ಫಿಫಾ ವಿಶ್ವಕಪ್ ಫೈನಲ್ ವೇಳೆ ಘರ್ಷಣೆ : ಕ್ಷಮೆ ಕೋರಲು ಲೀಆಂಡ್ರೊ ಪಾರೇಡೆಸ್ ನಿರಾಕರಣೆ

Update: 2026-07-21 22:04 IST

Photo Credit : PTI 

ಹೊಸದಿಲ್ಲಿ, ಜು. 21: ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯ ಮುಕ್ತಾಯದ ಬಳಿಕ ಸಂಭವಿಸಿದ ಘರ್ಷಣೆಯಲ್ಲಿ ತಾನು ವಹಿಸಿದ ಪಾತ್ರಕ್ಕೆ ಕ್ಷಮೆ ಕೋರಲು ಅರ್ಜೆಂಟೀನ ತಂಡದ ಆಟಗಾರ ಲೀಆಂಡ್ರೊ ಪಾರೇಡೆಸ್ ನಿರಾಕರಿಸಿದ್ದಾರೆ.

ಅಮೆರಿಕದ ನ್ಯೂಜರ್ಸಿಯಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ, ಹೆಚ್ಚುವರಿ ಅವಧಿಯಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಸ್ಪೇನ್ ತಂಡವು ಅರ್ಜೆಂಟೀನವನ್ನು 1-0 ಅಂತರದಿಂದ ಸೋಲಿಸಿತು. ಆ ಮೂಲಕ ಸ್ಪೇನ್ ತನ್ನ ಎರಡನೇ ವಿಶ್ವಕಪ್‌ನ್ನು ಎತ್ತಿತು.

ಫೈನಲ್ ಬಳಿಕ ಘರ್ಷಣೆ ಸಂಭವಿಸಿದ್ದು, ಪಾರೇಡೆಸ್ ಎದುರಾಳಿ ತಂಡದ ಆಟಗಾರರೊಂದಿಗೆ ಹೊಯ್‌ಕೈ ನಡೆಸುತ್ತಿರುವುದು ಕ್ಯಾಮೆರಾಗಳಲ್ಲಿ ದಾಖಲಾಗಿದೆ.

ಫೈನಲ್ ಪಂದ್ಯದ ಬಳಿಕ ನೀಡಿದ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ, ಪಾರೇಡೆಸ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಮೈದಾನದಲ್ಲಿ ಸ್ಪೇನ್‌ನ ಸಂಭ್ರಮಾಚರಣೆ ವೇಳೆ ನಡೆದ ಘರ್ಷಣೆ ಬಗ್ಗೆ ಏನೂ ಹೇಳಲಿಲ್ಲ.

‘‘ಧನ್ಯವಾದಗಳು ಅರ್ಜೆಂಟೀನ! ನಾನು ನಿನ್ನನ್ನು ಇಂದು ಮತ್ತು ಯಾವಾಗಲೂ ಪ್ರೀತಿಸುತ್ತೇನೆ. ವಿಶ್ವಕಪ್ ಪ್ರಶಸ್ತಿಗೆ ನಮ್ಮ ದೇಶವು ಅತ್ಯಂತ ಅರ್ಹವಾಗಿದೆ. ಆದರೆ, ಆ ಟ್ರೋಫಿಯನ್ನು ತರಲು ಸಾದ್ಯವಾಗಲಿಲ್ಲ. ಹಾಗಾಗಿ, ಈಗ ಭಾರವಾದ ಹೃದಯದಿಂದ ಇದನ್ನು ಬರೆಯುತ್ತಿದ್ದೇನೆ. ಆದರೆ, ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅದಕ್ಕಾಗಿ ವಿನಿಯೋಗಿಸಿರುವ ಹೆಮ್ಮೆ ಎದೆಯ ತುಂಬಾ ಇದೆ’’ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಆದರೆ, ಫೈನಲ್ ಪಂದ್ಯದ ಬಳಿಕ ನಡೆದ ಘರ್ಷಣೆಯ ಬಗ್ಗೆ ಅವರು ಏನೂ ಹೇಳಲಿಲ್ಲ ಅಥವಾ ಕ್ಷಮೆ ಕೋರಿಲ್ಲ.

ತನಿಖೆಗೆ ಫಿಫಾ ಆದೇಶ

ಫೈನಲ್ ಪಂದ್ಯದ ಮುಕ್ತಾಯದ ಬಳಿಕ, ಅರ್ಜೆಂಟೀನ ಮತ್ತು ಸ್ಪೇನ್ ತಂಡಗಳ ಆಟಗಾರರ ನಡುವೆ ಮೈದಾನದಲ್ಲಿ ನಡೆದ ಘರ್ಷಣೆಯ ಬಗ್ಗೆ ತನಿಖೆಗೆ ಫಿಫಾ ಸೋಮವಾರ ಆದೇಶಿಸಿದೆ.

‘‘ಸ್ಪೇನ್ ಮತ್ತು ಅರ್ಜೆಂಟೀನ ತಂಡಗಳ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವರದಿಗಳನ್ನು ಪರಿಶೀಲಿಸಿದ ಬಳಿಕ, ಹಾಗೂ ಫಿಫಾ ಶಿಸ್ತು ಸಂಹಿತೆಯ ವಿಧಿ 36ಕ್ಕೆ ಅನುಗುಣವಾಗಿ ಪಂದ್ಯಾ ನಂತರ ಘಟನೆಗಳ ಬಗ್ಗೆ ತನಿಖೆ ನಡೆಸಲು ಫಿಫಾ ಶಿಸ್ತು ಸಮಿತಿಯು ಶಿಸ್ತು ಮತ್ತು ನೈತಿಕತೆ ಪ್ರಾಸಿಕ್ಯೂಟರ್ ಒಬ್ಬರನ್ನು ನೇಮಿಸಿದೆ’’ ಎಂದು ಫಿಫಾ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News