Photo Credit : indianexpress

ಶ್ರೀನಗರ: ಟೀಮ್ ಇಂಡಿಯಾದ ವೇಗದ ಬೌಲರ್‌ಗಳಾದ ಮುಕೇಶ್ ಕುಮಾರ್ ಹಾಗೂ ಆಕಾಶ ದೀಪ್ ಒಟ್ಟು 9 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಶೇಷ ಭಾರತ ತಂಡವು ಹಾಲಿ ರಣಜಿ ಟ್ರೋಫಿ ಚಾಂಪಿಯನ್ ಜಮ್ಮು-ಕಾಶ್ಮೀರ ತಂಡವನ್ನು 167 ರನ್‌ಗಳಿಂದ ಮಣಿಸಿ 2026-27ರ ಸಾಲಿನ ಇರಾನಿ ಕಪ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.

33 ರನ್‌ಗೆ ಆರು ವಿಕೆಟ್‌ಗಳನ್ನು ಪಡೆದ ಮುಕೇಶ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ 11ನೇ ಐದು ವಿಕೆಟ್ ಗೊಂಚಲು ತನ್ನದಾಗಿಸಿಕೊಂಡರು. ಜಮ್ಮು-ಕಾಶ್ಮೀರದ ಬ್ಯಾಟಿಂಗ್ ಸರದಿಗೆ ಸವಾಲಾದರು. ತನ್ನ ಪುನರಾಗಮನ ಪಂದ್ಯವನ್ನಾಡಿದ ಆಕಾಶ್, ತನ್ನ ಬಂಗಾಳದ ಸಹ ಆಟಗಾರನಿಗೆ ಸಮರ್ಥ ಸಾಥ್ ನೀಡಿದ್ದು, 25 ರನ್‌ಗೆ ಮೂರು ವಿಕೆಟ್‌ಗಳನ್ನು ಪಡೆದರು.

ನಾಲ್ಕನೇ ದಿನವಾದ ರವಿವಾರ ಗೆಲ್ಲಲು 279 ರನ್ ಗುರಿ ಬೆನ್ನಟ್ಟಿದ ಜಮ್ಮು-ಕಾಶ್ಮೀರ ತಂಡವು ಕೇವಲ 111ರನ್‌ಗೆ ಗಂಟುಮೂಟೆ ಕಟ್ಟಿತು.

ಮೊದಲ ಇನಿಂಗ್ಸ್‌ನಲ್ಲಿ 68 ರನ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 135 ರನ್ ಗಳಿಸಿದ ರವಿಚಂದ್ರನ್ ಸ್ಮರಣ್ ಜಮ್ಮು-ಕಾಶ್ಮೀರದ ಗೆಲುವಿಗೆ ಕಠಿಣ ಸವಾಲು ನೀಡಲು ನೆರವಾದರು. ಸ್ಮರಣ್ ಎರಡೂ ಇನಿಂಗ್ಸ್‌ಗಳಲ್ಲಿ ಶೇಷ ಭಾರತ ತಂಡವು ಕಠಿಣ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವಲ್ಲಿ ನೆರವಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ 41 ರನ್ ಮುನ್ನಡೆ ಬಿಟ್ಟುಕೊಟ್ಟ ಹೊರತಾಗಿಯೂ ಶೇಷ ಭಾರತ ಗೆಲುವಿನ ನಗೆ ಬೀರಿತು.

ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಜಮ್ಮು-ಕಾಶ್ಮೀರ ತಂಡಕ್ಕೆ ಟ್ರೋಫಿ ಎತ್ತಿ ಹಿಡಿಯಲು ಪಂದ್ಯವನ್ನು ಡ್ರಾಗೊಳಿಸುವ ಅಗತ್ಯವಿತ್ತು. ಆರಂಭಿಕ ಆಟಗಾರರಾದ ಶುಭಮ್ ಖಜುರಿಯಾ ಹಾಗೂ ಕಾಮ್ರಾನ್ ಇಕ್ಬಾಲ್ ಮೊದಲ ವಿಕೆಟ್‌ಗೆ 54 ರನ್ ಸೇರಿಸಿದಾಗ ಫಲಿತಾಂಶವು ಜಮ್ಮು-ಕಾಶ್ಮೀರ ಪರ ವಾಲಿತ್ತು.

ಆಕಾಶ್ ಈ ಜೋಡಿಯನ್ನು ಬೇರ್ಪಡಿಸಿದರು. ಆ ನಂತರ ಮುಕೇಶ್ ಭೋಜನ ವಿರಾಮಕ್ಕೆ ಮೊದಲು ಎರಡು ವಿಕೆಟ್‌ಗಳನ್ನು ಉರುಳಿಸಿದರು. ಶುಭಮನ್ ಪುಂದಿರ್ ಹಾಗೂ ನಾಯಕ ಪರಾಸ್ ಡೋಗ್ರಾ 15ನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು.

ಜಮ್ಮು-ಕಾಶ್ಮೀರ ತಂಡವು ಭೋಜನ ವಿರಾಮದ ವೇಳೆಗೆ 19 ಓವರ್‌ಗಳ ನಂತರ 3 ವಿಕೆಟ್‌ಗಳ ನಷ್ಟಕ್ಕೆ 89 ರನ್ ಗಳಿಸಿತ್ತು. ಖಜುರಿಯಾ(36 ರನ್) ಹಾಗೂ ಅಬ್ದುಲ್ ಸಮದ್(6 ರನ್) ಕ್ರೀಸ್‌ನಲ್ಲಿದ್ದರು.

ಭೋಜನ ವಿರಾಮದ ನಂತರ ಖಜುರಿಯಾ ಅವರು ಆಕಾಶ್‌ಗೆ ವಿಕೆಟ್ ಒಪ್ಪಿಸಿದರು. ಆಗ ಕಾಶ್ಮೀರ ತಂಡ ಕುಸಿತದ ಹಾದಿ ಹಿಡಿಯಿತು. ಕಾಶ್ಮೀರ ತಂಡವು ಕೇವಲ 22 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.

ಇದಕ್ಕೂ ಮೊದಲು ಶೇಷ ಭಾರತ ತಂಡವು 8 ವಿಕೆಟ್‌ಗಳ ನಷ್ಟಕ್ಕೆ 306 ರನ್‌ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿತು. 319 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಉಮರ್ ನಝೀರ್, ಸುನೀಲ್ ಕುಮಾರ್ ಹಾಗೂ ಸಾಹಿಲ್ ಲೋಟ್ರಾ ಕಾಶ್ಮೀರ ತಂಡದ ಪರ ತಲಾ ಮೂರು ವಿಕೆಟ್‌ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor