ವೇಗದ ಬೌಲರ್ ಅಶೋಕ್ ಶರ್ಮಾಗೆ ಭಾರತ ಎ ತಂಡಕ್ಕೆ ಬುಲಾವ್
Photo: instagram.com/ashok_sharma
ಲಕ್ನೋ: ಸುಮಾರು 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಗಮನ ಸೆಳೆದಿರುವ ಯುವ ಬೌಲರ್ ಅಶೋಕ್ ಶರ್ಮಾ ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋಣ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ ಎ ತಂಡವನ್ನು ಸೇರಿಕೊಳ್ಳಲಿದ್ದಾರೆ. 23 ವರ್ಷದ ಯದುವೀರ್ ಸಿಂಗ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಗುಜರಾತ್-ರಾಜಸ್ಥಾನದಲ್ಲಿ ದೇಶಿ ಕ್ರಿಕೆಟ್ ಆಡುತ್ತಿರುವ ಯುವವೇಗಿ ಸ್ಥಾನ ಪಡೆದಿದ್ದಾರೆ.
ಮಂಗಳವಾರ ಮುಂಜಾನೆ ಅಶೋಕ್ ಕೊಲಂಬೊಗೆ ಪ್ರಯಾಣಿಸಿ ದಂಬುಲಾದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ಎ ತಂಡ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ವಿರುದ್ಧದ ತ್ರಿಕೋನ ಸರಣಿಯಲ್ಲಿ ಆಡುತ್ತಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೂಪರ್ ಓವರ್‌ನಲ್ಲಿ ಸೋಲು ಕಂಡ ಭಾರತ ಎ ತಂಡ ಈ ತಿಂಗಳ 17ರಂದು ಅಫ್ಘಾನಿಸ್ತಾನ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಹೊಂದಿದೆ.
ಅಶೋಕ್ ಶರ್ಮಾ ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಶರವೇಗದ ಬೌಲಿಂಗ್‌ನಿಂದ ಗಮನ ಸೆಳೆದಿದ್ದರು. ಆರು ಪಂದ್ಯಗಳಿಂದ ಆರು ವಿಕೆಟ್ ಪಡೆದ ಅವರು, 90 ಲಕ್ಷಕ್ಕೆ ಗುಜರಾತ್ ಟೈಟನ್ಸ್ ತಂಡದ ಪಾಲಾಗಿದ್ದರು. ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಅವರು ಅದೇ ಆ್ಯಕ್ಷನ್‌ನಲ್ಲಿ 115 ಕಿಲೋಮೀಟರ್‌ನಷ್ಟು ನಿಧಾನವಾಗಿಯೂ ಚೆಂಡು ಎಸೆಯಬಲ್ಲರು. ಇದು ಜಿಟಿ ನಾಯಕ ಶುಭಮನ್ ಗಿಲ್ ಅವರ ಗಮನ ಸೆಳೆದಿತ್ತು.
ಸೈಯ್ಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ 11 ವರ್ಷದ ಹಳೆಯ ದಾಖಲೆ ಮುರಿದಿದ್ದ ಅವರು, 22 ವಿಕೆಟ್ ಕಿತ್ತು, ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿದ್ದರು.