18ರ ಹರೆಯದಲ್ಲಿಯೇ ವಿಶ್ವ ಪದಕದ ಸಾಧನೆ ಮಾಡಿದ ಕುಸ್ತಿಪಟು ಕಾಜಲ್ ಧೋಚಕ್
ಕಾಜಲ್ (Photo: WFI)
18 ವರ್ಷದ ಕಾಜಲ್ ಈಗಾಗಲೇ ಸತತವಾಗಿ ಎರಡು ಬಾರಿ ‘20ರೊಳಗಿನವರ’ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಬುಧವಾರ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ 76 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಭಾರತೀಯ ಮಹಿಳಾ ಕುಸ್ತಿ ತಂಡದ ಮುಖ್ಯ ತರಬೇತುದಾರ ವೀರೇಂದ್ರ ದಹಿಯಾ ಅವರು ಕಾಜಲ್ ಧೋಚಕ್ ಬಗ್ಗೆ ಮಾತನಾಡುವಾಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಹೋಲಿಸುತ್ತಾರೆ. ಇದೇನು ಸಾಧನೆಗಳು ಅಥವಾ ವೃತ್ತಿಜೀವನಕ್ಕೆ ಸಂಬಂಧಿಸಿದ ಹೋಲಿಕೆಯಲ್ಲ. ಬದಲಾಗಿ ಸಾಧನೆಯ ಅತೀವ ಹಸಿವೆಯ ಹೋಲಿಕೆಯಾಗಿದೆ. ಸಚಿನ್ ತೆಂಡೂಲ್ಕರ್ ತಮ್ಮ 16ನೇ ವಯಸ್ಸಿನಲ್ಲಿ ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದೇಕೆ? ಅವರಲ್ಲಿ ಸಾಧಿಸುವ ಹಸಿವಿತ್ತು. ಕಾಜಲ್ ಕೂಡ ನಿರಂತರವಾಗಿ ಸುಧಾರಿಸಿಕೊಳ್ಳಬೇಕು ಎನ್ನುವ ಅಂತಹುದೇ ತೀವ್ರ ಬಯಕೆಯನ್ನು ರೂಢಿಸಿಕೊಂಡಿದ್ದಾರೆ.
18 ವರ್ಷದ ಕಾಜಲ್ ಈಗಾಗಲೇ ಸತತವಾಗಿ ಎರಡು ಬಾರಿ ‘ಅಂಡರ್-20’ ವಿಶ್ವ ಚಾಂಪಿಯನ್ ಆಗಿದ್ದಾರೆ. ಬುಧವಾರ ನಡೆದ ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ಮಹಿಳೆಯರ 76 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಹೆವಿವೇಯ್ಟ್ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಿರಿಯರ ವಿಭಾಗದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮೊದಲ ಭಾಗವಹಿಸುವಿಕೆಯಲ್ಲೇ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ ಅವರ ಮಹತ್ವಾಕಾಂಕ್ಷೆ 2028ರ ಒಲಿಂಪಿಕ್ಸ್. ಒಲಿಂಪಿಕ್ಸ್ಗೆ ಇನ್ನೂ ವರ್ಷಗಳು ಇವೆಯಾದರೂ ಪ್ರತಿದಿನ ತರಬೇತಿಯಲ್ಲಿ ಅವರು ಇಟ್ಟುಕೊಂಡಿರುವ ಗುರಿಯನ್ನು ನೆನಪಿಸುತ್ತದೆ.
ಸೋನಿಪತ್ ನ ಕುಲ್ದೀಪ್ ಮಲಿಕ್ ಅಕಾಡೆಮಿಯಲ್ಲಿ ಕಾಜಲ್ಗೆ ತರಬೇತಿ ನೀಡುವ ಅಜಯ್ ಮಲಿಕ್ ಪ್ರಕಾರ, “ಸದ್ಯಕ್ಕೆ ಕಾಜಲ್ ಗುರಿ ಒಲಿಂಪಿಕ್ಸ್. ಆ ಗುರಿ ತಲುಪಲು ಕಠಿಣ ತರಬೇತಿ ಪಡೆಯಬೇಕು ಎಂದು ನಿರಂತರವಾಗಿ ನೆನಪಿಸಿಕೊಳ್ಳುತ್ತಾರೆ.”
ಒಲಿಂಪಿಕ್ಸ್ಯಗೆ ಹೋಗುವ ಕನಸು ಕಾಜಲ್ ಅವರ ಆಶಯವಷ್ಟೇ ಅಲ್ಲ. 19ನೇ ವರ್ಷ ತುಂಬುವ ಮೊದಲೇ ಜೂನಿಯರ್ ವಿಭಾಗಗಳಲ್ಲಿ ಮೂರು ವಿಶ್ವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೂನಿಯರ್ ವಿಭಾಗದಲ್ಲಿ ಅವರ ಸಾಧನೆ ಗಮನಿಸಿದವರಿಗೆ ಸೀನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇತ್ತು. “ಅವರು ‘ಅಂಡರ್-20’ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮತ್ತು ಈಗ ಸೀನಿಯರ್ ವಿಭಾಗದಲ್ಲಿ ಮಾಡಿರುವ ಸಾಧನೆ ಗಮನಿಸಿದರೆ ಚಿನ್ನ ಗೆಲ್ಲುತ್ತಾರೆ ಎಂದು ಭಾವಿಸಿದ್ದೆವು. ಆದರೆ ಸ್ವಲ್ಪ ನಿರಾಶೆಯಾಯಿತು. ಕುಸ್ತಿಯಲ್ಲಿ ಇಂತಹ ಸಂಗತಿಗಳು ಸಹಜ. ಅವರೊಂದಿಗೆ ಕೆಲಸ ಮಾಡಲು ಮತ್ತು ಅವರ ಕೌಶಲ್ಯ ಸುಧಾರಿಸಲು ನಮಗೆ ಸಾಕಷ್ಟು ಸಮಯವಿದೆ. ನಾವು ಖಂಡಿತವಾಗಿಯೂ ಅದನ್ನು ಮಾಡುತ್ತೇವೆ” ಎನ್ನುತ್ತಾರೆ ವೀರೇಂದ್ರ ದಹಿಯಾ.
ಅವರ ಪ್ರಕಾರ ಬೆಳ್ಳಿ ಪದಕ ಕಾಜಲ್ ಬಾಲ್ಯದಿಂದಲೇ ಆರಂಭಿಸಿದ ಸುದೀರ್ಘ ಪಯಣದ ಮತ್ತೊಂದು ಮೆಟ್ಟಿಲಾಗಿದೆ. 14ನೇ ವಯಸ್ಸಿನಲ್ಲಿ ಕುಲ್ದೀಪ್ ಮಲಿಕ್ ಅಕಾಡೆಮಿಗೆ ಸೇರುವ ಮೊದಲು ಅಂತರರಾಷ್ಟ್ರೀಯ ಕುಸ್ತಿಪಟುವಾಗಿದ್ದ ತಮ್ಮ ಚಿಕ್ಕಪ್ಪ ಕೃಷ್ಣ ಧೋಚಕ್ ಬಳಿ ತರಬೇತಿ ಪಡೆದಿದ್ದರು. ಅದಕ್ಕೂ ಮೊದಲು ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಯಲ್ಲಿ ಅನೇಕ ವರ್ಷಗಳ ಕಾಲ ಕ್ರೀಡೆಯನ್ನು ಕಲಿತಿದ್ದರು.
ಕೃಷ್ಣ ಅವರ ಬಳಿ ಕುಸ್ತಿ ತರಬೇತಿ ಪಡೆಯುತ್ತಿದ್ದ ಅಣ್ಣನಿಂದ ಅವರಿಗೆ ಕುಸ್ತಿಯ ಪರಿಚಯವಾಗಿತ್ತು. ತಾವೂ ಅಭ್ಯಾಸಕ್ಕೆ ಹೋಗಬೇಕೆಂದು ಕಾಜಲ್ ಹಠ ಹಿಡಿದ ಕಾರಣ ಚಿಕ್ಕಪ್ಪ ಗಂಭೀರವಾಗಿ ತೆಗೆದುಕೊಂಡು ಅನುಮತಿ ನೀಡಿದರು. ಇದೀಗ ಅದೇ ಆಶಯ ಅವರನ್ನು ಜೂನಿಯರ್ ಕುಸ್ತಿ ಲೋಕದ ಉತ್ತುಂಗಕ್ಕೆ ಕೊಂಡೊಯ್ದಿದೆ ಮತ್ತು ಸೀನಿಯರ್ ವಿಶ್ವ ಪ್ರಶಸ್ತಿ ಗೆಲ್ಲುವ ಹಂತ ತಲುಪಿದ್ದಾರೆ.
ವಿವಿಧ ವಯೋಮಾನದ ವಿಭಾಗಗಳಲ್ಲಿ ಅವರ ಪ್ರಗತಿ ಗಮನಾರ್ಹವಾಗಿದೆ. ಕಾಜಲ್ 2024ರಲ್ಲಿ U17 ವಿಶ್ವ ಪ್ರಶಸ್ತಿಯನ್ನು ಗೆದ್ದರು. ಬಳಿಕ 2025 ಮತ್ತು 2026ರಲ್ಲಿ ಸತತವಾಗಿ U20 ವಿಶ್ವ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. U15 ಹಂತದಲ್ಲೇ ಅವರು 76 ಕೆಜಿ ವಿಭಾಗಕ್ಕೆ ಪ್ರವೇಶಿಸಿದರು. ಹೀಗೆ ವಯೋಮಿತಿ ವಿಭಾಗಗಳಲ್ಲಿ ಮೇಲಕ್ಕೆ ಏರುತ್ತಿದ್ದಂತೆ ಈ ಭಾರದ ವಿಭಾಗವೇ ಅವರ ಪ್ರಮುಖ ಕಾರ್ಯಕ್ಷೇತ್ರವಾಯಿತು. ಹಿರಿಯರ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಜೂನಿಯರ್ ಹಂತದಲ್ಲಿ ಸಾಧಿಸಿದ ಯಶಸ್ಸು ಕೇವಲ ತಮ್ಮ ಕಿರಿಯ ಎದುರಾಳಿಗಳ ವಿರುದ್ಧ ಸ್ಪರ್ಧಿಸಿದ್ದರಿಂದ ಮಾತ್ರ ಬಂದಿಲ್ಲ ಎಂದು ಅವರು ಸಾಬೀತು ಮಾಡಿದರು.
ಸೆಮಿಫೈನಲ್ ನಲ್ಲಿ ಕಿರ್ಗಿಸ್ತಾನದ ಐಪೆರಿ ಮೆಡೆಟ್ ಕೈಜಿ ವಿರುದ್ಧ 1-7 ಅಂತರದಿಂದ ಹಿನ್ನಡೆಯಲ್ಲಿದ್ದ ಕಾಜಲ್, ಅದ್ಭುತವಾಗಿ ಪುಟಿದೆದ್ದು 10-7 ಅಂತರದಿಂದ ಜಯಗಳಿಸಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು. ಅಂತಿಮ ಹಣಾಹಣಿಯಲ್ಲಿ ಉಕ್ರೇನ್ನ ಅನಸ್ತಾಸಿಯ ಅಲ್ಪೆಯೇವಾ ವಿರುದ್ಧ 8-6 ಅಂತರದಿಂದ ಸೋತು ಬೆಳ್ಳಿ ಪದಕ ಪಡೆದರು.
