ಎಲಿನಾ ರಿಬಾಕಿನಾ | Photo Credit : PTI 

ಪ್ಯಾರಿಸ್: ಎಲಿನಾ ರೈಬಾಕಿನಾ 2026ರ ತಮ್ಮ ಯಶಸ್ವಿ ಋತುವಿನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ತನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ವರ್ಷಾಂತ್ಯದಲ್ಲಿ ವಿಶ್ವದ ನಂ.1 ರ‍್ಯಾಂಕಿಂಗ್‌ ಪಡೆದಿದ್ದಾರೆ.

ಪಾನ್ ಪೆಸಿಫಿಕ್ ಓಪನ್‌ನಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಯುಲಿಯಾ ಪುಟಿನ್‌ಸೇವಾರನ್ನು ಮಣಿಸಿದ ನಂತರ ಈ ಸಾಧನೆ ಮಾಡಿದರು.

ಟೋಕಿಯೊದಲ್ಲಿ ನಡೆದ ಡಬ್ಲ್ಯುಟಿಎ 500 ಟೂರ್ನಮೆಂಟ್‌ನಲ್ಲಿ ಪುಟಿನ್‌ಸೇವಾರನ್ನು 6-2, 6-3 ಸೆಟ್‌ಗಳ ಅಂತರದಿಂದ ಮಣಿಸಿದ ಕಝಕ್‌ಸ್ತಾನದ ರಿಬಾಕಿನಾ ವರ್ಷದ ಕೊನೆಯ ಟೂರ್ನಿ ಡಬ್ಲ್ಯುಟಿಎ ಫೈನಲ್ಸ್‌ಗಿಂತ ಒಂದು ವಾರಕ್ಕೂ ಅಧಿಕ ಸಮಯಕ್ಕಿಂತ ಮೊದಲೇ ಅಗ್ರ ಸ್ಥಾನ ಪಡೆದಿದ್ದಾರೆ.

ವಿಶ್ವದ ನಂ.2ನೇ ಆಟಗಾರ್ತಿ ಅರ್ಯನಾ ಸಬಲೆಂಕಾ ರ್ಯಾಂಕಿಂಗ್‌ನಲ್ಲಿ ತನ್ನನ್ನು ಹಿಂದಿಕ್ಕದೇ ಇರುವುದನ್ನು ದೃಢಪಡಿಸಲು ರಿಬಾಕಿನಾಗೆ ಈ ವರ್ಷ ಕೇವಲ ಒಂದು ಪಂದ್ಯದ ಗೆಲುವಿನ ಅಗತ್ಯವಿತ್ತು.

ಡಬ್ಲ್ಯುಟಿಎ ಇತಿಹಾಸದಲ್ಲಿ ರಿಬಾಕಿನಾ ಅವರು ವರ್ಷಾಂತ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಎನಿಸಿಕೊಂಡ 17ನೇ ಆಟಗಾರ್ತಿಯಾಗಿದ್ದಾರೆ. ಸ್ಟೆಫಿ ಗ್ರಾಫ್, ಸೆರೆನಾ ವಿಲಿಯಮ್ಸ್, ಮಾರ್ಟಿನಾ ನವ್ರಾಟಿಲೋವಾ, ಕ್ರಿಸ್ ಎವರ್ಟ್, ಜಸ್ಟಿನ್ ಹೆನಿನ್, ಇಗಾ ಸ್ವಿಯಾಟೆಕ್ ಹಾಗೂ ಸಬಲೆಂಕಾ ಅವರನ್ನೊಳಗೊಂಡ ಚಾಂಪಿಯನ್‌ಗಳ ಎಲೈಟ್ ಗ್ರೂಪ್‌ನಲ್ಲಿ ರಿಬಾಕಿನಾ ಸ್ಥಾನ ಪಡೆದಿದ್ದಾರೆ.

ಸೆಪ್ಟಂಬರ್‌ನಲ್ಲಿ ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಆದ ನಂತರ ರಿಬಾಕಿನಾ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದರು.

27ರ ಹರೆಯದ ರಿಬಾಕಿನಾ ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು. ಇದರೊಂದಿಗೆ ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. 2022ರಲ್ಲಿ ವಿಂಬಲ್ಡನ್‌ನಲ್ಲಿ ಟ್ರೋಫಿ ಜಯಿಸಿದ್ದರು.

ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲದೆ ಸ್ಟಟ್‌ಗರ್ಟ್ ಹಾಗೂ ನಿಂಗ್ಬೊ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಕಳೆದ ವಾರ ವಿಶ್ವದ ನಂ.1 ಆಟಗಾರ್ತಿಯಾದ ನಂತರ ಮೊದಲ ಬಾರಿ ನಿಂಗ್ಬೊದಲ್ಲಿ ಪ್ರಶಸ್ತಿ ಜಯಿಸಿದ್ದರು.

ರಿಬಾಕಿನಾ ಈ ವರ್ಷ ಹಿನ್ನಡೆಯನ್ನೂ ಕಂಡಿದ್ದರು. ಯುಎಸ್ ಓಪನ್‌ನಲ್ಲಿ ಜಯಶಾಲಿಯಾದ ನಂತರ ರಿಬಾಕಿನಾ ಬೀಜಿಂಗ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದರು. ಕಾಲು ನೋವಿನಿಂದಾಗಿ ವುಹಾನ್ ಓಪನ್‌ನಿಂದ ವಂಚಿತರಾಗಿದ್ದರು. ನಿಂಗ್ಬೊದಲ್ಲಿ ಗೆಲುವಿನ ಹಾದಿಗೆ ಮರಳಿದ ರಿಬಾಕಿನಾ ಟೋಕಿಯೊದಲ್ಲಿ ತನ್ನ ಯಶಸ್ಸಿನ ಓಟ ಮುಂದುವರಿಸಿದ್ದಾರೆ.

ರಿಬಾಕಿನಾ ಮುಂದಿನ ಸುತ್ತಿನಲ್ಲಿ ಕೆನಡಾದ ಲೆಲಾಹ್ ಫೆರ್ನಾಂಡಿಸ್‌ರನ್ನು ಎದುರಿಸಲಿದ್ದಾರೆ. ಈ ಇಬ್ಬರು ಆಟಗಾರ್ತಿಯರು ನಿಂಗ್ಬೊ ಓಪನ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು.

ಫೆರ್ನಾಂಡಿಸ್ ಅವರು ಎಲಿಸ್ ಮಾರ್ಟೆನ್ಸ್‌ರನ್ನು 6-2, 7-6(8)ಸೆಟ್‌ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor