×
Ad

FIFA 2026 | ಗಿಲ್ಬರ್ಟೊ ಮೊರ ನಾಕೌಟ್‌ನಲ್ಲಿ ಆಡಿದ 2ನೇ ಅತಿ ಕಿರಿಯ ಆಟಗಾರ

Update: 2026-07-01 22:04 IST

ಗಿಲ್ಬರ್ಟೊ ಮೊರ | Photo Credit : AP 

ಮೆಕ್ಸಿಕೊ ಸಿಟಿ, ಜು. 1: ವಿಶ್ವಕಪ್ ನಾಕೌಟ್ ಪಂದ್ಯವೊಂದರಲ್ಲಿ ಆರಂಭಿಕ ಕ್ರಮಾಂಕದಲ್ಲಿ ಆಡಿದ ಎರಡನೇ ಅತಿ ಕಿರಿಯ ಆಟಗಾರನಾಗಿ ಮೆಕ್ಸಿಕೊದ ಹದಿಹರೆಯದ ಆಟಗಾರ ಗಿಲ್ಬರ್ಟೊ ಮೊರ ಇತಿಹಾಸಕ್ಕೆ ಸೇರಿದ್ದಾರೆ.

ಬುಧವಾರ ಬೆಳಗ್ಗೆ ನಡೆದ ಅಂತಿಮ 32ರ ಸುತ್ತಿನ ಪಂದ್ಯವೊಂದರಲ್ಲಿ ಮೆಕ್ಸಿಕೊ ತಂಡವು ಈಕ್ವೆಡಾರ್ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿದೆ. ಇದರೊಂದಿಗೆ, ಬರೊಬ್ಬರಿ 40 ವರ್ಷಗಳ ಬಳಿಕ ಮೆಕ್ಸಿಕೊ ನಾಕೌಟ್ ಪಂದ್ಯವೊಂದರಲ್ಲಿ ವಿಜಯ ಗಳಿಸಿತು.

17 ವರ್ಷ 259 ದಿನಗಳ ವಯಸ್ಸಿನಲ್ಲಿ ಮೊರ, ಬ್ರೆಝಿಲ್‌ನ ಶ್ರೇಷ್ಠ ಆಟಗಾರ ಪೀಲೆ ಮಾತ್ರ ಇರುವ ವಿಶಿಷ್ಟ ಗುಂಪಿಗೆ ಸೇರಿದ್ದಾರೆ. ಪೀಲೆ 1958 ರ ವಿಶ್ವಕಪ್‌ನಲ್ಲಿ ವೇಲ್ಸ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಾಗ 17 ವರ್ಷ 239 ದಿನಗಳಾಗಿತ್ತು.

ಸಹ-ಆತಿಥೇಯ ರಾಷ್ಟ್ರವಾದ ಮೆಕ್ಸಿಕೋ, ಪಂದ್ಯದ ಆರಂಭದಿಂದಲೇ ಈಕ್ವೆಡಾರ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಈ ಸಾಧನೆಯಲ್ಲಿ ಹದಿಹರೆಯದ ಆಟಗಾರ ಮೊರ ಪ್ರಮುಖ ಪಾತ್ರ ವಹಿಸಿದರು. ನಂತರ ಜೂಲಿಯನ್ ಕ್ವಿನೋನ್ಸ್ ಮತ್ತು ರಾವುಲ್ ಜಿಮೆನೆಝ್ ಅವರ ಭರ್ಜರಿ ಗೋಲುಗಳ ನೆರವಿನಿಂದ ಮೆಕ್ಸಿಕೋ ಅಂತಿಮ 16ರ ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಜಾಗತಿಕ ಮಟ್ಟದ ಈ ದೊಡ್ಡ ವೇದಿಕೆಯಲ್ಲಿ ಮೊರ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಪ್ರತಿಕೂಲ ಹವಾಮಾನದ ಕಾರಣ ಪಂದ್ಯವು ಒಂದು ಗಂಟೆ ತಡವಾಗಿ ಆರಂಭವಾದರೂ, ಮೆಕ್ಸಿಕೋ ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಆರಂಭದ 15 ನಿಮಿಷಗಳಲ್ಲೇ ಮೊರ ಎದುರಾಳಿ ತಂಡಕ್ಕೆ ಎರಡು ಬಾರಿ ಕಂಟಕವಾಗುವಂತಹ ಆಟ ಪ್ರದರ್ಶಿಸಿದರು.

ಫಿಫಾ ಪ್ರಕಾರ, 1958ರಲ್ಲಿ ಬ್ರೆಝಿಲ್ ಪರ ಪೀಲೆ ಅವರ ಐತಿಹಾಸಿಕ ಪ್ರದರ್ಶನದ ನಂತರ, ವಿಶ್ವಕಪ್ ನಾಕೌಟ್ ಹಂತದ ಪಂದ್ಯವನ್ನು ಆರಂಭಿಸಿದ ಕೇವಲ ಎರಡನೇ 17 ವರ್ಷದ ಆಟಗಾರ ಎಂಬ ಹೆಗ್ಗಳಿಕೆಗೆ ಈಗ ಮೊರ ಪಾತ್ರರಾಗಿದ್ದಾರೆ.

ಈ ಮಿಡ್‌ಫೀಲ್ಡರ್ ಈಗಾಗಲೇ ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಮೆಕ್ಸಿಕೋ ಪರ ವಿಶ್ವಕಪ್ ಪಂದ್ಯವೊಂದನ್ನು ಆರಂಭಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ. ಇದು ಅವರು ದೇಶದ ಅತ್ಯಂತ ಪ್ರಕಾಶಮಾನವಾದ ಯುವ ಪ್ರತಿಭೆಗಳಲ್ಲಿ ಒಬ್ಬರೆಂದು ಏಕೆ ಪರಿಗಣಿಸಲ್ಪಟ್ಟಿದ್ದಾರೆ ಎಂಬುದನ್ನು ಮತ್ತಷ್ಟು ಸಾಬೀತುಪಡಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News