ಪ್ಯಾಟ್ ಕುಮಿನ್ಸ್ | Photo Credit : PTI 

ಸಿಡ್ನಿ: 2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಚೆಂಡನ್ನು ವಿರೂಪಗೊಳಿಸಲು ಸ್ಯಾಂಡ್ ಪೇಪರ್ ಬಳಸಲಾಗಿತ್ತು ಎಂಬ ಆರೋಪ ಮತ್ತೆ ವಿವಾದದ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಆಸ್ಟ್ರೇಲಿಯ ತಂಡದ ನಾಯಕತ್ವ ತೊರೆಯುವ ಯಾವುದೇ ಯೋಜನೆ ಇಲ್ಲ ಎಂದು ಪ್ಯಾಟ್ ಕುಮಿನ್ಸ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟಗಾರರು ಹಾಗೂ ತಂಡದ ಸಿಬ್ಬಂದಿ ತಮ್ಮ ಅನುಭವ ಹಂಚಿಕೊಳ್ಳಲು Cricket Australia ಪ್ರಸ್ತಾಪಿಸಿರುವ ಫೋರಂಗೆ ಅವರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಚೆಂಡನ್ನು ವಿರೂಪಗೊಳಿಸಲು ಸ್ಯಾಂಡ್ ಪೇಪರ್ ಬಳಸುವ ಯೋಜನೆ ಕ್ಯಾಮೆರಾನ್ ಬ್ಯಾಂಕ್ರಾಫ್ಟ್, ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ರನ್ನು ಮೀರಿ ತಂಡದ ಇತರ ಆಟಗಾರರಿಗೂ ತಿಳಿದಿತ್ತು ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟರ್ ಉಸ್ಮಾನ್ ಖ್ವಾಜಾ ತಮ್ಮ ಆತ್ಮಕತೆ ‘ಸಬ್ರ್’ನಲ್ಲಿ ಆರೋಪಿಸಿದ್ದಾರೆ.

ಈ ಆರೋಪವನ್ನು ತಳ್ಳಿಹಾಕಿರುವ ಪ್ಯಾಟ್ ಕುಮಿನ್ಸ್, ತಂಡದ ಎಲ್ಲ ಆಟಗಾರರಿಗೂ ಈ ಆರೋಪ ಅಸಂಬದ್ಧ ಎಂಬುದು ತಿಳಿದಿದೆ ಎಂದು ಹೇಳಿದ್ದಾರೆ.

ವಿವಾದಕ್ಕೆ ಮತ್ತಷ್ಟು ಇಂಬು ನೀಡಿರುವ ಆಸ್ಟ್ರೇಲಿಯಾ ಬೌಲರ್ ಕ್ಯಾಮೆರಾನ್ ಬ್ಯಾಂಕ್ರಾಫ್ಟ್, ಚೆಂಡಿನ ಸ್ಥಿತಿಯ ಕುರಿತು ಪ್ಯಾಟ್ ಕುಮಿನ್ಸ್ ಸೇರಿದಂತೆ ತಂಡದ ಬೌಲರ್ ಗಳು ಚರ್ಚಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಕುಮಿನ್ಸ್ ಅವರ ಸುದ್ದಿಗೋಷ್ಠಿಯೇ ಈ ವಿಚಾರದ ಕುರಿತು ಮಾತನಾಡಲು ತಮಗೆ ಅಂತಿಮ ಪ್ರೇರಣೆಯಾಯಿತು ಎಂದೂ ಬ್ಯಾಂಕ್ರಾಫ್ಟ್ ಹೇಳಿದ್ದಾರೆ.

ಶುಕ್ರವಾರ Cricket Australia ಅಧ್ಯಕ್ಷ ಡೇವಿಡ್ ಬೂನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಡ್ ಗ್ರೀನ್‌ಬರ್ಗ್ ಅವರನ್ನು ಭೇಟಿಯಾದ ಬಳಿಕ ಕುಮಿನ್ಸ್ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದರು. 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಭಾಗವಾಗಿದ್ದ ಆಟಗಾರರು ಹಾಗೂ ಸಿಬ್ಬಂದಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡುವ ಫೋರಂಗೆ ಅವರು ಬೆಂಬಲ ಸೂಚಿಸಿದರು.

“ಶುಕ್ರವಾರ ಡೇವಿಡ್ ಮತ್ತು ಟಾಡ್ ಅವರೊಂದಿಗೆ ಮಾತನಾಡಿದ್ದು ನನಗೆ ಬಹಳ ಮಹತ್ವದ್ದಾಗಿತ್ತು. ಆಸ್ಟ್ರೇಲಿಯಾ ತಂಡದ ನಾಯಕನಾಗಿರುವುದು ದೊಡ್ಡ ಹೊಣೆಗಾರಿಕೆ. ನಾನು ಅದನ್ನು ಎಂದೂ ಹಗುರವಾಗಿ ತೆಗೆದುಕೊಂಡಿಲ್ಲ” ಎಂದು ಕುಮಿನ್ಸ್ ಹೇಳಿದರು.

“ಈ ಎಲ್ಲ ಬೆಳವಣಿಗೆಗಳ ನಡುವೆ ಕ್ರಿಕೆಟ್ ಅನ್ನು ಮುಂದಕ್ಕೊಯ್ಯುವ ಕಠಿಣ ಕೆಲಸವನ್ನು ಡೇವಿಡ್ ಮತ್ತು ಟಾಡ್ ಮಾಡುತ್ತಿದ್ದಾರೆ. 2018ರ ಪ್ರವಾಸದ ಭಾಗವಾಗಿದ್ದ ನನ್ನನ್ನು ಹಾಗೂ ತಂಡದ ಹಲವು ಆಟಗಾರರು ಮತ್ತು ಸಿಬ್ಬಂದಿಯನ್ನು ಸಂಪರ್ಕಿಸಿರುವ ಅವರನ್ನು ಶ್ಲಾಘಿಸುತ್ತೇನೆ” ಎಂದರು.

“ಫೋರಂಗೆ ಶೇ. 100ರಷ್ಟು ಬೆಂಬಲ ನೀಡುತ್ತೇನೆ. ನಾನು ಅದರಲ್ಲಿ ಭಾಗವಹಿಸಲಿದ್ದೇನೆ. ನಾನು ಮಾತನಾಡಿರುವ ಎಲ್ಲ ಆಟಗಾರರು ಹಾಗೂ ಸಿಬ್ಬಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಅಲ್ಲಿ ಕಠಿಣ ಮಾತುಕತೆ ನಡೆಯಲಿದೆ. ಆದರೆ, ಅದು ಅಗತ್ಯವಾಗಿದೆ” ಎಂದು ಅವರು ತಿಳಿಸಿದರು.

“ಈ ಎಲ್ಲ ಬೆಳವಣಿಗೆಗಳ ನಡುವೆಯೂ ಪರ್ತ್‌ ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸುವುದು ನನ್ನ ಮೊದಲ ಆದ್ಯತೆಯಾಗಿದೆ” ಎಂದು ಕುಮಿನ್ಸ್ ಹೇಳಿದರು.

ಶುಕ್ರವಾರ ನಡೆದ ಸಭೆಯಲ್ಲಿ Cricket Australia ಮಂಡಳಿ ಕುಮಿನ್ಸ್‌ ಗೆ ಸರ್ವಾನುಮತದ ಬೆಂಬಲ ಸೂಚಿಸಿತು. ಕಳೆದ ಎಂಟು ವರ್ಷಗಳಲ್ಲಿ ಕುಮಿನ್ಸ್ ಹಾಗೂ ಇತರ ನಾಯಕರು ರೂಪಿಸಿರುವ ತಂಡದ ಸಂಸ್ಕೃತಿಯ ಬಗ್ಗೆ ಮಂಡಳಿ ಹೆಮ್ಮೆ ವ್ಯಕ್ತಪಡಿಸಿದ್ದು, ಅವರ ಪ್ರಾಮಾಣಿಕತೆಯ ಕುರಿತು ಅನುಮಾನ ವ್ಯಕ್ತಪಡಿಸುವುದನ್ನೂ ತಳ್ಳಿಹಾಕಿದೆ.

ಕುಮಿನ್ಸ್ ಅವರ ಯೋಗಕ್ಷೇಮ ಹಾಗೂ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಘಟನೆಗಳಿಂದ ಪ್ರಭಾವಿತರಾದ ಎಲ್ಲರ ಕುರಿತು ಕಳವಳ ವ್ಯಕ್ತಪಡಿಸಿದ ಡೇವಿಡ್ ಬೂನ್ ಮತ್ತು ಟಾಡ್ ಗ್ರೀನ್‌ಬರ್ಗ್, ತಂಡದ ಸಿದ್ಧತೆ ಹಾಗೂ ಅಗತ್ಯ ಬೆಂಬಲದ ಕುರಿತು ಚರ್ಚಿಸಿದರು.

ಡಿ. 9ರಿಂದ ಪರ್ತ್‌ನಲ್ಲಿ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ ಮೊದಲ ಪಂದ್ಯ ಆಡಲಿದೆ. ಬಳಿಕ ಸರಣಿಯ ಉಳಿದ ಪಂದ್ಯಗಳು ಅಡಿಲೇಡ್, ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸದಾನಂದ ಗಂಗನಬೀಡು , ವಾರ್ತಾಭಾರತಿ

contributor