ಫುಟ್ಬಾಲ್ | UAE ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ ಭಾರತ
ಹೊಸದಿಲ್ಲಿ, ನ. 2: ಭಾರತದ ಅಂಡರ್-17 ಪುರುಷರ ಫುಟ್ಬಾಲ್ ತಂಡವು ರವಿವಾರ (ನ. 1) ಎಮಿರೇಟ್ಸ್ ಫುಟ್ಬಾಲ್ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೌಹಾರ್ದ ಪಂದ್ಯದಲ್ಲಿ ಆತಿಥೇಯ UAE ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದೆ.
2027ರ AFC ಅಂಡರ್-17 ಏಶ್ಯಕಪ್ ಅರ್ಹತಾ ಟೂರ್ನಿಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡವು UAE ವಿರುದ್ಧ ಎರಡು ಸೌಹಾರ್ದ ಪಂದ್ಯಗಳನ್ನು ಆಡುತ್ತಿದೆ. ಈ ಪೈಕಿ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಎರಡನೇ ಪಂದ್ಯವು ಬುಧವಾರ (ನ. 4) ನಡೆಯಲಿದೆ.
ಮಲೇಶ್ಯದಲ್ಲಿ ನ. 11ರಿಂದ 20ರವರೆಗೆ ನಡೆಯಲಿರುವ ಅರ್ಹತಾ ಟೂರ್ನಿಯಲ್ಲಿ ಭಾರತವು ‘ಇ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆತಿಥೇಯ ಮಲೇಶ್ಯ, ಫೆಲೆಸ್ತೀನ್, ಸಿಂಗಾಪುರ ಮತ್ತು ಗುವಾಮ್ ತಂಡಗಳು ಈ ಗುಂಪಿನಲ್ಲಿವೆ.
ಭಾರತ ತಂಡವು ನ. 11ರಂದು ಸಿಂಗಾಪುರ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ನ. 14ರಂದು ಗುವಾಮ್, ನ. 17ರಂದು ಫೆಲೆಸ್ತೀನ್ ಹಾಗೂ ನ. 20ರಂದು ಆತಿಥೇಯ ಮಲೇಶ್ಯ ತಂಡವನ್ನು ಎದುರಿಸಲಿದೆ.
ಭಾರತವು ಸತತ ಎರಡನೇ ಬಾರಿ AFC ಅಂಡರ್-17 ಏಶ್ಯಕಪ್ಗೆ ಅರ್ಹತೆ ಪಡೆಯುವ ಗುರಿ ಹೊಂದಿದೆ. ಅರ್ಹತಾ ಟೂರ್ನಿಯ ಏಳು ಗುಂಪುಗಳ ವಿಜೇತರು ಮಾತ್ರ 2027ರ ಮೇ 12ರಿಂದ 29ರವರೆಗೆ ಉಜ್ಬೆಕಿಸ್ತಾನದಲ್ಲಿ ನಡೆಯಲಿರುವ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ.