ಆರ್‌ಬಿಐಯ ಬಡ್ಡಿದರ ಏರಿಕೆ ಅರ್ಥವ್ಯವಸ್ಥೆಯನ್ನು ಮುನ್ನಡೆಸೀತೆ?
Photo : PTI
ಅಕ್ಟೋಬರ್ 7ನೇ ತಾರೀಕಿನಂದು ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) ತನ್ನಿಂದ ಬ್ಯಾಂಕುಗಳು ಕೊಳ್ಳುವ ಅಲ್ಪಾವಧಿ ಸಾಲದ ಬಡ್ಡಿದರ(ರೆಪೊ ದರ)ವನ್ನು ಶೇ.5.25ರಿಂದ ಶೇ.5.5ಕ್ಕೆ ಏರಿಸಿದೆ. ರೆಪೊ ದರವನ್ನು ಇತರ ಕೇಂದ್ರೀಯ ಬ್ಯಾಂಕುಗಳಂತೆ ಆರ್‌ಬಿಐಯು ಸಾಮಾನ್ಯವಾಗಿ ಹಣದ ಉಬ್ಬರವನ್ನು ನಿಯಂತ್ರಿಸಲು ಬಳಸುತ್ತದೆ. 2023ರ ಬಳಿಕ ಇದು ಮೊದಲ ಏರಿಕೆ. ಸಾಮಾನ್ಯವಾಗಿ ಬಡ್ಡಿಯಲ್ಲಿ ಇಷ್ಟು ಸಣ್ಣ ಹೆಚ್ಚಳವು ದೇಶದ ಹಣಕಾಸು ಮತ್ತು ಅರ್ಥವ್ಯವಸ್ಥೆಯ ಮೇಲೆ ವಿಶೇಷ ಪ್ರಭಾವ ಬೀರಬಾರದು. ಇತ್ತೀಚೆಗಷ್ಟೆ ಭಾರತದ ಜಿಡಿಪಿಯು ಶೇ.7.8ರಷ್ಟು ಹೆಚ್ಚಿ ಆರ್ಥಿಕತೆಯು ಸುಸ್ಥಿರಪ್ರಗತಿಯ ಹಾದಿಯಲ್ಲಿದೆ ಎಂದು ಬಿಂಬಿಸಲಾಗಿತ್ತು. ಹಾಗಿದ್ದರೆ 2023ರಿಂದ ಸ್ಥಿರವಾಗಿಯೇ ಇದ್ದ ಬಡ್ಡಿದರವನ್ನು ಆರ್‌ಬಿಐ ಈಗ ಯಾಕೆ ಏರಿಸಿದೆ? ಮತ್ತು ಇದರ ಪರಿಣಾಮಗಳು ಏನಾಗಬಹುದು?
ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದಾಗ ಸಾಲದ ಬೇಡಿಕೆ ಹೆಚ್ಚಿ ಹೂಡಿಕೆ ಹೆಚ್ಚುತ್ತದೆ; ಇದು ಉದ್ಯೋಗ ಸೃಷ್ಟಿ, ಉತ್ಪಾದನೆ ಮತ್ತು ಪೂರೈಕೆಯಲ್ಲಿ ವೃದ್ಧಿಗೆ ಉತ್ತೇಜನ ನೀಡಿ, ನೌಕರರ ಸಂಪಾದನೆ ಹೆಚ್ಚಿಸಲು ಅವಕಾಶ ನೀಡುತ್ತದೆ. ಸಂಪಾದನೆ ಏರಿದಾಗ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಿ ಅವುಗಳ ಉತ್ಪಾದನೆಗೆ ಮತ್ತಷ್ಟು ಪ್ರೇರಣೆ ಲಭಿಸುತ್ತದೆ. ಇವುಗಳ ಜೊತೆಗೆ ಬೇಡಿಕೆ ಮತ್ತು ಪೂರೈಕೆಗಳು ಏಕಕಾಲಕ್ಕೆ ಹೆಚ್ಚಲು ಸಾಧ್ಯವಿಲ್ಲದ ಕಾರಣಕ್ಕಾಗಿ ಬೆಲೆಗಳು ಹೆಚ್ಚುತ್ತವೆ. ಬೆಲೆ ಏರಿದಾಗ ಉತ್ಪಾದನೆ ಮತ್ತು ಸೇವಾ ರಂಗಗಳಿಗೆ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಲು ಮತ್ತೆ ಉತ್ತೇಜನ ಸಿಗುತ್ತದೆ. ಆರ್ಥಿಕತೆಯು ಬೆಳೆಯುತ್ತದೆ. ಕೋವಿಡ್ ಮಹಾಮಾರಿಯ ಸಂದರ್ಭದ ಆರ್ಥಿಕ ಕುಸಿತದ ನಂತರ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಆರ್‌ಬಿಐ ಮತ್ತು ಸರಕಾರವು ಈ ದಾರಿಯನ್ನು ಹಿಡಿದಿದ್ದವು. ಅಂತಹ ಸಂದರ್ಭಗಳಲ್ಲಿ ಬಡ್ಡಿದರದ ಕಡಿತವು ಅರ್ಥವ್ಯವಸ್ಥೆಯ ಪ್ರಗತಿಗೆ ಪ್ರೋತ್ಸಾಹದಾಯಕವಾಗುತ್ತದೆ.ಇದಕ್ಕೆ ವಿರುದ್ಧವಾಗಿ, ಅರ್ಥವ್ಯವಸ್ಥೆಯಲ್ಲಿ ಅಸ್ಥಿರತೆ, ಅನಿಶ್ಚಿತತೆ, ಹಣದ ಉಬ್ಬರ ಹಾಗೂ ಬೆಲೆ ಏರಿಕೆಯಾಗುವ ಸ್ಪಷ್ಟ ಸೂಚನೆಗಳು ಬಂದ ಸಂದರ್ಭದಲ್ಲಿ ಬಡ್ಡಿ ದರವನ್ನು ಏರಿಸಿ ಸಾಲ ಪಡೆಯುವಿಕೆಯ ಮೇಲೆ ಹತೋಟಿ ಹಾಕುವ ಪ್ರಯತ್ನವನ್ನು ಆರ್‌ಬಿಐ ಮಾಡುತ್ತದೆ.
ಮತ್ತೆ ಹದಗೆಡುತ್ತಿರುವ ಪಶ್ಚಿಮ ಏಶ್ಯದ ಬಿಕ್ಕಟ್ಟಿನಿಂದಾಗಿ ದೇಶವು ಆಮದುಮಾಡುವ ಕಚ್ಚಾತೈಲದ ಬೆಲೆ ಇನ್ನಷ್ಟು ಏರಬಹುದು; ಇದರಿಂದ ಬೆಲೆಗಳು ಹೆಚ್ಚುವ ಸಾಧ್ಯತೆ ಇದೆ ಎಂಬ ಅರಿವಿನಿಂದ ಬೆಲೆ ಏರಿಕೆಯನ್ನು ಹತೋಟಿಯಲ್ಲಿಡಲು ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ತೃಪ್ತಿಕರವಾಗಿದ್ದರೂ ಬಡ್ಡಿದರವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಆರ್‌ಬಿಐ ಹೇಳಿದೆ. ಸೆಪ್ಟಂಬರ್ ತಿಂಗಳಿನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡುತ್ತಾ ಜಗತ್ತಿನಲ್ಲಿ ಹದಗೆಡುತ್ತಿರುವ ರಾಜಕೀಯ ಪರಿಸ್ಥಿತಿಯಿಂದಾಗಿ ಇಂಧನ, ಆಹಾರ, ರಸಗೊಬ್ಬರ ಮತ್ತು ಹಣಕಾಸು ರಂಗಗಳಲ್ಲಿ ಅನೇಕ ದೇಶಗಳು ಸಮಸ್ಯೆಗಳನ್ನು ಎದುರಿಸಬೇಕಾಗಬಹುದೆಂದು ಮುನ್ಸೂಚನೆ ನೀಡಿದ್ದರು. ಆಶ್ಚರ್ಯವೆಂದರೆ ಈ ವಿಷಯದ ಬಗ್ಗೆ ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಭಾರತದ ಒಳಗೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ.
ಜೈಶಂಕರ್ ಉಲ್ಲೇಖಿಸಿದ ಅಭದ್ರತೆಯತ್ತ ನಮ್ಮ ಅರ್ಥವ್ಯವಸ್ಥೆ ಜಾರುವ ಸಂಕೇತಗಳನ್ನು ಈಗಲೇ ಕಾಣಬಹುದು. ಇಂಧನದ ಬೆಲೆ ಏರಿಕೆಯಿಂದ ಆಹಾರಧಾನ್ಯಗಳು, ತರಕಾರಿ, ಹಣ್ಣುಹಂಪಲು, ಮೊಟ್ಟೆ, ದಿನಬಳಕೆಯ ಸರಕುಗಳು ಮತ್ತು ಅಗತ್ಯ ಔಷಧಿಗಳ ಬೆಲೆಗಳು ಹೆಚ್ಚಾಗುತ್ತಲೇ ಇವೆ. ದೇಶದ ಹಲವು ರಾಜ್ಯಗಳಲ್ಲಿ ವಾಡಿಕೆಯಷ್ಟು ಮಳೆಯಾಗದೆ ಆಹಾರಧಾನ್ಯಗಳ ಉತ್ಪಾದನೆ ಕುಸಿಯುವ ಸೂಚನೆಯಿದೆ. ಇದರ ಜೊತೆಗೆ ಕೃಷಿಗೆ ಅಗತ್ಯವಾದ ಗೊಬ್ಬರ, ವಿದ್ಯುತ್, ನೀರಾವರಿಯ ವೆಚ್ಚಗಳು ಹೆಚ್ಚುತ್ತಿವೆ.
ಒಂದೆಡೆ ಬೆಲೆಗಳು ಏರುತ್ತಿದ್ದರೆ, ಇನ್ನೊಂದೆಡೆ ದುಡಿಯುವವರ ಸಂಪಾದನೆಯು ಅಸ್ಥಿರವಾಗುತ್ತಿದೆ. ಕೌಟುಂಬಿಕ ಉಳಿತಾಯ ಕುಸಿದು, ಸಾಲಗಳು ಹೆಚ್ಚುತ್ತಿವೆ. ಹೊಸ ಉದ್ಯೋಗಗಳ ಸೃಷ್ಟಿ ಸಾಕಷ್ಟು ವೇಗದಲ್ಲಿ ಆಗುತ್ತಿಲ್ಲ. ಇದರ ಪರಿಣಾಮವಾಗಿ ಅಗತ್ಯದ ಸರಕುಗಳ ಮೇಲಿನ ಬೇಡಿಕೆಯೂ ಹೆಚ್ಚುತ್ತಿಲ್ಲ. ಬೇಡಿಕೆಯಲ್ಲಿ ಪ್ರಗತಿಯಾಗದಿದ್ದಾಗ ಹೊಸ ಹೂಡಿಕೆಗೆ ಹಿಂಜರಿಕೆಯಾಗುತ್ತದೆ.
ಆರ್‌ಬಿಐ ಬಡ್ಡಿದರವನ್ನು ಹೆಚ್ಚಿಸಿದಾಗ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ತಮ್ಮ ಬಡ್ಡಿದರವನ್ನು ಏರಿಸುತ್ತವೆ. ಈಗಾಗಲೇ ಕೊಟ್ಟ ಸಾಲಗಳ ಮೇಲೆ ಬಡ್ಡಿ ಪರಿಷ್ಕರಣೆಯಾಗಿ ಮರುಪಾವತಿಯ ಮೊತ್ತ ಹೆಚ್ಚಾಗಿ ಕಂತುಗಳು ಜಾಸ್ತಿಯಾಗಬಹುದು ಅಥವಾ ಕಂತಿನ ಮೊತ್ತ ಏರಬಹುದು. ಬಡ್ಡಿ ಏರುವಾಗ ಸಾಲ ಪಡೆಯಲು ಜನರು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಗೃಹ ಸಾಲಗಳು, ವಾಹನ ಸಾಲಗಳು, ಬಳಕೆದಾರರು ಉಪಯೋಗಿಸುವ ಬಾಳಿಕೆವಸ್ತುಗಳ ಮೇಲಿನ ಸಾಲಗಳ ಬೇಡಿಕೆ ಕುಸಿಯುತ್ತದೆ. ಈ ಬೆಳವಣಿಗೆಯು ಆರ್ಥಿಕ ಚಟುವಟಿಕೆಯ ಮೇಲೆ ಒತ್ತಡವನ್ನು ಹೇರುತ್ತದೆ. ಬೇಡಿಕೆ ಕುಂಠಿತವಾಗುವ ಪರಿಸ್ಥಿತಿ, ಅಗತ್ಯ ವಸ್ತುಗಳ ಕೊರತೆ ಮತ್ತು ಬೆಲೆಗಳ ಏರಿಕೆ, ಹೂಡಿಕೆಯಲ್ಲಿ ಹಿಂಜರಿತ -ಇವುಗಳೆಲ್ಲ ಅರ್ಥವ್ಯವಸ್ಥೆಯ ಅಭದ್ರತೆಯ ಲಕ್ಷಣಗಳು.
ಬಡ್ಡಿದರದ ಹೆಚ್ಚಳದ ಘೋಷಣೆಯ ಬೆನ್ನಿನಲ್ಲಿಯೇ ಶೇರು ಮಾರುಕಟ್ಟೆಗಳ ಸಂವೇದಿ ಸೂಚ್ಯಂಕಗಳು 32 ತಿಂಗಳುಗಳ ಹಿಂದಿನ ಮಟ್ಟಕ್ಕೆ ಕುಸಿದಿವೆ. ಅದರ ಜೊತೆಗೆ ದೇಶದ ವಿದೇಶಿ ವಿನಿಮಯದ ದಾಸ್ತಾನು ಮತ್ತಷ್ಟು ಕರಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯೂ ಆಶಾದಾಯಕವಾಗಿಲ್ಲ. ರೂಪಾಯಿಯ ಮೌಲ್ಯವೂ ಡಾಲರಿಗೆ ಹೋಲಿಸಿದಾಗ ಕುಸಿಯುತ್ತಲೇ ಇದೆ. ಈಗ ಡಾಲರ್-ರೂಪಾಯಿಯ ವಿನಿಮಯ ದರ 97ರ ಸಮೀಪಕ್ಕೆ ತಲಪಿದೆ; ರೂಪಾಯಿಯನ್ನು ಬಲಪಡಿಸುವ ಪ್ರಯತ್ನದಲ್ಲಿ ಆರ್‌ಬಿಐಯು ಯಶಸ್ಸು ಗಳಿಸಿಲ್ಲ.
ಇನ್ನೊಂದೆಡೆ, ಅಮೆರಿಕವು ತನ್ನಲ್ಲಿ ವ್ಯವಹಾರ ನಡೆಸುವ ಐಟಿ ಕಂಪೆನಿಗಳು ವಿದೇಶೀಯರನ್ನು ನೇಮಿಸುವ ಪ್ರಕ್ರಿಯೆಗೆ ಬಿಗಿಯಾದ ಕಡಿವಾಣ ಹಾಕಿ ತಂತ್ರಜ್ಞಾನದಲ್ಲಿ ಪಾರಮ್ಯವಿರುವ ಭಾರತ ಮೂಲದ ಲಕ್ಷಾಂತರ ಯುವಜನರ ಉದ್ಯೋಗಾಂಕ್ಷೆಗೆ ತಣ್ಣೀರನ್ನು ಎರಚಿದೆ. ಈಗಾಗಲೇ ಹಲವಾರು ಖ್ಯಾತ ಐಟಿ ಕಂಪೆನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ.
ಈ ಎಲ್ಲ ಬೆಳವಣಿಗೆಗಳು ದೇಶದ ಆರ್ಥಿಕತೆಯ ಭದ್ರತೆ ಮೇಲೆ ದಟ್ಟವಾದ ಕಾರ್ಮೋಡವನ್ನು ಹರಡಿದೆ. ಆರ್‌ಬಿಐಯ ನೀತಿಯು ಈ ಅನಿಶ್ಚಿತತೆಯನ್ನು ಎದುರಿಸುವ ಸದುದ್ದೇಶವನ್ನು ಹೊಂದಿದೆ. ಆದರೆ ಆಂತರಿಕ ಆರ್ಥಿಕ ಅಸ್ಥಿರತೆ ಹಾಗೂ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೇವಲ ಬಡ್ಡಿದರದ ಏರಿಕೆಯು ಹಣದುಬ್ಬರವನ್ನು ತಡೆಯುವಲ್ಲಿ ಮತ್ತು ಆರ್ಥಿಕತೆಯನ್ನು ಮುನ್ನಡೆಸುವಲ್ಲಿ ಯಶಸ್ಸನ್ನು ಗಳಿಸಬಹುದೇ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ.