ಧೋನಿ, ಯುವರಾಜ್ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್
Image Source: X/@BCCI
ಹೊಸದಿಲ್ಲಿ: ವೆಸ್ಟ್‌ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ಶನಿವಾರ ಕೊನೆಗೊಂಡಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಏಳನೇ ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು. ಈ ಮೂಲಕ ಮಾಜಿ ನಾಯಕ ಎಂ.ಎಸ್. ಧೋನಿ ದಾಖಲೆಯನ್ನು ಸರಿಗಟ್ಟಿದರು.
ಗಿಲ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಗಳಿಸಿದರೆ, ಎರಡನೇ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದರು. ಎರಡೂ ಇನಿಂಗ್ಸ್‌ನಲ್ಲಿ ರನ್ ಚೇಸ್ ವೇಳೆ ಗಿಲ್ ಬ್ಯಾಟಿಂಗ್ ಪರಾಕ್ರಮ ಮೆರೆದಿದ್ದರು.
ಗಿಲ್ ಮೊದಲ ಏಕದಿನ ಪಂದ್ಯದಲ್ಲಿ 110 ರನ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಔಟಾಗದೆ 233 ರನ್ ಕಲೆ ಹಾಕಿದ್ದರು. ಈ ಪ್ರದರ್ಶನದ ಮೂಲಕ ಭಾರತವು ಸರಣಿ ಗೆಲ್ಲುವಲ್ಲಿ ನೆರವಾಗಿದ್ದರು. ವಿಂಡೀಸ್ ಕೊನೆಯ ಪಂದ್ಯವನ್ನು ಐದು ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
ಏಳನೇ ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿರುವ ಗಿಲ್ ಅವರು ಇದೀಗ ಧೋನಿ ಸಹಿತ ಭಾರತದ ಲೆಜೆಂಡ್ ಆಟಗಾರರ ಒಳಗೊಂಡ ಕ್ಲಬ್‌ಗೆ ಸೇರಿದ್ದಾರೆ. ಗಿಲ್ ಅವರು ಯುವರಾಜ್ ಸಿಂಗ್ ಹಾಗೂ ಸೌರವ್ ಗಂಗುಲಿ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಕೂಡ 11 ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದು, 15 ಪ್ರಶಸ್ತಿಗಳನ್ನು ಗೆದ್ದಿರುವ ಸಚಿನ್ ತೆಂಡುಲ್ಕರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಗಿಲ್ 2022ರ ನಂತರ ತನ್ನ ಎಲ್ಲ ಏಳು ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಅವಧಿಯಲ್ಲಿ ಯಾವೊಬ್ಬ ಭಾರತೀಯನು ಮೂರಕ್ಕಿಂತ ಹೆಚ್ಚು ಪ್ರಶಸ್ತಿ ಜಯಿಸಿಲ್ಲ.