FIFA World Cup 2026 | ಅಲ್ವಾರೆಝ್ ಮಿಂಚಿನ ಗೋಲು; ಸ್ವಿಟ್ಜರ್ಲೆಂಡನ್ನು ಸೋಲಿಸಿದ ಅರ್ಜೆಂಟೀನಾ ಸೆಮಿಫೈನಲ್ ಗೆ
► ಅರ್ಜೆಂಟೀನಾಗೆ 3–1 ಗೋಲುಗಳ ಜಯ; ಬುಧವಾರ ಇಂಗ್ಲೆಂಡ್ ಗೆ ಸವಾಲು ► 10 ಆಟಗಾರರೊಂದಿಗೆ ಪಂದ್ಯವಾಡಿದ ಸ್ವಿಟ್ಜರ್ಲೆಂಡ್
ಜೂಲಿಯನ್ ಅಲ್ವಾರೆಝ್ Photo:x.com/FIFAWorldCup
ಕಾನ್ಸಾಸ್ ಸಿಟಿ, ಜು. 12: ಜೂಲಿಯನ್ ಅಲ್ವಾರೆಝ್ ಅವರ ನಿರ್ಣಾಯಕ ಗೋಲು ಹಾಗೂ ಲೌಟಾರೊ ಮಾರ್ಟಿನೆಝ್ ಅವರ ಓವರ್ ಟೈಮ್ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್–2026ರ ಸೆಮಿಫೈನಲ್‌ಗೆ ಪ್ರವೇಶಿಸಿತು. ಶನಿವಾರ ನಡೆದ ಕ್ವಾರ್ಟರ್‌ಫೈನಲ್ ನಲ್ಲಿ 10 ಆಟಗಾರರಿಗೆ ಸೀಮಿತಗೊಂಡ ಸ್ವಿಟ್ಜರ್ಲೆಂಡ್ ತಂಡವನ್ನು ಅರ್ಜೆಂಟೀನಾ 3–1 ಗೋಲುಗಳಿಂದ ಮಣಿಸಿತು.
ಅರ್ಜೆಂಟೀನಾ ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಅವರ ಗೋಲಿನ ಮೂಲಕ ಮುನ್ನಡೆ ಸಾಧಿಸಿತು. ಆದರೆ 67ನೇ ನಿಮಿಷದಲ್ಲಿ ಡ್ಯಾನ್ ನ್ಡೋಯ್ ಸ್ವಿಟ್ಜರ್ಲೆಂಡ್ ಪರ ಸಮಬಲದ ಗೋಲು ದಾಖಲಿಸಿ ಪಂದ್ಯವನ್ನು 1–1ಕ್ಕೆ ಸಮಗೊಳಿಸಿದರು.
72ನೇ ನಿಮಿಷದಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. ಸ್ವಿಟ್ಜರ್ಲೆಂಡ್‌ನ ಸ್ಟ್ರೈಕರ್ ಬ್ರೀಲ್ ಎಂಬೊಲೊ ಅವರು ಪೆನಾಲ್ಟಿ ಪಡೆಯುವ ಉದ್ದೇಶದಿಂದ ಸಿಮ್ಯುಲೇಶನ್ ನಡೆಸಿದ್ದಾರೆ ಎಂದು ವೀಡಿಯೊ ಸಹಾಯಕ ತೀರ್ಪುಗಾರರ (VAR) ಪರಿಶೀಲನೆಯಲ್ಲಿ ದೃಢಪಟ್ಟಿತು. ಈಗಾಗಲೇ ಒಂದು ಯೆಲ್ಲೋ ಕಾರ್ಡ್ ಪಡೆದಿದ್ದ ಅವರಿಗೆ ಎರಡನೇ ಯೆಲ್ಲೋ ಕಾರ್ಡ್ ತೋರಿಸಿದ ತೀರ್ಪುಗಾರರು ಪಂದ್ಯದಿಂದ ಹೊರಹಾಕಿದರು. ಇದರೊಂದಿಗೆ ಸ್ವಿಟ್ಜರ್ಲೆಂಡ್ 10 ಆಟಗಾರರೊಂದಿಗೆ ಉಳಿದ ಸಮಯ ಆಡಬೇಕಾಯಿತು.
ನಿಯಮಿತ ಅವಧಿಯಲ್ಲಿ ಸ್ವಿಟ್ಜರ್ಲೆಂಡ್ ನ ಸಂಘಟಿತ ರಕ್ಷಣಾ ಪಡೆಯನ್ನು ಭೇದಿಸಲು ಅರ್ಜೆಂಟೀನಾಗೆ ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯ ಓವರ್ ಟೈಮ್ ಗೆ ಸಾಗಿತು. ಆಗ ಬಾಕ್ಸ್‌ನ ಹೊರಗಿನಿಂದ ಜೂಲಿಯನ್ ಅಲ್ವಾರೆಝ್ ಸಿಡಿಸಿದ ಪ್ರಬಲ ಹೊಡೆತ ಗೋಲ್‌ಕೀಪರ್ ಗ್ರೆಗರ್ ಕೋಬೆಲ್ ಅವರನ್ನು ಮಣಿಸಿ ಅರ್ಜೆಂಟೀನಾಗೆ 2–1ರ ಮುನ್ನಡೆ ತಂದುಕೊಟ್ಟಿತು.
ಓವರ್ ಟೈಮ್ ನಲ್ಲೇ ಲೌಟಾರೊ ಮಾರ್ಟಿನೆಝ್ ಮೂರನೇ ಗೋಲು ದಾಖಲಿಸಿ ಅರ್ಜೆಂಟೀನಾದ ಗೆಲುವನ್ನು ಖಚಿತಪಡಿಸಿದರು.
ಈ ಜಯದೊಂದಿಗೆ ಅರ್ಜೆಂಟೀನಾ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಬುಧವಾರ ನಡೆಯಲಿರುವ ಪಂದ್ಯದಲ್ಲಿ ನಾರ್ವೆಯನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.