Asian Para Games | 100 ಮೀಟರ್ ಟಿ47 ವಿಭಾಗ: ದಿಲೀಪ್ ಗವಿತ್ಗೆ ಚಿನ್ನ, ಮುಹಮ್ಮದ್ ಬಾಸಿಲ್ ಗೆ ಬೆಳ್ಳಿ
Photo Credit: X/@ani_digital
ನಗೋಯ, ಅ. 21: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬುಧವಾರ ಪುರುಷರ 100 ಮೀಟರ್ ಸ್ಪರ್ಧೆಯ ಟಿ47 ವಿಭಾಗದಲ್ಲಿ ದಿಲೀಪ್ ಗವಿತ್ ಮಹಾದು ಚಿನ್ನದ ಪದಕ ಗೆದ್ದಿದ್ದಾರೆ. ಮುಹಮ್ಮದ್ ಬಾಸಿಲ್ ಮೋರ್ಸಿಂಗನಕಟ್ಟಿ ಬೆಳ್ಳಿ ಪದಕ ಪಡೆದರು.
ಗವಿತ್ ಮಹಾದು 10.69 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಭಾರತದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ ಬಾಸಿಲ್ 10.72 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಬೆಳ್ಳಿ ಪದಕ ಪಡೆಯುವುದರ ಜೊತೆಗೆ ನೂತನ ಕೂಟ ದಾಖಲೆಯನ್ನೂ ನಿರ್ಮಿಸಿದರು.
2026ರ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 100 ಮೀಟರ್ ಟಿ47 ಸ್ಪರ್ಧೆಯಲ್ಲಿ ದಿಲೀಪ್ ಗವಿತ್ ಕೂಟ ದಾಖಲೆಯೊಂದಿಗೆ ಚಿನ್ನ ಮತ್ತು ಬಾಸಿಲ್ ಮೋರ್ಸಿಂಗನಕಟ್ಟಿ ಬೆಳ್ಳಿ ಗೆದ್ದಿದ್ದರು. ಈ ಜೋಡಿ ಅದೇ ಸಾಧನೆಯನ್ನು ಏಶ್ಯನ್ ಗೇಮ್ಸ್‌ನಲ್ಲೂ ಪುನರಾವರ್ತಿಸಿತು.
ದಿಲೀಪ್ ಗವಿತ್ ಈ ಹಿಂದೆ 2022ರ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ 400 ಮೀಟರ್ ಟಿ47 ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಕ್ರೀಡಾಕೂಟದಲ್ಲಿ ಭಾರತಕ್ಕೆ ಐತಿಹಾಸಿಕ 100ನೇ ಪದಕ ತಂದುಕೊಟ್ಟಿದ್ದರು. ಬಳಿಕ ಪ್ಯಾರಿಸ್ 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ 400 ಮೀಟರ್ ಟಿ47 ಸ್ಪರ್ಧೆಯ ಫೈನಲ್ ಪ್ರವೇಶಿಸಿ ದೇಶ ಹೆಮ್ಮೆಪಡುವಂತೆ ಮಾಡಿದ್ದರು.
ಮಹಾರಾಷ್ಟ್ರದ ನಾಸಿಕ್ ಬಳಿಯ ತೋರನ್ ಡೊಂಗ್ರಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ದಿಲೀಪ್ ಗವಿತ್ ಸಾಮಾನ್ಯ ಕೃಷಿ ಕುಟುಂಬದಲ್ಲಿ ಬೆಳೆದವರು. ಐದಾರು ವರ್ಷದವರಿದ್ದಾಗ ಮರದಿಂದ ಬಿದ್ದು ಅವರ ಬಲಗೈಗೆ ತೀವ್ರ ಗಾಯವಾಗಿತ್ತು.
ಸಕಾಲದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣ ಗಾಯವು ಗ್ಯಾಂಗ್ರೀನ್ ಆಗಿ ಪರಿವರ್ತನೆಗೊಂಡು, ಮೊಣಕೈ ಕೆಳಭಾಗದ ಕೈಯನ್ನು ಕತ್ತರಿಸಿ ತೆಗೆಯಬೇಕಾಯಿತು. ಈ ಹಿನ್ನಡೆಯ ನಡುವೆಯೂ ಅಂಗವೈಕಲ್ಯವು ತಮ್ಮ ಭವಿಷ್ಯವನ್ನು ನಿರ್ಧರಿಸಲು ಅವರು ಬಿಡಲಿಲ್ಲ. ಕ್ರೀಡೆಯಲ್ಲಿ ಸಾಧನೆಗೈಯಲು ನಿರ್ಧರಿಸಿದರು.