ಆ. 22ರಂದು ಭಾರತ-ನ್ಯೂಝಿಲ್ಯಾಂಡ್ ಮೊದಲ ಟಿ20
ವೇಗದ ಬೌಲಿಂಗ್ ಗೆ ಪೂರಕ ಪಿಚ್ ನಲ್ಲಿ ಅಯ್ಯರ್ ಬಳಗಕ್ಕೆ ಕಠಿಣ ಸವಾಲು
Photo Credit: timesofindia
ಕ್ರೈಸ್ಟ್‌ಚರ್ಚ್, ಅ. 21: ಪ್ರವಾಸಿ ಭಾರತ ಮತ್ತು ಆತಿಥೇಯ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಗುರುವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.
ಇಲ್ಲಿ ನಡೆದ ಕಳೆದ ಎರಡು ಟಿ20 ಸರಣಿಗಳಲ್ಲಿ ಅಜೇಯವಾಗಿ ಉಳಿದಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ಆತಿಥೇಯ ತಂಡವನ್ನು ಕಟ್ಟಿಹಾಕಲು ತನ್ನ ಬ್ಯಾಟಿಂಗ್ ಶಕ್ತಿಯನ್ನೇ ಹೆಚ್ಚು ನೆಚ್ಚಿಕೊಳ್ಳಲಿದೆ.
ಈ ಪ್ರವಾಸದಲ್ಲಿ ಭಾರತ ಒಂದು ಸಮಸ್ಯೆಯನ್ನು ಎದುರಿಸುತ್ತಿದೆ. ಮೇಲ್ನೋಟಕ್ಕೆ ಅನನುಭವಿ ಆಟಗಾರರೇ ಹೆಚ್ಚಿರುವಂತೆ ಕಾಣುವ ಭಾರತ ತಂಡಕ್ಕೆ ವಿಶ್ರಾಂತಿ ಪಡೆಯಲು, ಇಲ್ಲಿನ ಹವಾಮಾನಕ್ಕೆ ಒಗ್ಗಿಕೊಳ್ಳಲು ಮತ್ತು ಅಭ್ಯಾಸ ನಡೆಸಲು ಕೇವಲ ಎರಡು ದಿನಗಳ ಕಾಲಾವಕಾಶ ಮಾತ್ರ ಸಿಕ್ಕಿದೆ.
ನ್ಯೂಝಿಲ್ಯಾಂಡ್ ನೆಲದಲ್ಲಿ ಭಾರತ ಕೊನೆಯದಾಗಿ ಟಿ20 ಪಂದ್ಯ ಆಡಿದ್ದು 2022ರಲ್ಲಿ ನೇಪಿಯರ್ ನಲ್ಲಿ. ಮಳೆಬಾಧಿತ ಆ ಪಂದ್ಯವು ಡಕ್ವರ್ತ್-ಲೂಯಿಸ್ ನಿಯಮದನ್ವಯ ಟೈ ಆಗಿತ್ತು. ಆದರೂ, ಮಳೆಯಿಂದ ರದ್ದಾಗದೆ ಪೂರ್ಣಗೊಂಡ ಏಕೈಕ ಪಂದ್ಯವನ್ನು ಗೆದ್ದಿದ್ದ ಭಾರತ ಆ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.
ಮುಂಬರುವ ಸರಣಿಗೆ ಆಯ್ಕೆಯಾಗಿರುವ ಬ್ಯಾಟರ್‌ಗಳ ಪೈಕಿ ಕೇವಲ ನಾಲ್ವರಿಗೆ ಈ ಹಿಂದೆ ನ್ಯೂಝಿಲ್ಯಾಂಡ್ ನಲ್ಲಿ ಟಿ20 ಪಂದ್ಯಗಳನ್ನು ಆಡಿದ ಅನುಭವವಿದೆ. ಅವರಲ್ಲಿ ನಾಯಕ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಸೇರಿದ್ದಾರೆ.
ಆದ್ದರಿಂದ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು 15 ವರ್ಷದ ನವತಾರೆ ವೈಭವ್ ಸೂರ್ಯವಂಶಿ ಅವರಂತಹ ಬಿರುಸಿನ ಆಟಗಾರರಿದ್ದರೂ, ಈ ಭಾಗದ ತಂಪು ಹವಾಮಾನ ಮತ್ತು ಸ್ವಿಂಗ್ ಗೆ ಪೂರಕವಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಸತತ ಎರಡನೇ ಚಿನ್ನ ತಂದುಕೊಟ್ಟ ನಂತರ ಹಾಗೂ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಕಠಿಣ ಸರಣಿಯನ್ನು ಡ್ರಾ ಮಾಡಿಕೊಂಡ ಬಳಿಕ ಇಲ್ಲಿಗೆ ಬಂದಿರುವ ಅಯ್ಯರ್ ಪಡೆಗೆ ಸಾಧ್ಯವಾದಷ್ಟು ಕಠಿಣ ಪೈಪೋಟಿ ನೀಡಲು ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡ ಕಾತರವಾಗಿದೆ.
ಸರಣಿಯುದ್ದಕ್ಕೂ ಪಿಚ್‌ನ ಪರಿಸ್ಥಿತಿಗಳು ಬದಲಾಗಬಹುದು ಎಂದು ನ್ಯೂಝಿಲ್ಯಾಂಡ್ ನಾಯಕ ಸ್ಯಾಂಟ್ನರ್ ನಿರೀಕ್ಷಿಸಿದ್ದಾರೆ. ಆದರೆ, ಬಲಿಷ್ಠ ಭಾರತೀಯ ಬ್ಯಾಟಿಂಗ್‌ಗೆ ಸಪಾಟು ಪಿಚ್‌ಗಳನ್ನು ನೀಡುವುದು ಸೂಕ್ತ ತಂತ್ರವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಚಿನ್ ರವೀಂದ್ರ ಗಾಯದಿಂದಾಗಿ ಹೊರಗುಳಿದಿರುವುದು ಅನುಭವಿ ಡೆವನ್ ಕಾನ್ವೇ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲಕ್ಕೇರಲು ಅವಕಾಶ ಕಲ್ಪಿಸಿದೆ.
ತಂಡಗಳು
ಭಾರತ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್.
ನ್ಯೂಝಿಲ್ಯಾಂಡ್: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಡೆವನ್ ಕಾನ್ವೇ, ಜೇಕಬ್ ಡಫಿ, ಲಾಕಿ ಫರ್ಗ್ಯೂಸನ್, ಝ್ಯಾಕ್ ಫೋಕ್ಸ್, ಮ್ಯಾಟ್ ಹೆನ್ರಿ, ಬೇವನ್ ಜೇಕಬ್ಸ್, ಕೈಲ್ ಜೇಮಿಸನ್, ಆ್ಯಡಮ್ ಮಿಲ್ನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್ ಮತ್ತು ನತಾನ್ ಸ್ಮಿತ್.
ಪಂದ್ಯ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ 12.30
► ಆಡುವ 11ರಲ್ಲಿ ಸೂರ್ಯವಂಶಿ ಇಲ್ಲ
ಆರಂಭಿಕ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ನಿರಂತರವಾಗಿ ರನ್ ಗಳಿಸುತ್ತಿರುವುದರಿಂದ, ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಸದ್ಯಕ್ಕೆ ಆಡುವ ಹನ್ನೊಂದರ ಬಳಗಕ್ಕೆ ಬರಲು ಸಾಧ್ಯವಿಲ್ಲ ಎಂದು ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಬುಧವಾರ ಹೇಳಿದ್ದಾರೆ.
ಆದರೂ, ಕಾಲಕ್ರಮೇಣ ಈ ಯುವ ಆಟಗಾರನಿಗೆ ಅವಕಾಶಗಳು ಸಿಗಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಮತ್ತು ಐರ್‌ಲ್ಯಾಂಡ್ ಪ್ರವಾಸಗಳಿಗೆ ಆಯ್ಕೆಯಾದ ನಂತರ, ನಿಯಮಿತ ಆರಂಭಿಕರಾದ ಅಭಿಷೇಕ್ ಮತ್ತು ಸ್ಯಾಮ್ಸನ್ ಅವರ ಸ್ಥಿರ ಪ್ರದರ್ಶನದ ಕಾರಣದಿಂದಾಗಿ ಭಾರತ ಆಡಿದ 21 ಟಿ20 ಪಂದ್ಯಗಳಲ್ಲಿ ಸೂರ್ಯವಂಶಿ ಕೇವಲ ಎಂಟು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತವು ತನ್ನ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಈ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು.