Photo Credit : X
ರಾವಲ್ಪಿಂಡಿ, ನ.20: ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾ ತಂಡದ ವಿರುದ್ಧ ಎಂಟು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ. ಇದರೊಂದಿಗೆ ಪಾಕಿಸ್ತಾನ ಕ್ರಿಕೆಟ್ ತಂಡವು ಈ ವರ್ಷ ತನ್ನ ಮೊದಲ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ.
ಗುರುವಾರ ಇನಿಂಗ್ಸ್ ಸೋಲನ್ನು ತಪ್ಪಿಸಿಕೊಂಡಿದ್ದ ಶ್ರೀಲಂಕಾ ತಂಡವು ನಾಲ್ಕನೇ ಇನಿಂಗ್ಸ್ ನಲ್ಲಿ 316 ರನ್ ಗಳಿಸಿ ಆಲೌಟಾಯಿತು. ಶುಕ್ರವಾರ 9 ವಿಕೆಟ್ಗಳ ನಷ್ಟಕ್ಕೆ 309 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾ ತಂಡವು ಹಿಂದಿನ ದಿನದ ಸ್ಕೋರ್ ಗೆ ಕೇವಲ ಏಳು ರನ್ ಸೇರಿಸಿತು. ಮಿಲನ್ ರತ್ನನಾಯಕ (ಔಟಾಗದೆ 66, 88 ಎಸೆತ, 12 ಬೌಂಡರಿ) ಔಟಾಗದೆ ಉಳಿದರು.
ಪಾಕಿಸ್ತಾನ ತಂಡವು 90 ರನ್ ಗುರಿಯನ್ನು 13 ಓವರ್ಗಳಲ್ಲಿ ಬೆನ್ನಟ್ಟಿತು. ಆಮಿರ್ ಜಮಾಲ್ (ಔಟಾಗದೆ 34) ಹಾಗೂ ಅಝಾನ್ ಅವೈಸ್ (ಔಟಾಗದೆ 32) ಆತಿಥೇಯ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಾಕಿಸ್ತಾನ ತಂಡವು ಆರಂಭಿಕ ಆಟಗಾರರಾದ ತಯ್ಯಬ್ ಆರಿಫ್ (13 ರನ್) ಹಾಗೂ ಮುಹಮ್ಮದ್ ತಾಹ (4 ರನ್) ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತು. ಆಫ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಎಸೆತದಲ್ಲಿ ಬೌಂಡರಿ ಗಳಿಸಿದ ಜಮಾಲ್ ಗೆಲುವಿನ ರನ್ ಗಳಿಸಿದರು.
ಪಾಕಿಸ್ತಾನದ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಅಬ್ಬಾಸ್ (3-55) ಹಾಗೂ ಜಮಾಲ್ (3-67) ತಲಾ ಮೂರು ವಿಕೆಟ್ಗಳನ್ನು ಪಡೆದರೆ, ರಝಾವುಲ್ಲಾ (2-110) ಎರಡು ವಿಕೆಟ್ ಪಡೆದರು.
‘‘ನಮ್ಮದು ಕೆಲವು ಹೊಸ ಆಟಗಾರರನ್ನು ಒಳಗೊಂಡ ಹೊಸ ತಂಡ, ಆದರೆ ಅವರು ಉತ್ತಮ ಪ್ರದರ್ಶನ ನೀಡಿದರು. ಗೆಲುವು ಯಾವಾಗಲೂ ತೃಪ್ತಿ ಹಾಗೂ ಆತ್ಮವಿಶ್ವಾಸವನ್ನು ನೀಡುತ್ತದೆ’’ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ ಹೇಳಿದ್ದಾರೆ.
‘‘ಮೊದಲ ಇನಿಂಗ್ಸ್ ನಲ್ಲಿ 98 ರನ್ಗೆ ಆಲೌಟಾಗಿದ್ದು ನಮಗೆ ದುಬಾರಿಯಾಗಿ ಪರಿಣಮಿಸಿತು. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ನಾವು ಸುಧಾರಿಸಬೇಕಾಗಿದೆ. ಆದರೆ ನಮ್ಮ ಬೌಲಿಂಗ್ ಉತ್ತಮವಾಗಿತ್ತು’’ ಎಂದು ಶ್ರೀಲಂಕಾ ತಂಡದ ನಾಯಕ ಕುಶಾಲ್ ಮೆಂಡಿಸ್ ಹೇಳಿದ್ದಾರೆ.
ಶ್ರೀಲಂಕಾ ತಂಡವನ್ನು 98 ರನ್ಗೆ ಆಲೌಟ್ ಮಾಡಿದ ನಂತರ 325 ರನ್ ಗಳಿಸಿದ ತಕ್ಕ ಪ್ರತ್ಯುತ್ತರ ನೀಡಿದ್ದ ಪಾಕಿಸ್ತಾನ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಅರ್ಧಶತಕಗಳನ್ನು ಗಳಿಸಿದ ರತ್ನನಾಯಕ, ಸೋನಾಲ್ ದಿನುಶಾ ಹಾಗೂ ಮೆಂಡಿಸ್ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡಿದರು. ಆದರೆ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ರಾವಲ್ಪಿಂಡಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.
ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಪಾಕಿಸ್ತಾನವು ಮೊದಲ ಸರಣಿಯನ್ನು ಗೆದ್ದಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ಇಂಡೀಸ್ ತಂಡಗಳ ವಿರುದ್ಧ ಡ್ರಾ ಸಾಧಿಸಿತ್ತು.