×
Ad

ಐಸಿಸಿ ಟಿ-20 ರ‍್ಯಾಂಕಿಂಗ್‌ : ಅಗ್ರ ಸ್ಥಾನ ಕಳೆದುಕೊಂಡ ಅಭಿಷೇಕ್ ಶರ್ಮಾ

Update: 2026-07-01 21:43 IST

 ಅಭಿಷೇಕ್ ಶರ್ಮಾ | Photo Credit : PTI 

ದುಬೈ, ಜು.1: ದೀರ್ಘಕಾಲದಿಂದ ವಿಶ್ವದ ನಂ.1 ಟಿ-20 ಬ್ಯಾಟರ್ ಆಗಿದ್ದ ಅಭಿಷೇಕ್ ಶರ್ಮಾ ತನ್ನ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಶರ್ಮಾ ಅವರ ಸಹ ಆಟಗಾರ ಇಶಾನ್ ಕಿಶನ್ ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಏಳು ರೇಟಿಂಗ್ ಪಾಯಿಂಟ್ಸ್ ಮುನ್ನಡೆಯೊಂದಿಗೆ ಅಗ್ರ ಸ್ಥಾನಕ್ಕೇರಿದ್ದಾರೆ.

ಈ ವರ್ಷದ ಐಸಿಸಿ ಟಿ-20 ವಿಶ್ವಕಪ್ ಸಹಿತ ಎಲ್ಲ ಟೂರ್ನಿಗಳಲ್ಲಿ ನೀಡಿರುವ ಸ್ಥಿರ ಪ್ರದರ್ಶನದ ಹಿನ್ನೆಲೆಯಲ್ಲಿ 27ರ ವಯಸ್ಸಿನ ಇಶಾನ್ ರ್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ಇಶಾನ್ ಕಿಶನ್ ಟೂರ್ನಿಯಲ್ಲಿ 146ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 317 ರನ್ ಗಳಿಸಿದ್ದರು. ಟಿ-20 ಪಂದ್ಯಾವಳಿಯಲ್ಲಿ ಸಂಜು ಸ್ಯಾಮ್ಸನ್ ನಂತರ ಭಾರತದ ಎರಡನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು.

ಅಭಿಷೇಕ್ ಶರ್ಮಾ ನಂತರ ಇದೀಗ ಇಶಾನ್ ಕಿಶನ್ ಅವರು ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನೊಳಗೊಂಡ ಎಲೈಟ್ ಕ್ಲಬ್‌ಗೆ ಸೇರಿದ್ದಾರೆ. ಐಸಿಸಿ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ನಾಲ್ಕನೇ ಬ್ಯಾಟರ್ ಆಗಿದ್ದಾರೆ.

ಭಾರತದ ಈ ಇಬ್ಬರು ಪವರ್ ಹಿಟ್ಟರ್‌ಗಳು ಡುಹ್ರಾಮ್‌ನಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ-20 ಸರಣಿಯ ವೇಳೆ ಇಂಗ್ಲೆಂಡ್ ತಂಡದ ವಿರುದ್ಧ ಆಡಲಿದ್ದಾರೆ.

2021ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಕ್ರಿಕೆಟಿಗೆ ಕಾಲಿಟ್ಟಿರುವ ಇಶಾನ್ 47 ಇನಿಂಗ್ಸ್‌ಗಳಲ್ಲಿ 29.15ರ ಸರಾಸರಿಯಲ್ಲಿ ಒಟ್ಟು 1,341 ರನ್ ಗಳಿಸಿದ್ದಾರೆ. ಒಂದು ಶತಕ ಹಾಗೂ 10 ಅರ್ಧಶತಕಗಳನ್ನು ಗಳಿಸಿದ್ದು, 103 ಗರಿಷ್ಠ ಸ್ಕೋರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News