Asian para games | ಕಾಂಪೌಂಡ್ ಮಹಿಳೆಯರ ಡಬಲ್ಸ್ ಬಿಲ್ಲುಗಾರಿಕೆ; ಶೀತಲ್ ದೇವಿ, ಪಾಯಲ್ ನಾಗ್ ಗೆ ಬೆಳ್ಳಿ
Photo Credit : x
ನಗೋಯ, ಅ. 21: ಏಷ್ಯನ್ ಪ್ಯಾರಾ ಗೇಮ್ಸ್ನ ಬಿಲ್ಲುಗಾರಿಕೆ ಸ್ಪರ್ಧೆಯ ಕಾಂಪೌಂಡ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಶೀತಲ್ ದೇವಿ ಮತ್ತು ಪಾಯಲ್ ನಾಗ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಇದೇ ವೇಳೆ, ಸ್ವಾತಿ ಚೌಧರಿ ಮತ್ತು ಆದಿಲ್ ಮುಹಮ್ಮದ್ ನಜೀರ್ ಅನ್ಸಾರಿ ಜೋಡಿ ಮಿಶ್ರ ತಂಡದ ಡಬ್ಲ್ಯು1 ರಿಕರ್ವ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದೆ.
ಕೈಗಳಿಲ್ಲದೆ ಜನಿಸಿದ ಶೀತಲ್ ಹಾಗೂ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿರುವ ಪಾಯಲ್, ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಕ್ಸು ಕ್ಸುಕಿಂಗ್ ಮತ್ತು ಝಾವೋ ಜಿಂಗ್ ವಿರುದ್ಧ 141–150 ಅಂಕಗಳಿಂದ ಸೋಲನುಭವಿಸಿದರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನ ಕಂಚಿನ ಪದಕ ವಿಜೇತೆ ಶೀತಲ್ ಸ್ಥಿರ ಪ್ರದರ್ಶನ ನೀಡಿ ನಾಲ್ಕು ಬಾರಿ 10 ಅಂಕಗಳನ್ನು ಗಳಿಸಿದರು. ಆದರೆ, ಚೊಚ್ಚಲ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಆಡುತ್ತಿರುವ ಪಾಯಲ್ಗೆ ತಮ್ಮ ಜೊತೆಗಾರ್ತಿಯ ನಿಖರತೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ. ಅವರು 9 ಮತ್ತು 8 ಅಂಕಗಳನ್ನು ಗಳಿಸಿದರಲ್ಲದೆ, ಕೊನೆಯ ಬಾಣದಲ್ಲಿ 7 ಅಂಕ ಪಡೆಯಲಷ್ಟೇ ಶಕ್ತರಾದರು.
ಏಷ್ಯನ್ ಗೇಮ್ಸ್ ನಲ್ಲಿ ಶೀತಲ್ಗೆ ಇದು ಸತತ ಎರಡನೇ ಬೆಳ್ಳಿ ಪದಕವಾಗಿದೆ. ಹಿಂದಿನ ಆವೃತ್ತಿಯ ಕ್ರೀಡಾಕೂಟದಲ್ಲಿ ಅವರು ಸರಿತಾ ದೇವಿ ಜೊತೆಗೂಡಿ ರನ್ನರ್ ಅಪ್ ಆಗಿದ್ದರು.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಲೋಯಿಧಾರ್ ಗ್ರಾಮದವರಾದ ಶೀತಲ್, ‘ಫೋಕೊಮೆಲಿಯಾ’ ಎಂಬ ಅಪರೂಪದ ಜನ್ಮಜಾತ ಕಾಯಿಲೆಯೊಂದಿಗೆ ಜನಿಸಿದ್ದು, ಅವರ ತೋಳುಗಳು ಸಂಪೂರ್ಣವಾಗಿ ಬೆಳೆದಿರಲಿಲ್ಲ.
ಪಾಯಲ್ ಗೆ ಎಂಟು ವರ್ಷವಾಗಿದ್ದಾಗ 11,000 ವೋಲ್ಟ್ನ ಹೈ-ಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ಗಂಭೀರವಾಗಿ ಗಾಯಗೊಂಡಿದ್ದರು. ಪರಿಣಾಮ, ಅವರ ಎರಡೂ ಕೈ ಮತ್ತು ಕಾಲುಗಳನ್ನು ಕತ್ತರಿಸಬೇಕಾಯಿತು.
► ಮಿಶ್ರ ತಂಡ ವಿಭಾಗದಲ್ಲಿ ಕಂಚು
ಬಿಲ್ಲುಗಾರಿಕೆಯ ಮಿಶ್ರ ತಂಡದ ಡಬ್ಲ್ಯು1 ರಿಕರ್ವ್ ವಿಭಾಗದಲ್ಲಿ ಸ್ವಾತಿ ಚೌಧರಿ ಮತ್ತು ಆದಿಲ್ ಮುಹಮ್ಮದ್ ನಜೀರ್ ಅನ್ಸಾರಿ ಕಂಚಿನ ಪದಕ ಗೆದ್ದಿದ್ದಾರೆ.
ಎರಡನೇ ಶ್ರೇಯಾಂಕದ ಭಾರತೀಯ ಜೋಡಿ ಸೆಮಿಫೈನಲ್ನಲ್ಲಿ ಮೂರನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಕಿಮ್ ಓಕ್ ಗ್ಯುಮ್ ಮತ್ತು ಪಾರ್ಕ್ ಹಾಂಗ್ ಜೊ ವಿರುದ್ಧ 36–38, 33–35, 33–32, 31–35 ಅಂಕಗಳಿಂದ ಸೋಲನುಭವಿಸಿತು.
ಈ ಸ್ಪರ್ಧೆಯಲ್ಲಿ ಕೇವಲ ಮೂರು ತಂಡಗಳು ಭಾಗವಹಿಸಿದ್ದರಿಂದ ಕಂಚಿನ ಪದಕಕ್ಕಾಗಿ ಪ್ರತ್ಯೇಕ ಪಂದ್ಯ ನಡೆಯಲಿಲ್ಲ. ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಚೀನಾ ತಂಡವನ್ನು ಶೂಟ್ಆಫ್ನಲ್ಲಿ 5–4 (17–15) ಅಂಕಗಳಿಂದ ಸೋಲಿಸಿದ ದಕ್ಷಿಣ ಕೊರಿಯಾ ಚಿನ್ನದ ಪದಕ ಗೆದ್ದುಕೊಂಡಿತು.
ಡಬ್ಲ್ಯು1 ವಿಭಾಗವು ಕೈ ಮತ್ತು ಕಾಲುಗಳಲ್ಲಿ ಗಂಭೀರ ನ್ಯೂನತೆಗಳನ್ನು ಹೊಂದಿದ್ದು, ಗಾಲಿಕುರ್ಚಿ ಬಳಸುವ ಕ್ರೀಡಾಪಟುಗಳಿಗಾಗಿ ರೂಪಿಸಲಾಗಿದೆ.