×
Ad

ಬ್ಲ್ಯಾಕ್ ಮನಿ ವಿರುದ್ಧ ಭಾಷಣ ಬಿಗಿಯುತ್ತಿದ್ದ ರಾಮ್ ದೇವ್ ನ ಬಂಡವಾಳ ಬಯಲು !

Update: 2023-11-24 18:16 IST

ಬಾಬಾ ರಾಮ್ ದೇವ್

ಬಿಜೆಪಿ ಹಾಗು ಮೋದೀಜಿ ಸಾಕಿ ಸಲಹಿ​ ಬೆಳೆಸಿದ ಬಾಬಾ ರಾಮ್ ದೇವ್ ಅವಾಂತರಗಳು ಒಂದಾ, ಎರಡಾ?. ಯೋಗವನ್ನು ಪ್ರಚಾರಕ್ಕಾಗಿ ಬಳಸಿಕೊಂಡು, ಯೋಗವನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆ ಪಡೆದಿದ್ದಾಯ್ತು. ​ಯೋಗದ ಹೆಸರಲ್ಲೇ ಪತಂಜಲಿ ಉತ್ಪನ್ನಗಳಿಗೆ​ ದೇಶದ ಬೃಹತ್ ಮಾರುಕಟ್ಡೆ ಪಡೆ​ದುಕೊಂಡದ್ದೂ ಆಯಿತು. ಅದೂ ಸಾಲದು ಎನ್ನುವಂತೆ, ವಂಚಿಸುವ ಜಾಹೀರಾತು ಕೊಟ್ಟಿದ್ದೂ ಆಯಿತು.

ಇದರ ಜೊತೆಗೇ, ಇನ್ನೂ ದೊಡ್ಡ ವಂಚನೆಯ ಜಾಲವನ್ನೇ​ ಈ ಡೋಂಗಿ ಬಾಬಾ ನಡೆಸುತ್ತಿರೋದು ​ಈಗ ಬಯಲಾಗಿದೆ.ಈ ಹಿಂದೆಯೇ ಈತ ಸಾಚಾ ಅಲ್ಲ ಎಂದು ಹಲವು ಬಾರಿ ಗೊತ್ತಾಗಿದೆ. ಈಗ ಮತ್ತೆ ಕಹಿ ಸತ್ಯ​ ಪುರಾವೆ ಸಹಿತ ಬಯಲಾಗಿದೆ.

ಬಾಬಾ ರಾಮ್ ದೇವ್ ಈ ದೇಶವನ್ನು ವಂಚಿಸುವುದರಲ್ಲಿ ತೊಡಗಿರುವ ಬಗೆ ಎಂಥದು?. ಆದರೆ ಅದೆಲ್ಲವೂ ಈ ದೇಶದಲ್ಲಿನ​ ಸದ್ಯ ಮೆರೆಯುತ್ತಿರುವ ರಾಜಕಾರಣದಲ್ಲಿ ಹೇಗೆ​ ಸಂಪೂರ್ಣ ಸಮ್ಮತವಾಗಿಬಿಡುತ್ತಿದೆ?. ಈ ದೇಶದಲ್ಲಿ ದೇಶಭಕ್ತಿ, ಧರ್ಮ ಹಾಗು ರಾಷ್ಟ್ರೀಯತೆ ಹೆಸರಲ್ಲಿ ​ ಜನರನ್ನು​ ಇಲ್ಲಿನ ರಾಜಕೀಯ ಹೇಗೆಲ್ಲಾ ವಂಚಿಸಿದೆ​ ?

​ಇಲ್ಲಿನ ದೊಡ್ಡ ದೊಡ್ಡ ಪ್ರಸಾರದ ಪತ್ರಿಕೆಗಳು, ಭಟ್ಟಂಗಿ ಟಿವಿ ಚಾನಲ್ ಗಳು ಈ ಬಗ್ಗೆ ಮಾತಾಡದೆ ಬಾಯಿಗೆ ಬೀಗ ಹಾಕಿಕೊಂಡಿವೆ. ರಾಮದೇವ್ ವಿಚಾರದಲ್ಲಿನ ಈಗಿನ ಬೆಳವಣಿಗೆಗಳ ಬಗ್ಗೆ ನೋಡೋಣ. ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡುತ್ತಿರುವುದಕ್ಕಾಗಿ​ ಬಾಬಾ ರಾಮ್ ದೇವ್ ರ ಪತಂಜಲಿಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾ​ಕಿದೆ.

ಆದರೆ ಅದಕ್ಕಿಂತಲೂ ಬಲು ದೊಡ್ಡ ಆರೋಪ ಅವರ ಮೇಲೆ ಅದರ ಬೆನ್ನಿಗೇ ಕೇಳಿ ಬಂದಿದೆ. ಯಾವ ರಾಮ್ದೇವ್ ಕಪ್ಪು ಹಣದ ವಿರುದ್ಧ ಭಾರೀ ಭಾಷಣ ಬಿಗಿಯುತ್ತಿದ್ದರೋ ಅದೇ ರಾಮ್ದೇವ್ ಕಪ್ಪುಹಣ ಸೃಷ್ಟಿಸಲು ಹಲವು ಶೆಲ್‌ ಕಂಪನಿಗಳನ್ನು ಹುಟ್ಟುಹಾಕಿರುವುದು ಬಯಲಾಗಿದೆ.

​ಆ ಶೆಲ್ ಕಂಪೆನಿಗಳ ಮೂಲಕ ಹೆಚ್ಚು ಕಪ್ಪುಹಣ ಸೃಷ್ಟಿಸಿ ​ರಾಜಧಾನಿ ದಿಲ್ಲಿಯ ಪಕ್ಕದಲ್ಲೇ ​ ದೊಡ್ಡ ಪ್ರಮಾಣದಲ್ಲಿ ಭಾರೀ ಬೇಡಿಕೆಯ ಜಮೀನು ಖರೀದಿಸಿರುವ ವಿಚಾರವನ್ನು ರಿಪೋರ್ಟರ್ಸ್ ಕಲೆಕ್ಟಿವ್‌ನ ವರದಿ ಬಯಲಿಗೆಳೆದಿದೆ. ಅದನ್ನು ನೋಡುವ ಮೊದಲು ಸುಪ್ರೀಂ ಕೋರ್ಟ್ ರಾಮದೇವ್ಗೆ ನೀಡಿರೋ ಎಚ್ಚರಿಕೆ ಏನು ಎನ್ನೋದನ್ನು ಗಮನಿಸೋಣ.

ರಾಮ್ದೇವ್ ಪತಂಜಲಿ ಕಂಪನಿ ಜಾಹೀರಾತುಗಳು ಸುಳ್ಳು ಮಾಹಿತಿ ಹರಡುತ್ತಿದ್ದು, ಹಾದಿ ತಪ್ಪಿಸುತ್ತಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಅಂಥ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಲು ಎಚ್ಚರಿಕೆ ನೀಡಿದೆ. ಆಯುರ್ವೇದದ ಹೆಸರಲ್ಲಿ ಸುಳ್ಳು ಮತ್ತು ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳ ಬಗ್ಗೆ ಅದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಜಾಹೀರಾತು ನಿಲ್ಲಿಸದಿದ್ದರೆ ಅಂಥ ಪ್ರತಿ ಉತ್ಪನ್ನದ ಮೇಲೆಯೂ 1 ಕೋಟಿ ದಂಡ ಹಾಕುವ ಎಚ್ಚರಿಕೆ ನೀಡಿದೆ. ಪ್ರತಿ ಸಲ ಕೋರ್ಟ್ ಯಾವುದೇ ತೀರ್ಪಿಗೆ ಮೊದಲು ಕೆಲವು ಅವಲೋಕನಗಳನ್ನು ಮಾಡುತ್ತದೆ, ಗಂಭೀರ ಟಿಪ್ಪಣಿಗಳನ್ನು ಮಾಡುತ್ತದೆ. ಆದರೆ ಬಹಳ ಪ್ರಭಾವಿ ವ್ಯಕ್ತಿಯಾಗಿರೋ ರಾಮ್ದೇವ್ ಕಂಪನಿಯ ಉತ್ಪನ್ನದ ಮೇಲೆ ಗಂಭೀರ ಟಿಪ್ಪಣಿ ಮಾಡುವುದಷ್ಟೇ ಸಾಲದು. ಅದರಿಂದ ಸರಿಯಾದ ಸಂದೇಶ ಹೋಗಲಾರದು.

ಜಾಹೀರಾತುಗಳಲ್ಲಿ ಜನರನ್ನು ರಾಮ್ದೇವ್ ತಪ್ಪು ದಾರಿಗೆಳೆಯುತ್ತಿರುವುದಾಗಿ ಕೋರ್ಟ್ ಭಾವಿಸುವುದಾದರೆ ದಂಡವನ್ನು ಹಾಕಲೇಬೇಕಿತ್ತು. ಆದರೆ, ಏಕೆ ರಾಮದೇವ್ಗೆ​ ಮತ್ತೆ ಮತ್ತೆ ಈ ಥರದ ರಿಯಾಯ್ತಿ​ ಇಲ್ಲಿ ಸಿಗುತ್ತದೆ?. ಕಾಶ್ಮೀರ್ವಾಲಾ ಸಂಪಾದಕ ಫಹಾದ್ ಶಾ ಥರದವರಿಗೆ ಇಂಥದೇ ಅನುಕೂಲ ಮಾಡಿಕೊಡಲಾಗುತ್ತದೆಯೆ?.

ಅವರನ್ನು ಯಾವುದೇ ಸಾಕ್ಷ್ಯ ಇಲ್ಲದೆ 21 ತಿಂಗಳುಗಳ ಕಾಲ ಜೈಲಿನಲ್ಲಿಡಲಾಯಿತು. ಯುಎಪಿಎ ಪ್ರಕರಣವೂ ಸೇರಿ 4 ಕೇಸ್ಗಳನ್ನು ಅವರ ಮೇಲೆ ಹಾಕಲಾಗಿತ್ತು. ಈ ನಾಲ್ಕೂ ಕೇಸ್ಗಳಲ್ಲಿ ಅವರಿಗೆ ಜಾಮೀನು ಸಿಗಲು 21 ತಿಂಗಳುಗಳು ಬೇಕಾದವು.

ಅವರ ಬಿಡುಗಡೆಗೆ ಆದೇಶಿಸುವ ವೇಳೆ ಜಮ್ಮು ಕಾಶ್ಮೀರ್ ಹೈಕೋರ್ಟ್, ಅವರ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂದಿತು. ಆದರೆ, ಯಾವ ತಪ್ಪೂ ಮಾಡದೆ ಅವರು 21 ತಿಂಗಳು ಜೈಲಿನಲ್ಲಿ ಕಳೆಯಬೇಕಾಗಿ ಬಂತಲ್ಲವೆ​ ?. ಪತ್ರಕರ್ತನೊಬ್ಬನನ್ನು ಸುಳ್ಳು ಕೇಸ್ ಹಾಕಿ 21 ತಿಂಗಳ ಕಾಲ ಜೈಲಿನಲ್ಲಿ ಇರುವಂತೆ ಮಾಡಲಾಗುತ್ತದೆ. ಆದರೆ ಒಬ್ಬ​ ಡೋಂಗಿ ಬಾಬಾಗೆ ಆತ ಸುಳ್ಳು ಮಾಹಿತಿಯ ಜಾಹೀರಾತು ನೀಡುವ ಬಗ್ಗೆ​ ಕೇವಲ ಟಿಪ್ಪಣಿ ಮಾಡಿ ಅಷ್ಟಕ್ಕೇ ಮುಗಿಸಲಾಗುತ್ತದೆ.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅರ್ಜಿ ವಿಚಾರಣೆ ವೇಳೆ ಪತಂಜಲಿಗೆ ಈ ಎಚ್ಚರಿ​ಕೆ ನೀಡಲಾಗಿದೆ.

2022ರ ಆಗಸ್ಟ್ನಲ್ಲಿ ಐಎಂಎ ಸಲ್ಲಿಸಿದ್ದ ಅರ್ಜಿಯಲ್ಲಿ ಏನೇನಿತ್ತು?

1.ಅಲೋಪಥಿ ಮತ್ತು ಆಧುನಿಕ ವೈದ್ಯ ಪದ್ಧತಿಗಳ ವಿರುದ್ದ ವ್ಯವಸ್ಥಿತವಾಗಿ ರಾಮ್ದೇವ್ ತಪ್ಪು ಮಾಹಿತಿ​ ಪ್ರಸಾರ ಮಾಡುತ್ತಿರುವ ಆರೋಪ.

2.ಪತಂಜಲಿಯಿಂದ ಜನರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳು. ಅವುಗಳಲ್ಲಿ, ಕಾಯಿಲೆ ಗುಣಪಡಿಸುವುದಾಗಿ ಸುಳ್ಳು ಹೇಳಲಾಗುತ್ತದೆ ಎಂಬ ಆರೋಪ.

3.ಅರ್ಜಿಯಲ್ಲಿ, 2022ರ ಜುಲೈನಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಪತಂಜಲಿ ಜಾಹೀರಾತು ಉಲ್ಲೇಖ. ಅದು, ಅಲೋಪಥಿ ಗೊಂದಲಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸುವ ಜಾಹೀರಾತು. ಫಾರ್ಮಾ ಕಂಪನಿಗಳು ಮತ್ತು ಔಷಧ ಉದ್ಯಮದಿಂದ ನಿಮ್ಮನ್ನೂ ದೇಶವನ್ನೂ ರಕ್ಷಿಸಿಕೊಳ್ಳಿ ಎಂಬ ಒಕ್ಕಣೆಯಿರುವ ಜಾಹೀರಾತು.

4.ರೋಗ ಗುಣಪಡಿಸುವುದಾಗಿ ಆಧಾರ ರಹಿತವಾಗಿ ಹೇಳಿಕೊಳ್ಳುವುದು ಡ್ರಗ್ಸ್ ಎಂಡ್ ಮಿರಾಕಲ್ ರೆಮಿಡೀಸ್ ಆಕ್ಟ್ ಮತ್ತು ಗ್ರಾಹಕಸಂರಕ್ಷಣಾ ಕಾಯ್ದೆಗೆ ವಿರುದ್ಧ ಎಂದು ವಾದಿಸಿದ್ದ ಐಎಂಎ.

5.ರಾಮ್ದೇವ್ ಹೇಳಿಕೆಗಳ ವಿವರವನ್ನೂ ಅರ್ಜಿ ಒಳಗೊಂಡಿತ್ತು. ಅಲೋಪಥಿಯ ಬಗ್ಗೆ ಕೆಟ್ಟದಾಗಿ ಟೀಕಿಸಿದ್ದ ಹೇಳಿಕೆ, ಕೋವಿಡ್ ವೇಳೆ ನೀಡಿದ್ದ, ಅಲೋಪಥಿ ಔಷಧದಿಂದಾಗಿ ಜನರು ಸಾಯುತ್ತಿದ್ಧಾರೆ ಎಂಬ ಆಧಾರರಹಿತ ಹೇಳಿಕೆ.

6.ಕೋವಿಡ್ ಲಸಿಕೆ ವಿರುದ್ಧ ತಪ್ಪು ಮಾಹಿತಿ ಮತ್ತು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದ ಆರೋಪವೂ ರಾಮ್ದೇವ್ ಮೇಲಿದೆ.

7.ಕೋವಿಡ್ ವೇಳೆ ಆಕ್ಸಿಜನ್ ಸಿಗದೆ ಪರ​ದಾಡಿ​ದವರ ಬಗ್ಗೆ ರಾಮ್ದೇವ್ ಅಪಹಾಸ್ಯ ಮಾಡಿದ್ದ ಆರೋಪ.

ಪತಂಜಲಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನೂ ಅಲ್ಲ.

ಈ ಹಿಂದೆಯೂ ಸುಪ್ರೀಂ ಕೋರ್ಟ್ ಪೀಠ ಕೇಂದ್ರ ಆರೋಗ್ಯ ಸಚಿವಾಲಯ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ, ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ಹಾಗೂ ಪತಂಜಲಿಗೆ ನೊಟೀಸ್ ನೀಡಿತ್ತು.

ಈಗಿನ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಮೌಖಿಕವಾಗಿ ಎಚ್ಚರಿಕೆ ನೀಡಿದೆ.

ಪತಂಜಲಿ ಆಯುರ್ವೇದ ಇಂತಹ ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು. ನ್ಯಾಯಾಲಯ ಅಂತಹ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಇನ್ನು ಮುಂದೆ ಈ ರೀತಿಯಾದರೆ, ಸುಳ್ಳು ಜಾಹೀರಾತು ನೀಡುವ ಪ್ರತಿ ಉತ್ಪನ್ನದ ಮೇಲೂ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ನ್ಯಾ.ಅಮಾನುಲ್ಲಾ ಮೌಖಿಕವಾಗಿ ಹೇಳಿದ್ದಾರೆ. ಒಂದು ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಸುಳ್ಳು ಹೇಳಿಕೆ ನೀಡಿದರೆ ಪ್ರತಿ ಉತ್ಪನ್ನಕ್ಕೆ 1 ಕೋಟಿ ದಂಡ ವಿಧಿಸುವ ಬಗ್ಗೆ ಪೀಠ ಪರಿಗಣಿಸಬಹುದು ಎಂದು ಎಚ್ಚರಿಸಲಾಗಿದೆ.

ಹಾಗಾದರೆ, ಪತಂಜಲಿ ತಪ್ಪು ದಾರಿಗೆಳೆಯುವ ಜಾಹೀರಾತು ಕೊಡುತ್ತಿದೆ ಎಂದು ಕೋರ್ಟ್ ಭಾವಿಸಿದ್ದಲ್ಲಿ ದಂಡ ವಿಧಿಸುವುದೇ ಸೂಕ್ತವಾಗಿತ್ತಲ್ಲವೆ?. ಕೋರ್ಟ್ ಎಚ್ಚರಿಕೆ ಬಳಿಕ, ಮುಂದಿನ ದಿನಗಳಲ್ಲಿ ಇಂಥ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಪತಂಜಲಿ ಹೇಳಿರುವುದಾಗಿ ವರದಿಯಾಗಿದೆ. ಯಾವುದೇ ವೈದ್ಯಕೀಯ ಪದ್ಧತಿಯನ್ನು ಟೀಕಿಸುವ ಹೇಳಿಕೆಗಳೂ ತನ್ನ ಕಡೆಯಿಂದ ಹೊರಬೀಳದಂತೆ ಎಚ್ಚರ ವಹಿಸುವುದಾಗಿಯೂ ಅದು ಹೇಳಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರಕ್ಕೂ ಕೋರ್ಟ್ ಹಲವು ಪ್ರಶ್ನೆಗಳನ್ನು ಕೇಳಿದೆ. ಕೆಲ ಖಾಯಿಲೆಗಳಿಗೆ ಪರಿಪೂರ್ಣ ಚಿಕಿತ್ಸೆ ನೀಡುವ ಔಷಧಗಳ ಬಗ್ಗೆ ಹೇಳಿಕೊಳ್ಳಲಾಗುತ್ತಿರುವ ಸುಳ್ಳು ಜಾಹೀರಾತುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರದ ಪರ ಹಾಜರಾದ ವಕೀಲರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಮುಂದಿನ ವರ್ಷ ಫೆಬ್ರವರಿ 5ರಂದು ಐಎಂಎ ಅರ್ಜಿ ಕುರಿತ ವಿಚಾರಣೆ ನಡೆಯಲಿದೆ. ಇಲ್ಲೊಂದು ಗಮನಿಸಬೇಕಾದ ಸಂಗತಿಯಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಆಗಿನ ಸಿಜೆಐ ಎನ್‌ವಿ ರಮಣ ಅವರು ಕೂಡ ಈ ವಿಚಾರದಲ್ಲಿ​ ರಾಮ್ದೇವ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ರಾಮದೇವ್ ಬಾಬಾಗೆ ಏನಾಗಿದೆ? ಯೋಗವನ್ನು ಜನಪ್ರಿಯಗೊಳಿಸಿದ್ದರಿಂದ ನಾವು ಅವರನ್ನು ಗೌರವಿಸುತ್ತೇವೆ. ನಾವೆಲ್ಲರೂ ಅದನ್ನು ಒಪ್ಪುತ್ತೇವೆ. ಆದರೆ, ಅವರು ಇತರ ಪದ್ಧತಿಗಳನ್ನು ಟೀಕಿಸಬಾರದು. ಆಯುರ್ವೇದದಲ್ಲೇ ಗುಣಮುಖರಾಗುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ? ಎಲ್ಲ ವೈದ್ಯರನ್ನೂ ಕೊಲೆಗಾರರು ಅಥವಾ ಇನ್ನೇನೋ ಎಂದು ಆರೋಪಿಸುತ್ತಿರುವ ಜಾಹೀರಾತುಗಳನ್ನು, ಬೃಹತ್ ಜಾಹೀರಾತುಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದರು.

ತಪ್ಪುದಾರಿಗೆಳೆಯುವ ಜಾಹಿರಾತು​ಗಳನ್ನು ಪ್ರಕಟಿಸುವುದು ಕ್ರಿಮಿನಲ್ ಅಪರಾಧ. ಆಗಿನ ಸಿಜೆಐ ರಮಣ ಅವರು ರಾಮ್ದೇವ್ ಬಗ್ಗೆ ಟೀಕಿಸುವಾಗಲೂ ಗೌರವಭಾವನೆ ವ್ಯಕ್ತಪಡಿಸುತ್ತಲೇ ಟೀಕಿಸಿದ್ದರು. ರಾಮ್ದೇವ್ ಯೋಗದ ಬಗ್ಗೆ ಪ್ರಚಾರ ಮಾಡಿದ್ದರ ಬಗ್ಗೆ ರಮಣ ಅವರು ಹೇಳಿದ್ದರು.

ಆದರೆ ಆತ ವೈಯಕ್ತಿಕ ಪ್ರಚಾರಕ್ಕಾಗಿ ಏಕೆ ಯೋಗವನ್ನು ಹಾಳು ಮಾಡಬೇಕು ಎಂಬ ಟೀಕೆಯನ್ನೂ ಯೋಗ ವಿದ್ವಾಂಸರೇ ರಾಮ್ದೇವ್ ವಿರುದ್ಧ ಮಾಡಿದ್ದರು ಎಂಬುದನ್ನು ಗಮನಿಸಬೇಕು. ರಾಮ್ದೇವ್ ಗಿಂತ ದಶಕಗಳಿಗೂ ಮೊದಲೇ ಬಿಹಾರ ಯೋಗಶಾಲಾ ನೀಡಿದ್ದ ಕೊಡುಗೆಯನ್ನು ಮರೆಯುವಂತಿಲ್ಲ. ಸ್ವಾಮಿ ಸತ್ಯಾನಂದ ಸರಸ್ವತಿಯವರಿಂದ ಹಿಡಿದು ಸ್ವಾಮಿ ಶಿವಾನಂದ ಸರಸ್ವತಿಯವರವರೆಗೆ ಯೋಗ ಕುರಿತಾದ​ ಅದ್ಭುತ ಕೆಲಸಗಳು ​ಆಗಿವೆ. ಅವರು ಯೋಗವನ್ನು ಪ್ರಸಾರ ಮಾಡಿದರೇ ಹೊರತು ಪ್ರಚಾರ ಮಾಡಲಿಲ್ಲ. ಎರಡರ ನಡುವೆಯೂ ಬಹಳ ಅಂತರವಿದೆ.

ಬಿಹಾರ ಯೋಗಶಾಲಾ ಸಂಸ್ಥಾಪಕ ಸ್ವಾಮಿ ಸತ್ಯಾನಂದ ಸರಸ್ವತಿ, ಈಗಿನ ಸ್ವಾಮಿ ನಿರಂಜನಾನಂದ ಸರಸ್ವತಿ ಯಾವತ್ತೂ ಯೋಗವನ್ನು ಪ್ರಚಾರಕ್ಕೆ ಬಳಸಲಿಲ್ಲ. ಇವತ್ತಿಗೂ ದೊಡ್ಡ ಮಟ್ಟದಲ್ಲಿ ಯೋಗಾಭ್ಯಾಸಿಗಳು ಅಲ್ಲಿ ಸೇರುತ್ತಾರೆ.

ಅಲ್ಲಿ ನೀರು ಬೆರೆಸಿದ ಹಾಲನ್ನೂ ಮಾರುವುದಿಲ್ಲ, ಮಾರಾಟದ ಬೇರೆ ಸರಕುಗಳನ್ನೂ ಬಿಹಾರ ಯೋಗಶಾಲೆ ಉತ್ಪಾದಿಸುವುದಿಲ್ಲ.

ಅದು ಟೂಥ್ ಪೇಸ್ಟ್, ಹಲ್ಲಿನ ಪುಡಿಯನ್ನು ತಯಾರಿಸುವುದಿಲ್ಲ. 2013ರಲ್ಲೇ ಅದು 50 ವರ್ಷಗಳನ್ನು ಪೂರೈಸಿತು. ಆಗ 56 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇನ್ನು, ರಾಮ್ದೇವ್ ಗಿಂತಲೂ ಬಹಳ ಮುಂಚಿನ ಅಯ್ಯಂಗಾರ್ ಯೋಗದ ಕೊಡುಗೆಗಳನ್ನೂ ಮರೆಯಲು ಸಾಧ್ಯವಿಲ್ಲ. ಯೋಗ ಕುರಿತ ಅಯ್ಯಂಗಾರ್ ಬರವಣಿಗೆ 1966ರಷ್ಟು ಹಿಂದೆ ಶುರುವಾಯಿತು. 1973ರಲ್ಲಿ ಅವರು ಯೋಗ ಸಂಸ್ಥೆಯನ್ನು ಪುಣೆಯಲ್ಲಿ ಸ್ಥಾಪಿಸಿದರು.

ಹೀಗಿರುವಾಗ ರಾಮ್ದೇವ್ ಕಾರಣದಿಂದ ಈ ಜಗತ್ತಿಗೆ ಯೋಗ ಗೊತ್ತಾಯಿತು ಎನ್ನುವುದೇ ಮತ್ತೊಂದು​ ದೊಡ್ಡ ತಪ್ಪು. 2022ರ ಫೆಬ್ರುವರಿ 12ರಂದು ನ್ಯೂಸ್ ಲಾಂಡ್ರಿಯಲ್ಲಿ ರಾಮ್ದೇವ್ ಬಗ್ಗೆ ಒಂದು ಲೇಖನ ಪ್ರಕಟವಾಗಿತ್ತು. ಸಾರ್ವಜನಿಕ ಆರೋಗ್ಯ ಕಾರ್ಯಕರ್ತ ದಿನೇಶ್ ಠಾಕೂರ್ ಮತ್ತು ಪ್ರಶಾಂತ್ ರೆಡ್ಡಿ ಜೊತೆಯಾಗಿ ಆ ಲೇಖನ ಬರೆದಿದ್ದರು.

ಉಲ್ಲಂಘನೆಗೆ ದಂಡ ವಿಧಿಸದೇ ಇದ್ದರೆ ಪತಂಜಲಿ ಜಾಹೀರಾತುಗಳ ಸುನಾಮಿಯೇ ಬರುತ್ತದೆ ಎಂಬ ಅರ್ಥದಲ್ಲಿ ಅದರ ಶೀರ್ಷಿಕೆ ಇತ್ತು. ಆ ವೇಳೆ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಪತಂಜಲಿ ಉತ್ಪನ್ನಗಳ ಜಾಹೀರಾತುಗಳಲ್ಲಿ ಡಯಾಬಿಟೀಸ್, ಕೊಲೆಸ್ಟೊರಾಲ್ ಲಿವರ್ ಊತ ಇತ್ಯಾದಿಗಳನ್ನು ಗುಣಪಡಿಸುವುದಾಗಿ ಹೇಳಿಕೊಳ್ಳಲಾಗುತ್ತಿತ್ತು.

ಇಂಡಿಯನ್ಎಕ್ಸ್ಪ್ರೆಸ್, ದಿ ಹಿಂದೂ ಅಂಥ ಪತ್ರಿಕೆಗಳು ಕೂಡ ಈ ತಪ್ಪು ದಾರಿಗೆಳೆವ, ಹಲವು ಕಾನೂನುಗಳನ್ನು ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದವು ಎಂಬ ಆಘಾತಕಾರಿ ಅಂಶವನ್ನೂ ನ್ಯೂಸ್ ಲಾಂಡ್ರಿ ಲೇಖನದಲ್ಲಿ ಹೇಳಲಾಗಿತ್ತು. ಲೇಖನ ಗಮನ ಸೆಳೆದ ಪ್ರಕಾರ, ಪತಂಜಲಿ ಉಲ್ಲಂಘಿಸಿದ ಕಾನೂನುಗಳಲ್ಲಿ ಹೆಚ್ಚಿನವು ಮೋದಿ ಸರಕಾರ ತಂದಿದ್ದ ಕಾನೂನುಗಳೇ ಆಗಿದ್ದವು.

ಅಂಥ ಜಾಹೀರಾತುಗಳ ಪ್ರಕಟಣೆಗೆ 6 ತಿಂಗಳ ಜೈಲು ಹಾಗೂ 10ರಿಂದ 50 ಲಕ್ಷದವರೆಗೆ ದಂಡ ವಿಧಿಸಬಹುದಿತ್ತು.

ಆದರೆ ಆ ಕಾನೂನುಗಳನ್ನು ಪಾಲಿಸಲೇ ಇಲ್ಲ. ಮತ್ತು ಅಂಥ ಜಾಹೀರಾತುಗಳು ಯಾವ ಅಡೆತಡೆಯಿಲ್ಲದೆ ಪ್ರಕಟವಾಗುತ್ತಿದ್ದವು. ಹೆಚ್ಚಿನ ಕೇಸ್ಗಳಲ್ಲಿ ಮೀಡಿಯಾಗಳನ್ನು ಶಿಕ್ಷಿಸಲಾಗುತ್ತಿರಲಿಲ್ಲ. ಫಾರ್ಮಾ ಕಂಪನಿಗಳಿಗೆ ಮಾತ್ರ ಮಾಮೂಲಿ ರೂಪದ ಶಿಕ್ಷೆ ನೀಡಲಾಗುತ್ತಿತ್ತು.

ಹೀಗೆ ಕಂಪನಿಗಳು ಮತ್ತು ಮೀಡಿಯಾ​ಗಳು ಸೇರಿಕೊಂಡು ಕಾನೂನನ್ನು ಉಲ್ಲಂಘಿಸುವುದು ನಡೆದಿದೆ.

ಇಂಥ ವಿಚಾರಗಳ ಮೇಲೆ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ಕಣ್ಣಿಡಬೇಕೆಂದೂ ಆ ಬರಹ ಹೇಳುತ್ತದೆ.

ಆದರೆ ಈ ಮಂಡಳಿ ಕೂಡ ಮೌನವನ್ನೇ ವಹಿಸಿದೆ.

ಕೋವಿಡ್ ಕಾಲದಲ್ಲಿ ರಾಮ್ದೇವ್ ಮಾಡಿದ್ದು ಏನೇನು ಎಂಬುದು ನಿಮಗೆ ನೆನಪಿರಬಹುದು. ಮತ್ತು ಮೋದಿ ಸರ್ಕಾರ ಹೇಗೆ ರಾಮ್ದೇವ್ ಬೆನ್ನಿ​ಗೆ ನಿಂತಿತ್ತು ಎಂಬುದು ಕೂಡ ನೆನಪಿರಬಹುದು ಪತಂಜಲಿಯ ಕೊರೊನಿಲ್ ಪ್ರಚಾರಕ್ಕೆ ಆಗಿನ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ರಾಮ್ದೇವ್ ಜೊತೆ ಕಾಣಿಸಿಕೊಂಡಿದ್ದರು.

ಅದರ ಬಗ್ಗೆ ಐಎಂಎ​ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಕೋವಿಡ್ ಅನ್ನು ಕೊರೊನಿಲ್ ಗುಣಪಡಿಸುವುದಾದರೆ ಯಾಕೆ ಸರ್ಕಾರ ಕೋವಿಡ್ ಲಸಿಕೆಗಾಗಿ 35 ಸಾವಿರ ಕೋಟಿ ಖರ್ಚು ಮಾಡುತ್ತಿದೆ ಎಂದು ಅದು ಕೇಳಿತ್ತು. ಆ ಔಷಧದ ಬಗ್ಗೆ ಸ್ಪಷ್ಟ ಪುರಾವೆ ಇಲ್ಲದಿರುವಾಗ ಆರೋಗ್ಯ ಮಂತ್ರಿ ಅದನ್ನು ಪ್ರಚಾರ ಮಾಡುವುದು ಸೂಕ್ತವೇ ಎಂದು ಕೇಳಿತ್ತು. ಅದು ಕೋವಿಡ್ಗಾಗಿ WHO ಅಂಗೀಕರಿಸಿದ ಮೊದಲ ಔಷಧ ಎಂದು ರಾಮ್ದೇವ್ ಹೇಳಿದ್ದನ್ನು WHO ಅಲ್ಲಗಳೆದ ಬಳಿಕ ಪತಂಜಲಿ ಅದರ ಪ್ರಚಾರ ನಿಲ್ಲಿಸಿತ್ತು.

ಇಷ್ಟೆಲ್ಲ ಸುಳ್ಳುಗಳನ್ನು ಹೇಳಬಲ್ಲ ವ್ಯಕ್ತಿಗೆ ಅದು ಹೇಗೆ ಸಿಹಿಸಿಹಿಯಾಗಿ ಒಂದು ಎಚ್ಚರಿಕೆ ನೀಡಿ ಸುಮ್ಮನಿರಲಾಗುತ್ತದೆ​ ? 2014ರ ನಂತರದ ರಾಜಕೀಯ ಮತ್ತು ರಾಮ್ದೇವ್ ಉತ್ಪನ್ನಗಳ ಬೆಳವಣಿಗೆ ಇವೆರಡನ್ನೂ ಬೇರೆಬೇರೆಯಾಗಿ ನೋಡಲು ಸಾಧ್ಯವಿಲ್ಲ.

ಮೋದಿ ರಾಜಕಾರಣದ ಜೊತೆಗೆ ಒಂದು ವ್ಯವಸ್ಥಿತ ಹಿಂ​ದುತ್ವ ವ್ಯವಸ್ಥೆ​ ಇಲ್ಲಿ ರೂಪ ಪಡೆದಿದೆ. ಅದರಲ್ಲಿ ಕೆಲವು ವ್ಯಕ್ತಿಗಳು ಕೆಲ ಕಾಲ ಪ್ರಸ್ತುತರಾಗಿರುತ್ತಾರೆ. ನಂತರ ನೇಪಥ್ಯಕ್ಕೆ ಸರಿಯುತ್ತಾರೆ. ಆ ಜಾಗಕ್ಕೆ ಮತ್ತೆ ಯಾರೋ ಬರುತ್ತಾರೆ, ಹೋಗುತ್ತಾರೆ.

ಈಗ ಅದೇ ವ್ಯವಸ್ಥೆಯಲ್ಲಿ ರಾಮ್ದೇವ್ ಕಾರುಬಾರು ಜೋರಾಗಿದೆ.

ಸುಳ್ಳು ಜಾಹೀರಾತಿನ ಆರೋಪ ಹೊತ್ತಿರುವಾಗ, ಅಂಥ ಕಂಪನಿಯ ಮೇಲೆ ಈ.ಡಿ ದಾಳಿ ನಡೆದು, ಸುಳ್ಳು ಜಾಹೀರಾತಿನಿಂದ ಎಷ್ಟು ಹಣ ಗಳಿಸಲಾಗಿದೆ ಎಂಬುದರ ಶೋಧ ನಡಯಬೇಕಿತ್ತಲ್ಲವೆ?. ಆದರೆ ರಾಮದೇವ್ ವಿಚಾರದಲ್ಲಿ ಹಾಗೇನೂ ಆಗಿಲ್ಲ.​ ಆಗೋದೂ ಇಲ್ಲ. ಇಂಥ ರಕ್ಷಣೆ ​ಸಂಘ ಪರಿವಾರದ ಹಿಂದುತ್ವ ವ್ಯವಸ್ಥೆಯೊಳಗೆ ಇದ್ದವರಿಗೆ ಮಾತ್ರ ಸಿಗುತ್ತದೆ.

ರಾಹುಲ್ ಕುರಿತ ಸುದ್ದಿಯನ್ನು ಎಲ್ಲೋ ಒಳಪುಟದ ಮೂಲೆಯಲ್ಲಿ ಪ್ರಕಟಿಸೋ ಪತ್ರಿಕೆಗಳು ಈಗ ನ್ಯಾಷನಲ್ ಹೆರಾಲ್ಡ್ ಆಸ್ತಿ ಜಪ್ತಿ ಕುರಿತ ಸುದ್ದಿಯನ್ನು ಮೊದಲ ಪುಟದಲ್ಲಿ ಹಾಕುತ್ತವೆ. ಚುನಾವಣೆ ಬಂದಾಗ ಇಂಥ ಏನಾದರೂ ಒಂದು ಮುನ್ನೆಲೆಗೆ ಬರುವಂತೆ ಮಾಡುವ ಮೋದಿ ಸರ್ಕಾರದ ರಾಜಕಾರಣದ ಭಾಗ ಮಾತ್ರ ಇದೆಂಬುದು ಗೊತ್ತಾಗದೇ ಇರುವ ವಿಚಾರವಲ್ಲ.

ಇವರಿಗೆ ಬೇಕೆಂದರೆ ಎಷ್ಟು ಹಳೆಯ ಕೇಸನ್ನಾದರೂ ಮುಂದೆ ತಂದಿಡಬಲ್ಲರು.

ಆದರೆ ರಾಮದೇವ್ ಸುಳ್ಳು ಜಾಹೀರಾತಿನ ವಿಚಾರವಾಗಿ ಮಾತ್ರ​ ಯಾವುದೇ ಕ್ರಮವಿಲ್ಲ.​ ಕೇವಲ ಕೆಲಸಕ್ಕೆ ಬಾರದ ಎಚ್ಚರಿಕೆ ಮಾತ್ರ.

ಇನ್ನು ರಿಪೋರ್ಟರ್ಸ್ ಕಲೆಕ್ಟಿವ್​ ತನಿಖಾ ವರದಿ. ರಾಮದೇವ್ ಅನ್ನದಾತನಾಗಿರುವ, ಜಾಹೀರಾತು ನೀಡುವ ಗೋದಿ ಮೀಡಿಯಾಗಳಲ್ಲಿ ಇದು ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ. ಶ್ರೀಗಿರೀಶ್ ​ಜಾಲಿಹಾಳ್ ಮತ್ತು ತಪಸ್ಯಾ ಅವರ ವರದಿ​ ನಿನ್ನೆ ನವೆಂಬರ್ 22​ ರಂದು ಪ್ರಕಟವಾಗಿ​ದೆ.

ಫರೀದಾಬಾದ್ನ ಮಂಗರ್ ಗ್ರಾಮದಿಂದ ಮಾಡಲಾಗಿರುವ ಈ ವರದಿಯಲ್ಲಿ ಅಲ್ಲಿ ರಾಮ್ದೇವ್​ ಗೆ ಸೇರಿರುವ ಕಂಪನಿಗಳು​ ಭಾರೀ ಪ್ರಮಾಣದಲ್ಲಿ ಭೂಮಿ ಖರೀದಿಸಿರುವ ಆರೋಪದ ಬಗ್ಗೆ ಹೇಳಲಾಗಿದೆ. ​ಇದು ದೆಹಲಿಯ ಪಕ್ಕದಲ್ಲೇ ಇರುವ ರಿಯಲ್ ಎಸ್ಟೇಟ್ ಕಂಪನಿಗಳಿಂದ ಭಾರೀ ಬೇಡಿಕೆ ಇರುವ ಪ್ರದೇಶ.

​ಆ ಪ್ರದೇಶದಲ್ಲಿ ಈ ರಾಮ್ದೇವ್ ದೊಡ್ಡ ರಿಯಲ್ ಎಸ್ಟೇಟ್ ಕುಳ ಎಂದೇ ಜನರಿಂದ ಗುರುತಿಸಲ್ಪಟ್ಟಿದ್ದಾರೆ.

ಪತಂಜಲಿ ಗ್ರೂಪ್ಗೆ ಸಂಬಂಧಿಸಿದ ವಿವಿಧ ಶೆಲ್ ಕಂಪನಿಗಳು​ ಅಲ್ಲಿ ಭೂಮಿ ಖರೀದಿಸಿವೆ ಎಂದು ಈ ವರದಿ ಹೇಳುತ್ತದೆ.

ಇದು ರಾಮದೇವ್ ಕಿರಿಯ ಸಹೋದರ ನಡೆಸುವ ಕಂಪನಿ ಎನ್ನಲಾಗಿದೆ.

​ಈ ಶೆಲ್ ಕಂಪೆನಿಗಳಲ್ಲಿ ಬೇರೆ ಯಾವುದೇ ಚಟುವಟಿಕೆ ನಡೆಯದೆ ಕೇವಲ ಕಪ್ಪು ಹಣದ ಮೂಲಕ ಭೂಮಿ ಖರೀದಿಸಲೆಂದೇ ಇವುಗಳನ್ನು ಸೃಷ್ಟಿಸಿರುವುದು ಕಂಡು ಬಂದಿದೆ. ಹೀಗೆ ಖರೀದಿಸಿದ ಭೂಮಿ ಮಾರಾಟ ಮಾಡಿದಾಗ ಬಂದ ದುಡ್ಡು ಬೇರೆ ಬೇರೆ ಮಾರ್ಗದಲ್ಲಿ ಮತ್ತೆ ಪತಂಜಲಿ ಅಧೀನದ ಕಂಪೆನಿಗಳಿಗೇ ತಲುಪಿದೆ.

15 ವರ್ಷಗಳ ಭೂದಾಖಲೆಗಳನ್ನು, ಕಾರ್ಪೊರೇಟ್ ದಾಖಲೆಗಳನ್ನೂ ರಿಪೋರ್ಟರ್ಸ್ ಕಲೆಕ್ಟಿವ್ ಪರಿಶೀಲಿಸಿದೆ.

ಪತಂಜಲಿಯ ಪ್ರತಿಕ್ರಿಯೆಯನ್ನೂ ಈ ವರದಿ ಪಡೆದಿದೆ.

ಎಲ್ಲವೂ ಕಾನೂನು ಪ್ರಕಾರ ನಡೆದಿದೆ ಎಂದು ಅದು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ಕಪ್ಪು ಹಣದಿಂದ ಭೂಮಿ ಖರೀದಿಸುವ ಶೆಲ್ ಕಂಪೆನಿಗಳಿಗೂ ಆ ಭೂಮಿಯ ಲಾಭವನ್ನು ಕೊನೆಗೆ ಪಡೆಯುವ ಪತಂಜಲಿ ಸಾಮ್ರಾಜ್ಯಕ್ಕೂ ನಂಟು ಇರುವುದು ರಿಪೋರ್ಟರ್ಸ್ ಕಲೆಕ್ಟಿವ್ ತನಿಖೆಯಲ್ಲಿ ಬಯಲಾಗಿದೆ. ಹಾಗಾದರೆ​ ಕಪ್ಪು ಹಣದ ವಿರುದ್ಧ ಮಾತಾಡಿ ಮಾತಾಡಿ ರಾಮ್ದೇವ್ ಅದೇ ಕಪ್ಪು ಹಣದ ಮೂಲಕ ಭೂಮಿ ಖರೀದಿಸಿದ್ದು ಬಯಲಾಗಿದೆ. ಈ ಗಂಭೀರ ಆರೋಪದ ತನಿಖೆ​ ಯಾರು ಮಾಡಬೇಕು?

ಈ.ಡಿ ಮಾಡುತ್ತದೆಯೆ?

ಶೆಲ್ ಕಂಪನಿಗಳನ್ನು ಮುಚ್ಚುತ್ತೇನೆ ಎಂದು ಒಂದು ಕಾಲದಲ್ಲಿ ಅಬ್ಬರಿಸಿದ್ದ ಮೋದಿ ಸರ್ಕಾರವೇ ಮೊನ್ನೆ,

ಒಂದು ಲಕ್ಷಕ್ಕೂ ಹೆಚ್ಚು ಶೆಲ್ ಕಂಪನಿಗಳು ವಾರ್ಷಿಕ ​ದಾಖಲೆಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ಹೇಳಿರುವುದನ್ನೂ ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಉಲ್ಲೇಖಿಸಿದೆ.

ಈಗ ಈ.ಡಿ ಏನು ಮಾಡುತ್ತದೆ?. ನಿಮಗೆ ಚೆನ್ನಾಗಿ ನೆನಪಿರಬಹುದು. ಬಿಜೆಪಿ ಹಾಗು ಮೋದಿಜಿಯನ್ನು ಅಧಿಕಾರಕ್ಕೆ ತರಲು ನಡೆದ ಅತ್ಯಂತ ವ್ಯವಸ್ಥಿತ ಅಪಪ್ರಚಾರ ಅಭಿಯಾನದಲ್ಲಿ ಅಣ್ಣಾ ಹಝಾರೆ ಜೊತೆ ಮುಖ್ಯ ಭಾಗವಾಗಿದ್ದರು ಈ ರಾಮ್ದೇವ್.

ಆಗ ಈ ರಾಮ್ದೇವ್ ಕಪ್ಪು ಹಣ ದೇಶಕ್ಕೆ ತರಬೇಕು ಎಂದು ಹೋದಲ್ಲಿ ಬಂದಲ್ಲಿ ಭಾಷಣ ಮಾಡಿದ್ದೇ ಮಾಡಿದ್ದು.

ಅದನ್ನು ಟಿವಿ ಚಾನಲ್ ಗಳು ಪ್ರಸಾರ ಮಾಡಿದ್ದೇ ಮಾಡಿದ್ದು.

ಈ​ಗ ಅದೇ ರಾಮ್ದೇವ್ ಅದೇ ಶೆಲ್ ಕಂಪನಿಗಳನ್ನು ಬಳಸಿ ಕಪ್ಪು ಹಣ​ದ​ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡಿರುವ ಆರೋಪ ಬಂದಿದೆ. ಈಗಲೂ ರಾಮ್ದೇವ್ ಕಪ್ಪು ಹಣದ ವಿರುದ್ಧ ಆಂದೋಲನ ಮಾಡಬೇಕಲ್ಲವೆ?. ಎಂಥೆಂಥ ಸೋಗಲಾಡಿಗಳು ಇಲ್ಲಿ ತುಂಬಿಹೋಗಿದ್ದಾರಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!