ನಾಲ್ಕನೇ ಟಿ20 | ಗ್ಲೆನ್ ಫಿಲಿಪ್ಸ್ ಬಿರುಸಿನ ಶತಕ, ಜೇಕಬ್ ಡಫಿ ಮಾರಕ ಬೌಲಿಂಗ್: ನ್ಯೂಝಿಲ್ಯಾಂಡ್ಗೆ 87 ರನ್ ಗಳ ಜಯ
ಗ್ಲೆನ್ ಫಿಲಿಪ್ಸ್ | Photo Credit : BCCI
ಆಕ್ಲ್ಯಾಂಡ್: ಗ್ಲೆನ್ ಫಿಲಿಪ್ಸ್ ಅವರ ಶತಕ ಮತ್ತು ಜೇಕಬ್ ಡಫಿ ಅವರ ನಾಲ್ಕು ವಿಕೆಟ್ಗಳ ಗೊಂಚಲಿನ ಬಲದಿಂದ ನ್ಯೂಝಿಲ್ಯಾಂಡ್ ತಂಡವು ಶುಕ್ರವಾರ ಆಕ್ಲ್ಯಾಂಡ್ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತವನ್ನು 87 ರನ್ಗಳ ಭರ್ಜರಿ ಅಂತರದಿಂದ ಸೋಲಿಸಿದೆ.
ಇದರೊಂದಿಗೆ ಆತಿಥೇಯ ನ್ಯೂಝಿಲ್ಯಾಂಡ್ ಪ್ರಸ್ತುತ ಟಿ20 ಸರಣಿಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿತು. ಅದು ಈಗ ಸರಣಿಯಲ್ಲಿ 1-3 ಅಂತರದ ಹಿನ್ನಡೆಯಲ್ಲಿದೆ. ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ರವಿವಾರ ಹ್ಯಾಮಿಲ್ಟನ್ನ ಸೆಡಾನ್ ಪಾರ್ಕ್ನಲ್ಲಿ ನಡೆಯಲಿದೆ.
ಟಾಸ್ ಗೆದ್ದ ಭಾರತ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿತು.
ಗ್ಲೆನ್ ಫಿಲಿಪ್ಸ್ರ ಭರ್ಜರಿ ಶತಕವು ನ್ಯೂಝಿಲ್ಯಾಂಡ್ ಇನಿಂಗ್ಸ್ಗೆ ಭದ್ರ ಬುನಾದಿಯನ್ನು ಹಾಕಿತು. ಅವರು 49 ಎಸೆತಗಳಲ್ಲಿ 107 ರನ್ಗಳನ್ನು ಸಿಡಿಸಿದರು.
ಇದರೊಂದಿಗೆ, ಕಾಲಿನ್ ಮನ್ರೋ ಬಳಿಕ, ಭಾರತದ ವಿರುದ್ಧ ಟಿ20 ಶತಕ ಸಿಡಿಸಿದ ಎರಡನೇ ನ್ಯೂಝಿಲ್ಯಾಂಡ್ ಬ್ಯಾಟರ್ ಫಿಲಿಪ್ಸ್ ಆದರು.
ಕೇವಲ 25 ಎಸೆತಗಳಲ್ಲಿ 65 ರನ್ಗಳನ್ನು ಸಿಡಿಸಿದ ಮೈಕಲ್ ಬ್ರೇಸ್ವೆಲ್ ಅವರು ಫಿಲಿಪ್ಸ್ಗೆ ಉತ್ತಮ ಬೆಂಬಲ ನೀಡಿದರು. ಈ ಜೋಡಿಯು ಮಧ್ಯಮ ಓವರ್ಗಳಲ್ಲಿ ಭಾರತದ ಬೌಲಿಂಗ್ ಪಡೆಯನ್ನು ಕಂಗೆಡಿಸಿತು.
ಫಿಲಿಪ್ಸ್ ಮತ್ತು ಬ್ರೇಸ್ವೆಲ್ ಅವರ ಆಟದ ನೆರವಿನಿಂದ ನ್ಯೂಜಿಲ್ಯಾಂಡ್ 7 ವಿಕೆಟ್ಗಳ ನಷ್ಟಕ್ಕೆ 259 ರನ್ ಕಲೆಹಾಕಿತು.
ಗೆಲುವಿಗೆ 260 ರನ್ಗಳ ಗುರಿ ಪಡೆದ ಭಾರತಕ್ಕೆ ಆಘಾತ ನೀಡಿದವರು ಕಿವೀಸ್ ಬೌಲರ್ ಜೇಕಬ್ ಡಫಿ. ಅವರು ತನ್ನ ಮೊದಲ ಓವರ್ನಲ್ಲೇ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರ ವಿಕೆಟ್ಗಳನ್ನು ಉಳಿಸಿದರು.
ಅಭಿಷೇಕ್ ಶರ್ಮಾ (15 ಎಸೆತಗಳಲ್ಲಿ 27 ರನ್) ತನ್ನ ಇನಿಂಗ್ಸನ್ನು ಉತ್ತಮವಾಗಿ ಆರಂಭಿಸಿದರಾದರೂ ಅದನ್ನು ದೊಡ್ಡ ಮೊತ್ತಕ್ಕೆ ಪರಿವರ್ತಿಸುವಲ್ಲಿ ವಿಫಲವಾದರು. ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆಯಲಿಲ್ಲ.
ಹೆಚ್ಚುತ್ತಿದ್ದ ರನ್ ರೇಟ್ನ ಒತ್ತಡ ನಿಭಾಯಿಸಲು ಹೋಗಿ ಉಳಿದ ಬ್ಯಾಟರ್ಗಳು ಬೇಜವಾಬ್ದಾರಿಯ ಹೊಡೆತಗಳಿಗೆ ಕೈಹಾಕಿ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಡಫಿ 23 ರನ್ಗಳಿಗೆ 4 ವಿಕೆಟ್ ಪಡೆದರೆ, ಸ್ಯಾಂಟ್ನರ್ (2/24) ತನ್ನ ನಾಲ್ಕು ಓವರ್ಗಳಲ್ಲಿ ಅತ್ಯಂತ ನಿಯಂತ್ರಿತ ಬೌಲಿಂಗ್ ಪ್ರದರ್ಶಿಸಿ ಭಾರತಕ್ಕೆ ಪ್ರತಿಹೋರಾಟದ ಯಾವುದೇ ಅವಕಾಶ ನೀಡಲಿಲ್ಲ.