ಸಾಂದರ್ಭಿಕ ಚಿತ್ರ | Photo: PTI

ಎಸ್‌ಐಆರ್ ಗದ್ದಲದ ನಡುವೆ, ದೇಶದಾದ್ಯಂತ ಫಾರಂ-7 ಮೂಲಕ ಪ್ರತೀ ಬೂತ್ ಮಟ್ಟದಲ್ಲಿ ಸಗಟಾಗಿ ಕೆಲವು ನಿರ್ದಿಷ್ಟ ವ್ಯಕ್ತಿಗಳನ್ನು ಮತದಾರ ಪಟ್ಟಿಯಿಂದ ಅಳಿಸಿಹಾಕಲು ಹುನ್ನಾರ ನಡೆದಿರುವುದು ಬಯಲಾಗಿದೆ. ರಾಜಕೀಯ ಪಕ್ಷವೊಂದು ಹೀಗೆ ಚುನಾವಣಾ ನಿಯಮಗಳ ನಡುವಿನ ಸಂದುಗಳಲ್ಲಿ ತೂರಿಕೊಂಡು ಸಗಟಾಗಿ ಕಾರ್ಯಾಚರಿಸುವುದನ್ನು ಒಂದು ಸಂಚು ಎಂದೇ ಪರಿಗಣಿಸಬೇಕಾಗುತ್ತದೆ. ನಿಷ್ಪಕ್ಷವಾಗಿರಬೇಕಾಗಿದ್ದ ಚುನಾವಣಾ ಆಯೋಗವು ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದರಿಂದಲೇ ಇಂತಹದೊಂದು ಬಾನಗಡಿ ಸಾಧ್ಯ ಆಗಿದೆ ಎಂಬುದೂ ಸುಳ್ಳಲ್ಲ. ಇದೊಂದು ದೀರ್ಘಕಾಲಿಕ ಸಂಚಿನ ಫಲಿತಾಂಶ ಎಂದು ನಂಬುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದರಲ್ಲಿ ಯಾರ್ಯಾರು ಯಾವ ಯಾವ ಹಂತದಲ್ಲಿ ಒಳಗೊಂಡಿದ್ದಾರೆ ಎಂಬುದನ್ನು ಆಳವಾಗಿ ಕೆದಕಿ ನೋಡುವುದು ಅಗತ್ಯ ಇದೆ.

2007ರ ಗುಜರಾತ್ ವಿಧಾನಸಭಾ ಚುನಾವಣೆಗಳ ಹೊತ್ತಿಗೆ ಬಿಜೆಪಿಯು ಮೊದಲ ಬಾರಿಗೆ ಚುನಾವಣೆಗಳ ಮೈಕ್ರೊಮ್ಯಾನೇಜ್ಮೆಂಟ್ ತಂತ್ರವನ್ನು ಅಳವಡಿಸಿಕೊಳ್ಳತೊಡಗಿತು. ಅದನ್ನು 2014ರ ಸಾರ್ವತ್ರಿಕ ಚುನಾವಣೆಗಳಲ್ಲೂ ಬಳಸಲಾಯಿತು. ಅಲ್ಲಿಂದೀಚೆಗೆ ಅದನ್ನು ಅಡೆತಡೆ ಇಲ್ಲದೆ ಬಳಸಲಾಗುತ್ತಿದೆ. ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಪೈಕಿ, ಮತದಾರ ಪಟ್ಟಿಯ ಪ್ರತೀ ಪುಟಕ್ಕೆ ಒಬ್ಬರು ‘ಪನ್ನಾ ಪ್ರಮುಖ್’ ನೇಮಿಸಿ, ಅವರ ಮೂಲಕ ಚುನಾವಣೆಗಳ ನಿರ್ವಹಣೆ ನಡೆಸುವ ತಂತ್ರ ಇದು. ಎಂಟು-ಹತ್ತು ಮನೆಗಳಿಗೆ ಒಬ್ಬರು ಪನ್ನಾ ಪ್ರಮುಖ್ ಕಾರ್ಯಕರ್ತರಿದ್ದಾಗ ನಡೆಯುವ ಮೈಕ್ರೋಮ್ಯಾನೇಜ್ಮೆಂಟ್ ಎಷ್ಟು ಪರಿಣಾಮಕಾರಿ ಆಗಿರಬಲ್ಲುದೆಂದರೆ, ತನ್ನ ವ್ಯಾಪ್ತಿಯ 50-60 ಮತದಾರರು ನಿರ್ದಿಷ್ಟವಾಗಿ ಯಾವ ಪಕ್ಷಕ್ಕೆ ಮತ ಚಲಾಯಿಸುತ್ತಾರೆ ಎಂಬುದನ್ನು ಗುರುತಿಸಿಕೊಳ್ಳುವುದು ಪನ್ನಾ ಪ್ರಮುಖರಿಗೆ ಸುಲಭ. ಇದು ಪರಿಣಾಮಕಾರಿಯೇನೋ ಹೌದು. ಆದರೆ, ಕಾನೂನುಬದ್ಧವೇ? ಭಾರತದಲ್ಲಿ ಚುನಾವಣೆಗಳಿಗೆ ಮೂಲಧಾತು ಆಗಿರುವ ಜನಪ್ರಾತಿನಿಧ್ಯ ಕಾಯ್ದೆ, 1951ರ ಪ್ರಕಾರ, ಮತದಾನದ ಗೌಪ್ಯತೆಯನ್ನು ಉಲ್ಲಂಘಿಸುವಂತಿಲ್ಲ (ಸೆಕ್ಷನ್ 94). ಸ್ಪಷ್ಟ ಮಾತುಗಳಲ್ಲಿ ಹೇಳಬೇಕೆಂದರೆ, ಮತದಾರರ ಮೈಕ್ರೋಮ್ಯಾನೇಜ್ಮೆಂಟ್ ನಡೆಯುವಲ್ಲಿ ಗೌಪ್ಯವಾದ, ನಿಷ್ಪಕ್ಷ ಚುನಾವಣೆ ನಡೆಯುವುದು ಸಾಧ್ಯವೇ ಇಲ್ಲ.

ಸಂವಿಧಾನದ 324ನೇ ವಿಧಿಯನ್ವಯ, ಚುನಾವಣಾ ಆಯೋಗಕ್ಕೆ ದೇಶದಲ್ಲಿ ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕವಾದ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಹೊಣೆಗಾರಿಕೆ ಇದೆ. ಜೊತೆಗೆ, ಕಾನೂನು ನಿರ್ದಿಷ್ಟ ವಿಚಾರವೊಂದರ ಬಗ್ಗೆ ಏನನ್ನೂ ಹೇಳಿರದಿದ್ದರೆ, ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಉಂಟಾಗಿರುವ ಗ್ಯಾಪನ್ನು ಭರ್ತಿ ಮಾಡುವ ಅಧಿಕಾರವನ್ನೂ ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ನ್ಯಾಯಯುತ ಚುನಾವಣೆ ನಡೆಸುವ ಮನಸ್ಸಿರುವ ಯಾವುದೇ ಚುನಾವಣಾ ಆಯೋಗ, 2014ರ ಸಾರ್ವತ್ರಿಕ ಚುನಾವಣೆಯ ಹೊತ್ತಿಗಾದರೂ ಈ ಚುನಾವಣೆ ‘ಮೈಕ್ರೋಮ್ಯಾನೇಜ್ಮೆಂಟ್’ ಗ್ಯಾಪನ್ನು ಮುಚ್ಚಬೇಕಾಗಿತ್ತು. ಆ ಗುರುತರವಾದ ಕರ್ತವ್ಯ ಲೋಪದ ಕಾರಣಕ್ಕೆ, ಇಂದು ಸನ್ನಿವೇಶ ಈ ಹಂತಕ್ಕೆ ತಲುಪಿದೆ.

ಎಸ್‌ಐಆರ್ ಪ್ರಕ್ರಿಯೆಯ ಮೂಲಕ ತಾನು ಮತದಾರ ಪಟ್ಟಿಯನ್ನು ಸುದೀರ್ಘ ಅವಧಿಯ ಬಳಿಕ ಪರಿಷ್ಕರಿಸುತ್ತಿದ್ದೇನೆ ಎಂದು ಸುಪ್ರೀಂಕೋರ್ಟ್ ನ ಮುಂದೆ ಚುನಾವಣಾ ಆಯೋಗ ಹೇಳಿದೆಯಾದರೂ, ಈಗ ದೇಶದಲ್ಲಿ ಡೇಟಾ ಕಾಯ್ದೆ (DPDP Act, 2023) ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ, ಈ ಚುನಾವಣಾ ಪ್ರಕ್ರಿಯೆಗಳನ್ನೆಲ್ಲ ಒಟ್ಟಂದದಲ್ಲಿ ಮರುಪರಿಶೀಲಿಸಬೇಕಾದ ತುರ್ತು ಇದೆ.

ರಾಜಕೀಯ ಪಕ್ಷಗಳು - ಅವುಗಳನ್ನು ನಿರ್ದಿಷ್ಟವಾಗಿ ಹೊರಗಿರಿಸಿರದ ಹೊರತು - ಡೇಟಾ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಮತದಾರರ ಡೇಟಾಗಳು ಸರಕಾರದ/ಚುನಾವಣಾ ಆಯೋಗದ ಬಳಿ ಇರುವುದು ಕಾನೂನುಬದ್ಧ. ಅದನ್ನು ರಾಜಕೀಯ ಪಕ್ಷಗಳಿಗೆ ಒದಗಿಸಿದಾಗ, ಡೇಟಾ ಕಾಯ್ದೆಯ ಅನ್ವಯ ಆ ಡೇಟಾಗಳ ಕಾನೂನುಬದ್ಧ ನಿರ್ವಹಣೆಯ ಹೊಣೆ ರಾಜಕೀಯ ಪಕ್ಷಗಳದು. ಅವು ತಮ್ಮಲ್ಲಿರುವ ಡೇಟಾಗಳ ಸ್ವರೂಪದ ಬಗ್ಗೆ, ತಾವು ಅದನ್ನು ಯಾವ ಕಾರಣಕ್ಕೆಲ್ಲ ಸಂಸ್ಕರಿಸುತ್ತಿದ್ದೇವೆ ಎಂಬ ಬಗ್ಗೆ, ಯಾವ ನಿರ್ದಿಷ್ಟ ಕೆಲಸಕ್ಕೆ ಅದನ್ನು ಬಳಸುತ್ತೇವೆ ಎಂಬ ಬಗ್ಗೆ, ಮತ್ತು ಕೆಲಸ ಮುಗಿದ ಬಳಿಕ ಅದನ್ನು ಯಾವಾಗ ಅಳಿಸಿಹಾಕುತ್ತೇವೆ ಎಂಬ ಬಗ್ಗೆ ಅದರ ಮಾಲಕರಿಗೆ (ಮತದಾರರಿಗೆ) ಮಾಹಿತಿ ನೀಡುವುದು ಅವರ ಕಾನೂನುಬದ್ಧ ಹೊಣೆ.

ಫಾರಂ-7 ಸಲ್ಲಿಕೆ ಪ್ರಕರಣದಲ್ಲಿ, ಸಗಟು ಸಲ್ಲಿಕೆಯ ಬಾನಗಡಿ ಮಾಡಿರುವ ರಾಜಕೀಯ ಪಕ್ಷವು ಡೇಟಾ ಕಾಯ್ದೆಯಡಿ ತನ್ನ ಹೊಣೆಗಾರಿಕೆಯನ್ನು ಉಲ್ಲಂಘಿಸಿದೆ. ವೈಯಕ್ತಿಕ ತಿದ್ದುಪಡಿಗಳಿಗೆಂದು ಮೀಸಲಾಗಿದ್ದ ಈ ಫಾರಂ-7 ಅನ್ನು ದೊಡ್ಡ ಪ್ರಮಾಣದಲ್ಲಿ ವೋಟು ನಿರಾಕರಣೆಗೆ ಬಳಸಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಡೇಟಾಗಳನ್ನು ಡೇಟಾ ಮಾಲಕರ ಒಪ್ಪಿಗೆ ಇಲ್ಲದೆ, ದುರುದ್ದೇಶದಿಂದ ಬಳಸಲಾಗಿದೆ ಎಂಬ ಗುಮಾನಿಗಳು ಎದ್ದಿವೆ. ನಿಷ್ಪಕ್ಷ ತನಿಖೆ ನಡೆದರೆ, ನಿಜಕ್ಕೂ ಏನಾಗಿದೆ ಎಂಬ ಚಿತ್ರಣ ಸಿಗಲಿದೆ. ಅದಕ್ಕೆ ಹೊರತಾಗಿ, ಡೇಟಾ ಕಾಯ್ದೆಯ ಅಡಿಯಲ್ಲಿ ಈ ಫಾರಂ-7 ಕಳ್ಳಾಟವನ್ನು (ಉದಾ: ತಮ್ಮ ಮತದಾರರಲ್ಲದವರ ಹೆಸರನ್ನು ಅಳಿಸಿಹಾಕಿ, ಅವರಿಗೆ ಅನಗತ್ಯ ಉಪಟಳ ನೀಡುವಂತಹ ಕ್ರಮಗಳು) ಗಂಭೀರವಾಗಿ ಪರಿಗಣಿಸಬೇಕು ಮತ್ತು ರಾಜಕೀಯ ಪಕ್ಷಗಳು ತಮ್ಮಲ್ಲಿರುವ ತಮ್ಮದಲ್ಲದ, ಡೇಟಾ ಮೂಲ ವ್ಯಕ್ತಿಗಳ (ಮತದಾರರ) ಡೇಟಾವನ್ನು ತಾವು ಕಾನೂನುಬದ್ಧವಾಗಿ ನಿರ್ವಹಿಸುತ್ತಿರುವ ಬಗ್ಗೆ ಪಾರದರ್ಶಕ ಚಿತ್ರಣ ಒದಗಿಸಬೇಕಾದ ಕಾನೂನು ಬಾಧ್ಯತೆಯನ್ನು ಪಾಲಿಸಬೇಕು.

ರಾಜಕೀಯ ಪಕ್ಷವೊಂದು ಅಧಿಕಾರದಲ್ಲಿ ಇರುವಾಗ, ಅದಕ್ಕೆ ಸರಕಾರದ ಭಾಗವಾಗಿ ಕೂಡ ಹಲವಾರು ನಮೂನೆಯ ಡೇಟಾಗಳು (ಉದಾಹರಣೆಗೆ ಯೋಜನೆಗಳ ಫಲಾನುಭವಿಗಳದು) ಲಭ್ಯ ಆಗುತ್ತವೆ. ಅದನ್ನೆಲ್ಲವನ್ನೂ ಡೇಟಾ ಕಾನೂನಿನ ಅಡಿ ನ್ಯಾಯಬದ್ಧವಾಗಿ ತಾವು ನಿರ್ವಹಿಸುತ್ತಿದ್ದೇವೆ ಎಂಬ ಭರವಸೆಯನ್ನು ಸಾರ್ವಜನಿಕರಿಗೆ ಒದಗಿಸುವುದು ರಾಜಕೀಯ ಪಕ್ಷಗಳ ಹೊಣೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಚುನಾವಣಾ ಆಯೋಗ ಕೂಡ, ರಾಜಕೀಯ ಪಕ್ಷಗಳ ಡೇಟಾ ನಿರ್ವಹಣೆ ಸುಸೂತ್ರವಾಗಿ ನಡೆದಿದೆ ಹಾಗೂ ನಿರ್ದಿಷ್ಟ ಮತದಾರರಿಗೆ ಮತದಾನದ ಹಕ್ಕು ನಿರಾಕರಿಸುವಂತಹ ಕ್ರಿಮಿನಲ್ ಚಿತಾವಣೆಗಳಿಗೆ ಅವಕಾಶಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor