ಬಹುತ್ವದ ಆಶಯಗಳೂ ನಾಗರಿಕ ಸಮಾಜವೂ

ಪ್ರಸಕ್ತ ಭಾರತದ ಸಂದರ್ಭದಲ್ಲಿ ನಿಂತು ನೋಡಿದಾಗ, ಪ್ರಗತಿಪರ ನಾಗರಿಕ ಸಮಾಜವು ಒಂದು ಬಹುತ್ವ ಸಮಾಜವಾಗಿ ಉಳಿಯಬೇಕೆಂದರೆ ಎಲ್ಲ ಸಮುದಾಯಗಳ ಮುಕ್ತ-ಸಮಾನ ಭಾಗವಹಿಸುವಿಕೆ, ಪಾಲ್ಗೊಳ್ಳುವಿಕೆ ಅತ್ಯವಶ್ಯವಾಗುತ್ತದೆ. ಯಾವುದೇ ಸಮುದಾಯವನ್ನು ಸಾಮಾಜಿಕ ಕೀಳರಿಮೆಯಿಂದ ನೋಡುವುದಾಗಲೀ ಬೌದ್ಧಿಕವಾಗಿ ಕೀಳು ಎಂದು ಭಾವಿಸುವುದಾಗಲೀ ಇನ್ನುಳಿದ ಸಮುದಾಯಗಳಲ್ಲಿ ಮೇಲರಿಮೆ ಹೆಚ್ಚಾಗಿಸಿ, ಔನ್ನತ್ಯದ ಅಹಮಿಕೆ ಗಟ್ಟಿಯಾಗುತ್ತದೆ. ಹಾಗಾಗಿ ಬಹುತ್ವದ ನಾಗರಿಕ ಸಮಾಜವನ್ನು ಸಾಕಾರಗೊಳಿಸಬೇಕಾದರೆ ಮೂಲತಃ ಪ್ರಾಮಾಣಿಕವಾದ ಚರ್ಚೆ, ಸಂವಾದಗಳು ಏರ್ಪಡಬೇಕು.

Update: 2024-02-11 06:50 GMT
Editor : Ismail | Byline : ನಾ. ದಿವಾಕರ

ಹೊಸ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಎಲ್ಲ ಸದಸ್ಯರಿಗೂ ಹಂಚಲಾದ ಸಂವಿಧಾನ ಪೀಠಿಕೆಯ ಪ್ರತಿಯಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಪದಗಳು ಇರಲಿಲ್ಲ. ವಾಸ್ತವವಾಗಿ ಮೂಲ ಸಂವಿಧಾನದ ಪ್ರತಿಯಲ್ಲಿ ಇದು ಇರಲೂ ಇಲ್ಲ. 1976ರಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಇದನ್ನು ಸೇರ್ಪಡೆ ಮಾಡಲಾಯಿತು. ಈ ಎರಡೂ ಪದಗಳು ಪ್ರಕ್ಷಿಪ್ತವೇ ಆದರೂ ಭಾರತದ ಸಂವಿಧಾನದ ಮೂಲ ಆಶಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಸೇರ್ಪಡೆಯ ಹೊರತಾಗಿಯೂ ಭಾರತವನ್ನು ಒಂದು ಜಾತ್ಯತೀತ, ಸಮಾಜವಾದಿ ರಾಷ್ಟ್ರವನ್ನಾಗಿ ನಿರ್ಮಿಸುವ ಸದಾಶಯವನ್ನು ಸಂವಿಧಾನದ ರಚನೆಯಲ್ಲಿ ಗುರುತಿಸಬಹುದು. ಸಂವಿಧಾನ ರಚನೆಯ ಸುತ್ತ ನಡೆದ ಸ್ವಾತಂತ್ರ್ಯಪೂರ್ವದ ಚರ್ಚೆಗಳನ್ನು ಗಮನಿಸುತ್ತಾ ಈ ಎರಡೂ ಪದಗಳಿಗೆ ಸಂವಾದಿಯಾಗಿ ‘ಭಾರತದ ಜನಗಳಾದ ನಾವು’ (We the People of India) ಎಂಬ ಸಂವಿಧಾನ ಪೀಠಿಕೆಯ ಆರಂಭದ ಪದಗಳ ಗೂಢಾರ್ಥ ಹಾಗೂ ಒಳಾರ್ಥವನ್ನು ಅರ್ಥಮಾಡಿಕೊಂಡರೆ ನಾವು ಪದಗಳನ್ನು ಬೆನ್ನಟ್ಟದೆಯೇ ನಮ್ಮ ಸಂವಿಧಾನದ ಆಶಯಗಳನ್ನು ಗ್ರಹಿಸಲು ಸಾಧ್ಯ.

ಸಾಮಾನ್ಯವಾಗಿ ನಮ್ಮ ನಾಗರಿಕ ಸಮಾಜದ ಚರ್ಚೆಗಳಲ್ಲಿ ಜನಪ್ರಿಯ ಸಾರ್ವಭೌಮತ್ವದ (Popular Sovereignty) ಅರ್ಥ ಮತ್ತು ಗುಣಲಕ್ಷಣ ಗಳನ್ನು ಒಂದು ಮಿಥ್ಯೆಯಾಗಿ ಅಥವಾ ಅಮೂರ್ತ ನೆಲೆಯಲ್ಲಿ ಅರ್ಥೈಸಲಾಗುತ್ತದೆ. ಆದಾಗ್ಯೂ ಸಂವಿಧಾನದ ಕ್ರಾಂತಿಕಾರಕ ಶಕ್ತಿ ಇರುವುದೇ ಜನಪ್ರಿಯ ಅಥವಾ ತಳಮಟ್ಟದ ಸಾರ್ವಭೌಮತ್ವದಲ್ಲಿ ಎಂದು ಸಂವಿಧಾನ ತಜ್ಞರು ಹೇಳುತ್ತಾರೆ. ವಸಾಹತುಶಾಹಿ ಆಳ್ವಿಕೆಯಲ್ಲಿ ಕಾಣಬಹುದಾದ ತಲೆಮಾರುಗಳ ನಡುವೆ ನಡೆದ ರಾಜಕೀಯ ಸಂಕಥನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನಪ್ರಿಯ ಸಾರ್ವಭೌಮತ್ವಕ್ಕೂ ಸಾಂವಿಧಾನಿಕತೆಗೂ ಇರುವ ಅವಿನಾಭಾವ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು. ಭಾರತದ ಸಂವಿಧಾನವನ್ನು ಅಂಗೀಕರಿಸುವ ಉದಾತ್ತ ನಡೆಯ ಹಿಂದೆ ದಶಕಗಳ ಕಾಲದ ಸಮಾಲೋಚನೆಗಳನ್ನು, ಚರ್ಚೆಗಳನ್ನು, ವಾದ ಪ್ರತಿವಾದಗಳನ್ನು ಗುರುತಿಸಬೇಕಿದೆ. ಭವಿಷ್ಯ ಭಾರತದ ಗಣತಂತ್ರದ ಮೂಲ ಲಕ್ಷಣಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಚರ್ಚೆಗಳು ಮಹತ್ತರ ಕೊಡುಗೆ ನೀಡಿವೆ. ಹಾಗಾಗಿಯೇ ಸಂವಿಧಾನ ಪೀಠಿಕೆಯಲ್ಲಿ ಸಾಮಾಜಿಕ-ಆರ್ಥಿಕ-ರಾಜಕೀಯ ನ್ಯಾಯ, ಚಿಂತನೆ-ಅಭಿವ್ಯಕ್ತಿ-ನಂಬಿಕೆ-ಶ್ರದ್ಧೆ ಮತ್ತು ಆರಾಧನೆಯ ಸ್ವಾತಂತ್ರ್ಯ ಹಾಗೂ ಸ್ಥಾನಮಾನ-ಅವಕಾಶಗಳ ಸಮಾನತೆ ಪ್ರಶಸ್ಥ ಸ್ಥಾನ ಪಡೆದುಕೊಂಡಿವೆ.

ಸಾರ್ವಭೌಮತ್ವ ಮತ್ತು ತಳಸಮಾಜ

ಆದರೆ ರಾಜಕೀಯ ಸಾರ್ವಭೌಮತ್ವವನ್ನು ಪ್ರಭುತ್ವದ ಅಥವಾ ಆಳ್ವಿಕೆಯ ಸಾರ್ವಭೌಮತ್ವಕ್ಕೆ ಸೀಮಿತಗೊಳಿಸಿದಾಗ ಮೇಲೆ ಉಲ್ಲೇಖಿಸಲಾದ ಸಾಂವಿಧಾನಿಕ ಆಶಯಗಳು ಕೇವಲ ಹಾರಿಕೆಯ ಆಶ್ವಾಸನೆಗಳಾಗಿಬಿಡುತ್ತವೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಂತಃಶಕ್ತಿಯಾಗಿ ಸಂವಿಧಾನವು ಉಳಿಯಬೇಕಾದರೆ ನಾವು ‘ಭಾರತದ ಜನಗಳಾದ ನಾವು’ ಎಂಬ ಪದಗಳ ಹಿಂದಿನ ಸಾರ್ಥಕ್ಯವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಪಶ್ಚಿಮ ದೇಶಗಳಲ್ಲಿ ನಾಗರಿಕ ಸಮಾಜವು ಪ್ರಭುತ್ವಗಳ ಅಧಿಕಾರ ದುರುಪಯೋಗದ ಬಗ್ಗೆ ಸದಾ ಎಚ್ಚರಿಕೆ ವಹಿಸುವ ಕಣ್ಗಾವಲು ಶಕ್ತಿಯಂತೆ ವರ್ತಿಸಿರುವುದನ್ನು ಗುರುತಿಸಬಹುದು. ಅಧಿಕಾರದ ಏಕಸ್ವಾಮ್ಯವನ್ನು ಸಾಧಿಸುವ ಪ್ರಭುತ್ವದ ಪ್ರಯತ್ನವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜ ಜಾಗೃತಾವಸ್ಥೆಯಲ್ಲಿರುವುದು ಅತ್ಯವಶ್ಯ. ಚಿಂತಕ ಜರ್ಗನ್ ಹಾಬರ್ಮಾಸ್ ಇದನ್ನು ‘ಉದಾರ ಸಾರ್ವಜನಿಕ ವಲಯ’ (Liberal Public Sphere) ಎಂದು ಗುರುತಿಸುತ್ತಾರೆ. ಸುಶಿಕ್ಷಿತ ಮಧ್ಯಮ ವರ್ಗಗಳೇ ಪ್ರಧಾನವಾಗಿರುವ ಈ ವಲಯವು ತರ್ಕಬದ್ಧ ಸಂವಾದ-ಚರ್ಚೆ-ಸಂಕಥನಗಳ ಮೂಲಕ ವ್ಯಕ್ತಿ ಸ್ವಾಯತ್ತತೆ ಮತ್ತು ಸ್ವಹಿತಾಸಕ್ತಿಗಳ ರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಭಾರತದಲ್ಲಿ ಆಧುನೀಕರಣಗೊಳ್ಳುತ್ತಿರುವ ಸುಶಿಕ್ಷಿತ ಮಧ್ಯಮ ವರ್ಗಗಳು, ವಿಶೇಷವಾಗಿ ನಗರೀಕರಣಕ್ಕೊಳಗಾದ ಹಿತವಲಯದಲ್ಲಿ ಈ ಲಕ್ಷಣವನ್ನು ಕಾಣಬಹುದು.

ಆದರೆ ಈ ಆಧುನೀಕರಣಗೊಂಡ ಮೇಲ್ಪದರದ ಸಮಾಜದ ಪ್ರಾತಿನಿಧಿಕ ಲಕ್ಷಣಗಳನ್ನು ಗಮನಿಸಿದಾಗ ಅಲ್ಲಿ ಸಾಂಪ್ರದಾಯಿಕ ಮೇಲ್ಪದರದ ಗಣ್ಯ ಸಮುದಾಯವೇ ಮುಂಚೂಣಿಯಲ್ಲಿ ಕಾಣುತ್ತದೆ. ಹಾಗಾಗಿಯೇ ಸಾರ್ವಜನಿಕ ಸಂಕಥನಗಳು ಹೆಚ್ಚು ಹೆಚ್ಚಾಗಿ ಪುರುಷಾಧಿಪತ್ಯದ, ಮೇಲ್ವರ್ಗದ, ಪ್ರಬಲ ಜಾತಿಗಳ ಅಭಿಪ್ರಾಯಗಳನ್ನೇ ಬಿಂಬಿಸುವಂತಿರುತ್ತವೆ. ಕಳೆದ ಹತ್ತು ವರ್ಷಗಳಲ್ಲಿ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎನಿಸಿಕೊಂಡ ಮಾಧ್ಯಮ ವಲಯವೂ ಇದರ ಪ್ರತಿರೂಪದಂತೆ ಕಾಣುತ್ತಿದೆ. ಇಲ್ಲಿ ಉತ್ಪಾದಿಸಲ್ಪಡುವ ಅಭಿಪ್ರಾಯಗಳೇ ಸಾರ್ವಜನಿಕ ಅಭಿವ್ಯಕ್ತಿಯಂತೆ ಬಿಂಬಿಸಲಾಗುತ್ತಿರುವುದು ಸುಡು ವಾಸ್ತವ. ಸಾಂವಿಧಾನಿಕ ಆಳ್ವಿಕೆಯು ಒಡ್ಡಿರುವ ಸವಾಲುಗಳ ನಡುವೆ ಭಾರತದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಈ ಮೆಲ್ಪದರದ ಸಮಾಜವು ಹೆಚ್ಚು ಕಡಿಮೆ ನಿಷ್ಕ್ರಿಯವಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಮತ್ತೊಂದು ಬದಿಯಲ್ಲಿ ನಿಂತು ನೋಡಿದಾಗ, ಜನಪ್ರಿಯ ಅಥವಾ ತಳಮಟ್ಟದ ಸಾರ್ವಭೌಮತ್ವವನ್ನು ಬಲವಾಗಿ ಪ್ರತಿಪಾದಿ ಸುವ ಪ್ರಜಾಸತ್ತಾತ್ಮಕ ಹಕ್ಕೊತ್ತಾಯದ ಧ್ವನಿಗಳನ್ನು ನಾವು ದೇಶಾದ್ಯಂತ ವ್ಯಾಪಿಸಿ, ಸಕ್ರಿಯವಾಗಿರುವ ಜನಾಂದೋಲನಗಳು, ಚಳವಳಿಗಳು ಮತ್ತು ಸಾಂಘಿಕ ಚಟುವಟಿಕೆಗಳಲ್ಲಿ ಗುರುತಿಸಬಹುದು. ಸಾಮಾಜಿಕ ಚಳವಳಿಗಳು, ರೈತ ಹೋರಾಟಗಳು, ಕಾರ್ಮಿಕ ಚಳವಳಿಗಳು, ಮಾನವ ಹಕ್ಕು ಸಂಘಟನೆಗಳು, ತಳಸಮುದಾಯದ ಜಾತಿ-ಬುಡಕಟ್ಟು ಹೋರಾಟಗಳು ಈ ಧ್ವನಿಯನ್ನು ತಮ್ಮದಾಗಿಸಿಕೊಂಡಿವೆ. ಜಾತಿ ದೌರ್ಜನ್ಯದ ವಿರುದ್ಧ ನಡೆದ ಉನಾ ಚಳವಳಿ, ಜಾರ್ಖಂಡ್ನ ಪಾತಾಲ್ಘರಿ ಬುಡಕಟ್ಟು ಹೋರಾಟಗಳು, ಪಂಜಾಬ್-ಹರ್ಯಾಣದ ರೈತ ಮುಷ್ಕರಗಳು, ಸಿಎಎ-ಎನ್ಆರ್ಸಿ ವಿರುದ್ಧ ದೇಶವ್ಯಾಪಿಯಾಗಿ ನಡೆದ ಮುಸ್ಲಿಮ್ ಅಲ್ಪಸಂಖ್ಯಾತರ ಹೋರಾಟಗಳು ಇವೆಲ್ಲವೂ ತಳಮಟ್ಟದ ಜನಪ್ರಿಯ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಬೆಳವಣಿಗೆಗಳಾಗಿವೆ.

ಸಾಂವಿಧಾನಿಕ ನೈತಿಕತೆಯ ನೆಲೆಗಳು

ಈ ಜನಾಂದೋಲನಗಳ ಬಗ್ಗೆ ಉದಾರ ಸಾರ್ವಜನಿಕ ವಲಯವು ಸಹಾನುಭೂತಿಯನ್ನು ತೋರಿದರೂ ಇವುಗಳನ್ನು ಸಾಮಾನ್ಯವಾಗಿ ನಿರ್ದಿಷ್ಟ ವಿಭಾಗೀಯ ಬೆಳವಣಿಗೆಗಳಂತೆಯೇ ನೋಡುತ್ತದೆ. ಅಥವಾ ಭಾವನಾತ್ಮಕ ನೆಲೆಯ, ಸಾಂಪ್ರದಾಯಿಕ ಉತ್ಕರ್ಷದಂತೆ ಕಾಣಲಾಗುತ್ತದೆ. ಈ ದೃಷ್ಟಿಯಿಂದಲೇ ಇಂತಹ ಹೋರಾಟಗಳಿಗೆ ಬಾಹ್ಯ ಬೆಂಬಲ ವ್ಯಕ್ತವಾಗುತ್ತದೆ. ಆದರೆ ತಳಸಮುದಾಯಗಳ ಆಶೋತ್ತರಗಳನ್ನು ಪ್ರತಿನಿಧಿಸುವ ಈ ಹೋರಾಟಗಳಿಗೆ ನಾಗರಿಕ ಸಮಾಜದಲ್ಲಿ ಒಂದು ಸ್ಥಾನಮಾನವನ್ನು ನೀಡದೆ ಹೋದರೆ ಈ ಆಮೂಲಾಗ್ರ ಪ್ರಜಾಸತ್ತಾತ್ಮಕ ಹೋರಾಟಗಳ ವಿಮೋಚನೆಯ ಸಾಮರ್ಥ್ಯವನ್ನು ಗುರುತಿಸಲಾಗುವುದಿಲ್ಲ. ಜನಪ್ರಿಯ ಹಕ್ಕೊತ್ತಾಯಗಳ ಹಾಗೂ ಸಮೂಹ ಪ್ರತಿಭಟನೆಗಳ ಆಶಯಗಳನ್ನು ಮೂಲೆಗುಂಪು ಮಾಡಿದಂತಾಗುತ್ತದೆ. ಈ ದೃಷ್ಟಿಯಿಂದಲೇ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಪೀಠಿಕೆಯ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರಧಾನವಾಗಿ ಪ್ರತಿಪಾದಿಸಿದ್ದರು. ಸ್ವಾತಂತ್ರ್ಯವಿಲ್ಲದ ಸಮಾನತೆ, ಸಮಾನತೆಯಿಲ್ಲದ ಸ್ವಾತಂತ್ರ್ಯ, ಭ್ರಾತೃತ್ವವಿಲ್ಲದ ಸಮಾನತೆ ಮತ್ತು ಸ್ವಾತಂತ್ರ್ಯ ವ್ಯರ್ಥ ಎಂದು ಒತ್ತಿ ಹೇಳಿದ್ದರು. ಸಮಾನತೆ ಇಲ್ಲದ ಸ್ವಾತಂತ್ರ್ಯ ಅಂತಿಮವಾಗಿ ಕೆಲವೇ ಬಲಾಢ್ಯರ ಪರಮಾಧಿಪತ್ಯಕ್ಕೆ ಕಾರಣವಾಗುತ್ತದೆ ಎಂದು ನಂಬಿದ್ದ ಅಂಬೇಡ್ಕರ್, ಸ್ವಾತಂತ್ರ್ಯವಿಲ್ಲದ ಸಮಾನತೆಯು ವ್ಯಕ್ತಿಗತ ಉಪಕ್ರಮಗಳನ್ನೂ ನಾಶಪಡಿಸುತ್ತದೆ ಎಂದು ಹೇಳಿದ್ದರು.

ಬಹುಸಂಖ್ಯಾತ ಸಮಾಜವು ಸಾಂವಿಧಾನಿಕ ನೈತಿಕತೆಯನ್ನು ಪರಿಪಾಲಿಸದೆ ಹೋದರೆ ಯಾವುದೇ ಕಾನೂನು ಸಹ ಸ್ವಾತಂತ್ರ್ಯ- ಸಮಾನತೆಯ ಉಲ್ಲಂಘನೆಗಳನ್ನು ನಿಯಂತ್ರಿಸಲಾಗುವುದಿಲ್ಲ ಎಂಬ ಅಂಶವನ್ನು ಅಂಬೇಡ್ಕರ್ ಒತ್ತಿ ಹೇಳುತ್ತಾರೆ. ಸಾಮಾಜಿಕ ಶಿಸ್ತುಪರಿಪಾಲನೆಗಾಗಿ ರೂಪಿಸಲಾಗುವ ಕಾನೂನುಗಳು ತಳಮಟ್ಟದ ಸಮಾಜದಲ್ಲಿ ಸಮನ್ವಯತೆಯನ್ನು ಕಾಪಾಡಬೇಕಾದರೆ, ಆಳ್ವಿಕೆಯ ಲ್ಲಿರುವ ಬಹುಸಂಖ್ಯಾತ ಸಮಾಜವು ಸಾಂವಿಧಾನಿಕ ನೈತಿಕತೆಯನ್ನು ಹೊಂದಿರುವುದು ಅತ್ಯವಶ್ಯ ಎಂಬ ಅಂಶವನ್ನು ಅಂಬೇಡ್ಕರ್ ಪದೇಪದೇ ಉಚ್ಚರಿಸುತ್ತಾರೆ. ಗಾಂಧಿ ತಮ್ಮ ಸ್ವರಾಜ್ಯದ ಪರಿಕಲ್ಪನೆ ಯಲ್ಲೂ ಇದೇ ಅಭಿಪ್ರಾಯವನ್ನು ಮತ್ತೊಂದು ಆಯಾಮದಲ್ಲಿ ಬಿಂಬಿಸುವುದನ್ನು ಗುರುತಿಸಬಹುದು. ಸ್ವರಾಜ್ ಎಂದರೆ ಯಾಂತ್ರಿಕವಾದ ಸ್ವಯಮಾಡಳಿತ ಎಂದು ಭಾವಿಸುವುದರ ಬದಲು, ಎಲ್ಲರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಕಾಪಾಡುವಂತಹ ಆತ್ಮಸಾಕ್ಷಾತ್ಕಾರದ ಸೃಜನಶೀಲ ಪ್ರಕ್ರಿಯೆಯಾಗಿ ಗಾಂಧಿ ಕಾಣುತ್ತಾರೆ.

ಪ್ರಸಕ್ತ ಭಾರತದ ಸಂದರ್ಭದಲ್ಲಿ ನಿಂತು ನೋಡಿದಾಗ, ಪ್ರಗತಿಪರ ನಾಗರಿಕ ಸಮಾಜವು ಒಂದು ಬಹುತ್ವ ಸಮಾಜವಾಗಿ ಉಳಿಯಬೇಕೆಂದರೆ ಎಲ್ಲ ಸಮುದಾಯಗಳ ಮುಕ್ತ-ಸಮಾನ ಭಾಗವಹಿಸುವಿಕೆ, ಪಾಲ್ಗೊಳ್ಳುವಿಕೆ ಅತ್ಯವಶ್ಯವಾಗುತ್ತದೆ. ಯಾವುದೇ ಸಮುದಾಯವನ್ನು ಸಾಮಾಜಿಕ ಕೀಳರಿಮೆಯಿಂದ ನೋಡುವುದಾಗಲೀ ಬೌದ್ಧಿಕವಾಗಿ ಕೀಳು ಎಂದು ಭಾವಿಸುವುದಾಗಲೀ ಇನ್ನುಳಿದ ಸಮುದಾಯಗಳಲ್ಲಿ ಮೇಲರಿಮೆ ಹೆಚ್ಚಾಗಿಸಿ, ಔನ್ನತ್ಯದ ಅಹಮಿಕೆ ಗಟ್ಟಿಯಾಗುತ್ತದೆ. ಹಾಗಾಗಿ ಬಹುತ್ವದ ನಾಗರಿಕ ಸಮಾಜವನ್ನು ಸಾಕಾರಗೊಳಿಸಬೇಕಾದರೆ ಮೂಲತಃ ಪ್ರಾಮಾಣಿಕವಾದ ಚರ್ಚೆ, ಸಂವಾದಗಳು ಏರ್ಪಡಬೇಕು. ಈ ಸಂಕಥನಗಳನ್ನು ನಿರ್ದೇಶಿಸುವ ಬೌದ್ಧಿಕ ನೆಲೆಗಳಲ್ಲಿ ಆತ್ಮಾವಲೋಕನದ ಮನೋಭಾವ ಪ್ರಧಾನವಾಗಿರಬೇಕು.

‘ಅನ್ಯ’ರಿಲ್ಲದ ಸಮಾಜದತ್ತ

ಸಮಾಲೋಚನೆ ಮತ್ತು ಮುಕ್ತ ಚರ್ಚೆಗೆ ತೆರೆದುಕೊಂಡ ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ಮಾತ್ರ ‘ಅನ್ಯ’ ಭಾವನೆಗಳನ್ನು ದೂರೀಕರಿಸಲು ಸಾಧ್ಯವಾಗುತ್ತದೆ. ಗಾಂಧಿ, ಅಂಬೇಡ್ಕರ್ಮೊದಲಾದ ಆಧುನಿಕ ಚಿಂತನೆಯ ದಾರ್ಶನಿಕರ ಮಾರ್ಗದರ್ಶನ ಇಲ್ಲಿ ಮುಖ್ಯವಾಗುತ್ತದೆ. ಸಮಾಜದಲ್ಲಿ ವಿವಿಧ ನೆಲೆಗಳಲ್ಲಿ, ವಿಭಿನ್ನ ಸಂದರ್ಭಗಳಲ್ಲಿ, ವಿಭಿನ್ನ ಕಾರಣಗಳಿಗಾಗಿ ಸೃಷ್ಟಿಯಾಗುತ್ತಲೇ ಹೋಗುವ ‘ಅನ್ಯ’ರೊಡನೆ ಸಹಾನುಭೂತಿಯೊಂದಿಗೆ, ಪರಾನುಭೂತಿಯೊಂದಿಗೆ ಆರೋಗ್ಯಕರ ಸಂವಾದದಲ್ಲಿ ತೊಡಗುವ ಮೂಲಕ ಪರಸ್ಪರ ಅರ್ಥಮಾಡಿಕೊಳ್ಳುವಂತಹ ಒಂದು ಸ್ಥಿರ ಅಡಿಪಾಯವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಈ ನಿರ್ಮಾಣದ ಜವಾಬ್ದಾರಿ ಉದಾರ ಸಾರ್ವಜನಿಕ ವಲಯದ ಮೇಲಿರುತ್ತದೆ. ಈ ಅಡಿಪಾಯದ ಮೇಲೆ ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯ ಪೂರ್ವದ ಚಿಂತಕರು ಆಶಿಸಿದಂತಹ ಒಂದು ಬಹುತ್ವ ಸಮಾಜವನ್ನು, ಆಧುನಿಕ ಭಾರತವನ್ನು, ಸಮನ್ವಯದ ರಾಷ್ಟ್ರವನ್ನು ಕಟ್ಟಲು ಸಾಧ್ಯವಾಗುತ್ತದೆ. ಮುಕ್ತ ಸಮಾಲೋಚನೆ, ಸಂವಾದ ಮತ್ತು ಸದ್ಭಾವನೆಗಳ ಮೂಲಕ ಸಮಾಜವನ್ನು ಗ್ರಹಿಸುವ ಹಾಗೂ ನಿರ್ವಚಿಸುವ ಉದಾತ್ತ ಕಲ್ಪನೆಯಿಂದ ಮಾತ್ರವೇ ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ ಭ್ರಾತೃತ್ವವನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ.

ಮನ್ವಂತರ ಹಾದಿಯಲ್ಲಿ ನಿಂತು, ಹತ್ತು ಹಲವಾರು ಕವಲುಗಳ ಆಲೋಚನಾ ವಿಧಾನಗಳಿಂದ ದಿಕ್ಕುಗಾಣದಂತಾಗಿರುವ ನವ ಭಾರತದ ಯುವ ಸಮೂಹಕ್ಕೆ ಬಹುತ್ವ ಭಾರತದ ಉದಾತ್ತ ಚಿಂತನೆಗಳನ್ನು ರವಾನಿಸಬೇಕಾದರೆ, ಉದಾರ ಸಾರ್ವಜನಿಕ ವಲಯವನ್ನು ಪ್ರತಿನಿಧಿಸುವ ನಾಗರಿಕ ಸಮಾಜದ ಚಿಂತನಾ ವಿಧಾನಗಳೂ ಬದಲಾಗಬೇಕಿದೆ. ತಳಸಮುದಾಯಗಳ ನಾಡಿಮಿಡಿತವನ್ನು ಅರಿತು ಕ್ಷಣಕ್ಷಣಕ್ಕೂ ಸ್ಪಂದಿಸುವ ಮೂಲಕ ಮೇಲ್ಪದರ ಉದಾರ ಸಾರ್ವಜನಿಕ ವಲಯವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಇಲ್ಲವಾದರೆ ತನ್ನ ಸೀಮಿತ ಸ್ವಯಂ-ಜ್ಞಾನವನ್ನೇ ಅನುಸರಿಸಿ ಭಾವಾತಿರೇಕದ ಮೇಲರಿಮೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ನಾಗರಿಕ ಸಮಾಜವು ನಿರಂಕುಶ ಪ್ರಭುತ್ವದ ನಿಷ್ಠಾವಂತ ಅನುಯಾಯಿಯಾಗಿ ಪರ್ಯವಸಾನಗೊಳ್ಳುತ್ತದೆ. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಶಯಗಳನ್ನು ಕಾಪಾಡಿಕೊಳ್ಳುವ ನೆಲೆಯಲ್ಲಿ ಇದು ಅನಪೇಕ್ಷಿತವೂ ಹೌದು, ಅಪಾಯಕಾರಿಯೂ ಹೌದು.

(ಈ ಲೇಖನಕ್ಕೆ ಆಧಾರ: ‘ದಿ ಹಿಂದೂ’ ಪತ್ರಿಕೆಯ ಅಸೀಂ ಅಲಿ ಅವರ The path towards a pluralist civil society ಲೇಖನ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ನಾ. ದಿವಾಕರ

contributor

Similar News

ಓ ಮೆಣಸೇ...!
ಓ ಮೆಣಸೇ...!