ಮುಹಮ್ಮದ್ ಸಿರಾಜ್ ಅಗ್ರ 4 ಬೌಲರ್‌ಗಳ ಸಾಲಿನಲ್ಲಿ ಇಲ್ಲವೇ? ವೆಲ್ಲಿಂಗ್ಟನ್ ಟೆಸ್ಟ್ನಲ್ಲಿ ತಂಡದ ಆಯ್ಕೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್
ಸಿರಾಜ್ ಅವರನ್ನು ಕೈಬಿಟ್ಟಿರುವುದರಿಂದ ನಿರಾಶೆಯಾಗಿದೆ ಎಂದ ಹರ್ಷ ಭೋಗ್ಲೆ
ಮುಹಮ್ಮದ್ ಸಿರಾಜ್ | ಸುನೀಲ್ ಗವಾಸ್ಕರ್ (Photo: PTI)
ವೆಲ್ಲಿಂಗ್ಟನ್: ನ್ಯೂಝಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಿಂದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ತಂಡದ ಆಯ್ಕೆ ವೇಳೆ ಮುಹಮ್ಮದ್ ಸಿರಾಜ್ ಅವರನ್ನು ಅಗ್ರ ನಾಲ್ಕು ಟೆಸ್ಟ್ ಬೌಲರ್‌ಗಳ ಪೈಕಿ ಒಬ್ಬರೆಂದು ತಂಡದ ಆಡಳಿತ ಮಂಡಳಿ ಪರಿಗಣಿಸಿಲ್ಲ ಎಂಬ ಅಂಶವನ್ನು ಸ್ವೀಕರಿಸುವುದು ಕಷ್ಟ ಎಂದು ಹೇಳಿದ್ದಾರೆ.
ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅನ್ಶುಲ್ ಕಾಂಬೋಜ್ ಅವರಿಗೆ ಅವಕಾಶ ನೀಡಲಾಗಿದೆ. ಆದರೆ 48 ಟೆಸ್ಟ್ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರನ್ನು ಕೈಬಿಡಲಾಗಿದೆ. ಅನ್ಶುಲ್ ಕಾಂಬೋಜ್ 2025ರಲ್ಲಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ್ದರೆ, ಪ್ರಸಿದ್ಧ್ ಕೃಷ್ಣ 2023ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
"ಅನ್ಶುಲ್ ಕಾಂಬೋಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ಕೇವಲ ಒಂದು ಅಥವಾ ಎರಡು ವರ್ಷಗಳ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್ ಆಡಲು ಆರಂಭಿಸಿದ್ದಾರೆ. ಅನುಭವಿ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಸಿರಾಜ್ ಲಭ್ಯವಿದ್ದರೂ ಅವರನ್ನು ಆಯ್ಕೆ ಮಾಡಿಲ್ಲ. ನನ್ನ ಪ್ರಕಾರ, ಸಿರಾಜ್ ನಿಮ್ಮ ಅಗ್ರ ನಾಲ್ಕು ಬೌಲರ್‌ಗಳಲ್ಲಿ ಒಬ್ಬರಲ್ಲ ಎಂದು ಭಾವಿಸುವುದೇ ಸ್ವಲ್ಪ ಕಷ್ಟದ ಸಂಗತಿ. ಅವರು ನಿಮಗೆ ವಿಕೆಟ್ ತಂದುಕೊಡುತ್ತಿದ್ದರು ಎಂದು ನಾನು ಹೇಳುತ್ತಿಲ್ಲ. ಆದರೆ, ಎದುರಾಳಿ ಬ್ಯಾಟರ್‌ಗಳು ಆಡಿದ ರೀತಿಯನ್ನು ಗಮನಿಸಿದರೆ, ಇಂತಹ ಸಂದರ್ಭದಲ್ಲಿ ಅನುಭವಿ ಬೌಲರ್ ಇಲ್ಲದಿರುವುದು ಗಮನಾರ್ಹ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ್ದ ಗವಾಸ್ಕರ್, ಮುಹಮ್ಮದ್ ಸಿರಾಜ್ ಅವರ ಬದ್ಧತೆಯ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದರು.
ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಕೂಡ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ, ಭಾರತ ತಂಡ ಸಿರಾಜ್ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಮತ್ತು ನಿರಾಶೆಯಾಗಿದೆ ಎಂದು ಹೇಳಿದ್ದಾರೆ. ಅವರಿಗೆ ವಹಿಸಿದ ಪ್ರತಿಯೊಂದು ಜವಾಬ್ದಾರಿಯನ್ನೂ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಬೌಲಿಂಗ್ ದಾಳಿಗೆ ಹೊಸ ಚೈತನ್ಯ ತುಂಬಿದ್ದಾರೆ. ತಂಡದಲ್ಲಿ ಉತ್ತಮ ಹಾಗೂ ಸಕಾರಾತ್ಮಕ ಮನೋಭಾವದ ಆಟಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಕಾಂಬೋಜ್ ಅವರಿಗೆ ಶುಭ ಹಾರೈಸಲೇಬೇಕು. ಆದರೆ ಸಿರಾಜ್ ಅವರೊಂದಿಗೆ ಪ್ರಾಮಾಣಿಕ ಮಾತುಕತೆಗಳು ನಡೆಯುತ್ತಿವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.