×
Ad

ಎಫ್ಐಎಚ್ ಮಹಿಳೆಯರ ನೇಶನ್ಸ್ ಕಪ್ | ಜಪಾನ್ ವಿರುದ್ಧ ಭಾರತಕ್ಕೆ ಗೆಲುವು

Update: 2026-06-16 23:50 IST

Photo Credit : x@TheHockeyIndia

ಆಕ್ಲೆಂಡ್, ಜೂ.16: ಎಫ್ಐಎಚ್ ಮಹಿಳೆಯರ ನೇಶನ್ಸ್ ಕಪ್‌ನಲ್ಲಿ ಮಂಗಳವಾರ ನಡೆದ ಎ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿರುವ ಭಾರತೀಯ ಮಹಿಳೆಯರ ಹಾಕಿ ತಂಡವು ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆದಿದೆ.

ನಾಯಕಿ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತೆ ಸಲಿಮಾ ಟೇಟೆ(33ನೇ ನಿಮಿಷ)ಹಾಗೂ ಲಾಲ್ ರೆಂಸಿಯಾಮಿ(49ನೇ ನಿಮಿಷ)ಭಾರತದ ಪರ ತಲಾ ಒಂದು ಗೋಲು ಗಳಿಸಿದರು. ಜಪಾನ್ ತಂಡದ ಪರ ಹಿರಾಮಿಟ್ಸು(35ನೇ ನಿಮಿಷ)ಏಕೈಕ ಗೋಲು ಗಳಿಸಿದರು.

ಮಿಡ್ ಫೀಲ್ಡರ್ ಜ್ಯೋತಿ ಪಾಲಿಗೆ ಇದು ಸ್ಮರಣೀಯ ಪಂದ್ಯವಾಗಿದ್ದು, ಅವರು ತನ್ನ 100ನೇ ಸೀನಿಯರ್ ಅಂತರ್ ರಾಷ್ಟ್ರೀಯ ಪಂದ್ಯವನ್ನಾಡಿದರು.

ಮೊದಲಾರ್ಧದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಉಭಯ ತಂಡಗಳು ಅವಕಾಶಗಳನ್ನು ಸೃಷ್ಟಿಸಿದವು ಆದರೆ, ಮೊದಲಾರ್ಧದ ಅಂತ್ಯದ ತನಕ ಗೋಲು ಗಳಿಸುವಲ್ಲಿ ವಿಫಲವಾದವು.

ಭಾರತ ತಂಡವು 33ನೇ ನಿಮಿಷದಲ್ಲಿ ಗೋಲು ಖಾತೆ ತೆರೆಯಿತು. ನವನೀತ್ ಕೌರ್, ನಿಕ್ಕಿ ಪ್ರಧಾನ್ ನೆರವಿನಿಂದ ನಾಯಕಿ ಸಲಿಮಾ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಎರಡು ನಿಮಿಷಗಳ ನಂತರ ಜಪಾನ್ ತಿರುಗೇಟು ನೀಡಿತು. ಹಿರಾಮಿಟ್ಸು(35ನೇ ನಿಮಿಷ)ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಸ್ಕೋರನ್ನು ಸಮಬಲಗೊಳಿಸಿದರು.

ಭಾರತದ ಲಾಲ್ರೆಂಸಿಯಾಮಿ 49ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದರು.

ಈ ಗೆಲುವಿನ ಮೂಲಕ ಭಾರತ ತಂಡ ‘ಎ’ ಗುಂಪಿನಲ್ಲಿ ಒಟ್ಟು ಆರು ಅಂಕ ಗಳಿಸಿ ಅಗ್ರ ಸ್ಥಾನ ಪಡೆದಿದೆ. ಭಾರತ ತಂಡವು ಈಗಾಗಲೇ ಅಮೆರಿಕ ಹಾಗೂ ಜಪಾನ್ ತಂಡಗಳ ವಿರುದ್ಧ ಜಯ ಗಳಿಸಿದೆ.

ಭಾರತ ತಂಡವು ಜೂನ್ 18ರಂದು ಪಂದ್ಯಾವಳಿಯ ತನ್ನ ಕೊನೆಯ ಎ ಗುಂಪಿನ ಪಂದ್ಯದಲ್ಲಿ ಉರುಗ್ವೆ ತಂಡವನ್ನು ಎದುರಿಸಲಿದೆ.

ಎರಡನೇ ಸೆಮಿ ಫೈನಲ್ ಸ್ಥಾನ ಪಡೆಯಲು ಜಪಾನ್ ಹಾಗೂ ಅಮೆರಿಕ ತಂಡಗಳು ಸೆಣಸಾಡಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News