Photo credit : X@Sports_NDTV

ಚಂಡಿಗಡ,: ಭಾರತ-ವೆಸ್ಟ್‌ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ಆರಂಭದಿಂದ ಕೊನೆಯ ತನಕ ರನ್ ಸುರಿಮಳೆಯಾಗಿದೆ. ಕನಿಷ್ಠ ಮೂರು ಏಕದಿನಗಳನ್ನು ಒಳಗೊಂಡ ದ್ವಿಪಕ್ಷೀಯ ಸರಣಿಯೊಂದರಲ್ಲಿ ಗರಿಷ್ಠ ಸ್ಕೋರಿಂಗ್ ರೇಟ್ ದಾಖಲಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ಸರಣಿಯಲ್ಲಿ ಪ್ರತೀ ಓವರ್‌ಗೆ 7.43 ರನ್ ಸ್ಕೋರಿಂಗ್ ರೇಟ್ ದಾಖಲಾಗಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಒಳಗೊಂಡ ದ್ವಿಪಕ್ಷೀಯ ಸರಣಿಯಲ್ಲಿ ಇದು ಗರಿಷ್ಠವಾಗಿದೆ. ಈ ಹಿಂದೆ ಇಂಗ್ಲೆಂಡ್ ತಂಡವು 2015ರಲ್ಲಿ ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಇದೇ ರೀತಿಯ ದಾಖಲೆ ನಿರ್ಮಿಸಿತ್ತು. ಆಗ ಪ್ರತೀ ಓವರ್‌ಗೆ 7.15 ರನ್ ಸ್ಕೋರಿಂಗ್ ರೇಟ್ ದಾಖಲಾಗಿತ್ತು.

ಭಾರತ ತಂಡವು 2017ರಲ್ಲಿ ಇಂಗ್ಲೆಂಡ್ ವಿರುದ್ಧ ಪ್ರತೀ ಓವರ್‌ಗೆ 7 ರನ್ ಗಳಿಸಿತ್ತು.

ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ 595 ರನ್ ದಾಖಲಾಗಿದ್ದವು. ವೆಸ್ಟ್‌ಇಂಡೀಸ್ 7 ವಿಕೆಟ್‌ಗಳ ನಷ್ಟಕ್ಕೆ 295 ರನ್ ಗಳಿಸಿದರೆ, ಇದಕ್ಕುತ್ತರವಾಗಿ ಭಾರತವು ಕೇವಲ 41.4 ಓವರ್‌ಗಳಲ್ಲಿ ಗುರಿ ತಲುಪಿತು. 2 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತ್ತು.

ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ಏಳು ವಿಕೆಟ್‌ಗಳ ನಷ್ಟಕ್ಕೆ 405 ರನ್ ಗಳಿಸಿತ್ತು. ಭಾರತ ತಂಡವು 43.3 ಓವರ್‌ಗಳಲ್ಲಿ ಗುರಿ ತಲುಪಿದ್ದು, 2 ವಿಕೆಟ್‌ಗಳ ನಷ್ಟಕ್ಕೆ 406 ರನ್ ಕಲೆ ಹಾಕಿತು. ಪಂದ್ಯದಲ್ಲಿ ಒಟ್ಟು 811 ರನ್ ಹರಿದುಬಂತು.

ಸರಣಿಯ ಕೊನೆಯ ಪಂದ್ಯದಲ್ಲೂ ರನ್ ಸ್ಕೋರಿಂಗ್ ಮುಂದುವರಿದಿದ್ದು, ಭಾರತ ತಂಡವು 7 ವಿಕೆಟ್‌ಗಳ ನಷ್ಟಕ್ಕೆ 351 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ವೆಸ್ಟ್‌ಇಂಡೀಸ್ 48.2 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 352 ರನ್ ಗಳಿಸಿ ದಾಖಲೆಯ ರನ್‌ಚೇಸ್ ಪೂರ್ಣಗೊಳಿಸಿತ್ತು. ಮೂರನೇ ಏಕದಿನ ಪಂದ್ಯವೊಂದರಲ್ಲೇ 703 ರನ್ ದಾಖಲಾಗಿದ್ದವು.

ಮೂರೂ ಪಂದ್ಯಗಳಲ್ಲಿ ಉಭಯ ತಂಡಗಳು ಪದೇ ಪದೇ 300 ರನ್ ಗಡಿ ದಾಟಿವೆ. ಮೊದಲೆರಡು ಪಂದ್ಯಗಳನ್ನು ಎಂಟು ವಿಕೆಟ್‌ಗಳಿಂದ ಗೆದ್ದಿರುವ ಭಾರತವು ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ವೆಸ್ಟ್‌ಇಂಡೀಸ್ ಕೊನೆಯ ಪಂದ್ಯವನ್ನು ಐದು ವಿಕೆಟ್‌ಗಳಿಂದ ಗೆದ್ದುಕೊಂಡು ಸಮಾಧಾನಪಟ್ಟುಕೊಂಡಿತು.

ಸರಣಿಯುದ್ದಕ್ಕೂ ಬ್ಯಾಟರ್‌ಗಳ ಅಬ್ಬರ ಜೋರಾಗಿತ್ತು. ಮೊದಲ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ನಾಲ್ಕು ವಿಕೆಟ್ ಗೊಂಚಲನ್ನು ಪಡೆದಿದ್ದರು. ಆನಂತರ ಬೌಲಿಂಗ್ ವಿಭಾಗವೂ ಸ್ಮರಣೀಯ ಪ್ರದರ್ಶನ ನೀಡಲಿಲ್ಲ. ಭಾರತದ ಬೌಲರ್‌ಗಳು ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡುವಲ್ಲಿ ಪರದಾಡಿದರು.

ಜಸ್‌ಪ್ರಿತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್ ಏಕದಿನ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ. ಇದು ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲಿದೆ. ಈ ಸರಣಿಯು 2027ರ ವಿಶ್ವಕಪ್‌ಗಿಂತ ಮೊದಲು ಭಾರತದ ಬೌಲಿಂಗ್ ವಿಭಾಗದ ಆಳ ಹಾಗೂ ಸಮತೋಲನವು ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor