×
Ad

ಹಿರಿಯರೊಂದಿಗೆ ಚರ್ಚಿಸಿ ಬಿಜೆಪಿ ಸೇರ್ಪಡೆ ಬಗ್ಗೆ ಚಿಂತನೆ : ಕೆ.ಎಸ್.ಈಶ್ವರಪ್ಪ

Update: 2025-06-30 23:07 IST

ಶಿವಮೊಗ್ಗ : ಕೆಲವು ಹಿರಿಯರ ಹತ್ತಿರ ಚರ್ಚೆ ಮಾಡಿ, ನಂತರ ಬಿಜೆಪಿಗೆ ಸೇರಿಕೊಳ್ಳುವೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂಂತೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗುವುದಿಲ್ಲ. ಹಲವು ಪಕ್ಷಗಳ ಮುಖಂಡರು ನಿಮಗೆ ಮತ್ತು ನಿಮ್ಮ ಪುತ್ರನಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಕೊಡುತ್ತೇವೆ ಬನ್ನಿ ಎಂದು ಆಹ್ವಾನ ಮಾಡಿದ್ದಾರೆ. ಆದರೆ ನಾನು ಹೋಗುವುದಿಲ್ಲ. ನಾನು ಬಿಜೆಪಿಯಲ್ಲೇ ಮೊದಲು ಇದ್ದದ್ದು. ಈಗಲೂ ಅಲ್ಲಿಗೆ ಹೋಗುತ್ತೇನೆ ಎಂದರು.

ಕಾಂಗ್ರೆಸ್‌ನಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಅದು ಸರಕಾರ ಬೀಳುತ್ತದೆಯೋ ಅಥವಾ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಇಳಿಯುತ್ತಾರೋ ಗೊತ್ತಿಲ್ಲ. ಸುರ್ಜೆವಾಲಾರವರು ಕೇವಲ 40 ಜನ ಶಾಸಕರನ್ನು ಕರೆದು, ಸಭೆ ನಡೆಸುತ್ತಿದ್ದಾರೆ. 136 ಜನರಲ್ಲಿ ಈ 40 ಜನರನ್ನು ಮಾತ್ರ ಏಕೆ ಗುಂಪು ಕಟ್ಟಿಕೊಂಡು ಚರ್ಚೆ ಮಾಡುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಮೂರು ಪ್ರಶ್ನೆಗಳಿಗೆ ಉತ್ತರ ನೀಡಲಿ. ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಎರಡು ಪದಗಳನ್ನು ಸಂವಿಧಾನದಲ್ಲಿ ಸೇರಿಸಿದ್ದು ಯಾರು? ಯಾವಾಗ? ಎಂದು ಹೇಳಲಿ. 1973ರಲ್ಲಿ ಕೇರಳ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಸಂವಿಧಾನ ಮೂಲ ಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರೂ ಕೂಡ ಇಂದಿರಾ ಗಾಂಧಿಯವರು ಸಂವಿಧಾನದ ಮೂಲ ಪೀಠಿಕೆಯನ್ನು ಬದಲಾಯಿಸಿದ್ದು, ನ್ಯಾಯಾಂಗದ ಮೇಲಿನ ದಾಳಿಯಲ್ಲವೇ? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಾಗೀಶ್, ಲೋಕೇಶ್, ಬಾಲು, ಸೋಗಾನೆ ರಮೇಶ್, ಜಾದವ್, ರಾಜು, ಶಿವಕುಮಾ‌ರ್, ಕುಬೇರಪ್ಪ ಮುಂತಾದವರಿದ್ದರು.

ಕುರುಬ ಸಮಾಜದ 22 ಹಲವು ನಾಯಕರು ನೀವು ಬಿಜೆಪಿಗೆ ಬರಬೇಕು ಎಂದು ಹೇಳುತ್ತಿದ್ದಾರೆ. ಅದು ಅವರ ಪ್ರೀತಿ. ನಾನು ಬಿಜೆಪಿ ಹೋಗಬೇಕೆಂಬುದು ಹಲವರ ಆಸೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕೆಲವರ ಹತ್ತಿರ ಚರ್ಚೆ ಮಾಡಿ, ನಿರ್ಧಾರ ಮಾಡುತ್ತೇನೆ ಎಂದರು.

-ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News