ನೀಲಕಂಠ ಶರ್ಮಾ | Photo Credit : PTI 

ಜಲಂಧರ್, ಅ.28: ಈಗ ನಡೆಯುತ್ತಿರುವ ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಅಭಿಯಾನ ಮುಗಿದ ಬಳಿಕ ಅಂತರ್ರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳುವುದಾಗಿ ಸ್ಟಾರ್ ಮಿಡ್ಫೀಲ್ಡರ್ ನೀಲಕಂಠ ಶರ್ಮಾ ಮಂಗಳವಾರ ಘೋಷಿಸಿದರು.

ಭಾರತೀಯ ಹಾಕಿಗೆ ಮಹತ್ವದ ಕೊಡುಗೆ ನೀಡಿರುವ ಹಿರಿಯ ಆಟಗಾರ ನೀಲಕಂಠ ಶರ್ಮಾ ಅವರಿಗೆ ಹಾಕಿ ಇಂಡಿಯಾ ಅಭಿನಂದನೆ ಸಲ್ಲಿಸಿದೆ.

ಮಣಿಪುರ ಮೂಲದ ನೀಲಕಂಠ ಮಂಗಳವಾರ ಜಲಂಧರ್ನ ಒಲಿಂಪಿಯನ್ ಸುರ್ಜಿತ್ ಸಿಂಗ್ ಹಾಕಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಆಡಿದ ಮೊದಲ ಪಂದ್ಯದಲ್ಲಿ ತಮ್ಮ 163ನೇ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದರು. ಈ ಪಂದ್ಯವನ್ನು ಭಾರತ 13–0 ಅಂತರದಿಂದ ಗೆದ್ದಿದ್ದು, ನೀಲಕಂಠ ಒಂದು ಗೋಲು ಗಳಿಸಿದರು. ಇದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅವರು ಗಳಿಸಿದ 20ನೇ ಗೋಲಾಗಿದೆ.

31 ವರ್ಷದ ಮಿಡ್ಫೀಲ್ಡರ್ ನೀಲಕಂಠ, ನಿವೃತ್ತಿ ಘೋಷಿಸಿರುವ ಆಧುನಿಕ ಯುಗದ ಖ್ಯಾತ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದ ಅವರು, ಸತತ ಎರಡು ಬಾರಿ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ ತಂಡದ ಸದಸ್ಯರಾಗಿದ್ದರು.

2015ರ ಜೂನಿಯರ್ ಏಷ್ಯಾಕಪ್ ಗೆಲ್ಲುವ ಮೂಲಕ ಜೂನಿಯರ್ ಹಾಕಿಯಲ್ಲಿ ಬೆಳಕಿಗೆ ಬಂದ ನೀಲಕಂಠ, 2016ರಲ್ಲಿ ಲಖನೌದಲ್ಲಿ ನಡೆದ FIH ಪುರುಷರ ಜೂನಿಯರ್ ವಿಶ್ವಕಪ್ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2017ರಲ್ಲಿ ಬೆಲ್ಜಿಯಂ ವಿರುದ್ಧ ಹಿರಿಯರ ಹಾಕಿ ತಂಡದ ಪರ ಚೊಚ್ಚಲ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಮಿಡ್ಫೀಲ್ಡ್ನಲ್ಲಿ ತಕ್ಷಣವೇ ತಮ್ಮ ಛಾಪು ಮೂಡಿಸಿದ್ದರು. ಪ್ರಮುಖ ಅಂತರ್ರಾಷ್ಟ್ರೀಯ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅವರು, ಹಲವು ಸ್ಮರಣೀಯ ಸಾಧನೆಗಳಿಗೆ ಕೊಡುಗೆ ನೀಡಿದ್ದರು.

2018ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ನೀಲಕಂಠ, 2019ರಲ್ಲಿ ಭುವನೇಶ್ವರದಲ್ಲಿ ನಡೆದ FIH ಪುರುಷರ ಸೀರಿಸ್ ಫೈನಲ್ಸ್ ಗೆದ್ದ ತಂಡದಲ್ಲಿದ್ದರು.

ಟೋಕಿಯೊ 2020ರ ಒಲಿಂಪಿಕ್ಸ್ನಲ್ಲಿ ಅವರ ವೃತ್ತಿಜೀವನದ ಸ್ಮರಣೀಯ ಕ್ಷಣ ದಾಖಲಾಗಿತ್ತು. 41 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಹಾಕಿ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದರು. 2018, 2023 ಹಾಗೂ 2026ರ ಪುರುಷರ ಹಾಕಿ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

2022ರಲ್ಲಿ ಹಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡದ ಪರ ತಮ್ಮ ಮೊದಲ ಚಿನ್ನದ ಪದಕ ಗೆದ್ದಿದ್ದರು. ಬಳಿಕ ಈ ವರ್ಷ ಐಚಿ–ನಗೋಯದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲೂ ಚಿನ್ನದ ಪದಕ ಜಯಿಸಿದ್ದರು. 2023 ಹಾಗೂ 2024ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor