗೆ ‘ಕಾಂಗ್ರೆಸ್ ವಿಧವಾ’ ಮತ್ತು ‘ಜರ್ಸಿ ಆಕಳು’, ‘ಐವತ್ತು ಕೋಟಿ ಗರ್ಲ್ ಫ್ರೆಂಡ್’ ಎಂದು ಬಹಿರಂಗವಾಗಿ ಆಡಿದ ಮಾತು ಮನುಷ್ಯರಾದವರು ಆಡುವ ಮಾತಲ್ಲ.
ತಾವು ಮಾತ್ರ ಯಾರ ಬಗ್ಗೆ ಏನನ್ನಾದರೂ ಮಾತನಾಡಬಹುದು, ಆದರೆ ತಮ್ಮ ಬಗ್ಗೆ ಯಾರೂ ಮಾತಾಡ ಕೂಡದು ಎಂಬ ಬಿಜೆಪಿ ನಾಯಕರ ವಿತಂಡವಾದವನ್ನು ಯಾರೂ ಒಪ್ಪುವುದಿಲ್ಲ. ನಮ್ಮ ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆ. ಸ್ವಾತಂತ್ರ್ಯ ಹೋರಾಟದ ನಮ್ಮ ನಾಯಕರು ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕಾಗಿದೆ.ರಾಜಕೀಯ ಟೀಕೆ,ವಿಮರ್ಶೆಗಳು ಸಭ್ಯತೆಯ ಎಲ್ಲೆಯನ್ನು ದಾಟದಿರಲಿ.ಮುಂಚಿನಂತೆ ಬಾಯಿಗೆ ಬಂದದ್ದನ್ನು ಹೇಳಿ ದಕ್ಕಿಸಿಕೊಳ್ಳುವ ಕಾಲ ಇದಲ್ಲ.ದಿನ ಬೆೆಳಗಾದರೆ ಎದುರಿಗೆ ಬರುವ ಕ್ಯಾಮರಾಗಳು, ಧ್ವನಿ ವರ್ಧಕಗಳು,ರೆಕಾರ್ಡರುಗಳು ನಾವು ಆಡುವ ಒಂದೊಂದು ಪದವನ್ನು ಸೆರೆ ಹಿಡಿಯುತ್ತವೆ.ಆದ್ದರಿಂದ ಮಾತು ಹದ್ದು ಮೀರಿ ಹೋಗಬಾರದು.
ಬಿಜೆಪಿ, ಕಾಂಗ್ರೆಸ್ ಮಾತ್ರವಲ್ಲ ಅಸ್ತಿತ್ವದಲ್ಲಿರುವ ಎಲ್ಲ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಹಾಗೂ ನಂತರದ ದಿನಗಳಲ್ಲಿ ನಾಲಗೆಯ ಮೇಲೆ ಹಿಡಿತವನ್ನು ಇಟ್ಟುಕೊಳ್ಳಬೇಕು.ಯಾವುದೇ ಮಾತನ್ನಾಡಲಿ ಅದು ವೈಯಕ್ತಿಕವಾಗಿ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಇರಬಾರದು. ಮಾತು ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗೆಗಿನ ಸಂವಾದ ಮತ್ತು ಚರ್ಚೆಗೆ ಸೀಮಿತವಾಗಿರಬೇಕು.ಈ ನಿಟ್ಟಿನಲ್ಲಿ ವಿಭಿನ್ನ ಪಕ್ಷಗಳ ನಾಯಕರು ಒಂದು ಒಮ್ಮತಕ್ಕೆ ಬರುವುದು ಅಗತ್ಯವಾಗಿದೆ.
ರಾಜಕೀಯ ಪಕ್ಷಗಳಲ್ಲಿ, ರಾಜಕೀಯ ನಾಯಕರಲ್ಲಿ ವೈಯಕ್ತಿಕ ದ್ವೇಷ ಇರಬಾರದು. ರಾಜಕೀಯ, ತಾತ್ವಿಕ ಭಿನ್ನಾಭಿಪ್ರಾಯ ಗಳು ಮಾತ್ರ ಇರಬೇಕು. ಪರಸ್ಪರ ವೈಯಕ್ತಿಕ ಸ್ನೇಹ ಸಂಬಂಧಗಳಿರ ಬೇಕು. ಸೋಲು, ಗೆಲುವುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಪ್ರಧಾನಿಯಾಗಿರಲಿ, ಮುಖ್ಯಮಂತ್ರಿ ಯಾಗಿರಲಿ ಅವರು ಕುಳಿತ ಕುರ್ಚಿ ಶಾಶ್ವತವಾದುದಲ್ಲ.ಅಧಿಕಾರದಲ್ಲಿರುವವರು ಹೋಗಲೇ ಬೇಕು.ಅದನ್ನೇ ಮಲ್ಲಿಕಾರ್ಜುನ ಖರ್ಗೆಯವರು ತಮ್ಮದೇ ಭಾಷೆಯಲ್ಲಿ ಹೇಳಿದರೆ ಕೆಂಡದಂಥ ಕೋಪವೇಕೆ? ಇದು ಎಲ್ಲರೂ ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ.ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲಿ.