ಈ ತ್ಯಾಜ್ಯವನ್ನು ಬೇರ್ಪಡಿಸುವವರಾರು?
ಇತ್ತೀಚೆಗೆ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಕೊಡಗು ಜಿಲ್ಲೆಯಲ್ಲಿ ಹಿರಿಯ ವ್ಯಕ್ತಿಯೊಬ್ಬರು ಹಸಿ ಕಸ- ಒಣ ಕಸದ ವಿಷಯವಾಗಿ ಪೌರ ಕಾರ್ಮಿಕರ ಜೊತೆಗೆ ವಾಗ್ವಾದಕ್ಕೆ ಇಳಿದ ವೀಡಿಯೊ ಆದು. ಸಂಸ್ಕರಣೆಯ ದೃಷ್ಟಿಯಿಂದ ತ್ಯಾಜ್ಯವನ್ನು ಹಸಿ ಮತ್ತು ಒಣಕಸವಾಗಿ ವಿಂಗಡಿಸುವುದು ಅತ್ಯಗತ್ಯ. ಹಸಿ ಕಸವನ್ನು ಗೊಬ್ಬರವಾಗಿ ಬಳಸುವುದಕ್ಕೆ ಅನುಕೂಲವಾಗುತ್ತದೆಯಾದರೆ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಾರ್ಖಾನೆಗಳಲ್ಲಿ ಶುಚೀಕರಿಸಿ ಅದನ್ನು ಮರು ಬಳಕೆಗೆ ಒಳಪಡಿಸುತ್ತಾರೆ. ಪ್ಲಾಸ್ಟಿಕ್‌ಗಳು ಹಸಿ ಕಸದ ಜೊತೆಗೆ ಬೆರೆತರೆ ಅಂತಹ ಕಸಗಳನ್ನು ಗೊಬ್ಬರವಾಗಿ ಬಳಸುವುದೂ ಅಸಾಧ್ಯ. ಇವು ಶುಚಿತ್ವ ಆಂದೋಲನದ ಬಾಲ ಪಾಠಗಳು. ಮನೆ ಮನೆಗಳಿಂದ ಹೊರ ಬೀಳುವ ಈ ತ್ಯಾಜ್ಯವನ್ನು ವಿಂಗಡಿಸುವ ಕೆಲಸ ಮನೆಗಳಿಂದಲೇ ಆರಂಭವಾಗಬೇಕು. ಎಲ್ಲರೂ ತಮ್ಮ ತಮ್ಮ ಮನೆಯ ತ್ಯಾಜ್ಯ ವಿಂಗಡನೆ ಮಾಡಿ ಪೌರ ಕಾರ್ಮಿಕರಿಗೆ ನೀಡಿದರೆ ಅದನ್ನು ವಿಲೇವಾರಿ ಮಾಡುವ ಕೆಲಸ ಸುಗಮವಾಗಿ ನಡೆಯುತ್ತದೆ. ಆದುದರಿಂದ ಹಸಿ ಕಸ, ಒಣಕಸವನ್ನು ವಿಂಗಡಿಸಿ ಕೊಡುವ ಕೆಲಸವನ್ನು ಮನೆ ಮಾಲಕರು ಕಡ್ಡಾಯವಾಗಿ ಮಾಡಬೇಕು. ಬಳಿಕ ಅದನ್ನು ವಿಂಗಡಿಸುವುದು ಅಸಾಧ್ಯದ ಕೆಲಸ. ಈಗಾಗಲೇ ವಿಂಗಡಿಸದ ಲಕ್ಷಾಂತರ ಟನ್ ತ್ಯಾಜ್ಯಗಳು ಪರಿಸರವನ್ನು ಬೃಹತ್ ಸಮಸ್ಯೆಯಾಗಿ ಕಾಡುತ್ತಿದೆ. ಆದರೆ ವೈರಲ್ ಆಗಿರುವ ವೀಡಿಯೊದಲ್ಲಿ, ವಿದ್ಯಾವಂತ, ನಿವೃತ್ತ ಗೆಜೆಟೆಡ್ ಆಫೀಸರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ‘‘ಹಸಿ ಕಸ- ಒಣಕಸವನ್ನು ಬೇರ್ಪಡಿಸುವುದು ನಮ್ಮ ಕೆಲಸವಲ್ಲ, ಅದು ಪೌರ ಕಾರ್ಮಿಕರ ಕೆಲಸ’’ ಎಂದು ಆಜ್ಞಾಪೂರ್ವಕವಾಗಿ ಹೇಳುತ್ತಿದ್ದ. ಅಷ್ಟೇ ಅಲ್ಲ, ‘‘ಒಮ್ಮೆ ಕಸದ ಬುಟ್ಟಿಗೆ ಕಸ ಹಾಕಿದ ಬಳಿಕ ಅದನ್ನು ನಾವು ಮುಟ್ಟುವುದಿಲ್ಲ’’ ಎಂದು ಸಮರ್ಥನೆಯನ್ನೂ ನೀಡುತ್ತಿದ್ದ. ‘‘ಹಾಗಾದರೆ ನಿಮ್ಮ ತ್ಯಾಜ್ಯವನ್ನು ಪೌರಕಾರ್ಮಿಕರು ಮುಟ್ಟಬಹುದೇ?’’ ಎಂದು ಮರು ಪ್ರಶ್ನಿಸಿದಾಗ ‘‘ಅವರು ತಮ್ಮ ಕರ್ಮದಿಂದ ಸಫಾಯಿ ಕರ್ಮಚಾರಿಗಳಾಗಿ ಹುಟ್ಟಿದ್ದಾರೆ. ಅದು ಅವರ ಕೆಲಸ. ನನ್ನ ಕೆಲಸವಲ್ಲ. ನಾನು ಉನ್ನತ ಶಿಕ್ಷಣವನ್ನು ಪಡೆದು ಅಧಿಕಾರಿಯಾಗಿ ನಿವೃತ್ತರಾಗಿದ್ದೇನೆೆ’’ ಎಂದು ದುರಹಂಕಾರದಿಂದ ಮರು ಉತ್ತರಿಸುತ್ತಾನೆ.
ಮೇಲ್ನೋಟಕ್ಕೆ ಇದು ಒಬ್ಬ ಬೇಜವಾಬ್ದಾರಿಯುತ ವ್ಯಕ್ತಿಯ ಉದ್ಧಟತನದ ಹೇಳಿಕೆಯಂತೆ ಕಾಣುತ್ತಿದೆಯಾದರೂ, ಪೌರ ಕಾರ್ಮಿಕರ ಕುರಿತಂತೆ ನಮ್ಮ ಸಮಾಜದ ಒಟ್ಟು ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಮನಸ್ಥಿತಿಯನ್ನು ಹೊಂದಿದ ಸಾವಿರಾರು ಜನ ವಿದ್ಯಾವಂತರೇ ನಮ್ಮ ನಡುವೆ ಬದುಕುತ್ತಿದ್ದಾರೆ. ನಮ್ಮ ಪರಿಸರವನ್ನು ಕಾಡುತ್ತಿರುವ ತ್ಯಾಜ್ಯದ ಸಮಸ್ಯೆ ವಿದ್ಯಾವಂತರಿಗೆ ಅರ್ಥವಾಗಬೇಕು ಮತ್ತು ಶುಚಿತ್ವದ ಆಂದೋಲನದಲ್ಲಿ ಅವರು ಪೌರಕಾರ್ಮಿಕರ ಜೊತೆಗೆ ಕೈ ಜೋಡಿಸಬೇಕು. ಮನೆ ಮನೆಯಲ್ಲಿ ಸೃಷ್ಟಿಯಾಗುವ ತ್ಯಾಜ್ಯಗಳಿಗೆ ಆಯಾ ಮನೆ ಮಾಲಕರು ಹೊಣೆಗಾರರೇ ಹೊರತು, ಪೌರಕಾರ್ಮಿಕರಲ್ಲ. ಅದನ್ನು ನಿರ್ವಹಿಸುವ ಹೊಣೆಗಾರಿಕೆಯೂ ಮನೆ ಮಾಲಕರಿಗೇ ಸೇರಿದ್ದು. ಆದರೆ ಪೌರಕಾರ್ಮಿಕರು ಇರುವುದೇ ನಮ್ಮ ಮನೆಯ ತ್ಯಾಜ್ಯಗಳನ್ನು ಶುಚೀಕರಿಸಲು, ಅದು ಅವರ ಕರ್ತವ್ಯ ಎಂದು ತಿಳಿದುಕೊಂಡಿರುವ ಜನರೇ ಇಂದು ತ್ಯಾಜ್ಯದ ಸಮಸ್ಯೆಗೆ ಕಾರಣರಾಗಿದ್ದಾರೆ. ಇವರ ಪ್ರಕಾರ, ಸಫಾಯಿ ಕರ್ಮಚಾರಿಗಳು ತಮ್ಮ ಕರ್ಮದ ಫಲವಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಅದನ್ನು ಮಾಡುವುದು ಅವರ ಕರ್ತವ್ಯ. ವೀಡಿಯೋದಲ್ಲಿ ಕಾಣುತ್ತಿರುವ ವಿದ್ಯಾವಂತ ವ್ಯಕ್ತಿ ಇದನ್ನೇ ಪ್ರತಿಪಾದಿಸುತ್ತಿದ್ದಾನೆೆ. ತ್ಯಾಜ್ಯವನ್ನು ನಿರ್ವಹಿಸುವುದಕ್ಕಾಗಿಯೇ ದೇವರು ಒಂದು ಸಮುದಾಯವನ್ನು ಸೃಷ್ಟಿಸಿದ್ದಾನೆ ಎನ್ನುವ ಮನಸ್ಥಿತಿಯೇ ಆತನ ಬಾಯಲ್ಲಿ ಇಂತಹ ತ್ಯಾಜ್ಯಗಳನ್ನು ಉದುರಿಸಿದೆ. ಇದು ನೇರವಾಗಿ ಪೌರಕಾರ್ಮಿಕರ ಜಾತಿ ನಿಂದನೆಯಾಗಿದೆ. ಆತನ ವಿರುದ್ಧ್ದ ಈಗಾಗಲೇ ದೂರನ್ನು ನೀಡಲಾಗಿದೆಯಾದರೂ, ಸಂಬಂಧಪಟ್ಟವರು ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಆತನನ್ನು ಶಿಕ್ಷಿಸಲು ಸರಕಾರ ವಿಫಲವಾದದ್ದೇ ಆದರೆ, ಈತನಂತಹ ಸಾವಿರಾರು ಜನರು ನಾಳೆ ಪೌರಕಾರ್ಮಿಕರ ಮೇಲೆ ದಬ್ಬಾಳಿಕೆಗಳನ್ನು ಮಾಡಲು ಕುಮ್ಮಕ್ಕು ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿಗೆ ಮಾಡುತ್ತಿರುವ ಶ್ರಮಕ್ಕೆ ಹಿನ್ನಡೆಯಾಗಬಹುದು. ಪೌರಕಾರ್ಮಿಕರ ಬಗ್ಗೆ ಇಂತಹ ಮನಸ್ಥಿತಿಯನ್ನು ಹೊಂದಿದ ವ್ಯಕ್ತಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ, ಇತರ ಜಾತೀಯ ಮನಸ್ಥಿಯನ್ನು ಹೊಂದಿರುವ ವರ್ಗಕ್ಕೆ ಎಚ್ಚರಿಕೆಯನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ.
ಭಾರತದಲ್ಲಿ ಪ್ರತೀ ವರ್ಷ ಸುಮಾರು 62 ಮಿಲಿಯನ್ ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎಂದು ಮೂಲಗಳು ತಿಳಿಸುತ್ತವೆ. ದೇಶದಲ್ಲಿ ಪ್ರತಿದಿನ ನಗರಾಡಳಿತ ಪ್ರದೇಶದಲ್ಲಿ ಸುಮಾರು 1.5 ಲಕ್ಷ ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತದೆ. ಈ ದೇಶದಲ್ಲಿ ಸರಾಸರಿ ವ್ಯಕ್ತಿಯೊಬ್ಬ ಪ್ರತೀ ದಿನ 340 ಗ್ರಾಂನಿಂದ 700 ಗ್ರಾಂನವರೆಗೆ ಕಸವನ್ನು ಸೃಷ್ಟಿಸುತ್ತಾನೆ. ಆದರೆ ಈ ಎಲ್ಲ ಕಸವನ್ನು ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಮಾತ್ರ ಅನಾಮಧೇಯ ಪೌರಕಾರ್ಮಿಕ ಹೊತ್ತುಕೊಳ್ಳಬೇಕಾಗುತ್ತದೆ. ನಗರಗಳ ಬೀದಿಗಳು ನಾರಿದರೆ, ಅದಕ್ಕಾಗಿ ನಮ್ಮ ರಾಜ್ಯ ಸಚಿವರು ನೇರವಾಗಿ ಪೌರಕಾರ್ಮಿಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನಗರದ ಬೀದಿಗಳಲ್ಲಿ ಕಸಗಳನ್ನು ಕಂಡಕಂಡಲ್ಲಿ ಎಸೆಯುವ ವಿದ್ಯಾವಂತರನ್ನು ತರಾಟೆಗೆ ತೆಗೆದುಕೊಳ್ಳುವ ಎದೆಗಾರಿಕೆ ಅವರಲ್ಲಿಲ್ಲ. ಭಾರತದಲ್ಲಿ ಉತ್ಪತ್ತಿಯಾಗುವ ನಗರ ಪ್ರದೇಶದ ಕಸಗಳಲ್ಲಿ ಶೇ. 55ರಷ್ಟು ಹಸಿಕಸ. ಇವುಗಳನ್ನು ಸರಿಯಾದ ಕ್ರಮದಲ್ಲಿ ವಿಂಗಡಿಸುವ ಹೊಣೆಗಾರಿಕೆಯನ್ನು ಪ್ರತಿನಾಗರಿಕನೂ ತೆಗೆದುಕೊಂಡಿದ್ದರೆ ಇಂದು ಈ ತ್ಯಾಜ್ಯ ಭಾರತದ ಪಾಲಿಗೆ ಇಷ್ಟು ದೊಡ್ಡ ಸಮಸ್ಯೆಯಾಗಿ ಕಾಡುತ್ತಿರಲಿಲ್ಲ. ಹಾಗೆಯೇ ಶೇ. 25ರಷ್ಟು ಒಣ ಕಸವಿರುತ್ತದೆ. ಇವುಗಳನ್ನೂ ಮರುಬಳಕೆ ಮಾಡಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ದೇಶ ಈಗಲೂ ಯಶಸ್ವಿಯಾಗಿಲ್ಲ. ಆದುದರಿಂದಲೇ, ತ್ಯಾಜ್ಯ ಬೃಹತ್ ಪರ್ವತಾಕಾರವಾಗಿ ಎಲ್ಲ ನಗರಗಳಲ್ಲೂ ಬೆಳೆಯುತ್ತಿವೆ.
ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾವಂತರ ಮೆದುಳಲ್ಲಿ ಬೆರೆತಿರುವ ಜಾತೀಯ ತ್ಯಾಜ್ಯವನ್ನು ವಿಂಗಡಿಸುವ ಕೆಲಸ ನಡೆಯಬೇಕಾಗಿದೆ. ನಮ್ಮ ಮನೆಯ ಕಸದ ಬುಟ್ಟಿಯಲ್ಲಿರುವ ಕಸದ ವಿಲೇವಾರಿಯ ಹೊಣೆಗಾರಿಕೆ ಆಯಾ ಮನೆಯ ಸದಸ್ಯನದ್ದೇ ಹೊರತು, ಅದಕ್ಕೆ ಸಂಬಂಧವೇ ಇಲ್ಲದ ಪೌರಕಾರ್ಮಿಕರದ್ದಲ್ಲ ಎನ್ನುವುದನ್ನು ಅವರಿಗೆ ಸ್ಪಷ್ಟಮಾಡಿಕೊಡಬೇಕಾಗಿದೆ. ಹಾಗೆಯೇ ಈ ನಾಡನ್ನು ಶುಚಿಯಾಗಿಡಲು ಪೌರಕಾರ್ಮಿಕರು ನಡೆಸುತ್ತಿರುವ ಶ್ರಮವನ್ನು ಗೌರವಿಸುವುದಕ್ಕೆ ವಿದ್ಯಾವಂತರಿಗೆ ಕಲಿಸಬೇಕು. ರೋಗ ರುಜಿನಗಳ ನಡುವೆ, ಕಡಿಮೆ ವೇತನದ ಜೊತೆಗೆ ಅವರು ಶುಚಿತ್ವಕ್ಕಾಗಿ ಕೊಡುಗೆ ನೀಡುತ್ತಿರುವುದರಿಂದಲೇ ನಮ್ಮ ಪರಿಸರ ಇಷ್ಟರಮಟ್ಟಿಗೆ ಆರೋಗ್ಯಪೂರ್ಣವಾಗಿದೆ. ಎರಡು ದಿನ ಈ ಪೌರಕಾರ್ಮಿಕರು ತಮ್ಮ ಕೆಲಸವನ್ನು ಮಾಡದೇ ಇದ್ದರೆ, ಸಮಾಜ ಗಬ್ಬೆದ್ದು ನಾರ ತೊಡಗುತ್ತದೆ. ಇದನ್ನು ಜಾತೀವಾದಿ ಮನಸ್ಸುಗಳು ಅರ್ಥ ಮಾಡಿಕೊಂಡು ತಮ್ಮನ್ನು ತಾವು ತಿದ್ದಿಕೊಳ್ಳಬೇಕಾಗಿದೆ. ಆದುದರಿಂದ ಹಸಿಕಸ-ಒಣಕಸವನ್ನು ಬೇರ್ಪಡಿಸುವ ಮೊದಲು ಮೆದುಳಲ್ಲಿರುವ ಜಾತೀವಾದಿ ತ್ಯಾಜ್ಯವನ್ನು ಶುಚಿಗೊಳಿಸುವುದಕ್ಕೆ ಆದ್ಯತೆ ನೀಡಬೇಕು. ಆಗ ಹಬ್ಬ, ಹರಿದಿನಗಳ ಹೆಸರಿನಲ್ಲಿ ನಮ್ಮ ನದಿಗಳನ್ನು, ಕೆರೆಗಳನ್ನು, ಪರಿಸರವನ್ನು ಕುಲಗೆಡಿಸುವ ಪ್ರವೃತ್ತಿಯೂ ಕಡಿಮೆಯಾಗುತ್ತದೆ.