ಕಾಜಲ್ ಅವರ ಕುಸ್ತಿ ಶೈಲಿಯು ಆಕ್ರಮಣದ ಮೇಲೆ ಆಧರಿತವಾಗಿದೆ. ಅವರು ಎದುರಾಳಿಯ ಮೇಲೆ ನಿರಂತರ ಒತ್ತಡ ಹೇರುತ್ತಾರೆ. ಮುಂಚೂಣಿಯಲ್ಲಿ ನಿಂತು ಆಕ್ರಮಣ ಕೈಗೆತ್ತಿಕೊಳ್ಳುತ್ತಾರೆ. ಪಂದ್ಯದ ಪೂರ್ತಿ ಆರು ನಿಮಿಷಗಳ ಕಾಲ ಆಕ್ರಮಣಕಾರಿ ಧೋರಣೆ ಕಾಯ್ದುಕೊಳ್ಳುತ್ತಾರೆ. ಕೌಶಲ್ಯ ಮತ್ತು ಚಾಣಾಕ್ಷತೆ ಅವರ ಪ್ರಮುಖ ಶಕ್ತಿಗಳು. ಪಂದ್ಯ ಜಿದ್ದಾಜಿದ್ದಿನ ಹಂತಕ್ಕೆ ತಲುಪಿದಾಗ ತ್ವರಿತ ನಿರ್ಧಾರ ಕೈಗೊಳ್ಳುತ್ತಾರೆ. “ಆಕ್ರಮಣಶೀಲತೆಯನ್ನು ನಿರ್ವಹಿಸಲು ಕಲಿಯದೆ ಇದ್ದರೆ ದೌರ್ಬಲ್ಯವೂ ಆಗಬಹುದು. ಆ ವಿಚಾರದತ್ತ ಅವರು ಗಮನಹರಿಸಬೇಕಿದೆ” ಎನ್ನುತ್ತಾರೆ ತರಬೇತುದಾರ ವೀರೇಂದ್ರ ದಹಿಯಾ.
ಕಾಜಲ್ ಅವರ ಎದುರಾಳಿಗಳು ತಪ್ಪುಗಳನ್ನು ಅವಕಾಶಗಳಾಗಿ ಬಳಸಿಕೊಳ್ಳುವಲ್ಲಿ ಹೆಚ್ಚು ಅನುಭವಿಗಳಾಗಿರುತ್ತಾರೆ. ಹೀಗಾಗಿ ತರಬೇತುದಾರರ ಪ್ರಕಾರ ಕಾಜಲ್ ಸ್ಟಾಂಡಿಂಗ್ ಡಿಫೆನ್ಸ್ (ನಿಂತಿರುವಾಗ ಎದುರಾಳಿಯ ದಾಳಿ ತಡೆಯುವ ಕೌಶಲ್ಯ) ಕೂಡ ಸುಧಾರಿಸಿಕೊಳ್ಳಬೇಕಿದೆ. “ಯಾವಾಗ ಆಕ್ರಮಣಕಾರಿಯಾಗಿ ಮತ್ತು ಯಾವಾಗ ರಕ್ಷಣಾತ್ಮಕವಾಗಿ ಆಡಬೇಕು ಎನ್ನುವುದನ್ನು ಅವರು ಕಲಿಯಬೇಕಿದೆ” ಎನ್ನುತ್ತಾರೆ ವೀರೇಂದ್ರ ದಹಿಯಾ.
ಕುಸ್ತಿ ಅಖಾಡದ ಹೊರಗೆ ಅವರ ತಂದೆ ಚಾಲಕರು ಮತ್ತು ತಾಯಿ ಗೃಹಿಣಿ. ತಾಯಿಯೇ ಕಾಜಲ್ ಅವರ ವೃತ್ತಿಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ತರಬೇತಿ ಮತ್ತು ಸ್ಪರ್ಧೆಗಳ ಕಠಿಣ ಹಂತಗಳಲ್ಲಿ ಅವರ ಜೊತೆಗಿದ್ದು ಪ್ರಯಾಣಿಸುತ್ತಾರೆ. ಏಕೆಂದರೆ ಅವರೂ ಸ್ವತಃ ಕುಸ್ತಿಪಟು.