FIFA 2026 | ಸ್ಪೇನ್‌ಗೆ 'ವೊಜಿನ್ಹಾ' ಗೋಡೆ: ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಕೇಪ್ ವರ್ಡೆ ʼಮ್ಯಾಜಿಕ್ʼ
ವೊಜಿನ್ಹಾ (Photo credit: X/@FIFAWorldCup)
ಅಟ್ಲಾಂಟ: ಫಿಫಾ ವಿಶ್ವಕಪ್ ಗ್ರೂಪ್ 'ಎಚ್' ಆರಂಭಿಕ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ ಬಲಿಷ್ಠ ಸ್ಪೇನ್ ತಂಡದ ವಿರುದ್ಧ 0-0 ಗೋಲುಗಳಿಂದ ಸಮಬಲ ಸಾಧಿಸುವ ಮೂಲಕ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವಾಡುತ್ತಿರುವ ಕೇಪ್ ವರ್ಡೆ ತಂಡವು ಆಘಾತ ನೀಡಿದೆ .
ಕೇಪ್ ವರ್ಡೆ ತಂಡ ಮತ್ತು ಗೋಲ್ಕೀಪರ್ ವೊಜಿನ್ಹಾ ಅವರ ರಕ್ಷಣಾತ್ಮಕ ಆಟವು ಟೂರ್ನಿಯ ನೆಚ್ಚಿನ ತಂಡಗಳಲ್ಲಿ ಒಂದಾದ ಸ್ಪೇನ್ ಗೆ ಗೋಲು ಗಳಿಸುವ ಯಾವುದೇ ಅವಕಾಶವನ್ನು ನೀಡಲಿಲ್ಲ.
ಹೆಚ್ಚಿನ ಸಮಯ ಚೆಂಡನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಸ್ಪೇನ್ ಗೆ ಮೊದಲಾರ್ಧದ ಕೊನೆಯ ನಿಮಿಷಗಳಲ್ಲಿ ಗೋಲು ಗಳಿಸುವ ಅವಕಾಶ ಲಭಿಸಿತು . ಪೋಸ್ಟ್ ಗೆ ಬಾರ್ ಬಡಿದು ಮರಳಿ ಬಂದ ಚೆಂಡನ್ನು ಮೈಕೆಲ್ ಒಯರ್ಜಾಬಲ್ ಹೆಡರ್ ಮೂಲಕ ಗೋಲು ಗಳಿಸಲು ಪ್ರಯತ್ನಿಸಿದಾಗ ಕೇಪ್ ವರ್ಡೆ ತಂಡದ ಗೋಲ್ಕೀಪರ್ ವೊಜಿನ್ಹಾ ಅದ್ಭುತವಾಗಿ ತಡೆದರು. ನಂತರ ಹೆಚ್ಚಿನ ಅವಕಾಶಗಳನ್ನು ಕೇಪ್ ವರ್ಡೆ ತಡೆಯುತ್ತಲೇ ಸ್ಪೇನ್ ಮೇಲೆ ಒತ್ತಡ ಹಾಕಿತು.
ಕೊನೆಯ ಕ್ಷಣಗಳಲ್ಲಿ ಆಕ್ರಮಣಕಾರಿ ಆಟವಾಡಿದ ಕೇಪ್ ವರ್ಡೆ ತಂಡವು ಸ್ಪೇನ್ ಗೆ ಮತ್ತಷ್ಟು ಭೀತಿಯನ್ನು ಹುಟ್ಟಿಸಿತ್ತು. ಆದರೆ ಅದು ಗೋಲುಗಳಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗದ ಕಾರಣ ಪಂದ್ಯ ಡ್ರಾ ಮೂಲಕ ಕೊನೆಗೊಂಡಿತು.
ಈ ಪಂದ್ಯದಲ್ಲಿ ಸ್ಪೇನ್ 27 ಬಾರಿ ಗೋಲು ಗಳಿಸುವ ಪ್ರಯತ್ನಗಳನ್ನು ಮಾಡಿತ್ತು.
ಕೇಪ್ ವರ್ಡೆ ಮೊದಲ ಪಂದ್ಯದಲ್ಲಿಯೇ ಅಂಕ ಪಡೆಯುವ ಮೂಲಕ ಸ್ಮರಣೀಯ ಆರಂಭ ಪಡೆಯಿತು. ಮುಂದಿನ ಪಂದ್ಯದಲ್ಲಿ ಸ್ಪೇನ್ ಸೌದಿ ಅರೇಬಿಯಾ ತಂಡವನ್ನು ಎದುರಿಸಲಿದೆ.