ಮುಹಮ್ಮದ್ ಸಿರಾಜ್ (Photo: PTI)

"ರಣರಂಗದಲ್ಲಿ ನಿಂತಿರುವ ನಿರ್ಭೀತ ಕುದುರೆ!" - ನ್ಯೂಝಿಲ್ಯಾಂಡ್ ವಿರುದ್ಧದ ಐದನೇ ಏಕದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ಬಳಿಕ ಭಾರತದ ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್, ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಬಣ್ಣಿಸಿದ್ದು ಹೀಗೆ.

ಮೈದಾನದಲ್ಲಿ ಸಿರಾಜ್ ತೋರುವ ಉತ್ಸಾಹ, ಬೌಲಿಂಗ್ ಸ್ಪೆಲ್ ಮುಗಿದ ನಂತರವೂ ಅವರು ಮಾಡುವ ಫೀಲ್ಡಿಂಗ್ ಮತ್ತು ಎಸೆಯುವ ಆ ಅದ್ಭುತ ಥ್ರೋಗಳು ಉಳಿದ ಬೌಲರ್‌ಗಳಿಗೂ ಸ್ಫೂರ್ತಿ ನೀಡುತ್ತವೆ ಎಂದು ಅಯ್ಯರ್ ಹೇಳಿದ್ದರು.

ಆದರೆ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಿಂದ ಮುಹಮ್ಮದ್ ಸಿರಾಜ್ ಅವರನ್ನು ಕೈಬಿಡಲಾಗಿದೆ. ಸಿರಾಜ್ ಬದಲಿಗೆ ತಂಡದ ಆಡಳಿತ ಮಂಡಳಿ ಕಳೆದ ಸುಮಾರು ಒಂದು ವರ್ಷದಿಂದ ಭಾರತ ತಂಡದಿಂದ ಹೊರಗಿದ್ದ ಆಕಾಶ್ ದೀಪ್ ಮತ್ತು ಅನ್ಶುಲ್ ಕಾಂಬೋಜ್ ಗೆ ಮಣೆ ಹಾಕಿರುವುದು ಕ್ರಿಕೆಟ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

2023ರ ವಿಶ್ವಕಪ್ ಬಳಿಕ ಸಿರಾಜ್ ಆಡಿದ್ದು ಕೇವಲ 10 ಏಕದಿನ ಪಂದ್ಯಗಳನ್ನು ಮಾತ್ರ. ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಗೆ ಸೀಮಿತವಾಗಿದ್ದ ಸಿರಾಜ್, ಐದನೇ ಪಂದ್ಯದಲ್ಲಿ ಸಿಕ್ಕ ಅವಕಾಶದಲ್ಲಿ 2 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಅವರಿಗೆ ಸ್ಥಾನ ನಿರಾಕರಿಸಲಾಗಿದೆ.

ಭಾರತದ ಪರ 48 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಿರಾಜ್ 144 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 108 ವಿಕೆಟ್‌ಗಳು ವಿದೇಶಿ ಮೈದಾನಗಳಲ್ಲಿ ಬಂದಿವೆ ಎಂಬುದು ವಿಶೇಷ.

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಿರಾಜ್ 23 ವಿಕೆಟ್ ಪಡೆದು ಮಿಂಚಿದ್ದರು. ಅದರಲ್ಲೂ ಓವಲ್ ಮೈದಾನದಲ್ಲಿ ನಡೆದ ಐದನೇ ಟೆಸ್ಟ್‌ನಲ್ಲಿ 9 ವಿಕೆಟ್ ಕಬಳಿಸಿ ಭಾರತಕ್ಕೆ 6 ರನ್‌ಗಳ ರೋಚಕ ಜಯ ತಂದುಕೊಟ್ಟು ಸರಣಿಯನ್ನು 2-2ರಿಂದ ಸಮಬಲಗೊಳಿಸಲು ಪ್ರಮುಖ ಕಾರಣರಾಗಿದ್ದರು.

ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲೂ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ಕೀರ್ತಿ ಸಿರಾಜ್ ಅವರಿಗಿದೆ. ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿ ಪಡೆಯದೆ ದುಲೀಪ್ ಟ್ರೋಫಿಯಲ್ಲೂ ಅವರು ಕಣಕ್ಕಿಳಿದಿದ್ದರು.

ವೆಲ್ಲಿಂಗ್‌ಟನ್ ಪಿಚ್ ಮೇಲೆ 15 ಮಿಲಿಮೀಟರ್‌ನಷ್ಟು ಹಸಿರು ಹುಲ್ಲು ಇತ್ತು. ಟಾಸ್ ಗೆದ್ದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ದುಕೊಂಡರು. ಈ ಹಿಂದೆ ಓವಲ್ ಗೆಲುವಿನ ಬಳಿಕ ಸಿರಾಜ್ ಅವರನ್ನು 'ಕ್ಯಾಪ್ಟನ್ಸ್ ಡ್ರೀಮ್' ಅಂದ್ರೆ ನಾಯಕನ ಕನಸಿನ ಬೌಲರ್ ಎಂದು ಕರೆದಿದ್ದ ಗಿಲ್, ಟಾಸ್ ವೇಳೆ ಸಿರಾಜ್ ಅವರನ್ನು ಕೈಬಿಡುವುದು ಕಠಿಣ ನಿರ್ಧಾರವಾಗಿತ್ತು ಎಂದು ಒಪ್ಪಿಕೊಂಡರು.

ತಂಡಕ್ಕೆ ಹೆಚ್ಚುವರಿ ಬ್ಯಾಟಿಂಗ್ ಶಕ್ತಿ ಒದಗಿಸಲು ಕಾಂಬೋಜ್ ಮತ್ತು ಆಕಾಶ್ ದೀಪ್‌ಗೆ ಅವಕಾಶ ನೀಡಲಾಗಿದೆ ಎಂಬ ಸಮರ್ಥನೆಯನ್ನೂ ಗಿಲ್ ನೀಡಿದರು.

ಜಸ್ಪ್ರೀತ್ ಬುಮ್ರಾ 52 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ನ್ಯೂಝಿಲ್ಯಾಂಡ್ ತಂಡವನ್ನು 23 ಓವರ್‌ಗಳಲ್ಲಿ 60 ರನ್‌ಗಳಿಗೆ 4 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು. ಆದರೆ ಚೆಂಡಿನ ಹೊಳಪು ಕಡಿಮೆಯಾದಂತೆ ಉಳಿದ ವೇಗಿಗಳು ಮಂಕಾದರು. 18 ಓವರ್ ಎಸೆದ ಅನ್ಶುಲ್ ಕಾಂಬೋಜ್ 57 ರನ್ ನೀಡಿ 1 ವಿಕೆಟ್ ಪಡೆದರು. ಅವರ ಬೌಲಿಂಗ್ ವೇಗ ಗಂಟೆಗೆ 126 ರಿಂದ 130 ಕಿಲೋಮೀಟರ್‌ಗೆ ಕುಸಿದಿತ್ತು.

ಇನ್ನು ಗಾಯದಿಂದ ಚೇತರಿಸಿಕೊಂಡು ಬಂದಿರುವ ಪ್ರಸಿದ್ಧ್ ಕೃಷ್ಣ 16 ಓವರ್‌ಗಳಲ್ಲಿ 58 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾದರು ಮೈದಾನದಲ್ಲೇ ಬೆನ್ನು ನೋವಿಗೆ ಫಿಸಿಯೋ ಚಿಕಿತ್ಸೆ ಪಡೆಯುವಂತಾದ ಪ್ರಸಿದ್ಧ್ ಅವರ ಫಿಟ್‌ನೆಸ್ ಬಗ್ಗೆ ಸುನಿಲ್ ಗವಾಸ್ಕರ್ ನೇರಪ್ರಸಾರದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು. ದಿನದಂತ್ಯಕ್ಕೆ ನ್ಯೂಝಿಲ್ಯಾಂಡ್ 5 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿ ಸುಸ್ಥಿತಿಗೆ ತಲುಪಿತು.

ಮೊದಲ ದಿನದ ಹಿನ್ನಡೆಯ ಬಳಿಕ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ತಂಡದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

"ಸಿರಾಜ್‌ಗೆ ಏನೂ ಆಗಿಲ್ಲ. ನಾವು ಕೇವಲ ಮೊದಲ ದಿನಕ್ಕಾಗಿ ತಂಡವನ್ನು ಆಯ್ಕೆ ಮಾಡುವುದಿಲ್ಲ, ಎರಡು, ಮೂರು ಮತ್ತು ನಾಲ್ಕನೇ ದಿನಗಳನ್ನೂ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡುತ್ತೇವೆ. ಇದು ನಮ್ಮ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್" ಎಂದು ಕೊಟಕ್ ಹೇಳಿದ್ದಾರೆ.

ಗಂಟೆಗೆ 126-130 ಕಿಲೋಮೀಟರ್ ವೇಗದಲ್ಲಿ ಬೌಲ್ ಮಾಡುವ ಕಾಂಬೋಜ್ ಅವರನ್ನು ಸಮರ್ಥಿಸಿಕೊಂಡಿರುವ ಕೊಟಕ್, "ವೇಗ ಮುಖ್ಯವಾಗುವುದು ಮೂರನೇ ಸ್ಪೆಲ್‌ನಲ್ಲಿ ಮಾತ್ರ" ಎಂದು ಹೇಳಿದ್ದಾರೆ

ಇನ್ನು ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ನ್ಯೂಝಿಲ್ಯಾಂಡ್ ಅಗ್ರ ಕ್ರಮಾಂಕದಲ್ಲಿ ನಾಲ್ವರು ಎಡಗೈ ಬ್ಯಾಟರ್‌ಗಳಿರುವುದೇ ಕಾರಣ ಎಂದು ಕೊಟಕ್ ವಿವರಿಸಿದ್ದಾರೆ.

ತಂಡದ ಆಡಳಿತ ಮಂಡಳಿಯ ಈ ಸಮರ್ಥನೆಗಳನ್ನು ಕ್ರಿಕೆಟ್ ದಿಗ್ಗಜರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

"ಸಿರಾಜ್ ಭಾರತಕ್ಕೆ ಎಂದಿಗೂ ನಿರಾಸೆ ಮಾಡಿಲ್ಲ. ಅವರ ಬೌಲಿಂಗ್ ಅಥವಾ ಲಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿರುವಾಗ ಅವರನ್ನು ಕೈಬಿಟ್ಟಿರುವುದು ಆಘಾತಕಾರಿ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, "ಇಂಗ್ಲೆಂಡ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಿರಾಜ್ ಮತ್ತು ವಿಶ್ವದರ್ಜೆಯ ಆಲ್‌ರೌಂಡರ್ ರವೀಂದ್ರ ಜಡೇಜಾ ಇಬ್ಬರನ್ನೂ ಕೈಬಿಟ್ಟಿರುವುದು ಅತ್ಯಂತ ಕೆಟ್ಟ ಆಯ್ಕೆ" ಎಂದಿದ್ದಾರೆ.

ಮಾಜಿ ಆರಂಭಿಕ ಆಟಗಾರ ವಸೀಮ್ ಜಾಫರ್ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿ, "ಇಂಗ್ಲೆಂಡ್ ಸರಣಿಯನ್ನು ಏಕಾಂಗಿಯಾಗಿ ಸಮಬಲಗೊಳಿಸಿದ, ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಅನುಕೂಲಕರ ಪಿಚ್‌ನಲ್ಲೂ ಸ್ಥಾನವಿಲ್ಲದಿರುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಮೊದಲ ದಿನವೇ ಭಾರತ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ" ಎಂದಿದ್ದಾರೆ.

ಇತ್ತ ಹರ್ಷ ಭೋಗ್ಲೆ ಕೂಡ ತಾವು ದಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದ್ದು, ತಂಡದ ಆಡಳಿತ ಮಂಡಳಿ ಸಿರಾಜ್ ಜೊತೆ ಪ್ರಾಮಾಣಿಕವಾಗಿ ಮಾತನಾಡಿರಬಹುದು ಎಂದು ಆಶಿಸಿದ್ದಾರೆ.

ಅಜಯ್ ಜಡೇಜಾ ಅವರು ಪ್ರಸಿದ್ಧ್ ಕೃಷ್ಣ ಅವರನ್ನು 'ರನ್ ಮಷಿನ್' ಎಂದು ಕರೆದಿದ್ದು, ಯಾವುದೇ ದಿನವಾದರೂ ಕೃಷ್ಣರಿಗಿಂತ ಸಿರಾಜ್ ಉತ್ತಮ ಬೌಲರ್ ಎಂದಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರು ಸಿರಾಜ್ ಮತ್ತು ಜಡೇಜಾ ಇಬ್ಬರನ್ನೂ ಹೊರಗಿಟ್ಟಿರುವುದನ್ನು ವ್ಯಂಗ್ಯವಾಗಿ 'ನ್ಯೂ ನಾರ್ಮಲ್' ಎಂದು ಬಣ್ಣಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಸರಣಿ ಡ್ರಾ ಮಾಡಿಸಿ ಗಂಭೀರ್ ಮತ್ತು ಗಿಲ್ ಅವರ ಸ್ಥಾನವನ್ನು ಉಳಿಸಿದ್ದೇ ಸಿರಾಜ್, ಆದರೆ ಈಗ ಅವರಿಗೇ ಕೃತಜ್ಞತೆ ಇಲ್ಲದೆ ತಂಡದಿಂದ ಹೊರಗಿಡಲಾಗಿದೆ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿದ್ದಾರೆ.

2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಶ್ವಿನ್ ಬದಲಿಗೆ ಕರ್ಣ್ ಶರ್ಮಾ ಅವರನ್ನು ಆಡಿಸಿದ ನಂತರದ ಅತ್ಯಂತ ಕೆಟ್ಟ ಆಯ್ಕೆ ಇದಾಗಿದೆ ಎಂದು ಅಭಿಮಾನಿಗಳು ವ್ಯಂಗ್ಯವಾಡುತ್ತಿದ್ದಾರೆ.

"ನಾನು ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದಷ್ಟೂ ಉತ್ತಮವಾಗುತ್ತೇನೆ, ನಾನೊಬ್ಬ ರಿದಮ್ ಬೌಲರ್" ಎಂದು 32 ವರ್ಷದ ಸಿರಾಜ್ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿಹಾಲ್ ಕುದ್ರೋಳಿ

contributor