×
Ad

T20 ಸರಣಿ | ಬಟ್ಲರ್–ಬ್ರೂಕ್ ಬ್ಯಾಟಿಂಗ್ ಅಬ್ಬರ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 56 ರನ್‌ ಗಳ ಸೋಲು

4–0 ಅಂತರದಲ್ಲಿ T20 ಸರಣಿ ಇಂಗ್ಲೆಂಡ್ ವಶ; ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ

Update: 2026-07-12 07:40 IST

ಜೋಸ್ ಬಟ್ಲರ್ ಮತ್ತು ನಾಯಕ ಹ್ಯಾರಿ ಬ್ರೂಕ್ Photo: x.com/WicketReport

ಸೌತಾಂಪ್ಟನ್ (ಇಂಗ್ಲೆಂಡ್), ಜು.12: ಜೋಸ್ ಬಟ್ಲರ್ ಮತ್ತು ನಾಯಕ ಹ್ಯಾರಿ ಬ್ರೂಕ್ ಅವರ ದಾಖಲೆಯ 233 ರನ್‌ ಗಳ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ತಂಡವು ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತವನ್ನು 56 ರನ್‌ಗಳಿಂದ ಮಣಿಸಿ, ಐದು ಪಂದ್ಯಗಳ ಸರಣಿಯನ್ನು 4–0 ಅಂತರದಿಂದ ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಆತಿಥೇಯ ತಂಡ ಐಸಿಸಿ ಟಿ20 ತಂಡಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆರಂಭಿಕ ವಿಕೆಟ್ ಕಳೆದುಕೊಂಡ ಬಳಿಕ ಬಟ್ಲರ್ ಮತ್ತು ಬ್ರೂಕ್ ಭಾರತೀಯ ಬೌಲರ್‌ ಗಳ ಮೇಲೆ ಸವಾರಿ ನಡೆಸಿದರು. ಇಬ್ಬರೂ ಎರಡನೇ ವಿಕೆಟ್‌ ಗೆ 233 ರನ್‌ ಗಳ ಜೊತೆಯಾಟ ನಡೆಸಿದ್ದು, ಟಿ20 ಕ್ರಿಕೆಟ್‌ ನಲ್ಲಿ ಇಂಗ್ಲೆಂಡ್ ಪರ ಯಾವುದೇ ವಿಕೆಟ್‌ ಗೆ ದಾಖಲಾದ ಅತ್ಯಧಿಕ ಜೊತೆಯಾಟವಾಗಿದೆ.

ಇಂಗ್ಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 257 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಭಾರತದ ವಿರುದ್ಧ ಇಂಗ್ಲೆಂಡ್ ದಾಖಲಿಸಿದ ಅತ್ಯಧಿಕ ಟಿ20 ಮೊತ್ತವಾಗಿದ್ದು, ಭಾರತದ ವಿರುದ್ಧದ ಮೂರನೇ ಅತ್ಯಧಿಕ ಟಿ20 ಮೊತ್ತವೂ ಆಗಿದೆ.

ಬಟ್ಲರ್ 64 ಎಸೆತಗಳಲ್ಲಿ 12 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 131 ರನ್‌ ಗಳಿಸಿ ತಮ್ಮ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನದ ಎರಡನೇ ಶತಕ ದಾಖಲಿಸಿದರು. ಬ್ರೂಕ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್‌ ಗಳೊಂದಿಗೆ ಅಜೇಯ 95 ರನ್ ಗಳಿಸಿದರು. ಮಳೆಯಿಂದ ರದ್ದಾಗಿದ್ದ ಮೊದಲ ಪಂದ್ಯವನ್ನು ಹೊರತುಪಡಿಸಿ ಸರಣಿಯುದ್ದಕ್ಕೂ ಉತ್ತಮ ಲಯದಲ್ಲಿದ್ದ ಬ್ರೂಕ್ ಮತ್ತೊಮ್ಮೆ ನಿರ್ಣಾಯಕ ಇನ್ನಿಂಗ್ಸ್ ಆಡಿದರು.

ಹಿಂದಿನ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ 15 ವರ್ಷದ ವೈಭವ್ ಸೂರ್ಯವಂಶಿಗೆ ಭಾರತ ವಿಶ್ರಾಂತಿ ನೀಡಿತ್ತು.

