2026ರ ಆವೃತ್ತಿಯ ಯುಎಸ್ ಓಪನ್ ಟೆನಿಸ್ ಟೂರ್ನಿ : ಅಗ್ರ ಶ್ರೇಯಾಂಕ ಪಡೆದ ಸಿನ್ನರ್, ಸಬಲೆಂಕಾ

Update: 2026-07-22 21:14 IST

ಜನ್ನಿಕ್ ಸಿನ್ನರ್ | Photo Credit : PTI , AP 

ನ್ಯೂಯಾರ್ಕ್, ಜು.22: ಮುಂದಿನ ತಿಂಗಳು ಆರಂಭವಾಗಲಿರುವ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್ ಆರ್ಯನಾ ಸಬಲೆಂಕಾ ಹಾಗೂ ವಿಂಬಲ್ಡನ್ ವಿನ್ನರ್  ಜನ್ನಿಕ್ ಸಿನ್ನರ್ ಅಗ್ರ ಶ್ರೇಯಾಂಕವನ್ನು ಪಡೆದಿದ್ದಾರೆ.

ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್ ಟೂರ್ನಮೆಂಟ್‌ಗೆ ಅಮೆರಿಕದ ಟೆನಿಸ್ ಅಸೋಸಿಯೇಶನ್ ಮಂಗಳವಾರ ನೇರ ಪ್ರವೇಶ ಪಟ್ಟಿಯನ್ನು ಪ್ರಕಟಿಸಿದೆ. ಡಬ್ಲ್ಯುಟಿಎ ಹಾಗೂ ಎಟಿಪಿ ಟೂರ್‌ನ ಜುಲೈ 20ರ ರ್ಯಾಂಕಿಂಗ್ ಆಧರಿಸಿ ಶ್ರೇಯಾಂಕ ನೀಡಲಾಗಿದೆ.

ಸಿನ್ನರ್ ಅವರು ಯು.ಎಸ್. ಓಪನ್‌ನಲ್ಲಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳಲು ಯತ್ನಿಸಲಿದ್ದಾರೆ. ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಮಣಿಸಿದ್ದ ಅಗ್ರ ರ್ಯಾಂಕಿನ ಇಟಲಿ ಆಟಗಾರ ಸಿನ್ನರ್ ತನ್ನ ಐದನೇ ಪ್ರಮುಖ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದರು.

ಮಣಿಕಟ್ಟಿನ ಗಾಯದಿಂದಾಗಿ ಕಳೆದ ಎರಡು ಪ್ರಮುಖ ಟೂರ್ನಿಗಳಿಂದ ವಂಚಿತರಾಗಿದ್ದ ವಿಶ್ವದ ನಂ.3ನೇ ಆಟಗಾರ ಅಲ್ಕರಾಝ್ ಯು.ಎಸ್. ಓಪನ್‌ನಲ್ಲಿ ಶ್ರೇಷ್ಠ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

ಅಮೆರಿಕದ ಓಪನ್ ಟೂರ್ನಿಯಲ್ಲಿ 14 ಪುರುಷರು ಹಾಗೂ 14 ಮಹಿಳೆಯರು ನೇರ ಪ್ರವೇಶ ಪಡೆದಿದ್ದಾರೆ. 102ನೇ ರ್ಯಾಂಕಿನ ಆಟಗಾರ್ತಿ ಅನಸ್ತೇಸಿಯಾ ಝಖರೋವಾ ಹಾಗೂ ವಿಶ್ವದ ನಂ.101ನೇ ಆಟಗಾರ ಫಿಲಿಪ್ ಮಿಸೋಲಿಕ್ ಕೂಡ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಪಟ್ಟಿಯಲ್ಲಿದ್ದಾರೆ.

ಉಳಿದ 128 ಆಟಗಾರರು ಯುಎಸ್‌ಟಿಎ ನೀಡುವ ವೈಲ್ಡ್‌ಕಾರ್ಡ್‌ಗಳ ಮೂಲಕ ಕಣಕ್ಕಿಳಿಯಲಿದ್ದಾರೆ. ಆರೋಗ್ಯವಾಗಿದ್ದು, ಆಡುವ ಯೋಜನೆ ಇದ್ದರೆ ವಿಲಿಯಮ್ಸ್ ಸಹೋದರಿಯರು ವೈಲ್ಡ್‌ಕಾರ್ಡ್ ಪಡೆಯುವ ನಿರೀಕ್ಷೆ ಇದೆ. 44ರ ಹರೆಯದ ಸೆರೆನಾ ಟೆನಿಸ್‌ಗೆ ಪುನರಾಗಮನ ಮಾಡಿದ್ದರು. ಆದರೆ ಅವರು ವಿಂಬಲ್ಡನ್ ಟೂರ್ನಿಯ ಮೊದಲ ಸುತ್ತಿನಲ್ಲಿ ತನ್ನ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು.

ಆಗಸ್ಟ್ 30ರಂದು ರವಿವಾರ ಪ್ರಧಾನ ಸುತ್ತು ಆರಂಭವಾಗುವ ವಾರದ ಮೊದಲು ಅರ್ಹತಾ ಟೂರ್ನಮೆಂಟ್ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News