×
Ad

2027ರ ಏಕದಿನ ವಿಶ್ವಕಪ್ | ಹಿರಿಯ ಆಟಗಾರರಿಗೆ ಮಣೆ ಹಾಕಲು ಮುಂದಾದ ಕ್ರಿಕೆಟ್ ಆಸ್ಟ್ರೇಲಿಯ

Update: 2026-05-25 19:58 IST

Photo Credit : ICC

ಮೆಲ್ಬರ್ನ್, ಮೇ 25: 2027ರ ಏಕದಿನ ವಿಶ್ವಕಪ್‌ಗಿಂತ ಮೊದಲು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜರ ಏಕದಿನ ಕ್ರಿಕೆಟ್ ಭವಿಷ್ಯದ ಸುತ್ತ ಅನಿಶ್ಚಿತತೆ ಆವರಿಸಿರುವ ನಡುವೆ ಕ್ರಿಕೆಟ್ ಆಸ್ಟ್ರೇಲಿಯವು ಸೋಮವಾರ ತನ್ನ ಹಿರಿಯ ಸೂಪರ್‌ಸ್ಟಾರ್ ಆಟಗಾರರಿಗೆ ಮಣೆ ಹಾಕುವ ನಿರ್ಧಾರ ಪ್ರಕಟಿಸಿದೆ.

ದಕ್ಷಿಣ ಆಫ್ರಿಕಾ, ಝಿಂಬಾಬ್ಬೆ ಹಾಗೂ ನಮೀಬಿಯಾದಲ್ಲಿ ಮುಂದಿನ ವರ್ಷ ತನ್ನ ಏಕದಿನ ವಿಶ್ವಕಪ್ ಟ್ರೋಫಿಯನ್ನು ಉಳಿಸಿಕೊಳ್ಳುವತ್ತ ಚಿತ್ತಹರಿಸಿರುವ ಆಸ್ಟ್ರೇಲಿಯವು ತನ್ನ ಮೂವರು ಹಿರಿಯ ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸಾರ್ಕ್ಟ್ ಹಾಗೂ ಜೋಶ್ ಹೇಝಲ್‌ವುಡ್ ಬೆಂಬಲಕ್ಕೆ ನಿಂತಿದೆ. ಈ ಮೂವರು ಆಟಗಾರರು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಮೂವರು ಹಿರಿಯ ಆಟಗಾರರಿಗೆ 2027ರ ಅಕ್ಟೋಬರ್-ನವೆಂಬರ್‌ನಲ್ಲಿ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡುವ ಬಗ್ಗೆ ಈ ತನಕ ಯಾವುದೇ ಗ್ಯಾರಂಟಿ ಲಭಿಸಿಲ್ಲ.

ರೋಹಿತ್ ಹಾಗೂ ಕೊಹ್ಲಿ ಈಗಾಗಲೇ ಟೆಸ್ಟ್ ಹಾಗೂ ಟಿ-20 ಪಂದ್ಯಗಳಿಂದ ನಿವೃತ್ತಿಯಾಗಿದ್ದು, ಭಾರತದ ಪರ ಏಕದಿನ ಮಾದರಿಯ ಪಂದ್ಯದಲ್ಲಿ ಮಾತ್ರ ಲಭ್ಯವಿದ್ದಾರೆ. ಕೊಹ್ಲಿ ಫಿಟ್ನೆಸ್ ಹಾಗೂ ಬ್ಯಾಟಿಂಗ್ ಸ್ಥಿರತೆ ಅವರ ಕಡೆಗಣಿಸದಂತೆ ಮಾಡಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಫಿಟ್ನೆಸ್ ಕಳವಳಕಾರಿಯಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ರ ಭವಿಷ್ಯದ ಬಗ್ಗೆ ಊಹಾಪೋಹ ಹೆಚ್ಚಾಗಿದೆ.

ಕೊಹ್ಲಿ ಹಾಗೂ ರೋಹಿತ್‌ರನ್ನು ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ. ರೋಹಿತ್ ಲಭ್ಯತೆಯು ಫಿಟ್ನೆಸ್‌ನಲ್ಲಿ ಪಾಸಾಗುವುದನ್ನು ಅವಲಂಬಿಸಿದೆ.

ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿ ಹಾಗೂ ಏಕೈಕ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಜಡೇಜರ ಭವಿಷ್ಯವು ಅಸ್ಥಿರವಾಗಿರುವಂತೆ ಕಾಣುತ್ತಿದೆ.

ಮುಂಬರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿಗಳಿಂದ ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡಲಾಗುವುದಿಲ್ಲ ಎಂದು ಆಸ್ಟ್ರೇಲಿಯದ ಕೋಚ್ ಆಂಡ್ರೆ ಮೆಕ್‌ಡೊನಾಲ್ಡ್ ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯ ತೀವ್ರ ಸವಾಲನ್ನು ಎದುರಿಸುತ್ತಿದ್ದು, 2026ರ ಆಗಸ್ಟ್‌ನಿಂದ 2027ರ ವಿಶ್ವಕಪ್ ನಡುವೆ ಭಾರತ , ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಸರಣಿ ಸಹಿತ ಸುಮಾರು 20 ಟೆಸ್ಟ್ ಪಂದ್ಯಗಳನ್ನಾಡಲಿವೆ. ವಿಶ್ವಕಪ್ ವೇಳೆಗೆ ಸ್ಟಾರ್ಕ್ ಹಾಗೂ ಹೇಝಲ್‌ವುಡ್‌ಗೆ ಕ್ರಮವಾಗಿ 38 ಹಾಗೂ 37 ವರ್ಷ ವಯಸ್ಸಾಗಲಿದೆ. ಕಮಿನ್ಸ್‌ಗೆ 34ನೇ ವಯಸ್ಸಾಗಲಿದೆ.

ಆಸ್ಟ್ರೇಲಿಯದ ವೇಗದ ಬೌಲಿಂಗ್ ವಿಭಾಗದಲ್ಲಿ ಫಿಟ್ನೆಸ್ ದೊಡ್ಡ ತಲೆನೋವಾಗಿದೆ. ಕಳೆದ ಕೆಲವು ವರ್ಷಗಳಿಂದ ಹೇಝಲ್‌ವುಡ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಕಮಿನ್ಸ್ ಇತ್ತೀಚೆಗೆ ಬೆನ್ನುನೋವಿನಿಂದ ಬಳಲಿದ್ದರು. ಸ್ವತಃ ಸ್ಟಾರ್ಕ್ ಭುಜನೋವು ಹಾಗೂ ಮಣಿಕಟ್ಟು ಗಾಯವನ್ನು ಎದುರಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಭಾರತವು ಹೆಚ್ಚಿನ ಅನಿಶ್ಚಿತತೆಯ ಹಂತ ಪ್ರವೇಶಿಸಿದೆ. ಟೆಸ್ಟ್ ಹಾಗೂ ಟಿ-20 ನಿವೃತ್ತಿಯ ನಂತರ ಪರಿವರ್ತನೆ ಯುಗ ಆರಂಭವಾಗಿದೆ. ಚಾಂಪಿಯನ್ ಆಟಗಾರರನ್ನು ಬೆಂಬಲಿಸುವ ಜೊತೆಗೆ ಭವಿಷ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸುವ ಕಠಿಣ ಪರಿಸ್ಥಿತಿಯನ್ನು ಆಯ್ಕೆಗಾರರು ಎದುರಿಸುತ್ತಿದ್ದಾರೆ.

ಪ್ರಮುಖವಾಗಿ ಅಫ್ಘಾನಿಸ್ತಾನ ಸರಣಿ ಹಾಗೂ ಆ ನಂತರದ ಏಕದಿನ ಸರಣಿಯು ರೋಹಿತ್, ಕೊಹ್ಲಿ ಹಾಗೂ ಜಡೇಜ 2027ರ ವಿಶ್ವಕಪ್‌ನಲ್ಲಿ ಭಾರತದ ಯೋಜನೆಯ ಭಾಗವಾಗಲಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News