×
Ad

FIFA World Cup 2026 | ಎಂಬಾಪೆ ದಾಖಲೆಯ ಅವಳಿ ಗೋಲು : ಸೆನೆಗಲ್ ವಿರುದ್ಧ ಫ್ರಾನ್ಸ್ ಗೆ 3-1 ಅಂತರದ ಗೆಲುವು

Update: 2026-06-17 10:35 IST

ಕಿಲಿಯನ್ ಎಂಬಾಪೆ Photo: x.com/WhoScored

ನ್ಯೂಜೆರ್ಸಿ: ವಿಶ್ವಕಪ್‌ನ ಗ್ರೂಪ್ 'ಐ' ಆರಂಭಿಕ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಬಾರಿಸಿದ ದಾಖಲೆಯ ಎರಡು ಗೋಲುಗಳ ನೆರವಿನಿಂದ ಫ್ರಾನ್ಸ್ ತಂಡವು ಸೆನೆಗಲ್ ವಿರುದ್ಧ 3-1 ಅಂತರದ ಜಯ ಗಳಿಸಿತು.

ಈ ಗೋಲುಗಳೊಂದಿಗೆ ಎಂಬಾಪೆ ಫ್ರಾನ್ಸ್ ದೇಶದ ಇತಿಹಾಸದಲ್ಲೇ ಅತ್ಯಧಿಕ ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಂದ್ಯದ ದ್ವಿತೀಯಾರ್ಧದಲ್ಲಿ ಮೈಕೆಲ್ ಒಲೈಸ್ ನೀಡಿದ ಅದ್ಭುತ ಪಾಸ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ತಂಡಕ್ಕೆ ಮೊದಲ ಗೋಲು ಗಳಿಸಿದರು.

ಇದರೊಂದಿಗೆ ಫ್ರಾನ್ಸ್‌ನ ಒಲಿವಿಯರ್ ಗಿರೂಡ್ ಅವರ 57 ಗೋಲುಗಳ ದಾಖಲೆಯನ್ನು ಸರಿಗಟ್ಟಿದ ಅವರು, ನಂತರ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಪೆನಾಲ್ಟಿ ಬಾಕ್ಸ್ ಹೊರಗಿನಿಂದ ಮತ್ತೊಂದು ಭರ್ಜರಿ ಗೋಲು ಬಾರಿಸುವ ಮೂಲಕ ಒಟ್ಟು 58 ವೈಯಕ್ತಿಕ ಗೋಲುಗಳೊಂದಿಗೆ ಫ್ರಾನ್ಸ್ ಪರ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರಾದರು.

ವಿಶ್ವಕಪ್‌ಗಳಲ್ಲಿ ಎಂಬಾಪೆ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 14ಕ್ಕೆ ಏರಿಸಿಕೊಂಡಿದ್ದು, ಈ ಮೂಲಕ ಅವರು ಸಾರ್ವಕಾಲಿಕ ಗರಿಷ್ಠ ಗೋಲು ಗಳಿಸಿದವರ ಪಟ್ಟಿಯಲ್ಲಿ ಜರ್ಮನಿಯ ದಿಗ್ಗಜ ಆಟಗಾರ ಗರ್ಡ್ ಮುಲ್ಲರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪ್ರಸ್ತುತ ಬ್ರೆಜಿಲ್ ಪರ 15 ಗೋಲು ಬಾರಿಸಿರುವ ರೊನಾಲ್ಡೊ ಮತ್ತು ಜರ್ಮನಿ ಪರ 16 ಗೋಲು ಗಳಿಸಿರುವ ಮಿರೋಸ್ಲಾವ್ ಕ್ಲೋಸ್ ಅಗ್ರಸ್ಥಾನದಲ್ಲಿದ್ದಾರೆ.

ಪಂದ್ಯದ ಮೊದಲಾರ್ಧವು ಯಾವುದೇ ಗೋಲುಗಳಿಲ್ಲದೆ ನೀರಸವಾಗಿತ್ತು. ಕೆಲವು ಅವಕಾಶಗಳನ್ನು ಕೈಚೆಲ್ಲಿದ ಎಂಬಾಪೆ ಎರಡನೇ ಅವಧಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿದರು.

ಫ್ರಾನ್ಸ್ ಪರವಾಗಿ ಬ್ರಾಡ್ಲಿ ಬಾರ್ಕೋಲಾ ಎರಡನೇ ಗೋಲು ಗಳಿಸಿದರೆ, ಸೆನೆಗಲ್ ಪರ ಬದಲಿ ಆಟಗಾರ ಇಬ್ರಾಹಿಂ ಎಂಬಾಯೆ ಕೊನೆಯ ನಿಮಿಷಗಳಲ್ಲಿ ಗೋಲು ಬಾರಿಸಿ ಅಂತರವನ್ನು ತಗ್ಗಿಸಿದರು.

ಈ ಪಂದ್ಯದಲ್ಲಿ ಫ್ರಾನ್ಸ್ ಕೇವಲ 8 ನೇರ ಗುರಿಯೊಂದಿಗೆ ಒಟ್ಟು 11 ಬಾರಿ ಮತ್ತು ಸೆನೆಗಲ್ ಕೇವಲ 2 ನೇರ ಗುರಿಯೊಂದಿಗೆ 6 ಬಾರಿ ಗೋಲು ಪ್ರಯತ್ನ ನಡೆಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News