ಶ್ರೀಶಾಂತ್ ವಿರುದ್ಧದ ಮೂರು ವರ್ಷಗಳ ನಿಷೇಧ ಹಿಂಪಡೆದ ಕೇರಳ ಕ್ರಿಕೆಟ್ ಸಂಸ್ಥೆ
Update: 2026-07-01 21:36 IST
ಎಸ್. ಶ್ರೀಶಾಂತ್ | Photo Credit : PTI
ತಿರುವನಂತಪುರ, ಜು.1: ಸಂಸ್ಥೆಯ ವಿರುದ್ಧ ಮಾನಹಾನಿಕರ ಹೇಳಿಕೆಯನ್ನು ನೀಡಿದ ಆರೋಪದ ಮೇಲೆ ಕಳೆದ ವರ್ಷ ಮಾಜಿ ಅಂತರ್‌ರಾಷ್ಟ್ರೀಯ ಕ್ರಿಕೆಟಿಗ ಎಸ್. ಶ್ರೀಶಾಂತ್‌ಗೆ ವಿಧಿಸಿರುವ ಮೂರು ವರ್ಷಗಳ ನಿಷೇಧವನ್ನು ಕೇರಳ ಕ್ರಿಕೆಟ್ ಅಸೋಸಿಯೇಶನ್(ಕೆಸಿಎ)ಬುಧವಾರ ಹಿಂಪಡೆದಿದೆ.
ಬುಧವಾರ ನಡೆದ ತನ್ನ ವಿಶೇಷ ಸಾಮಾನ್ಯ ಸಮಿತಿಯ ಸಭೆಯಲ್ಲಿ ಶ್ರೀಶಾಂತ್ ವಿರುದ್ಧದ ನಿಷೇಧವನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಶ್ರೀಶಾಂತ್ ಬೇಷರತ್ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಸಿಎ ಕುರಿತಾಗಿ ತನ್ನ ಹೇಳಿಕೆಯ ಕುರಿತು ಅವರು ಖೇದ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಕಳೆದ ವರ್ಷದ ಕೇರಳ ಕ್ರಿಕೆಟ್ ಲೀಗ್(ಕೆಸಿಎಲ್)ಪಂದ್ಯಗಳಿಗಿಂತ ಮೊದಲು ಶ್ರೀಶಾಂತ್ ಮೇಲೆ ನಿಷೇಧ ಹೇರಲಾಗಿತ್ತು.