ಭಾರತದ ಪರ ಶಿವಂ ದುಬೆ ಎರಡು ವಿಕೆಟ್ ಪಡೆದರೂ, ತಮ್ಮ ಏಕೈಕ ಓವರ್‌ ನಲ್ಲಿ 22 ರನ್‌ ಗಳನ್ನು ಬಿಟ್ಟುಕೊಟ್ಟರು. ಬಟ್ಲರ್ ವಿಕೆಟ್ ಕೂಡ ದುಬೆ ಪಾಲಾಯಿತು.

258 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಅಭಿಷೇಕ್ ಶರ್ಮಾ (3) ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ 35 ಎಸೆತಗಳಲ್ಲಿ 56 ಹಾಗೂ ತಿಲಕ್ ವರ್ಮಾ 25 ಎಸೆತಗಳಲ್ಲಿ 53 ರನ್ ಗಳಿಸಿ ಹೋರಾಟ ನಡೆಸಿದರೂ, ಅಗತ್ಯ ರನ್‌ ರೇಟ್ ತಲುಪಲು ಸಾಧ್ಯವಾಗಲಿಲ್ಲ. ಭಾರತ 20 ಓವರ್‌ ಗಳಲ್ಲಿ 8 ವಿಕೆಟ್‌ ಗೆ 201 ರನ್ ಗಳಿಸಲಷ್ಟೇ ಶಕ್ತವಾಯಿತು.

ಇಂಗ್ಲೆಂಡ್ ಪರ ಸ್ಯಾಮ್ ಕರನ್ 36 ರನ್ ನೀಡಿ 3 ವಿಕೆಟ್ ಪಡೆದರೆ, ಆದಿಲ್ ರಶೀದ್ 24 ರನ್ ನೀಡಿ 2 ವಿಕೆಟ್ ಕಬಳಿಸಿದರು.

'ಎರಡನೇ ಪಂದ್ಯದ ಬಳಿಕ ವಿಶ್ವದ ನಂ.1 ಸ್ಥಾನಕ್ಕೇರುವುದು ನಮ್ಮ ಗುರಿಯಾಗಿತ್ತು. ಅದನ್ನು ಸಾಧಿಸಿದ್ದಕ್ಕೆ ಸಂತೋಷವಾಗಿದೆ' ಎಂದು ಸರಣಿ ಶ್ರೇಷ್ಠ ಹ್ಯಾರಿ ಬ್ರೂಕ್ ಹೇಳಿದರು.

'ಕಳೆದ ಕೆಲವು ದಿನಗಳಿಂದ ನನ್ನ ಬ್ಯಾಟಿಂಗ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ವೈಯಕ್ತಿಕವಾಗಿಯೂ ತಂಡದ ದೃಷ್ಟಿಯಿಂದಲೂ ಇದು ಅತ್ಯುತ್ತಮ ದಿನ. ನನ್ನ ಅತ್ಯುತ್ತಮ ಪ್ರದರ್ಶನದ ಮೂಲಕ ಸರಣಿ ಗೆಲುವಿಗೆ ಕೊಡುಗೆ ನೀಡಿದ್ದಕ್ಕೆ ಸಂತೋಷವಾಗಿದೆ' ಎಂದು ಬಟ್ಲರ್ ಹೇಳಿದರು.

'ಈ ಸರಣಿಯಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು, ಪಂದ್ಯದ ಅರಿವು ಮತ್ತು ವಿಕೆಟ್‌ ಗೆ ತಕ್ಕಂತೆ ಆಡುವುದು ಮುಖ್ಯ ಎಂಬುದು ಗೊತ್ತಾಯಿತು. ನಾವು ಆಡಿದ ಎಲ್ಲ ಮೈದಾನಗಳಲ್ಲಿ ಇದು ಬಹುಶಃ ಅತ್ಯುತ್ತಮ ಪಿಚ್ ಆಗಿತ್ತು. ಆದರೆ ಇಂದು ನಮ್ಮ ಬ್ಯಾಟಿಂಗ್ ವಿಧಾನ ಭಿನ್ನವಾಗಿತ್ತು' ಎಂದು ಭಾರತದ ನಾಯಕ ಶ್ರೇಯಸ್ ಅಯ್ಯರ್ ಹೇಳಿದರು.

ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮಂಗಳವಾರ ಬರ್ಮಿಂಗ್ಹ್ಯಾಮ್‌ನಲ್ಲಿ ಆರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News