ಯಜುವೇಂದ್ರ ಚಹಾಲ್ | Photo Credit : PTI  

ಹೊಸದಿಲ್ಲಿ: ಟಿ-20 ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡಿರುವ ಯಜುವೇಂದ್ರ ಚಹಾಲ್ ಭಾರತೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದರು.

2026-27ರ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬುಧವಾರ ತಮಿಳುನಾಡು ವಿರುದ್ಧ ಹರ್ಯಾಣದ ಪರ ಆಡಿದಾಗ ಚಹಾಲ್ ಈ ಮೈಲಿಗಲ್ಲು ತಲುಪಿದರು.

36ರ ವಯಸ್ಸಿನ ಲೆಗ್ ಸ್ಪಿನ್ನರ್‌ಗೆ ಈ ಮೈಲಿಗಲ್ಲು ತಲುಪಲು ಕೇವಲ ಒಂದು ವಿಕೆಟ್ ಅಗತ್ಯವಿತ್ತು. ನಾಲ್ಕು ಓವರ್‌ಗಳಲ್ಲಿ 16 ರನ್‌ಗೆ ಮೂರು ವಿಕೆಟ್‌ಗಳನ್ನು ಪಡೆದಿರುವ ಚಹಾಲ್ ಹರ್ಯಾಣ ತಂಡ ತಮಿಳುನಾಡು ತಂಡವನ್ನು 19.5 ಓವರ್‌ಗಳಲ್ಲಿ ಕೇವಲ 124 ರನ್‌ಗೆ ಆಲೌಟ್ ಮಾಡುವಲ್ಲಿ ನೆರವಾದರು.

ಈ ಪ್ರದರ್ಶನದ ಮೂಲಕ ಚಹಾಲ್ ಅವರು ಟಿ-20 ಕ್ರಿಕೆಟ್‌ನಲ್ಲಿ 246 ಪಂದ್ಯಗಳಲ್ಲಿ ಒಟ್ಟು 402 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಭಾರತದ ಪ್ರಮುಖ ಟಿ-20 ಬೌಲರ್: ಭಾರತದ ಪ್ರಮುಖ ಬೌಲರ್‌ಗಳ ಪಟ್ಟಿಯಲ್ಲಿ ಇದೀಗ ಚಹಾಲ್ ಅಗ್ರ ಸ್ಥಾನದಲ್ಲಿದ್ದಾರೆ. 366 ವಿಕೆಟ್‌ಗಳನ್ನು ಪಡೆದಿರುವ ಭುವನೇಶ್ವರ ಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಆನಂತರ ಜಸ್‌ಪ್ರಿತ್ ಬುಮ್ರಾ(354) ಅವರಿದ್ದಾರೆ. ಪಿಯೂಷ್ ಚಾವ್ಲಾ ಹಾಗೂ ರವಿಚಂದ್ರನ್ ಅಶ್ವಿನ್ ಕ್ರಮವಾಗಿ 329 ಹಾಗೂ 323 ವಿಕೆಟ್‌ಗಳೊಂದಿಗೆ ಮುಂದಿನ ಎರಡು ಸ್ಥಾನಗಳನ್ನು ಪಡೆದಿದ್ದಾರೆ.

ಚಹಾಲ್ 2023ರಿಂದ ಟೀಮ್ ಇಂಡಿಯಾದ ಪರ ಆಡದೇ ಇದ್ದರೂ ದೇಶೀಯ ಟೂರ್ನಿಗಳು ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಸಹಿತ ಹಲವು ಐಪಿಎಲ್ ತಂಡಗಳನ್ನು ಚಹಾಲ್ ಪ್ರತಿನಿಧಿಸಿದ್ದಾರೆ. ಸದ್ಯ ಅವರು ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಪಂಜಾಬ್ ಫ್ರಾಂಚೈಸಿಯು 2025ರ ಋತುವಿನಲ್ಲಿ 18 ಕೋ.ರೂ.ಗೆ ಚಹಾಲ್‌ರೊಂದಿಗೆ ಸಹಿ ಹಾಕಿತ್ತು.

ವಿಶ್ವ ಶ್ರೇಷ್ಠ ಬೌಲರ್‌ಗಳ ಸಾಲಿನಲ್ಲಿ ಚಹಾಲ್: ಜಾಗತಿಕ ಮಟ್ಟದಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 553 ಪಂದ್ಯಗಳಲ್ಲಿ 743 ವಿಕೆಟ್‌ಗಳನ್ನು ಪಡೆದಿರುವ ಅಫ್ಘಾನಿಸ್ತಾನದ ರಶೀದ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ.

ವೆಸ್ಟ್‌ಇಂಡೀಸ್‌ನ ಸ್ಪಿನ್ನರ್ ಸುನೀಲ್ ನರೇನ್(658 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್‌ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡ್ವೆಯ್ನ್ ಬ್ರಾವೊ(631 ವಿಕೆಟ್) ಮೂರನೇ ಸ್ಥಾನದಲ್ಲಿದ್ದಾರೆ.

ಒಟ್ಟು 402 ವಿಕೆಟ್‌ಗಳನ್ನು ಉರುಳಿಸಿರುವ ಚಹಾಲ್ ಇದೀಗ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಟಿ-20 ಬೌಲರ್‌ಗಳ ಪೈಕಿ ಒಬ್ಬರಾಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸತೀಶ್ ಶೆಟ್ಟಿ , ವಾರ್ತಾಭಾರತಿ

contributor