×
Ad

ವಲಸೆ ಕಾರ್ಮಿಕರ ಬಲಿದಾನ ವ್ಯರ್ಥವಾಗದಿರಲಿ

Update: 2026-07-04 08:20 IST

ಸಾಂದರ್ಭಿಕ ಚಿತ್ರ

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ ಮಾದಾಪಟ್ಟಣ ಸಮೀಪದಲ್ಲಿನ ಕಲ್ಲು ಕ್ವಾರಿಯಲ್ಲಿ ಬೃಹತ್ ಬಂಡೆಯೊಂದು ಉರುಳಿಬಿದ್ದ ಪರಿಣಾಮವಾಗಿ ಏಳು ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. ಮೃತರಲ್ಲಿ ಓರ್ವ ಯಾದಗಿರಿ ಜಿಲ್ಲೆಯವನಾಗಿದ್ದರೆ ಉಳಿದೆಲ್ಲ ಕಾರ್ಮಿಕರು ಹೊರ ರಾಜ್ಯಕ್ಕೆ ಸೇರಿದವರು. ಬಿಹಾರ, ಛತ್ತೀಸ್‌ಗಡ, ಮಧ್ಯ ಪ್ರದೇಶ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರಿವರು. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು ಮುಖ್ಯ ಆರೋಪಿ ಬಸವೇಶ್ವರ ಕ್ರಷರ್‌ನ ಮಾಲಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

‘ಕ್ವಾರಿಯಲ್ಲಿ ದುರಂತ ಸಂಭವಿಸುವ ಸಾಧ್ಯತೆಯಿದೆ ಎಂದು ಗೊತ್ತಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾರ್ಮಿಕರಿಂದ ಕೆಲಸ ಮಾಡಿಸಲಾಗಿದೆ. ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ’ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

ಕಲ್ಲು ಕ್ವಾರಿಗಳಲ್ಲಿ ಇಂತಹ ದುರಂತಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಈ ಹಿಂದೆಯೂ ಇಂತಹ ಹಲವು ಭೀಕರ ದುರಂತಗಳು ಸಂಭವಿಸಿದಾಗ ಸರಕಾರ ಎಚ್ಚೆತ್ತು ಹಲವು ಅಕ್ರಮ ಕಲ್ಲು ಕ್ವಾರಿಗಳನ್ನು ಮುಚ್ಚಿಸಿವೆ. ಆದರೆ ಮುಚ್ಚಿಸುವ ಪ್ರಹಸನ ಕೆಲವು ತಿಂಗಳುಗಳವರೆಗೆ ಮಾತ್ರ ನಡೆಯುತ್ತಿರುತ್ತವೆ. ದುರಂತದ ಗಾಯ ಆರುತ್ತಿದ್ದಂತೆಯೇ ಕ್ವಾರಿಗಳು ಮತ್ತೆ ತೆರೆದುಕೊಳ್ಳುತ್ತವೆ. 2021ರ ಜನವರಿಯಲ್ಲಿ ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿ ಬಳಿ ಲಾರಿಯಲ್ಲಿದ್ದ ಸ್ಫೋಟಕಗಳು ಸ್ಫೋಟಿಸಿದ ಪರಿಣಾಮ ಸುಮಾರು 6 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸ್ಫೋಟದ ತೀವ್ರತೆಗೆ ಇಡೀ ಶಿವಮೊಗ್ಗ ಜಿಲ್ಲೆಯೇ ಕಂಪಿಸಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಗ್ರಾಮದ ಕಲ್ಲು ಕ್ವಾರಿಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಸ್ಫೋಟಕಗಳನ್ನು ವಿಲೇವಾರಿ ಮಾಡುವಾಗಲೂ ಇದೇ ತರಹದ ಸ್ಫೋಟ ಸಂಭವಿಸಿತ್ತು. ಈ ಭೀಕರ ಸ್ಫೋಟದಲ್ಲೂ ಆರು ಜನರು ಮೃತಪಟ್ಟಿದ್ದರು.ಗುರುವಾರ ನಡೆದ ದುರಂತದಲ್ಲಿ ನಾಲ್ವರ ಸ್ಥಿತಿ ಗಂಭೀರವಿದೆ. ಭವಿಷ್ಯದಲ್ಲಿ ಅವರು ಎಲ್ಲರಂತೆ ಎದ್ದು ಓಡಾಡುವುದು ಕಷ್ಟ. ಸಾಧಾರಣವಾಗಿ ಕಲ್ಲು ಕ್ವಾರಿಯಲ್ಲಿ ಪ್ರತೀ ದಿನ ಒಂದಲ್ಲ ಒಂದು ದುರಂತಗಳು ನಡೆಯುತ್ತಲೇ ಇರುತ್ತವೆ. ಸಾವುಗಳು ಸಂಭವಿಸಿದಾಗ ಮಾತ್ರ ಈ ದುರಂತಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ. ಒಂದೆರಡು ಸಾವುಗಳನ್ನು ಮಾಧ್ಯಮ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ‘ದಿನಾ ಸಾಯುವವರಿಗೆ ಅಳುವವರು ಯಾರು?’ ಎನ್ನುವಂತೆ ಸಾರ್ವಜನಿಕರೂ ಆ ದಿಕ್ಕಿಗೆ ತಿರುಗಿ ನೋಡುವುದಿಲ್ಲ. ಹೀಗಿರುವಾಗ ಗಾಯಗೊಂಡ ಕಾರ್ಮಿಕರ ಬಗ್ಗೆ ಯಾರು ಚಿಂತೆ ಮಾಡುತ್ತಾರೆ? ಇಂತಹ ದುರಂತದಲ್ಲಿ ಮೃತಪಡುವ ಅಥವಾ ಗಾಯಗೊಂಡ ಬಹುತೇಕ ಕಾರ್ಮಿಕರು ವಲಸೆ ಬಂದವರಿರುತ್ತಾರೆ. ಅವರ ಪರವಾಗಿ ಮಾತನಾಡುವವರು, ಅವರಿಗಾಗಿ ಪ್ರತಿಭಟಿಸುವವರು ಯಾರೂ ಇರದ ಕಾರಣ, ಕ್ವಾರಿ ಮಾಲಕರು ಕೊಟ್ಟ ಪರಿಹಾರವನ್ನು ಪಡೆದುಕೊಂಡು ಅವರು ಸುಮ್ಮನಿರಬೇಕಾಗುತ್ತದೆ. ಬಹುತೇಕ ಅಸಂಘಟಿತ ಕಲ್ಲು ಕ್ವಾರಿ ಕಾರ್ಮಿಕರಿಗೆ ಸರಿಯಾದ ವಿಳಾಸಗಳೇ ಇರುವುದಿಲ್ಲ. ಯಾವುದೇ ಸೌಲಭ್ಯಗಳಿಲ್ಲದೆ ದಿನಗೂಲಿಯನ್ನೇ ನೆಚ್ಚಿಕೊಂಡ ಇವರು ಕೆಲಸದ ಸಂದರ್ಭದಲ್ಲಿ ಗಾಯಗೊಂಡರೆ ಶಾಶ್ವತವಾಗಿ ಅಂಗವಿಕಲರಾಗಿ ಬದುಕು ಕಳೆಯಬೇಕಾಗುತ್ತದೆ. ಯಾವುದೇ ಪರಿಹಾರ ಇವರಿಗೆ ದೊರಕುವುದಿಲ್ಲ.

ಮೃತಪಟ್ಟ ಆರು ಮಂದಿ ಕಾರ್ಮಿಕರು ವಲಸೆ ಕಾರ್ಮಿಕರಾಗಿರುವುದರಿಂದ ಪರಿಹಾರದ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸುವುದಕ್ಕೆ ಆಗುವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಕಾರ್ಮಿಕರಿಗೆ ನಿಯಮಾನುಸಾರ ಪರಿಹಾರವನ್ನು ನೀಡಲಾಗುವುದು. ಕಲ್ಲು ಕ್ವಾರಿಯ ಮಾಲಕರೇ ದುರಂತಕ್ಕೆ ಹೊಣೆಯಾಗಿರುವುದರಿಂದ ಅವರ ಮೂಲಕ ಪರಿಹಾರ ಕೊಡಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಸರಕಾರವಾಗಲಿ, ಕಲ್ಲು ಕ್ವಾರಿ ಮಾಲಕರಾಗಲಿ ಸರಿಯಾದ ಪರಿಹಾರವನ್ನು ನೀಡದೇ ಇದ್ದರೆ ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಯಾವ ಸಾಮರ್ಥ್ಯವೂ ಈ ಕಾರ್ಮಿಕರಿಗೆ ಇಲ್ಲ ಎನ್ನುವುದು ಗೊತ್ತಿರುವ ವಿಷಯವೇ ಆಗಿದೆ. ಬಾಯಿಮಾತಿನಲ್ಲಿ ಪರಿಹಾರ ಘೋಷಿಸಲಾಗುತ್ತದೆಯೇ ಹೊರತು, ಅದು ಎಷ್ಟರಮಟ್ಟಿಗೆ, ಯಾವಾಗ ಕಾರ್ಮಿಕರ ಕುಟುಂಬದ ಕೈ ಸೇರುತ್ತದೆ ಎನ್ನುವ ಭರವಸೆ ಯಾರಿಗೂ ಇಲ್ಲ. ಸಿಕ್ಕಿದಷ್ಟನ್ನು ಪಡೆದುಕೊಂಡು ಅವರು ತಮ್ಮ ಊರು ಸೇರುತ್ತಾರೆ. ತಮ್ಮ ಹಕ್ಕಿಗಾಗಿ ಮತ್ತೆ ಪರವೂರಿಗೆ ಬಂದು ಝಂಡಾ ಹೂಡುವ ಶಕ್ತಿ ಅವರಿಗಿರುವುದಿಲ್ಲ. ರಾಜ್ಯದ ಕಾರ್ಮಿಕ ಇಲಾಖೆಯ ವಿವಿಧ ಮಂಡಳಿಗಳಲ್ಲಿ 1.72 ಕೋಟಿ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆ. ಇವರಲ್ಲಿ 25 ಲಕ್ಷ ಕಟ್ಟಡ ಕಾರ್ಮಿಕರು. ಆದರೆ ಬೇರೆ ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ಈ ನೋಂದಣಿಗಳಲ್ಲಿ ಅವಕಾಶ ಪಡೆದುಕೊಂಡಿಲ್ಲ. ಕ್ವಾರಿಯಂತಹ ಅಪಾಯಕಾರಿ ಸ್ಥಳಗಳಲ್ಲಿ ದುಡಿಯುವ ವಲಸೆ ಕಾರ್ಮಿಕರ ಬಗ್ಗೆ ಯಾವ ಕಾರ್ಮಿಕ ಇಲಾಖೆಯೂ ತಲೆಕೆಡಿಸಿಕೊಂಡಿಲ್ಲ. ಒಂದು ರೀತಿಯಲ್ಲಿ ಬಳಸಿ ಎಸೆಯಲ್ಪಡುವ ಕಾರ್ಮಿಕರು ಇವರು.

ಇಂದು ಬೆಂಗಳೂರು ಸೇರಿದಂತೆ ನಗರಗಳ ಬಹುತೇಕ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವವರು ಹೊರರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರು. ಕಲ್ಲು ಕ್ವಾರಿಯಂತಹ ಅಪಾಯಕಾರಿ ಸ್ಥಳಗಳಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುವವರೂ ಇವರೇ ಇವರ ಈ ದುಡಿಮೆಯನ್ನು ಸರ್ವ ರೀತಿಯಲ್ಲಿ ಬಳಸಿಕೊಳ್ಳುತ್ತಾ, ಅವರು ಆ ಸಂದರ್ಭದಲ್ಲಿ ಜೀವಾಪಾಯವನ್ನು ತಂದುಕೊಂಡಾಗ ಮಾತ್ರ ‘ಹೊರ ರಾಜ್ಯದ ಕಾರ್ಮಿಕರು’ ಎಂಬ ಹಣೆಪಟ್ಟಿ ಕೊಟ್ಟು ಸೂಕ್ತ ಪರಿಹಾರ ನೀಡಲು ಹಿಂಜರಿಯುವುದು ಅಮಾನವೀಯವಾಗಿದೆ. ಈ ನಾಡಿನ ಅಭಿವೃದ್ಧಿ ಕಾಮಗಾರಿಗಳಿಗೆ ಹೆಗಲು ಕೊಡಲು ಬಂದ ಈ ಕಾರ್ಮಿಕರು ತಾವಾಗಿಯೇ ಬಂದವರಲ್ಲ. ಕಡಿಮೆ ವೇತನಕ್ಕೆ ದುಡಿಯುತ್ತಾರೆ ಎನ್ನುವ ಕಾರಣಕ್ಕಾಗಿ ಕರ್ನಾಟಕದ ಮಧ್ಯವರ್ತಿಗಳೇ ಇವರನ್ನು ಅಲ್ಲಿಂದ ಇಲ್ಲಿಗೆ ಕರೆಸುತ್ತಾರೆ. ಅವರ ದುಡಿಮೆ, ಬೆವರು, ರಕ್ತವನ್ನು ಬಳಸಿಕೊಂಡ ಮೇಲೆ ಅವರ ಬದುಕು, ಭವಿಷ್ಯದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ನಮ್ಮ ಸರಕಾರದ ಕರ್ತವ್ಯವಾಗುತ್ತದೆ. ವಲಸೆ ಕಾರ್ಮಿಕರಿಗೆ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಿಲ್ಲ ಎಂದಾದರೆ ಅವರನ್ನು ಇಲ್ಲಿಗೆ ಕರೆಸಿ ದುಡಿಸಿಕೊಳ್ಳುವುದಾದರೂ ಯಾಕೆ?

ಸರಕಾರ ಮೊತ್ತ ಮೊದಲು ಈ ರಾಜ್ಯದ ಅಕ್ರಮ ಕ್ವಾರಿಗಳನ್ನು ಗುರುತಿಸಿ ಅವುಗಳನ್ನು ಮುಚ್ಚಿಸುವ ಕೆಲಸವನ್ನು ಮಾಡಬೇಕು. ಇದೇ ಸಂದರ್ಭದಲ್ಲಿ ಗುರುತಿಸಿರುವ ಸಕ್ರಮ ಕ್ವಾರಿಗಳಲ್ಲಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವರದಿಯನ್ನು ತರಿಸಿಕೊಳ್ಳಬೇಕು. ಕ್ವಾರಿಗಳ ಕೆಲಸ ಮುಗಿದ ಬಳಿಕ ಆ ಅಪಾಯಕಾರಿ ಹೊಂಡಗಳನ್ನು ತೆರೆದಿಟ್ಟರೆ ಮಳೆಗಾಲದಲ್ಲಿ ಸಂಭವಿಸುವ ದುರಂತಗಳ ಬಗ್ಗೆಯೂ ಸರಕಾರ ಮುಂಜಾಗ್ರತೆಯನ್ನು ವಹಿಸಬೇಕು. ಇದೇ ಸಂದರ್ಭದಲ್ಲಿ ಕ್ವಾರಿಗಳಲ್ಲಿರುವ ಕಾರ್ಮಿಕರನ್ನು ಗುರುತಿಸಿ ಅವರಲ್ಲಿ ವಲಸೆ ಕಾರ್ಮಿಕರೆಷ್ಟು, ರಾಜ್ಯದ ಕಾರ್ಮಿಕರೆಷ್ಟು ಎನ್ನುವ ದಾಖಲೆಗಳೂ ಸರಕಾರದಲ್ಲಿರಬೇಕು. ಈ ಕ್ವಾರಿಗಳು ಹೊರರಾಜ್ಯದ ಕಾರ್ಮಿಕರನ್ನು ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದರೆ ಕ್ವಾರಿ ಮಾಲಕರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ವಲಸೆ ಕಾರ್ಮಿಕರಿಗೆ ಸೂಕ್ತ ವೇತನ, ಆಶ್ರಯ, ಪರಿಹಾರ ನೀಡಲು ಸಾಧ್ಯವಿದ್ದರೆ ಮಾತ್ರ ಅವರನ್ನು ದುಡಿಮೆಗೆ ಬಳಸಿಕೊಳ್ಳುವಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಬೇಕು. ನಮ್ಮ ನಾಡಿನ ಅಭಿವೃದ್ಧಿ ಕಾರ್ಯಗಳಿಗಾಗಿ ವಲಸೆ ಕಾರ್ಮಿಕರು ಮಾಡುವ ಬಲಿದಾನಗಳನ್ನು ನಾವು ಯಾವ ಕಾರಣಕ್ಕೂ ಕ್ಷುಲ್ಲಕವಾಗಿ ಕಾಣಬಾರದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News