IPL 2026 | CSKಗೆ ಸೋಲು, ಹೈದರಾಬಾದ್ ಪ್ಲೇ-ಆಫ್ ಗೆ ಲಗ್ಗೆ
ಪ್ಯಾಟ್ ಕಮಿನ್ಸ್ ಗೆ ಮೂರು ವಿಕೆಟ್
photo credit : PTI
ಚೆನ್ನೈ, ಮೇ 18: ಇಶಾನ್ ಕಿಶನ್ (70 ರನ್, 47 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಹೆನ್ರಿಕ್ ಕ್ಲಾಸೆನ್ (47 ರನ್, 26 ಎಸೆತ, 6 ಬೌಂಡರಿ, 2 ಸಿಕ್ಸರ್) ಅವರ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ವಿಕೆಟ್ ಗಳ ಅಂತರದಿಂದ ಮಣಿಸಿದೆ.
ಈ ಗೆಲುವಿನ ಮೂಲಕ ತನ್ನ 13ನೇ ಪಂದ್ಯದಲ್ಲಿ 16 ಅಂಕ ಗಳಿಸಿದ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ತಂಡದೊಂದಿಗೆ ಪ್ಲೇ-ಆಫ್ ಗೆ ತೇರ್ಗಡೆಯಾಗಿದೆ.
ಸೋಮವಾರ ನಡೆದ 63ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಜಯಿಸಿದ CSK ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆತಿಥೇಯ CSK ತಂಡವು ಮಧ್ಯಮ ಸರದಿಯ ಬ್ಯಾಟರ್ ಗಳಾದ ಡೆವಾಲ್ಡ್ ಬ್ರೆವಿಸ್ (44 ರನ್, 27 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಕಾರ್ತಿಕ್ ಶರ್ಮಾ (32 ರನ್, 19 ಎಸೆತ, 3 ಬೌಂಡರಿ, 2 ಸಿಕ್ಸರ್) ಅವರ ಸಾಂದರ್ಭಿಕ ಬ್ಯಾಟಿಂಗ್ ಸಹಾಯದಿಂದ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಗಳ ನಷ್ಟಕ್ಕೆ 180 ರನ್ ಗಳಿಸಿತು.
ಗೆಲ್ಲಲು 181 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವು 19 ಓವರ್‌ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 181 ರನ್ ಗಳಿಸಿತು.
ಮೂರನೇ ಓವರ್ ನಲ್ಲಿ ಟ್ರಾವಿಸ್ ಹೆಡ್ (18 ರನ್) ವಿಕೆಟ್ ಕಳೆದುಕೊಂಡ ಹೈದರಾಬಾದ್ ಕಳಪೆ ಆರಂಭ ಪಡೆಯಿತು. ಅಭಿಷೇಕ್ ಶರ್ಮಾ (26 ರನ್, 21 ಎಸೆತ) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಮೂರನೇ ವಿಕೆಟ್ ಗೆ 75 ರನ್ ಜೊತೆಯಾಟ ನಡೆಸಿದ ಕಿಶನ್ ಹಾಗೂ ಕ್ಲಾಸೆನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕ್ಲಾಸೆನ್ (47 ರನ್) ವಿಕೆಟ್ ಉರುಳಿಸಿದ ನೂರ್ ಅಹ್ಮದ್ ಈ ಜೋಡಿಯನ್ನು ಬೇರ್ಪಡಿಸಿದರು. ಸಲೀಲ್ ಅರೋರ (10 ರನ್) ಹಾಗೂ ಆರ್. ಸ್ಮರಣ್ (5 ರನ್) ಗೆಲುವಿನ ವಿಧಿವಿಧಾನ ಪೂರೈಸಿದರು.
CSK ತಂಡದ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ (27 ರನ್, 13 ಎಸೆತ) ಹಾಗೂ ಋತುರಾಜ್ ಗಾಯಕ್ವಾಡ್ (15 ರನ್, 21 ಎಸೆತ) 2.3 ಓವರ್‌ಗಳಲ್ಲಿ 31 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು. ಸ್ಯಾಮ್ಸನ್ ಹಾಗೂ ಉರ್ವಿಲ್ ಪಟೇಲ್ (13 ರನ್) ಬೇಗನೆ ಔಟಾದರು. ಮೂರನೇ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿದ ಕಾರ್ತಿಕ್ ಶರ್ಮಾ ಹಾಗೂ ಗಾಯಕ್ವಾಡ್ ತಂಡವನ್ನು ಆಧರಿಸಿದರು. ಕಾರ್ತಿಕ್ ಹಾಗೂ ಗಾಯಕ್ವಾಡ್ ವಿಕೆಟ್ ಒಪ್ಪಿಸಿದಾಗ CSK ಸ್ಕೋರ್ 4 ವಿಕೆಟ್ ನಷ್ಟಕ್ಕೆ 100 ಆಗಿತ್ತು.
ಆಗ ಡೆವಾಲ್ಡ್ ಬ್ರೆವಿಸ್ (44 ರನ್, 27 ಎಸೆತ) ಹಾಗೂ ಶಿವಂ ದುಬೆ (26 ರನ್, 23 ಎಸೆತ) ಐದನೇ ವಿಕೆಟ್‌ಗೆ 59 ರನ್ ಜೊತೆಯಾಟದಲ್ಲಿ ಭಾಗಿಯಾಗಿ ತಂಡವನ್ನು ಗೌರವಾರ್ಹ ಮೊತ್ತದತ್ತ ಮುನ್ನಡೆಸಿದರು.
ಹೈದರಾಬಾದ್ ಪರ ನಾಯಕ ಪ್ಯಾಟ್ ಕಮಿನ್ಸ್ (3-28) ಯಶಸ್ವಿ ಪ್ರದರ್ಶನ ನೀಡಿದರು. ಸಾಕಿಬ್ ಹುಸೇನ್ (2-34) ಎರಡು ವಿಕೆಟ್ ಉರುಳಿಸಿದರು.
►ಸಂಕ್ಷಿಪ್ತ ಸ್ಕೋರ್
ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 180/7
(ಡೆವಾಲ್ಡ್ ಬ್ರೆವಿಸ್ 44, ಕಾರ್ತಿಕ್ ಶರ್ಮಾ 32, ಸಂಜು ಸ್ಯಾಮ್ಸನ್ 27, ಶಿವಂ ದುಬೆ 26, ಪ್ಯಾಟ್ ಕಮಿನ್ಸ್ 3-28, ಸಾಕಿಬ್ ಹುಸೇನ್ 2-34)
ಸನ್ ರೈಸರ್ಸ್ ಹೈದರಾಬಾದ್: 19 ಓವರ್‌ಗಳಲ್ಲಿ 181/5
(ಇಶಾನ್ ಕಿಶನ್ 70, ಹೆನ್ರಿಕ್ ಕ್ಲಾಸೆನ್ 47, ಮುಕೇಶ್ ಚೌಧರಿ 2-36)