IPL 2026 | ಕೊನೆಯ ಎರಡು ಪಂದ್ಯಗಳಿಗೂ ಮುನ್ನ ಲಕ್ನೊ ತಂಡ ತೊರೆದ ಮರ್ಕ್ರಮ್
ಮರ್ಕ್ರಮ್ | Photo Credit : BCCI
ಹೊಸದಿಲ್ಲಿ, ಮೇ 19: ಐಪಿಎಲ್ ಟೂರ್ನಿ ನಡೆಯುತ್ತಿರುವಾಗಲೇ ಮರ್ಕ್ರಮ್ ಅವರು ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ತೊರೆದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಪಂದ್ಯಾವಳಿಯ ಇನ್ನುಳಿದ ಪಂದ್ಯಗಳಿಂದ ಅವರು ಹೊರಗುಳಿದಿದ್ದಾರೆ. ಕೊನೆಯ ಎರಡು ಲೀಗ್ ಪಂದ್ಯಗಳು ಬಾಕಿ ಇರುವಾಗ ಮರ್ಕ್ರಮ್ ನಿರ್ಗಮನವು ಲಕ್ನೊ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.
ವೈಯಕ್ತಿಕ ಕಾರಣಗಳಿಂದಾಗಿ ಮರ್ಕ್ರಮ್ ಅವರು ದಕ್ಷಿಣ ಆಫ್ರಿಕಾಕ್ಕೆ ವಾಪಸಾಗಿದ್ದಾರೆ ಎಂದು ಇಎಸ್ಪಿಎನ್ಕ್ರಿಕ್ಇನ್ಫೋ ವರದಿ ಮಾಡಿದೆ. ಲಕ್ನೊ ತಂಡವು ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲು ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ. ದಕ್ಷಿಣ ಆಫ್ರಿಕಾದ ಬ್ಯಾಟರ್ ಮರ್ಕ್ರಮ್ ಮೇ 23ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೊ ತಂಡ ಆಡಲಿರುವ ಕೊನೆಯ ಲೀಗ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಲಕ್ನೊ ತಂಡವು ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಗುಳಿದಿದೆ. ಮರ್ಕ್ರಮ್ ಅನುಪಸ್ಥಿತಿಯು ಅಗ್ರ ನಾಲ್ಕು ಬ್ಯಾಟಿಂಗ್ ಕ್ರಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಲಕ್ನೊ ತಂಡವು ರಾಜಸ್ಥಾನ ಹಾಗೂ ಪಂಜಾಬ್ ವಿರುದ್ಧ ಇನ್ನುಳಿದ ಪಂದ್ಯಗಳನ್ನು ಆಡಲಿದೆ. ಈ ಎರಡು ತಂಡಗಳು ಈ ವರ್ಷದ IPLನ ಕೊನೆಯ ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡಲಿವೆ.