ಜಪಾನ್ನಲ್ಲಿ ಏಶ್ಯನ್ ಗೇಮ್ಸ್‌ಗೆ ತೆರೆ : 2030ರ ಆವೃತ್ತಿಗೆ ದೋಹಾ ಆತಿಥ್ಯ
Photo Credit : PTI
ನಗೋಯ: ಜಪಾನಿನ ಐಚಿ-ನಗೋಯ ನಗರದಲ್ಲಿ ಎರಡು ವಾರಕ್ಕೂ ಅಧಿಕ ಸಮಯದಿಂದ ನಡೆಯುತ್ತಿದ್ದ 20ನೇ ಆವೃತ್ತಿಯ ಏಶ್ಯನ್ ಕ್ರೀಡಾಕೂಟಕ್ಕೆ ರವಿವಾರ ಭವ್ಯ ಸಮಾರೋಪ ಸಮಾರಂಭದೊಂದಿಗೆ ತೆರೆ ಬಿದ್ದಿದೆ. 2030ರ ಆವೃತ್ತಿಯ ಗೇಮ್ಸ್ ಆತಿಥ್ಯಕ್ಕೆ ದೋಹಾವು ಧ್ವಜವನ್ನು ಸ್ವೀಕರಿಸಿದೆ.
ಏಶ್ಯ ಒಲಿಂಪಿಕ್ಸ್ ಮಂಡಳಿಯ(ಒಸಿಎ)ಅಧ್ಯಕ್ಷ ಶೇಕ್ ಜೊಯಾನ್ ಬಿನ್ ಹಮದ್ ಅಲ್ ಥಾನಿ ಅವರು ಮಿಝುಹೊ ಪಾರ್ಕ್‌ನಲ್ಲಿ ಗೇಮ್ಸ್‌ನಲ್ಲಿ ಕೊನೆಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದರು. ಈ ಮೂಲಕ ಏಶ್ಯದ ಅತ್ಲೆಟಿಕ್ಸ್ ಉತ್ಕೃಷ್ಟಕ್ಕೆ ಸಾಕ್ಷಿಯಾದ ಕ್ರೀಡಾ ಹಬ್ಬ ಅಂತ್ಯವಾಗಿದೆ.
‘ಒನ್ ಏಶ್ಯ’ ಧ್ಯೇಯವಾಕ್ಯ ಹೊಂದಿರುವ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಪ್ರೇಕ್ಷಕರು ಒಂದೆಡೆ ಸೇರಿದ್ದರು. ದೋಹಾ ಮುಂದಿನ ನಾಲ್ಕು ವರ್ಷಗಳಲ್ಲಿ ಉಪಖಂಡದ ಪ್ರಮುಖ ಕ್ರೀಡಾ ಮೇಳವನ್ನು ಆಯೋಜಿಸಲು ಸಜ್ಜಾಗಲಿದ್ದು, ಖತರ್‌ನ ಪ್ರತಿನಿಧಿಗಳಿಗೆ ಏಶ್ಯನ್ ಗೇಮ್ಸ್ ಧ್ವಜವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು.
ಶೂಟಿಂಗ್‌ನಲ್ಲಿ ಎರಡು ಚಿನ್ನದ ಪದಕಗಳು ಹಾಗೂ ಒಂದು ಬೆಳ್ಳಿ ಪದಕವನ್ನು ಗೆದ್ದಿರುವ ಭಾರತದ ಶೂಟಿಂಗ್ ತಾರೆ ನೀರೂ ಧಾಂಡಾ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಣಿಯಾಗಿ ಭಾರತೀಯ ಅತ್ಲೀಟ್‌ಗಳ ತಂಡವನ್ನು ಮುನ್ನಡೆಸಿದರು.
85 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದ ಭಾರತ
21 ಚಿನ್ನ, 27 ಬೆಳ್ಳಿ ಹಾಗೂ 37 ಕಂಚಿನ ಪದಕಗಳ ಸಹಿತ ಒಟ್ಟು 85 ಪದಕಗಳೊಂದಿಗೆ ಚೀನಾ, ಜಪಾನ್ ಹಾಗೂ ದಕ್ಷಿಣ ಕೊರಿಯಾದ ನಂತರ ಪದಕಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನ ಪಡೆದಿದೆ. ಶೂಟಿಂಗ್, ಅತ್ಲೆಟಿಕ್ಸ್, ಬಾಕ್ಸಿಂಗ್, ಹಾಕಿ ಹಾಗೂ ಇತರ ಕ್ರೀಡೆಗಳಲ್ಲಿ ಭಾರತವು ಮಹತ್ವಪೂರ್ಣ ಪ್ರದರ್ಶನ ನೀಡಿದೆ. ಚಿನ್ನದ ಪದಕ ವಿಜೇತ ಭಾರತದ ಪುರುಷರ ಹಾಕಿ ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆದಿದೆ.
2023ರ ಹಾಂಗ್‌ಝೌ ಗೇಮ್ಸ್‌ನಲ್ಲಿ 100ಕ್ಕೂ ಅಧಿಕ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದ ಭಾರತವು ಈ ಬಾರಿಯ ಏಶ್ಯನ್ ಗೇಮ್ಸ್‌ನಲ್ಲೂ ಪದಕ ಗಳಿಕೆಯಲ್ಲಿ ತನ್ನ ಸ್ಥಿರತೆಯನ್ನು ಕಾಯ್ದುಕೊಂಡಿದೆ. ನಗೋಯ ಗೇಮ್ಸ್‌ನಲ್ಲಿ ಭಾರತವು ಉಪಖಂಡದ ಕ್ರೀಡೆಗಳಲ್ಲಿ ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದರೂ ಅಂತಿಮವಾಗಿ ಒಟ್ಟು ಪದಕ ಗಳಿಕೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಹಿನ್ನಡೆ ಕಂಡಿದೆ. 2023ರ ಏಶ್ಯನ್ ಗೇಮ್ಸ್‌ನಲ್ಲಿ ಭಾರತವು ಒಟ್ಟು 106 ಪದಕಗಳನ್ನು ಜಯಿಸಿತ್ತು.
ಗರಿಷ್ಠ ಬೆಳ್ಳಿ ಪದಕ ಗೆದ್ದ ಆಧಾರದಲ್ಲಿ ಉಜ್ಬೇಕಿಸ್ತಾನ(21 ಚಿನ್ನ) ತಂಡವನ್ನು ಹಿಂದಿಕ್ಕಿದ ಭಾರತ ನಾಲ್ಕನೇ ಸ್ಥಾನಕ್ಕೆ ಏರಿತು.
ಏಶ್ಯನ್ ಗೇಮ್ಸ್‌ನಲ್ಲಿ ತನ್ನ ಸಾಮರ್ಥ್ಯವನ್ನು ಮುಂದುವರಿಸಿದ ಚೀನಾ ದೇಶವು 169 ಚಿನ್ನ ಸಹಿತ ಒಟ್ಟು 341 ಪದಕಗಳನ್ನು ಗೆದ್ದುಕೊಂಡಿದೆ.
2030ರ ಏಶ್ಯನ್ ಗೇಮ್ಸ್‌ಗೆ ಬ್ಯಾಟನ್ ಸ್ವೀಕರಿಸಿದ ದೋಹಾ
ಸಮಾರೋಪ ಸಮಾರಂಭದ ವೇಳೆ ಮುಂದಿನ ಗೇಮ್ಸ್ ಆತಿಥ್ಯ ನಗರದತ್ತ ಎಲ್ಲರ ಗಮನ ಹರಿಯಿತು. ದೋಹಾವು 2030ರಲ್ಲಿ ಏಶ್ಯದ ಕ್ರೀಡಾ ಸಮುದಾಯವನ್ನು ಸ್ವಾಗತಿಸಲು ಸಜ್ಜಾಗಿದೆ. ಬ್ಯಾಟನ್ ಹಸ್ತಾಂತರವು ಖತರ್ ಎರಡನೇ ಬಾರಿ ಏಶ್ಯನ್ ಗೇಮ್ ತಯಾರಿಯ ಆರಂಭವಾಗಿದೆ. ಖತರ್ 2006ರಲ್ಲಿ ಏಶ್ಯನ್ ಗೇಮ್ಸ್ ಆತಿಥ್ಯ ವಹಿಸಿತ್ತು.
ಐಚಿ-ನಗೋಯ ಗೇಮ್ಸ್‌ನಲ್ಲಿ ದಾಖಲೆಯ 43 ಕ್ರೀಡೆಗಳಲ್ಲಿ 469 ಚಿನ್ನದ ಪದಕಗಳು ಇದ್ದವು. ಸುಮಾರು 17,000 ಕ್ರೀಡಾಳುಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದಾರೆ. ಮಿಕ್ಸೆಡ್ ಮಾರ್ಷಲ್ ಆರ್ಟ್ಸ್, ಟೆಕ್‌ಬಾಲ್ ಹಾಗೂ ಸರ್ಫೀಂಗ್ ಸಹಿತ ಹಲವು ಕ್ರೀಡೆಗಳು ಏಶ್ಯನ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿ ಕಾಣಿಸಿಕೊಂಡವು.
169 ಚಿನ್ನದ ಪದಕಗಳ ಸಹಿತ ಒಟ್ಟು 341 ಪದಕಗಳನ್ನು ಜಯಿಸಿದ ಚೀನಾ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಏಶ್ಯನ್ ಗೇಮ್ಸ್‌ನಲ್ಲಿ ತನ್ನ ತವರು ನೆಲದಿಂದ ಹೊರಗೆ ಭರ್ಜರಿ ಬಂಗಾರದ ಬೇಟೆಯಾಡಿದೆ. ಆತಿಥೇಯ ಜಪಾನ್ 83 ಚಿನ್ನ ಸಹಿತ ಒಟ್ಟು 269 ಪದಕಗಳನ್ನು ಜಯಿಸಿದೆ. 1994ರ ಹಿರೊಶಿಮಾ ಗೇಮ್ಸ್‌ನಲ್ಲಿ ತನ್ನದೇ ಚಿನ್ನದ ಪದಕ ದಾಖಲೆಯನ್ನು ಮುರಿದಿದೆ.
ಸಂಘಟನೆಯ ಸವಾಲಿನ ನಡುವೆಯೂ ಕ್ರೀಡಾ ಚಾತುರ್ಯ ಮೆರೆದ ಜಪಾನ್
ಈ ಬಾರಿಯ ಏಶ್ಯನ್ ಗೇಮ್ಸ್ ವಸತಿ ಹಾಗೂ ಸಾರಿಗೆ ವ್ಯವಸ್ಥೆಗಳಿಗೆ ಸಂಬಂಧಿಸಿ ಭಾರೀ ಟೀಕೆಗೆ ಗುರಿಯಾಯಿತು. ಆಯೋಜಕರು ಕ್ರೀಡಾಪಟುಗಳಿಗೆ ಕ್ರೀಡಾಗ್ರಾಮಗಳನ್ನು ನಿರ್ಮಿಸಿಕೊಡುವ ಬದಲು ಹೋಟೆಲ್‌ಗಳು, ಕ್ರೂಸ್ ಶಿಪ್‌ಗಳಲ್ಲಿ ವಸತಿ ವ್ಯವಸ್ಥೆಗಳನ್ನು ಮಾಡಿತ್ತು.
ನೋಂದಣಿಯಲ್ಲಿನ ವಿಳಂಬ, ಕೊಠಡಿ ಹಂಚಿಕೆಯ ಸಮಸ್ಯೆಗಳು ಅನೇಕ ಕ್ರೀಡಾ ನಿಯೋಗಗಳ ಮೇಲೆ ಪರಿಣಾಮ ಬೀರಿದವು. ಇದರ ಜೊತೆಗೆ ರಾಜತಾಂತ್ರಿಕ ಹಾಗೂ ಶಿಷ್ಟಾಚಾರಕ್ಕೆ ಸಂಬಂಧಿಸಿದ ಗೊಂದಲಗಳು ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದವು. ಹಲವು ತಾಣಗಳಲ್ಲಿ ಪ್ರೇಕ್ಷಕರ ಕೊರತೆಯೂ ಇತ್ತು.
ಈ ಎಲ್ಲ ಅಡೆತಡೆಗಳ ನಡುವೆಯೂ ಕ್ರೀಡಾಕೂಟದಲ್ಲಿ ಹಲವು ವೈಯಕ್ತಿಕ ಪ್ರದರ್ಶನಗಳು ಗಮನ ಸೆಳೆದವು. ಚೀನಾದ ಯುವ ಈಜು ತಾರೆ ಯು ಝಿದಿ ಹಾಗೂ ಏಳು ಬಾರಿ ಚಿನ್ನದ ಪದಕ ವಿಜೇತೆ ಝಾಂಗ್ ಝಾನ್‌ಶು ಅತ್ಲೆಟಿಕ್ಸ್ ಹಾಗೂ ಇತರ ಸ್ಪರ್ಧೆಗಳಲ್ಲಿ ಅಮೋಘ ಪ್ರದರ್ಶನ ನೀಡಿದರು.
ಜಪಾನ್‌ನ ಐಚಿ-ನಗೋಯ ನಗರವು ದೋಹಾಗೆ ಆತಿಥ್ಯದ ಜವಾಬ್ದಾರಿಯನ್ನು ಹಸ್ತಾಂತರಿಸುತ್ತಿದ್ದಂತೆ, ಕ್ರೀಡಾ ಸಾಧನೆಗಳ ಸಂಭ್ರಮಾಚರಣೆಯೊಂದಿಗೆ ಏಶ್ಯನ್ ಗೇಮ್ಸ್ ಸಮಾಪ್ತಿಯಾಯಿತು. ಜಪಾನ್‌ನ ಸಂಘಟನೆಯಲ್ಲಿನ ಕೊರತೆಗಳು ಮುಂದಿನ ಆವೃತ್ತಿಯ ಗೇಮ್ಸ್‌ಗೆ ದೊಡ್ಡ ಪಾಠವಾಗಬಹುದು.