ವಿದ್ವಾಂಸ ಮೌಲಾನಾ ಗುಲಾಮ್ ವಸ್ತಾನ್ವಿ ನಿಧನ
PC: x.com/SanirSayyed
ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ, ಗುಜರಾತ್ ನ ಸೂರತ್ ಮೂಲದ ಪ್ರಸಿದ್ಧ ಮುಸ್ಲಿಂ ವಿದ್ವಾಂಸ ಮೌಲಾನಾ ಗುಲಾಮ್ ವಸ್ತಾನ್ವಿ ಅವರು ರವಿವಾರ ಮಧ್ಯಾಹ್ನ ಮಹಾರಾಷ್ಟ್ರದ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
"ಕಳೆದ 10 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಅವರು ಮೂತ್ರಪಿಂಡದ ಡಯಾಲಿಸಿಸ್ ಗೆ ಒಳಗಾಗುತ್ತಿದ್ದರು. ಕಳೆದ ಎರಡು ತಿಂಗಳುಗಳಿಂದ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು", ಎಂದು ಅವರ ಮಗ ಮುಫ್ತಿ ಹುಝೈಫಾ ವಸ್ತಾನ್ವಿ ಹೇಳಿದರು.
“ ಮಹಾರಾಷ್ಟ್ರದ ಹಲವಾರು ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಕಳೆದ ಎರಡು ದಿನಗಳಿಂದ, ಅವರ ದೇಹವು ಔಷಧಿಗಳಿಗೆ ಸ್ಪಂದಿಸುತ್ತಿರಲಿಲ್ಲ. ಬಳಿಕ ಅವರನ್ನು ನಂದೂರ್ಬಾರ್ ಜಿಲ್ಲೆಯ ಅಕ್ಕಲ್ಕುವಾಗೆ ತರಲಾಯಿತು, ಅಲ್ಲಿ ಅವರು ರವಿವಾರ ಮಧ್ಯಾಹ್ನ ಕೊನೆಯುಸಿರೆಳೆದರು” ಎಂದು ಅವರು ಹೇಳಿದರು.
ಸೋಮವಾರ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಅಕ್ಕಲ್ಕುವಾ ಪಟ್ಟಣದಲ್ಲಿರುವ ಅವರ ಮನೆಯಲ್ಲಿ ನಡೆದ ಮೌಲಾನಾ ಗುಲಾಮ್ ವಸ್ತಾನ್ವಿ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಅವರ ನಿಧನಕ್ಕೆ ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಹಲವರು ಸಂತಾಪ ಸೂಚಿಸಿದರು.