ಫ್ರೆಂಚ್ ಓಪನ್: ಮೊದಲ ಸುತ್ತಿನಲ್ಲೇ ಹೊರಬಿದ್ದ ಉನ್ನತಿ ಹೂಡಾ
ಉನ್ನತಿ ಹೂಡಾ | Photo Credit : PTI
ಪ್ಯಾರಿಸ್, ಅ. 21: ಫ್ರೆಂಚ್ ಓಪನ್ 2026 ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಬುಧವಾರ ಭಾರತದ ಉನ್ನತಿ ಹೂಡಾ ಹೊರಬಿದ್ದಿದ್ದಾರೆ. ಅವರನ್ನು ಜಪಾನ್ನ ರಿಕೋ ಗುಂಜಿ ಮೂರು ಗೇಮ್ಗಳ ಹೋರಾಟದಲ್ಲಿ 21-18, 12-21, 21-17 ಅಂತರದಿಂದ ಪರಾಭವಗೊಳಿಸಿದರು.
21 ನಿಮಿಷಗಳ ಕಾಲ ತೀವ್ರ ಪೈಪೋಟಿಯಿಂದ ಕೂಡಿದ್ದ ಮೊದಲ ಗೇಮ್ನಲ್ಲಿ ಉನ್ನತಿ 18-21 ಅಂತರದಿಂದ ಹಿನ್ನಡೆ ಅನುಭವಿಸಿದರು. ಆದರೆ, ಎರಡನೇ ಗೇಮ್ನಲ್ಲಿ ಅವರು ಪ್ರಬಲ ಪ್ರತಿಹೋರಾಟ ನೀಡಿದರು. ಮಧ್ಯಂತರದ ವೇಳೆಗೆ 11-6 ಅಂತರದ ಮುನ್ನಡೆ ಸಾಧಿಸಿದ ಭಾರತೀಯ ಆಟಗಾರ್ತಿ, ನಂತರ ಅದನ್ನು 16-8ಕ್ಕೆ ಹೆಚ್ಚಿಸಿಕೊಂಡು, ಅಂತಿಮವಾಗಿ ಆ ಗೇಮ್ ಅನ್ನು 21-12ರಿಂದ ಗೆದ್ದು ಪಂದ್ಯವನ್ನು ನಿರ್ಣಾಯಕ ಮೂರನೇ ಗೇಮ್ಗೆ ಕೊಂಡೊಯ್ದರು.
ಮೂರನೇ ಗೇಮ್ನ ಆರಂಭಿಕ ಹಂತದಲ್ಲಿ ಇಬ್ಬರ ನಡುವೆ ಸಮಬಲದ ಪೈಪೋಟಿ ಕಂಡುಬಂದರೂ, ನಂತರ ಗುಂಜಿ ಮೇಲುಗೈ ಸಾಧಿಸಿ 18-12ರ ಮುನ್ನಡೆ ಪಡೆದರು. ಜಪಾನಿ ಶಟ್ಲರ್ ತನ್ನ ಮುನ್ನಡೆಯನ್ನು ಕಾಯ್ದುಕೊಂಡು ಅಂತಿಮ ಗೇಮ್ ಅನ್ನು 21-17ರಿಂದ ಗೆದ್ದು ಪಂದ್ಯವನ್ನು ವಶಪಡಿಸಿಕೊಂಡರು.
ಈ ಗೆಲುವಿನೊಂದಿಗೆ ಉನ್ನತಿ ವಿರುದ್ಧದ ಮುಖಾಮುಖಿಯಲ್ಲಿ ಗುಂಜಿ ತಮ್ಮ ಅಜೇಯ ದಾಖಲೆಯನ್ನು ಮುಂದುವರಿಸಿದ್ದಾರೆ. ಇದಕ್ಕೂ ಮುನ್ನ 2025ರ ಜರ್ಮನ್ ಓಪನ್ನಲ್ಲಿ ನಡೆದ ಇವರ ಏಕೈಕ ಮುಖಾಮುಖಿಯಲ್ಲೂ ಗುಂಜಿ ಗೆಲುವು ಸಾಧಿಸಿದ್ದರು.
ಉನ್ನತಿ ಅವರ ನಿರ್ಗಮನದೊಂದಿಗೆ ಫ್ರೆಂಚ್ ಓಪನ್ನಲ್ಲಿ ಭಾರತದ ನೀರಸ ಪ್ರದರ್ಶನ ಮುಂದುವರಿದಿದೆ. ಈಗಾಗಲೇ ಭಾರತದ ಸಾತ್ವಿಕ್-ಚಿರಾಗ್ ಜೋಡಿ ಮತ್ತು ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಜೋಡಿ ಪಂದ್ಯಾವಳಿಯಿಂದ ಹೊರಬಿದ್ದಿವೆ.