Photo: x.com/NobleTimesIndia

ಮೆಲ್ಬೋರ್ನ್:‌ ಸ್ಫೋಟಕ ಬ್ಯಾಟಿಂಗ್, ಅಸಾಧಾರಣ ಹೊಡೆತಗಳು ಮತ್ತು ಪಂದ್ಯವನ್ನೇ ತಿರುಗಿಸುವ ಸಾಮರ್ಥ್ಯದಿಂದ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದ ಆಸ್ಟ್ರೇಲಿಯಾದ ಆಲ್‌ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 'ದಿ ಬಿಗ್ ಶೋ' ಎಂದೇ ಖ್ಯಾತರಾಗಿರುವ 38 ವರ್ಷದ ಆಟಗಾರನ ಅಂತರರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ತೆರೆ ಬಿದ್ದಿದೆ.

ಮಂಗಳವಾರ ಬಿಡುಗಡೆಯಾದ 'ದಿ ಫೈನಲ್ ವರ್ಡ್' (The Final Word) ಪಾಡ್‌ ಕಾಸ್ಟ್‌ ನಲ್ಲಿ ಮ್ಯಾಕ್ಸ್‌ವೆಲ್ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ ನಿಂದ ಮಾತ್ರವಲ್ಲದೆ, ವಿಕ್ಟೋರಿಯಾ ತಂಡದ ಪರ ಆಡುವ ದೇಶೀಯ 50 ಓವರ್‌ ಗಳ ಹಾಗೂ ನಾಲ್ಕು ದಿನಗಳ ಪಂದ್ಯಗಳಿಂದಲೂ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪರ 149 ಏಕದಿನ, 130 ಟಿ20 ಅಂತರರಾಷ್ಟ್ರೀಯ ಹಾಗೂ ಏಳು ಟೆಸ್ಟ್ ಪಂದ್ಯಗಳನ್ನು ಆಡಿರುವ ಮ್ಯಾಕ್ಸ್‌ವೆಲ್, 2015 ಮತ್ತು 2023ರ ಏಕದಿನ ವಿಶ್ವಕಪ್ ಗೆದ್ದ ತಂಡಗಳ ಸದಸ್ಯರಾಗಿದ್ದರು. 2021ರ ಟಿ20 ವಿಶ್ವಕಪ್ ಗೆಲುವಿನಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

"ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ ನಿಂದ ಹಾಗೂ ವಿಕ್ಟೋರಿಯಾ ಪರ ಆಡುವ ದೇಶೀಯ 50 ಓವರ್‌ ಗಳ ಮತ್ತು ನಾಲ್ಕು ದಿನಗಳ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಇದರೊಂದಿಗೆ ರೆಡ್‌ ಬಾಲ್ ಕ್ರಿಕೆಟ್‌ ಗೂ ವಿದಾಯ ಹೇಳುತ್ತಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

ಮ್ಯಾಕ್ಸ್‌ವೆಲ್ ಅವರ ವೃತ್ತಿಜೀವನದಲ್ಲಿ ಇನ್ನೂ ಒಂದೆರಡು ಟೂರ್ನಿಗಳಲ್ಲಿ ಆಡುವ ಅವಕಾಶವಿದೆ. ಆ ಟೂರ್ನಿಗಳಲ್ಲಿ ಆಡಲು ದೇಹವನ್ನು ಸಿದ್ಧವಾಗಿಟ್ಟುಕೊಳ್ಳಬೇಕಿದೆ. ಹೀಗಾಗಿ ಇನ್ನು ಮುಂದೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಹೆಚ್ಚಿನ ಸಮಯ ನೀಡುವ ಉದ್ದೇಶದಿಂದ ನಿವೃತ್ತಿ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

"ನನ್ನ ವೃತ್ತಿಜೀವನದಲ್ಲಿ ಇನ್ನೂ ಒಂದೆರಡು ಟೂರ್ನಿಗಳಲ್ಲಿ ಆಡಬೇಕಿದೆ. ಅವುಗಳಲ್ಲಿ ಉತ್ತಮವಾಗಿ ಆಡಲು ದೇಹದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಅದಕ್ಕಾಗಿ ಸಮಯ ಮೀಸಲಿಡಲು ಬಯಸುತ್ತೇನೆ" ಎಂದು ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 3,990 ರನ್ ಹಾಗೂ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 2,897 ರನ್ ಗಳಿಸಿರುವ ಮ್ಯಾಕ್ಸ್‌ವೆಲ್, ಕಳೆದ ಫೆಬ್ರುವರಿಯಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್‌ ನಲ್ಲಿ ಒಮಾನ್ ವಿರುದ್ಧ ಆಡಿದ್ದರು. ಆಸ್ಟ್ರೇಲಿಯಾ ಪರ ಅವರ ಕೊನೆಯ ಪಂದ್ಯ ಅದಾಗಿತ್ತು.

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಐದು ಶತಕಗಳನ್ನು ಗಳಿಸಿರುವ ಮ್ಯಾಕ್ಸ್‌ವೆಲ್, ಭಾರತದ ರೋಹಿತ್ ಶರ್ಮಾ ಅವರೊಂದಿಗೆ ಈ ಸಾಧನೆ ಮಾಡಿದ ಕೇವಲ ಇಬ್ಬರು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಬೌಲಿಂಗ್‌ ನಲ್ಲಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿರುವ ಅವರು, ಆಫ್‌ ಸ್ಪಿನ್ ಮೂಲಕ ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 128 ವಿಕೆಟ್‌ ಗಳನ್ನು ಕಬಳಿಸಿದ್ದಾರೆ.

ಮ್ಯಾಕ್ಸ್‌ ವೆಲ್ ಕಳೆದ ವರ್ಷವೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಆದರೆ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ (ಎಂಸಿಜಿ)ನಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನಾಡಿ ಅಭಿಮಾನಿಗಳಿಂದ ವಿದಾಯ ಪಡೆಯುವ ಆಸೆ ಹೊಂದಿದ್ದರು.

ಇಂಗ್ಲೆಂಡ್ ವಿರುದ್ಧದ ಮುಂಬರುವ ಸರಣಿಗೆ ಆಸ್ಟ್ರೇಲಿಯಾ ಸೋಮವಾರ ತಂಡ ಪ್ರಕಟಿಸಿದ್ದು, ಮ್ಯಾಕ್ಸ್‌ ವೆಲ್‌ ಗೆ ಸ್ಥಾನ ನೀಡಿಲ್ಲ. ಸೀಮಿತ ಓವರ್‌ ಗಳ ಕ್ರಿಕೆಟ್‌ ನಲ್ಲಿ ಆಯ್ಕೆಗಾರರು ಯುವ ಆಟಗಾರರಿಗೆ ಆದ್ಯತೆ ನೀಡಿದ್ದಾರೆ. ಇದರಿಂದ ತವರು ಮೈದಾನದಲ್ಲಿ ಕೊನೆಯ ಪಂದ್ಯವನ್ನಾಡುವ ಅವರ ನಿರೀಕ್ಷೆ ಈಡೇರಿಲ್ಲ.

ಎಂಸಿಜಿಯಲ್ಲಿ ವಿದಾಯ ಪಂದ್ಯ ಆಡುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಹೊಂದಿದ್ದುದನ್ನು ಮ್ಯಾಕ್ಸ್‌ವೆಲ್ ಒಪ್ಪಿಕೊಂಡಿದ್ದಾರೆ. ಆದರೆ, ಆಯ್ಕೆಗಾರರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದ್ದಾರೆ.

"ಎಂಸಿಜಿಯಲ್ಲಿ ನನಗೆ ವಿದಾಯ ಪಂದ್ಯ ಆಡುವ ಅವಕಾಶ ಸಿಗಬಹುದು ಎಂಬ ಸಣ್ಣ ನಿರೀಕ್ಷೆ ಅಥವಾ ಚರ್ಚೆ ಇತ್ತು. ಆದರೆ, ತಂಡದ ಆಯ್ಕೆಯ ಮೂಲಕ ಅವರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂಬುದು ನನಗೆ ಸಂಪೂರ್ಣವಾಗಿ ಅರ್ಥವಾಗಿದೆ" ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor