Photo: x.com/BCCI

ಕ್ರೈಸ್ಟ್‌ಚರ್ಚ್: ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಶನಿವಾರ ನ್ಯೂಝಿಲೆಂಡ್ ವಿರುದ್ಧ ನಡೆಯಲಿರುವ ಎರಡನೇ T20I  (Twenty20 International ) ಪಂದ್ಯದಲ್ಲಿ ಎರಡು ಮಹತ್ವದ ದಾಖಲೆಗಳನ್ನು ಮುರಿಯುವ ಅವಕಾಶವಿದೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ T20I ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಅವರು ಸಜ್ಜಾಗಿದ್ದಾರೆ.

ಜೂನ್‌ ನಲ್ಲಿ ಸೂರ್ಯಕುಮಾರ್ ಯಾದವ್ ಅವರಿಂದ ಭಾರತದ T20I ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಅಯ್ಯರ್, ಈ ವರ್ಷ ನಾಯಕರಾಗಿ 22 ಪಂದ್ಯಗಳಲ್ಲಿ 632 ರನ್ ಗಳಿಸಿದ್ದಾರೆ. 2022ರಲ್ಲಿ 29 ಪಂದ್ಯಗಳಿಂದ 656 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿಯಲು ಅಯ್ಯರ್‌ ಗೆ ಇನ್ನು 25 ರನ್‌ಗಳ ಅಗತ್ಯವಿದೆ.

ಬಾಬರ್ ಆಝಮ್ ವಿಶ್ವದಾಖಲೆಯ ಮೇಲೂ ಕಣ್ಣು

ಅಯ್ಯರ್ ಕೇವಲ ರೋಹಿತ್ ಅವರ ದಾಖಲೆಯನ್ನು ಮುರಿಯುವುದಷ್ಟೇ ಅಲ್ಲ, ಒಂದು ಕ್ಯಾಲೆಂಡರ್ ವರ್ಷದಲ್ಲಿ T20 ಕ್ರಿಕೆಟ್‌ ನಲ್ಲಿ ನಾಯಕರಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ವಿಶ್ವದಾಖಲೆಯತ್ತಲೂ ಗಮನ ಹರಿಸಿದ್ದಾರೆ.

2021ರಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಆಝಮ್ 35 ಪಂದ್ಯಗಳಲ್ಲಿ 1,225 ರನ್ ಗಳಿಸಿದ್ದರು. 2026ರಲ್ಲಿ T20 ಪಂದ್ಯಗಳಲ್ಲಿ ನಾಯಕರಾಗಿ ಈಗಾಗಲೇ 1,130 ರನ್ ಗಳಿಸಿರುವ ಅಯ್ಯರ್, ಶನಿವಾರದ ಪಂದ್ಯದಲ್ಲಿ 96 ರನ್ ಗಳಿಸಿದರೆ ಬಾಬರ್ ಅವರ ದಾಖಲೆಯನ್ನೂ ಹಿಂದಿಕ್ಕಲಿದ್ದಾರೆ.

ಆದರೆ, T20I ಪಂದ್ಯಗಳಿಗೆ ಸಂಬಂಧಿಸಿದಂತೆ ಬಾಬರ್ ಆಝಮ್ ಅವರ ದಾಖಲೆಯೇ ಬೇರೆ. ಅವರು 2021ರಲ್ಲಿ 29 T20I ಪಂದ್ಯಗಳಲ್ಲಿ 939 ರನ್ ಗಳಿಸಿ ಈ ವಿಭಾಗದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜಪಾನ್‌ ನ ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ 2024ರಲ್ಲಿ ನಾಯಕರಾಗಿ 20 T20I ಪಂದ್ಯಗಳಲ್ಲಿ 860 ರನ್ ಗಳಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮೊದಲ ಪಂದ್ಯದಲ್ಲಿ ಅಯ್ಯರ್ ಮಿಂಚು

ಗುರುವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅಯ್ಯರ್, 28 ಎಸೆತಗಳಲ್ಲಿ 42 ರನ್ ಗಳಿಸಿದ್ದರು. 226 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

2024ರ T20 ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಅಯ್ಯರ್ ಮುರಿಯಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಇಶಾನ್ ಕಿಶನ್ ಹೊರಕ್ಕೆ; ವೈಭವ್ ಸೂರ್ಯವಂಶಿಗೆ ಅವಕಾಶ?

ಇದೇ ವೇಳೆ, ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಬಲ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿರುವುದರಿಂದ ಎರಡನೇ T20I ಪಂದ್ಯದಿಂದ ಹೊರಗುಳಿದಿದ್ದಾರೆ. ಸರಣಿಯ ಮೊದಲ ಪಂದ್ಯದ ವೇಳೆ ಅವರಿಗೆ ಗಾಯವಾಗಿತ್ತು.

ಕಿಶನ್ ಅನುಪಸ್ಥಿತಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಗೆ ಭಾರತದ ಹಿರಿಯ ತಂಡದ ಪರ ಪಾದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಅವರು ಕೊನೆಯದಾಗಿ ಜಪಾನ್‌ ನಲ್ಲಿ ನಡೆದ ಏಷ್ಯನ್ ಗೇಮ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಶ್ರೀಲಂಕಾ ವಿರುದ್ಧದ ಸೆಮಿಫೈನಲ್‌ ನಲ್ಲಿ 15 ರನ್ ಹಾಗೂ ಪಾಕಿಸ್ತಾನ ವಿರುದ್ಧದ ಫೈನಲ್‌ ನಲ್ಲಿ 38 ರನ್ ಗಳಿಸಿದ್ದರು. ಈ ಕ್ರೀಡಾಕೂಟದಲ್ಲಿ ಭಾರತ ಸತತ ಎರಡನೇ ಬಾರಿ ಚಿನ್ನದ ಪದಕ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor