ಸಾರ್ವಕಾಲಿಕ ಟಿ-20 ರನ್ ಪಟ್ಟಿ : ಗೇಲ್ ದಾಖಲೆ ಪುಡಿಗಟ್ಟಿ ಇತಿಹಾಸ ನಿರ್ಮಿಸಿದ ಬಟ್ಲರ್

Update: 2026-07-24 21:06 IST

ಜೋಸ್ ಬಟ್ಲರ್ | Photo Credit : PTI 

ಲಂಡನ್, ಜು.24: ಸಾರ್ವಕಾಲಿಕ ಟಿ-20 ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಕ್ರಿಸ್ ಗೇಲ್ ದಾಖಲೆಯನ್ನು ಮುರಿದು ಎರಡನೇ ಸ್ಥಾನಕ್ಕೇರಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಅವರು ಇತಿಹಾಸ ನಿರ್ಮಿಸಿದರು.

ಲಾರ್ಡ್ಸ್‌ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜಯಂಟ್ಸ್ ಹಾಗೂ ಲಂಡನ್ ಸ್ಪಿರಿಟ್ ನಡುವೆ ನಡೆದ 2026ರ ದ ಹಂಡ್ರೆಡ್ ಟೂರ್ನಿಯಲ್ಲಿ ಬಟ್ಲರ್ ಈ ಸಾಧನೆ ಮಾಡಿದರು.

ಬಟ್ಲರ್ 11 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಕೇವಲ 16 ರನ್ ಗಳಿಸಿದ್ದರೂ ವಿಂಡೀಸ್ ಬ್ಯಾಟಿಂಗ್ ದಿಗ್ಗಜ ಗೇಲ್ ಅವರ ರನ್ ದಾಖಲೆಯನ್ನು ಮುರಿದರು.

ಬಟ್ಲರ್ ಇದೀಗ 487 ಟಿ-20 ಇನಿಂಗ್ಸ್‌ಗಳಲ್ಲಿ 146.74ರ ಸ್ಟ್ರೈಕ್‌ರೇಟ್‌ನಲ್ಲಿ 9 ಶತಕ ಹಾಗೂ 102 ಅರ್ಧಶತಕಗಳ ಸಹಿತ ಒಟ್ಟು 14,572 ರನ್ ಗಳಿಸಿದ್ದಾರೆ.

ಗೇಲ್ ಹಲವು ವರ್ಷಗಳಿಂದ ಸಾರ್ವಕಾಲಿಕ ಟಿ-20 ರನ್ ಸ್ಕೋರಿಂಗ್ ದಾಖಲೆಯನ್ನು ಹೊಂದಿದ್ದರು. ಈ ವರ್ಷಾರಂಭದಲ್ಲಿ ಕಿರೋನ್ ಪೊಲಾರ್ಡ್ ಈ ದಾಖಲೆಯನ್ನು ಮುರಿದಿದ್ದರು. 455 ಇನಿಂಗ್ಸ್‌ಗಳಲ್ಲಿ 14,562 ರನ್ ಗಳಿಸಿರುವ ಗೇಲ್ ಇದೀಗ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ವೆಸ್ಟ್‌ಇಂಡೀಸ್‌ನ ಮಾಜಿ ಆರಂಭಿಕ ಆಟಗಾರ 144.75ರ ಸ್ಟ್ರೈಕ್‌ರೇಟ್‌ನಲ್ಲಿ 88 ಅರ್ಧಶತಕ ಹಾಗೂ 22 ಶತಕಗಳನ್ನು ಗಳಿಸಿದ್ದಾರೆ.

ವೆಸ್ಟ್‌ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕಿರೋನ್ ಪೊಲಾರ್ಡ್ 663 ಇನಿಂಗ್ಸ್‌ಗಳಲ್ಲಿ 151.02ರ ಸ್ಟ್ರೈಕ್‌ರೇಟ್‌ನಲ್ಲಿ 70 ಅರ್ಧಶತಕ ಹಾಗೂ ಎರಡು ಶತಕಗಳ ಸಹಿತ 14,803 ರನ್ ಗಳಿಸಿ ಸಾರ್ವಕಾಲಿಕ ಶ್ರೇಷ್ಠ ಟಿ-20 ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬಟ್ಲರ್ ಇದೀಗ ಅಗ್ರ ಸ್ಥಾನಕ್ಕೇರಲು ಕೇವಲ 231 ರನ್‌ನಿಂದ ಹಿಂದಿದ್ದಾರೆ.

18 ತಿಂಗಳ ಕಾಲ ತನ್ನ ವೃತ್ತ್ತಿಜೀವನದ ಅತ್ಯಂತ ಕಠಿಣ ಸಮಯ ಎದುರಿಸಿದ್ದ ಬಟ್ಲರ್ 2026ರಲ್ಲಿ ತನ್ನ ಲಯವನ್ನು ಕಂಡುಕೊಂಡಿದ್ದರು. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ 152.46ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 526 ರನ್ ಗಳಿಸಿದ್ದರು. ಟೂರ್ನಿಯ ಓರ್ವ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಮತ್ತೊಮ್ಮೆ ಮಿಂಚಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತನ್ನ ಫಾರ್ಮ್ ಮುಂದುವರಿಸಿದ್ದ ಬಟ್ಲರ್ ಭಾರತ ತಂಡದ ವಿರುದ್ಧ ಇತ್ತೀಚೆಗೆ ಟಿ-20 ಸರಣಿಯ ಕೊನೆಯ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ ಔಟಾಗದೆ 131 ರನ್ ಗಳಿಸಿದ್ದರು. ಪುರುಷರ ಟಿ-20ಯಲ್ಲಿ ಭಾರತ ತಂಡದ ವಿರುದ್ಧ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಇದಾಗಿದೆ.

ಬಟ್ಲರ್ ಇಂಗ್ಲೆಂಡ್ ತಂಡದ ಪರವಾಗಿ ಟಿ-20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. 160 ಪಂದ್ಯಗಳ ಪೈಕಿ 148.93ರ ಸ್ಟ್ರೈಕ್‌ರೇಟ್‌ನಲ್ಲಿ 28 ಅರ್ಧಶತಕ ಹಾಗೂ ಎರಡು ಶತಕಗಳ ಸಹಿತ ಒಟ್ಟು 4,212 ರನ್ ಗಳಿಸಿದ್ದಾರೆ.

ಸಾರ್ವಕಾಲಿಕ ಪುರುಷರ ಟಿ-20 ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ಸದ್ಯಬಟ್ಲರ್ ಅವರು ಪಾಕಿಸ್ತಾನದ ಬಾಬರ್ ಆಝಮ್(4,596)ಹಾಗೂ ಭಾರತದ ರೋಹಿತ್ ಶರ್ಮಾ(4,231)ನಂತರ ಮೂರನೇ ಸ್ಥಾನದಲ್ಲಿದ್ದಾರೆ.

35ರ ಹರೆಯದ ಬಟ್ಲರ್ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್‌ನ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ 3,000 ಹಾಗೂ 4,000 ರನ್ ಪೂರೈಸಿದ ಇಂಗ್ಲೆಂಡ್‌ನ ಏಕೈಕ ಬ್ಯಾಟರ್ ಆಗಿದ್ದಾರೆ. ಮಾಜಿ ನಾಯಕ ಮೊರ್ಗನ್ ಮಾತ್ರ 115 ಟಿ-20 ಪಂದ್ಯಗಳಲ್ಲಿ 2,458 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News