FIH Men's Hockey World Cup 2026 | ಆರಂಭದಲ್ಲಿ ನಿರಾಕರಿಸಿದರೂ ಕೊನೆಯಲ್ಲಿ ಕೈಕುಲುಕಿದ ಭಾರತ–ಪಾಕ್ ಆಟಗಾರರು
Photo Credit : PTI
ಆ್ಯಮ್ಸ್ಟಲ್ವೀನ್ (ನೆದರ್ಲ್ಯಾಂಡ್ಸ್), ಆ. 20: ನೆದರ್ಲ್ಯಾಂಡ್ಸ್ ನ ಆ್ಯಮ್ಸ್ಟಲ್ವೀನ್ ನಲ್ಲಿ ಬುಧವಾರ ನಡೆದ FIH ಹಾಕಿ ವಿಶ್ವಕಪ್ನ ‘ಡಿ’ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5–3 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಕ್ರೀಡೆಗೆ ಹೊರತಾದ ಕಾರಣಕ್ಕಾಗಿ ಪಂದ್ಯದ ಆರಂಭದಲ್ಲಿ ಇತ್ತಂಡಗಳು ಪರಸ್ಪರ ಕೈಕುಲುಕಲು ನಿರಾಕರಿಸಿದರೂ, ಪರಸ್ಪರ ಕೈತಟ್ಟುವ ಮೂಲಕ ಸದ್ಭಾವನೆಯನ್ನು ವ್ಯಕ್ತಪಡಿಸಿದರು. ಆದರೆ, ಪಂದ್ಯದ ಪೂರ್ಣ ಸಮಯ ಮುಗಿದ ಬಳಿಕ ಪರಸ್ಪರ ಕೈಕುಲುಕಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಲ್ಲಿ ರಾಜಕೀಯ ನೆರಳು ಬೀಳುವುದು ಸಾಮಾನ್ಯವಾದರೂ, ಈ ಮುಖಾಮುಖಿಯಲ್ಲಿ ಆಟಗಾರರು ಕ್ರೀಡಾಸ್ಫೂರ್ತಿಯನ್ನು ಮೆರೆದರು.
ಉಭಯ ದೇಶಗಳ ರಾಷ್ಟ್ರಗೀತೆಗಳು ಮೊಳಗಿದ ನಂತರ, ಎರಡೂ ತಂಡಗಳ ಆಟಗಾರರು ಸಾಲಾಗಿ ನಿಂತು ಸಾಂಪ್ರದಾಯಿಕ ಹ್ಯಾಂಡ್ಶೇಕ್ ಬದಲಿಗೆ ತ್ವರಿತವಾಗಿ ಕೈಎತ್ತಿ ತಟ್ಟಿದರು.
‘ಆಪರೇಷನ್ ಸಿಂಧೂರ’ದ ನಂತರದ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಪರಸ್ಪರ ಕೈಕುಲುಕುವುದರಿಂದ ದೂರವುಳಿದಿವೆ. ಆದರೆ, ಹಾಕಿ ಕ್ರೀಡೆಯು ಕ್ರಿಕೆಟ್ನ ಹಾದಿಯನ್ನು ಹಿಡಿದಂತೆ ಕಾಣುತ್ತಿಲ್ಲ.
ಕಳೆದ ವರ್ಷ ನಡೆದ ಸುಲ್ತಾನ್ ಆಫ್ ಜೋಹರ್ ಕಪ್ ಟೂರ್ನಿಯಲ್ಲೂ, ಪಂದ್ಯ ಮುಗಿದ ಬಳಿಕ ಉಭಯ ತಂಡಗಳು ಪರಸ್ಪರ ಕೈಕುಲುಕಿದ್ದವು.